ಹಲವೊಮ್ಮೆ ಕೊಲೆಗಳ ನೆರಳು ದೀರ್ಘವಾಗಿಯೇ ಚಾಚಿರುತ್ತದೆ… ಪೀಳಿಗೆಗಳವರೆಗೂ…ಬಿಡಿಸಿಕೊಳ್ಳುವ ದಾರಿ ಅಷ್ಟು ಸುಲಭದ್ದೂ ಅಲ್ಲ; ಸರಳವೂ ಅಲ್ಲ. ನಿರ್ದೇಶಕ ಮರ್ಸೆಲೊ ಗಾಲ್ವೊ ದ ಕಿಲ್ಲರ್ ಸಿನೆಮಾದಲ್ಲಿ ಇದನ್ನೇ ಹೇಳುತ್ತಾ ಒಂದು ಕಾಲಘಟ್ಟದಲ್ಲಿ ಆದ ಅಮಾನವೀಯ ದುರ್ಘಟನೆಗಳನ್ನೂ ಚಿತ್ರಿಸಿದ್ದಾರೆ. ಮೂಲತಃ ಇದು ಬ್ರೆಜಿಲ್ ದೇಶದ ಈಶಾನ್ಯ ಭಾಗದಲ್ಲಿ ನಡೆದ ಕಥಾನಕ. ಅಲ್ಲಿನ ಶಾಸ್ತ್ರೀಯ ಸಾಹಿತ್ಯದ ಕೊಂಡಿ ಎಂದೇ ಸ್ಥಳೀಯರು ಭಾವಿಸಿರುವ ಓ ಕ್ಯಾಬೆಲೇರಿಯಾ ಕಾದಂಬರಿಯಿಂದ ಪಡೆದ ಪ್ರೇರಣೆಯೆಂದು ಹೇಳಿಕೊಳ್ಳಲಾಗಿದೆ.

ನೂರಾರು ಮೈಲಿಗಳವರೆಗೂ ಚಾಚಿಕೊಂಡ ಕುರುಚಲು ಕಾಡು. ಅದರ ಯಾವುದೋ ಮೂಲೆಯಲ್ಲಿ ಅನಾಥ ಮಗುವಿನ ಆಕ್ರಂದನ. ವನ್ಯಮೃಗದ ಬಾಯಿಗೆ ಇನ್ನೆನ್ನೂ ತುತ್ತಾಗಬೇಕು. ಹಠಾತ್ತನೇ ಎರಗಿದ ಗುಂಡಿಗೆ ಬಲಿಯಾಗಿದೆ. ಗುಂಡಿಕ್ಕಿದವ ಅದರ ಹಸಿಹಸಿ ಮಾಂಸವನ್ನೇ ತಿನ್ನುತ್ತಿದ್ದಾನೆ. ರಕ್ತಸಿಕ್ತ ಕೈಯಿಂದಲೇ ಮಗುವನ್ನೆತ್ತಿಕೊಂಡು ಬಂದಿದ್ದಾನೆ. ಆತ ಆ ಪ್ರದೇಶದ ದರೋರೆಕೋರ/ಸುಫಾರಿ ಕೊಲೆಗಾರ.

ಮುಳ್ಳುಗಳೇ ತುಂಬಿದ ಕುರುಚಲು ಕಾಡಿನಲ್ಲಿ ಬದುಕುವುದೊಂದು ಸವಾಲು. ತನ್ನೊಂದಿಗಿದ್ದ ಏಕೈಕ ಮಾನವಜೀವಿಯ ಬದುಕುವ ಹಾದಿಯನ್ನೇ ತುಳಿಯುತ್ತಾ ಬದುಕಿ, ಬೆಳೆದ ಈ ಜೀವಕ್ಕೊಂದು ಹೆಸರೇ..? ಗುರುತೇ ಇಲ್ಲದ ಬೆಳೆದ ಆತ ಬದುಕುವುದೆಂದರೆ ಕೊಲ್ಲುವುದು ಮಾತ್ರ ಎಂದುಕೊಂಡಿದ್ದಾನೆ. ಕಗ್ಗಾಡಿನಲ್ಲಿ ಇರುವವವರೆಗೂ ಕೊಂದಿದ್ದು ಪ್ರಾಣಿಗಳನ್ನು ಮಾತ್ರ… ನಂತರ

ಸಾಕಿದ ‘ಸೆವೆನ್ ಇಯರ್ಸ್ ದೀರ್ಘಕಾಲ ಕಾಣದೇ ಇದ್ದಾಗ ಹುಡಕತೊಡಗುತ್ತಾನೆ. ಬಂದಿದ್ದು ಅರಾಜಕತೆ ತಾಂಡವವಾಡುತ್ತಿರುವ, ರಕ್ತದಲ್ಲಿಯೇ ಮಿಂದ ಹಸಿಯಾದ, ಜೀವಗಳಿಗೆ ಬೆಲೆಯೇ ಇಲ್ಲದ ನೆಲಕ್ಕೆ. ತಂದೆಯನ್ನು ಕೊಂದವನ ಮುಷ್ಟಿಯೊಳಗೆ ಸಿಲುಕುತ್ತಾನೆ. ಕೊಲೆಗಳ ಸರಣಿ ಮುಂದುವರಿಯುತ್ತಾ ಹೋಗುತ್ತದೆ. ಈ ಹಾದಿಯಲ್ಲಿ ಅವನಿಗೊಂದು ಹೆಸರೂ ದೊರೆಯುತ್ತದೆ. ಶಗ್ಗಿ.

ಇಡೀ ಸಿನೆಮಾದಲ್ಲಿ ಕ್ರೌರ್ಯ, ಕಾಮ, ಕೊಲೆ ತಾಂಡವವಾಡಿದೆ. ಇವೆಲ್ಲವನ್ನೂ ಹಸಿಹಸಿಯಾಗಿ ಹೇಳಿದ್ದಾರೆ ಎನಿಸುತ್ತದೆ. ನೆಲಕ್ಕಾಗಿ, ಹೊಳೆಯುವ ಕಲ್ಲುಗಳಿಗಾಗಿ ನಿರಂತರವಾಗಿ ನಡೆಯುವ ಕೊಲೆಗಳ ಸರಣಿ ಮುಂದುವರಿಯುತ್ತಲೇ ಹೋಗುತ್ತದೆ. ಶಗ್ಗಿಗೊಬ್ಬ ಮಗ ಬರುತ್ತಾನೆ. ಅಪ್ಪನ ಚಿರತೆಯ ಚಾಣಾಕ್ಷತೆ ಅವನಿಗೂ ದಕ್ಕುತ್ತದೆ. ಸಾಕಿದಾತನನ್ನು ಕೊಂದವನನ್ನು ಶಗ್ಗಿ ಕೊಲ್ಲುತ್ತಾನೆ. ತಾನೂ ಇಲ್ಲವಾಗುತ್ತಾನೆ.

ಶಗ್ಗಿ ಮಗನ ಕಥೆ….? ಕೊಲೆಗಳ ಸರಣಿ ಶಗ್ಗಿಯ ತಲೆಗೆ ಮುಗಿಯುವುದಿಲ್ಲ. ಆತನ ಮಗನನ್ನು ಕೊಲ್ಲಲ್ಲು ಯತ್ನ ನಡೆಯುತ್ತಿದೆ. ಪಾರಾಗಲು ಆತ ಕೊಲೆಗಳನ್ನು ಮಾಡಲೇಬೇಕಾಗುತ್ತದೆ. ಹೀಗೆ ಮಾಡುವಾಗ ಆತನ ಇಬ್ಬರು ಪುಟ್ಟಮಕ್ಕಳ ಸಾಕ್ಷಿಗಳು ಇದೆ. ಆ ಮಕ್ಕಳ ಕೈಗೆ ರಕ್ತ ಮೆತ್ತಿಕೊಳ್ಳುವುದೇ… ಮೆತ್ತಿಕೊಳ್ಳಲೂ ಬಹುದು… ಅಪ್ಪನನ್ನು ಆ ಮಕ್ಕಳು ಹಿಂಬಾಲಿಸುತ್ತವೆ.

ಸುಮಾರು 1910 ರಿಂದ 1940ರವರೆಗೆ ಬ್ರೆಜಿಲಿನ ಈಶಾನ್ಯ ಪ್ರಾಂತ್ಯ ಪೆರಮಾಂಬುಕೊದಲ್ಲಿ ನಡೆಯುವ ಕಥಾನಕವಿದು. ಚಿತ್ರಕಥೆಯನ್ನೂ ರಚಿಸಿರುವ ನಿರ್ದೇಶಕ ಮರ್ಸೆಲೊ ಗಾಲ್ವೊ ವಿಸ್ತಾರವಾದ, ಕುರುಚಲು ಕಾಡಿನಲ್ಲಿ ಬದುಕುವುದಕ್ಕಾಗಿ ನಡೆಸಬೇಕಾದ ಹೋರಾಟಗಳು, ಕಾಡಿನಿಂದ ನಾಡಿಗೆ ಬಂದ ನಂತರದ ಮತ್ತೊಂದು ಬಗೆಯ ಹೋರಾಟದ ಸರಣಿ, ಮನುಷ್ಯರ ಕ್ರೌರ್ಯ, ಅಸಹಾಯಕರು ಅದರಲ್ಲಿಯೂ ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯಗಳು, ಅರಾಜಕತೆಯ ದುಸ್ಥಿತಿಯಲ್ಲಿ ಮನುಷ್ಯರ ಜೀವಗಳಿಗೆ ಬೆಲೆಯೇ ಇಲ್ಲದಿರುವುದು, ಶ್ರೀಮಂತರ ಅಟ್ಟಹಾಸ, ಬಂದೂಕುಗಳೇ ನಾಡನ್ನಾಳತೊಡಗುವುದನ್ನು ಪರಿಣಾಮಕಾರಿಯಾಗಿ ಚಿತ್ರಿಸಿದ್ದಾರೆ.

ಕಗ್ಗಾಡಿನ ಬದುದು, ಎಗ್ಗಿಲ್ಲದೇ ನಡೆಯುವ ಕೊಲೆಗಳ ಸರಣಿ, ಪಾಶವೀತನದ ನಡವಳಿಕೆಗಳನ್ನು ಕ್ಯಾಮೆರಾ ಪರಿಣಾಮಕಾರಿಯಾಗಿ ಹೇಳುತ್ತಾ ಹೋಗುತ್ತದೆ. ಇದರ ಜವಾಬ್ದಾರಿಯನ್ನು ಫ್ಯಾಬ್ರಿಕೊ ತಡೆವು ಸಮರ್ಥವಾಗಿ ನಿಭಾಯಿಸಿದ್ದಾರೆ. ಹಿನ್ನೆಲೆ ಸಂಗೀತವೂ ಎಲ್ಲಿಯೂ ಅತಿ-ಕಡಿಮೆ ಎನಿಸುವುದಿಲ್ಲ. 1910-40ರ ಸಂದರ್ಭದ ಕಥಾನಕ ಕೇಳುವ ಉಡುಪು-ವಾತಾವರಣವನ್ನು ಬಹುಜತನದಿಂದ ಪುನರ್ ರೂಪಿಸಲಾಗಿದೆ. ಶಗ್ಗಿ ಮತ್ತು ಸೆವೆನ್ ಇಯರ್ಸ್ ಪಾತ್ರಗಳಲ್ಲಿ ಡಿಯಾಗೊ ಮಾರ್ಗಡೊ, ಡೆಟೊ ಮಾಂಟೆನ್ಗೆರೊ ಅತ್ಯುತ್ತಮವಾಗಿ ನಟಿಸಿದ್ದಾರೆ. ಶಗ್ಗಿ ಮಗನ ಪಾತ್ರಧಾರಿ ಬಾಲಕನ ಅಭಿನಯವೂ ಗಮನ ಸೆಳೆಯುತ್ತದೆ.

ಇಡೀ ಕಥಾನಕ ತೆರೆದುಕೊಳ್ಳುವುದು ಫ್ಲಾಷ್ ಬ್ಯಾಕ್ ಮೂಲಕ. ಮೂರನೇ ತಲೆಮಾರಿನವನ ಮುಖಾಂತರ ಆ ಹಿಂದಿನ ಸುರುಳಿಗಳು ಬಿಚ್ಚಿಕೊಳ್ಳುತ್ತಾ ಹೋಗುತ್ತವೆ. ಇದಕ್ಕೆಲ್ಲ ನಾಲ್ಕನೇ ತಲೆಮಾರು ಕಿವಿಗೊಡುತ್ತಾ ಹೋಗುತ್ತದೆ. ಇದೊಂದು ರೂಪಕದ ಮಾದರಿಯೂ ಆಗಿದೆ ಎನಿಸುತ್ತದೆ.

ಪಾಶವೀತನದ ಮುಖಗಳನ್ನು, ವ್ಯಕ್ತಿತ್ವಗಳನ್ನು ಅನಾವರಣ ಮಾಡಿಸುತ್ತಾ ಹೋಗುವ ನಿರ್ದೇಶಕ ಮರ್ಸೆಲೊ ಗಾಲ್ವೊ ಅವುಗಳನ್ನೆಲ್ಲ ಹಸಿಹಸಿಯಾಗಿ ಹೇಳಿದ್ದಾರೆ ಎನ್ನಿಸಬಹುದು. ಆದರೆ ಅವರು ಆ ಸಂದರ್ಭದ ಘಟನಾವಳಿಗಳನ್ನು ಸಮರ್ಥವಾಗಿ ರೂಪಿಸುವಲ್ಲಿ ಯಶಸ್ವಿಯಾಗಿದ್ದಾರೆ ಎನಿಸುತ್ತದೆ. ಈ ಸಿನೆಮಾ 2017ರಲ್ಲಿ ಬ್ರೆಜಿಲಿನಲ್ಲಿ ತೆರೆಕಂಡಿದೆ. ಅಲ್ಲಿನ ಹೆಸರು ‘ಓ ಮೆಟಡೋರ’  ಅಂತರಾಷ್ಟ್ರೀಯ ಸಿನೆಮೋತ್ಸವಗಳಲ್ಲಿ ಪ್ರಶಸ್ತಿಯನ್ನೂ ಪಡೆದುಕೊಂಡಿದೆ. ಇದನ್ನು ಆಸಕ್ತರು ನೆಟ್ ಫ್ಲಿಕ್ಸಿನಲ್ಲಿ ವೀಕ್ಷಿಸಬಹುದು…

Similar Posts

Leave a Reply

Your email address will not be published. Required fields are marked *