ಬಹು ಪ್ರಸಿದ್ಧ ವಾಲ್ಮೀಕಿ ರಾಮಾಯಣವಲ್ಲದೇ ಅಷ್ಟಾಗಿ ಖ್ಯಾತಿಗೆ ಬಾರದ ರಾಮಾಯಣಗಳೂ ಇವೆ. ಜಾನಪದೀಯ ರಾಮಾಯಣವೂ ಇದೆ. ಈ ಕಾವ್ಯವನ್ನು ಜನಪದೀಯರು ತಮ್ಮದೇ ದೃಷ್ಟಿಕೋನದಲ್ಲಿ ನೋಡಿದ್ದಾರೆ. ಇದು ಮನಃಶಾಸ್ತ್ರೀಯ ಹಿನ್ನೆಲೆಯುಳ್ಳದಾಗಿರುವುದು ವಿಶೇಷ.. ಇಂಥ ಎಳೆಗಳನ್ನು ಇಟ್ಟುಕೊಂಡು ಡಾ. ಹೆಚ್.ಎಸ್. ವೆಂಕಟೇಶಮೂರ್ತಿ ಅವರು ‘ಚಿತ್ರಪಟ ರಾಮಾಯಣ” ರಚಿಸಿದ್ದಾರೆ. ಇದರ ಮೂಲ ಹೆಳವನಕಟ್ಟೆ ಗಿರಿಯಮ್ಮ ಅವರ ಜಾನಪದ ಕಾವ್ಯ. ಮೂರ್ತಿ ಅವರ ನಾಟಕ ಆಧರಿಸಿ ಬೆಂಗಳೂರಿನ “ಸಮಷ್ಟಿ” ಬಳಗ ‘ಚಿತ್ರಪಟ’ವನ್ನು ರಂಗರೂಪಕ್ಕೆ ತಂದಿದೆ.

ರಾವಣ ಹತ್ಯೆಯಾಗಿ, ರಾಮ ಪಟ್ಟಕ್ಕೇರಿದ ನಂತರ ನಡೆಯುವ ಕಥಾನಕವಿದು. ಈ ಮುಂಚಿನ ಕಥೆಯನ್ನು ನಾಟಕದಲ್ಲಿ ಸಂಕ್ಷಿಪ್ತವಾಗಿ ಹೇಳಲಾಗಿದೆ. ಇದಕ್ಕೂ ಚಿತ್ರಪಟಗಳನ್ನು ಬಳಸಿ ಹೇಳಿರುವುದು ಗಮನಾರ್ಹ. ಇದರಿಂದಾಗಿ ದೀರ್ಘ ವಿವರಣೆಯನ್ನು ಚುಟುಕಾಗಿ, ಸಮರ್ಥವಾಗಿ ಹೇಳಲು ಸಾಧ್ಯವಾಗಿದೆ. ಇಲ್ಲಿನ ಸೂತ್ರಧಾರರು ಜೋಗಿಗಳು ಮತ್ತು ಭೂತೆಯರು. ಚಿತ್ರಪಟದ ಆರಂಭಕ್ಕೊಂದು ಕುತೂಹಲ ಕೆರಳಿಸುವ ಮುನ್ನುಡಿಯನ್ನು ಇವರು ನೀಡುತ್ತಾರೆ.

ರಾಮನನ್ನು ಮೋಹಿಸಿದ ಕಾರಣಕ್ಕೆ ಅವಮಾನಿತಳಾದ ಶೂರ್ಪನಖಿಯ ದ್ವೇಷದ ಕಿಚ್ಚು ಆರಿರುವುದಿಲ್ಲ. ರಾಮ-ಸೀತೆ ದಾಂಪತ್ಯದಲ್ಲಿ ಬಿರುಕು ಮೂಡಿಸಲು ಮಾಯಾಜಾಲ ಹೆಣೆಯುತ್ತಾಳೆ. ಈ ತಂತ್ರದ ಅಂಗವಾಗಿ ಕೊರವಂಜಿ ಪಾತ್ರವೊಂದು ಸೀತೆಯ ಅಂತ:ಪುರ ಪ್ರವೇಶಿಸುತ್ತದೆ. ಇಲ್ಲಿಂದ ನಾಟಕದ ಕಥಾನಕ ತೀವ್ರಗತಿ ಪಡೆದುಕೊಳ್ಳುತ್ತದೆ. ಈಕೆ ನಿಧಾನವಾಗಿ ತಂತ್ರಗಳನ್ನು ಹೆಣೆಯುತ್ತಾ ಹೋಗುತ್ತಾಳೆ.

ಸೀತೆಗೆ ರಾವಣನ ಬಗ್ಗೆಗಿರುವ ನೆನಪುಗಳನ್ನು ಹೊರತೆಗೆಯಲು ಪ್ರಯತ್ನಿಸುತ್ತಾಳೆ. ಸೀತೆಗೆ ತನನ್ನು ಅಪಹರಿಸಿದ ರಾವಣನ ಬಗ್ಗೆ ಹೇವರಿಕೆಯಿದೆ. ಆದರೆ ಅಷ್ಟೇ ಗೌರವವಿದೆ. ಒಂಟಿಯಾಗಿದ್ದ ತನ್ನ ಮೈ ಮುಟ್ಟದ, ಪರಸ್ತ್ರೀ ಎಂಬ ಭಾವದಿಂದ ಅಂತರವಿಟ್ಟುಕೊಂಡೇ ಮಾತನಾಡುತ್ತಿದ್ದ ಆತನ ನಡವಳಿಕೆ ಬಗ್ಗೆಗಿನ ಗೌರವವಿದು. ಇದನ್ನೇ ಬಲವಾಗಿ ಹಿಡಿದುಕೊಂಡ ಕೊರವಂಜಿ ಆತನ ಚಿತ್ರ ರಚಿಸುವಂತೆ ಬಲವಂತ ಮಾಡುತ್ತಾಳೆ.

ಒಲದ ಮನಸಿನಿಂದ ರಾವಣನ ಚಿತ್ರ ರಚಿಸುವ ಸೀತೆ, ಕಣ್ಣುಗಳನ್ನು ಮಾತ್ರ ಚಿತ್ರಿಸುವುದಿಲ್ಲ. ಈ ಕೆಲಸವನ್ನು ಮಾಡುವ ಕೊರವಂಜಿ ಅಲ್ಲಿಂದ ಕಾಣೆಯಾಗುತ್ತಾಳೆ. ಕಣ್ಣು ಬಂದ ಚಿತ್ರಪಟದ ಮುಂದೆ ಸೀತೆ ನಿಂತ ಕೂಡಲೇ ಅದಕ್ಕೆ ಜೀವ ಬಂದು ಬಿಡುತ್ತದೆ. ಹತ್ಯೆಯಾದ ರಾವಣ ಜೀವತಳೆದು ಬಂದಾಗ ಸೀತೆಗೆ ದಿಗ್ಬ್ರಮೆ. ಈ ಸಂದರ್ಭದಲ್ಲಿ ಕಾಡಲು ಮುಂದಾದ ಆತನ ಮನ:ಪರಿವರ್ತನೆಯನ್ನು ಆಕೆ ಮಾಡುವ ರೀತಿ ಅನನ್ಯ.

ಸೀತೆ ಧೀಮಂತ ವ್ಯಕ್ತಿತ್ವ ಇಲ್ಲಿ ಮತ್ತಷ್ಟೂ ಪ್ರಜ್ವಲಿಸುತ್ತದೆ. ಕಾಡುವ ರಾವಣನನ್ನು ತನ್ನ ಮಗನಾಗಿ ಜನ್ಮತಳೆದು ಬರುವಂತೆ ಕೇಳಿಕೊಳ್ಳುತ್ತಾಳೆ. ಈ ಮಾತು ಕೇಳಿದ ಕೂಡಲೇ ರಾವಣ ಸ್ತಂಭಿಭೂತನಾಗುತ್ತಾನೆ. ಆ ಕ್ಷಣದಿಂದಲೇ ಅಮ್ಮ ಎನ್ನುವ ಉದ್ಗಾರ ಆತನಿಂದ ಹೊರಡುತ್ತದೆ. ಆದರೆ ರಾಮನ ಮನಸಿನಲ್ಲಿ ಮತ್ತೆ ಅನುಮಾನದ ಬೀಜಗಳು ಮೊಳೆಯುತ್ತವೆ. ಇದಕ್ಕೆ ಸೀತೆ ಪ್ರತಿಕ್ರಿಸುವ ರೀತಿ ಅಪೂರ್ವ…. ಆಕೆ ತಳೆಯುವ ನಿರ್ಧಾರವೂ ಆ ಕ್ಷಣದ ಕಾಲವನ್ನೂ ದಿಗ್ಬ್ರಮೆಗೊಳಿಸುತ್ತದೆ.

ಇಂಥ ಅಪರೂಪದ ನಾಟಕವನ್ನು ‘ಸಮಷ್ಟಿ’ ತಂಡ ರಂಗದ ಮೇಲೆ ತಂದಿರುವ ರೀತಿ ಅನನ್ಯ. ನಿರ್ದೇಶಕರು ಆಯಾ ಪಾತ್ರಕ್ಕೆ ಹೊಂದುವಂತೆ ಪಾತ್ರಧಾರಿಗಳನ್ನು ಆಯ್ಕೆ ಮಾಡಿರುವುದು ಮೆಚ್ಚುಗೆ ಮೂಡಿಸುತ್ತದೆ. ಈ ಪಾತ್ರಧಾರಿಗಳ ಎನರ್ಜಿಯೂ ವಿಶೇಷ. ಎಲ್ಲಿಯೂ ಲಯ ತಪ್ಪದಂತೆ ತಾವು ಅಭಿನಯಿಸುವ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ. ಚಂದ್ರನಖಿ, ಕೊರವಂಜಿ, ಸೀತೆ, ರಾಮನ ಪಾತ್ರಧಾರಿಗಳಂತೂ ಬಹುದೀರ್ಘ ಕಾಲ ನೆನಪಿನಲ್ಲಿ ಉಳಿಯುವಂತೆ ಅಭಿನಯಿಸಿದ್ದಾರೆ.

ನಿರ್ದೇಶಕ ಮಂಜುನಾಥ್ ಎನ್. ಬಡಿಗೇರ್ ಮತ್ತು ಸಹನಿರ್ದೇಶಕಿ ಶ್ವೇತಾ ಎಸ್, ಅವರ ಪರಿಶ್ರಮ ನಾಟಕದ ಪ್ರತಿಹಂತದಲ್ಲಿಯೂ ಎದ್ದುಕಾಣುತ್ತದೆ. ಪ್ರತಿಯೊಂದು ಪಾತ್ರ, ಸನ್ನಿವೇಶಗಳ ನಡುವೆ ಸಮನ್ವಯತೆಯನ್ನು ಕಾಯ್ದುಕೊಂಡಿದ್ದಾರೆ. ಆರಂಭದಿಂದಲೇ ನಾಟಕದ ಟೆಂಪೋ ಏರುಗತಿಯನ್ನು ಪಡೆದುಕೊಳ್ಳುತ್ತಾ ಸಾಗುತ್ತದೆ. ವಿಶೇಷವಾಗಿ ಈ ನಾಟಕವನ್ನು ಯಕ್ಷಗಾನ, ಬಯಲಾಟ ಮತ್ತು ಹವ್ಯಾಸಿ ರಂಗಭೂಮಿಯ ತಂತ್ರಗಳನ್ನು ಮಿಶ್ರ ಮಾಡಿ ಪ್ರಸ್ತುತಪಡಿಸಲಾಗಿದೆ. ಇಂಥ ತಂತ್ರಗಾರಿಕೆಯ ರಂಗರೂಪ ಅಪರೂಪ. ಈ ಪ್ರಯೋಗದಲ್ಲಿ ನಿರ್ದೇಶಕರು ಯಶಸ್ವಿಯಾಗಿದ್ದಾರೆ.

Similar Posts

Leave a Reply

Your email address will not be published. Required fields are marked *