ಪಾಸಿಟಿವ್ ಆಗಿ ಯೋಚಿಸಿ, ಪಾಸಿಟಿವ್ ಆಗಿ ವ್ಯಕ್ತಿಗಳನ್ನು ನೋಡಿ, ಆಲ್ ವೆಸ್ ಬಿ ಪಾಸಿಟಿವ್. ಬಾಲಿವುಡ್ ಸೂಪರ್ ಸ್ಟಾರ್ ಅಕ್ಷಯ್ ಕುಮಾರ್ ಈ ಮಾತನ್ನು ಹೇಳುತ್ತಲೇ ಇರುತ್ತಾರೆ. ಪಾಸಿಟಿವ್ ಆಗಿ ಇರುವುದು ದೇಹ ಮತ್ತು ಮನಸಿನ ಮೇಲೆ ಅಪಾರ ಪ್ರಭಾವ ಇರುತ್ತದೆ ಎನ್ನುತ್ತಾರಿವರು…
ಅಕ್ಷಯ್ ಕುಮಾರ್ ಮೂಲತಃ ಸಮರಕಲೆ ಪಟು. ಇದೇ ಅವರ ಫಿಟ್ ನೆಸ್ ಮೂಲ ಗುಟ್ಟು. ದೇಹ ಸದಾ ಲವಲವಿಕೆಯಿಂದಿರಲು ನಿತ್ಯ ವ್ಯಾಯಾಮ ಮಾಡಬೇಕು. ಆದರೆ ವ್ಯಾಯಾಮ ಮಾಡದಿರಲು ಬಹುತೇಕರು ನೆಪಗಳನ್ನು ಹುಡುಕುತ್ತಾರೆ. ನಾಳೆ, ನಾಳೆ ನಾಳೆ ಎಂದು ದಿನ ದೂಡುತ್ತಲೇ ಇರುತ್ತಾರೆ. ಆದರೆ ಆ ನಾಳೆ ಎಂದು ಬರುವುದಿಲ್ಲ. ಇದರಿಂದ ಇಂಥವರ ದೇಹ ಅನಾರೋಗ್ಯದ ಗೂಡು ಆಗಬಹುದು.
ಆರೋಗ್ಯ ಕಾಪಾಡಿಕೊಳ್ಳದಿದ್ದರೆ ಮನಸು ಸಹ ರೋಗಗ್ರಸ್ತವಾಗುತ್ತದೆ. ಆದ್ದರಿಂದ ದೇಹವನ್ನು ಹುರಿಯಾಗಿಸಿಕೊಳ್ಳಲು ಮರೆಯಬೇಡಿ ಎನ್ನುತ್ತಾರೆ. ಮನಸಿದ್ದರೆ ವ್ಯಾಯಾಮ ಮಾಡಲು ಅನೇಕ ಅವಕಾಶಗಳು ದೊರೆಯುತ್ತವೆ. ಮನೆಯ ಕೆಲಸಗಳನ್ನು ಮಾಡುವುದು, ನಡೆದು ಹೋಗಿ ಹಾಲು, ಪೇಪರ್ ತರುವುದು, ಯಾರಾದರೂ ಬಂದಾಗ ಮತ್ತೊಬ್ಬರಿಗೆ ಬಂದವರು ಯಾರು ಎಂದು ನೋಡಲು ಹೇಳದೇ ಖುದ್ದು ಎದ್ದು ಹೋಗಿ ನೋಡುವುದು. ಅನಿವಾರ್ಯ ಸಂದರ್ಭಗಳಲ್ಲಿ ಮಾತ್ರ ಲಿಫ್ಟ್ ಬಳಸಬೇಕು. ಮೆಟ್ಟಿಲುಗಳನ್ನು ಸಾಧ್ಯವಾದಷ್ಟೂ ಹತ್ತಿಕೊಂಡು ಹೋಗಬೇಕು ಎನ್ನುತ್ತಾರೆ.
ದೇಹವನ್ನು ಚಟುವಟಿಕೆಯಿಂದ ಇರಿಸಿಕೊಳ್ಳಲು ದೊರೆಯುವ ಯಾವುದೇ ಅವಕಾಶ ಕಳೆದುಕೊಳ್ಳಬೇಡಿ. ದಿನದಲ್ಲಿ ನಿಮಗೆ ಅನುಕೂಲವಾದ ವೇಳೆಯಲ್ಲಿ ಕನಿಷ್ಠ ಅರ್ಧತಾಸು ವ್ಯಾಯಾಮ ಮಾಡಲು ಸಮಯ ಮೀಸಲಿಡಿ. ಇದನ್ನು ಮಾಡದಿರಲು ಸಬೂಬುಗಳನ್ನು ಹುಡುಕಬೇಡಿ. ನೀವು ಮಾಡುವ ಕೆಲಸಗಳಿಗೆ ಎಷ್ಟು ಗಮನ ನೀಡುತ್ತಿರೋ ಅದೇ ರೀತಿ ನಿಮ್ಮ ದೇಹದ ಬಗ್ಗೆಗೂ ಗಮನ ಕೊಡಿ. ನೀವಷ್ಟೆ ನಿಮ್ಮ ದೇಹದ ಯಂತ್ರ ಸುಸ್ಥಿತಿಯಲ್ಲಿರಿಸಿಕೊಳ್ಳಲು ಸಾಧ್ಯ ಎನ್ನುತ್ತಾರೆ.
ಅಕ್ಷಯ್ ಕುಮಾರ್ ಅವರಿಗೀಗ 50 ವರ್ಷ ವಯಸ್ಸು. ಈಗಲೂ ಅವರ ದೇಹ ಮತ್ತು ಮನಸು ಇಪ್ಪತ್ತರ ಯುವಕನಂತೆ ಇದೆ. ಇದಕ್ಕೆ ಕಾರಣ ತಾನು ಬಾಲ್ಯದಿಂದಲೂ ವ್ಯಾಯಾಮಕ್ಕೆ ಆದ್ಯತೆ ನೀಡುತ್ತಾ ಬಂದಿದ್ದು. ಸಮರಕಲೆ ಕಲಿತಿದ್ದು ಕೂಡ ನನ್ನ ಫಿಟ್ ನೆಸ್ ಗುಟ್ಟಾಗಿದೆ. ಇದರ ಜೊತೆಗೆ ಯೋಗವನ್ನು ಕಲಿತಿದ್ದೇನೆ. ಇದು ಮನಸು ಮತ್ತು ದೇಹದ ಆರೋಗ್ಯದ ಮೇಲೆ ಪಾಸಿಟಿವ್ ಪರಿಣಾಮ ಬೀರುತ್ತದೆ ಎನ್ನುತ್ತಾರೆ.
ನಾವು ಅನುಸರಿಸುವ ಜೀವನಶೈಲಿಯೂ ಆರೋಗ್ಯ ಅಥವಾ ಅನಾರೋಗ್ಯಕ್ಕೆ ಕಾರಣ. ಮುಖ್ಯವಾಗಿ ನಾವು ಯಾವರೀತಿಯ ಆಹಾರ ಸೇವಿಸುತ್ತೇವೆ ಎನ್ನುವುದು ಸಹ ಮುಖ್ಯವಾಗಿರುತ್ತದೆ. ಮಸಾಲೆಭರಿತ ಪದಾರ್ಥಗಳನ್ನು ಸಾಧ್ಯವಾದಷ್ಟು ಕಡಿಮೆ ತಿನ್ನುವುದು, ಜಂಕ್ ಪುಡ್ ನಿಂದ ದೂರವಿರುವುದು, ಕಾಫಿ-ಟೀಯನ್ನು ಹೆಚ್ಚು ಕುಡಿಯದಿರುವುದು ಮುಖ್ಯ ಎನ್ನುತ್ತಾರೆ.
ತನ್ನ ಆರೋಗ್ಯದ ಗುಟ್ಟುಗಳಲ್ಲಿ ಮನೆಯಲ್ಲಿ ಮಾಡಿದ ಆಹಾರವನ್ನು ಸೇವಿಸುವುದು ಎನ್ನುವ ಅಕ್ಷಯ್ ಶೂಟಿಂಗ್ ಗೆ ಹೋದ ಸಂದರ್ಭಗಳಲ್ಲಿಯೂ ಮಸಾಲೆ ಪದಾರ್ಥಗಳಿಂದ ದೂರ. ದೇಹಕ್ಕೆ ಅಗತ್ಯವಿದ್ದಷ್ಟು ಪ್ರಮಾಣದ ಶುದ್ಧ ನೀರು ಕುಡಿಯುವುದು ಸಹ ಅನಾರೋಗ್ಯದಿಂದ ದೂರವಿರಿಸುತ್ತದೆ. ಸಿಹಿತಿಂಡಿಗಳನ್ನು ಹೆಚ್ಚಿಗೆ ತಿನ್ನುವುದು ಸಹ ಅನಾರೋಗ್ಯ ಉಂಟು ಮಾಡುತ್ತದೆ.ಇನ್ನು ಮುಖ್ಯವಾದ ವಿಷಯವೆಂದರೆ ತಾನು ಪಾರ್ಟಿಗಳಿಂದ ಸಾಧ್ಯವಾದಷ್ಟು ದೂರ ಇರುವುದು ಎನ್ನುತ್ತಾರೆ.
ಬೇಗ ಮಲಗಿ, ಬೇಗ ಎದ್ದೇಳಿ. ಇದರಿಂದ ದೇಹ ಮತ್ತು ಮನಸು ಎರಡೂ ಚೈತನ್ಯಪೂರ್ಣವಾಗಿರುತ್ತದೆ. ಇದನ್ನು ಅಕ್ಷಯ್ ಅಕ್ಷರಶಃ ಪಾಲಿಸುತ್ತಿದ್ದಾರೆ. ಸಾಧ್ಯವಾಷ್ಟು ರಾತ್ರಿ 10 ರಿಂದ 11 ಗಂಟೆ ಒಳಗೆ ಮಲಗುತ್ತಾರೆ. ಬೆಳಗ್ಗಿನ ಜಾವ 4.30ಕ್ಕೆ ಏಳುತ್ತಾರೆ. ನಿತ್ಯಕರ್ಮ ಪೂರೈಸಿದ ಬಳಿಕ ಕನಿಷ್ಠ ಒಂದು ತಾಸು ಈಜುತ್ತಾರೆ. ಮಳೆ, ತೀವ್ರ ಚಳಿ ಇದ್ದ ಸಮಯದಲ್ಲಿ ಈಜಲೂ ಹೋಗುವುದಿಲ್ಲ. ಈಜಿದ ಬಳಿಕ ಒಂದು ತಾಸು ಸಮರಕಲೆ ಅಭ್ಯಾಸ ಮಾಡುತ್ತಾರೆ. ತದನಂತರ ಯೋಗ ಮತ್ತು ಧ್ಯಾನ. ಹೀಗೆ ಮಾಡುವುದರಿಂದ ಇಡೀದಿನ ದೇಹ ಮತ್ತು ಮಸನು ಪ್ರಪುಲ್ಲವಾಗಿರುತ್ತದೆ ಎನ್ನುತ್ತಾರೆ.
ನಿತ್ಯ ಜಿಮ್ಗೆ ಹೋಗುವುದು ಒಳ್ಳೆಯ ಅಭ್ಯಾಸ. ಆದರೆ ಅತಿಯಾಗಿ ವರ್ಕ್ ಔಟ್ ಮಾಡಬಾರದು. ಇದರಿಂದ ಅಪಾಯವೇ ಹೆಚ್ಚು ಎಂದು ಕಿವಿಮಾತು ಹೇಳುವ ಅವರು ಮಾಂಸಖಂಡಗಳನ್ನು ಬೆಳೆಸಲು ಸ್ಟಿರಾಯ್ಡ್ ತೆಗೆದುಕೊಳ್ಳುವುದು ಬಹಳ ಅಪಾಯಕಾರಿ. ಹೀಗೆ ಮಾಡುವುದರಿಂದ ದೇಹ ಬೇಗನೆ ಮುಪ್ಪಿಗೆ ತುತ್ತಾಗುತ್ತದೆ ಎನ್ನುತ್ತಾರೆ.
ಬಿಡುವಿನ ವೇಳೆ ಅನಗತ್ಯ ಕಾಲಹರಣ ಮಾಡದೇ ಬೆಟ್ಟಗುಡ್ಡ ಹತ್ತಿ, ಸೈಕಲ್ ತುಳಿಯಿರಿ, ಒಳ್ಳೆಯ ಹಾಡು ಕೇಳುವುದು ಅಕ್ಷಯ್ ಅವರ ನೆಚ್ಚಿನ ಹವ್ಯಾಸ. ಉತ್ತಮ ಸಂಗೀತ ಕೇಳುವುದು ಸಹ ಮನಸಿನ ಆರೋಗ್ಯದ ಮೇಲೆ ಉತ್ತಮ ಪರಿಣಾಮ ಬೀರುತ್ತದೆ ಉತ್ತಮ ಹವ್ಯಾಸಗಳು ನಮ್ಮನಮ್ಮ ವೃತ್ತಿಜೀವನದ ಮೇಲೆಯೂ ಪಾಸಿಟಿವ್ ಪರಿಣಾಮ ಉಂಟು ಮಾಡುತ್ತವೆ. ಕಲಾವಿದ ವೃತ್ತಿಯನ್ನು ನಾನು ಚೆನ್ನಾಗಿ ಮಾಡುತ್ತಿದ್ದೇನೆ ಎಂದರೆ ಅದಕ್ಕೆ ನನ್ನ ಉತ್ತಮ ಹವ್ಯಾಸಗಳುನೀಡುತ್ತಿರುವ ಕೊಡುಗೆ ಸಾಕಷ್ಟು ಎನ್ನುತ್ತಾರೆ.
ಅಕ್ಷಯ್ ಕುಮಾರ್ ಅವರು ಅಪಾಯಕಾರಿ ಎನ್ನಿಸುವ ಸ್ಟಂಟ್ ಗಳನ್ನು ಕೂಡ ನಿರ್ವಹಿಸುತ್ತಾರೆ. ನುರಿತ ಸ್ಟಂಟ್ ಮ್ಯಾನ್ ಗಳು ಕೂಡ ಹಿಂಜರಿಯುವ ಸಾಹಸಮಯ ದೃಶ್ಯಗಳಲ್ಲಿ ಭಾಗವಹಿಸಲು ಅವರು ಹಿಂದೆ-ಮುಂದೆ ನೋಡುವುದಿಲ್ಲ. ಸೂಕ್ತ ಸಿದ್ಧತೆ ನಂತರವೇ ಸ್ಟಂಟ್ ಗೆ ಮುಂದಾಗುತ್ತೇನೆ ಎನ್ನುವ ಇವರು ಸಾಹಸ ಕಲಾವಿದರಿಗೂ ಸಹ ಸದಾ ಪಾಸಿಟಿವ್ ಪ್ರವೃತ್ತಿಯಿಂದಿರುವಂತೆ ಹೇಳುತ್ತಾರೆ
ವೃತ್ತಿಜೀವನದ ನಂತರ ಸಿಗುವ ಬಿಡುವಿನ ವೇಳೆಯನ್ನು ಮಡದಿ ಮಕ್ಕಳೊಂದಿಗೆ ಕಳೆಯಬೇಕು. ಇದರಿಂದ ಅವರಿಗೂ ಸಂತೋಷವಾಗುತ್ತದೆ. ಅವರ ಖುಷಿ, ನಗು ನಮ್ಮ ಮೇಲೂ ಪಾಸಿಟಿವ್ ಪರಿಣಾಮ ಬೀರುತ್ತದೆ ಎನ್ನುವ ಅಕ್ಷಯ್ ಕುಮಾರ್ ಸ್ವತಃ ಅದನ್ನು ಪಾಲಿಸುತ್ತಿದ್ದಾರೆ. ಇದೇ ನನ್ನ ಪಾಸಿಟಿವ್ ಎನರ್ಜಿ ಗುಟ್ಟು ಎಂದು ಮುಗುಳ್ನಗುತ್ತಾರೆ.

Similar Posts

Leave a Reply

Your email address will not be published. Required fields are marked *