ಬೀಚಿ ಅವರ ನಾಟಕಗಳೆಂದರೆ ಅಲ್ಲಿ ಸಾಮಾಜಿಕ ವಿಡಂಬನೆ, ಮೊನಚು ವ್ಯಂಗ್ಯ, ಭರಪೂರ ನಗು ಇವುಗಳೆಗೇನೂ ಕೊರತೆಯಿಲ್ಲ.  ಅವರು ತಮ್ಮ ಆತ್ಮಕಥನಕಕ್ಕೆ ಕೊಟ್ಟ ಹೆಸರು “ನನ್ನ ಭಯಾಗ್ರಫಿ” ಈ ಹೆಸರಿನಲ್ಲಿಯೂ ಇರುವ ವಿಡಂಬನೆಯನ್ನು ಗಮನಿಸಬಹುದು. ಈ ಕೃತಿ ಆಧರಿಸಿದ ನಾಟಕ “ಮಾನಸಪುತ್ರ” ಇದು ಒಂದೇ ಘಟನೆ ಆಧರಿಸಿದ ನಾಟಕವಲ್ಲ. ಸಿದ್ಧಮಾದರಿಗಿಂತ ಭಿನ್ನವಾಗಿರುವ ರಂಗರೂಪ. ಒಂದೇ ವ್ಯಕ್ತಿಯ ಸುತ್ತ ನಡೆಯುವ ಬಿಡಿಬಿಡಿ ಘಟನೆಗಳ ಸರಮಾಲೆ.

ಬೀಚಿ ಅವರ ನಾಟಕಗಳ ವೈಶಿಷ್ಟತೆ ಎಂದರೆ ಅಲ್ಲಿ ರಂಗಸಜ್ಜಿಕೆ, ಬೆಳಕು, ಹಿನ್ನೆಲೆ ಸಂಗೀತಗಳಿಂತ ಹೆಚ್ಚು “ಡೈಲಾಗ್ ಡಿಲೇವರಿ” ಆಧರಿಸಿದ್ದು. ಇಲ್ಲಿ ಯಾವುದೇ ನಟ/ನಟಿ ತನ್ನ ಸಂಭಾಷಣೆಯ ಓಘ ತಪ್ಪಿದರೆ ನಾಟಕದ ಸ್ವಾರಸ್ಯವೇ ಕಡಿಮೆಯಾಗುವ ರೀತಿಯದು. ಆದ್ದರಿಂದ ಅವರು ಸೃಜಿಸಿರುವ ಪಾತ್ರಗಳಲ್ಲಿ ನಟಿಸುವುದೂ ಒಂದು ಸವಾಲು.

ಬೆಂಗಳೂರಿನ “ಕಲಾವಿಲಾಸಿ” ತಂಡ ರಂಗರೂಪಕ್ಕೆ ತಂದ “ಮಾನಸಪುತ್ರ” ನಾಟಕದ ಪ್ರದರ್ಶನವನ್ನು ಜೂನ್ 16 ರ ಸಂಜೆ ಹನುಮಂತನಗರದ ಕೆ.ಎಚ್. ಕಲಾಸೌಧದಲ್ಲಿ ವೀಕ್ಷಿಸಿದೆ. ಸುಮಾರು ಒಂದೂವರೆ ತಾಸಿನ ನಾಟಕ ಎಲ್ಲಿಯೂ ಕಿಂಚಿತ್ತೂ ಬೇಸರಿಗೊಳಿಸದೇ ತನ್ನ ಓಘವನ್ನೂ ಕಳೆದುಕೊಳ್ಳದೇ ನೋಡಿಸಿಕೊಳ್ಳುತ್ತದೆ. ಹೀಗೆ ನೋಡಿಸಿಕೊಳ್ಳುತ್ತಲೇ, ಉದ್ದಕ್ಕೂ ನಗಿಸುತ್ತಾ ಅಲ್ಲಲ್ಲಿ ವಿಷಾದ, ಬೇಸರದ ಭಾವ ಮೂಡಿಸುತ್ತಾ ನೋಡುಗರನ್ನು ಚಿಂತನೆಗೆ ಹಂಚುತ್ತದೆ.

“ನನ್ನ ಭಯಾಗ್ರಫಿ” ಕೃತಿಯನ್ನು ಅತ್ಯುತ್ತಮ ರೂಪದಲ್ಲಿ ಬಸವರಾಜ ಎಮ್ಮಿಯವರ ರಂಗರೂಪಕ್ಕೆ ತಂದಿದ್ದಾರೆ. ಇವರದೇ ನಿರ್ದೇಶನ ಸಹ. ಇದು ಎಲ್ಲಿಯೂ ಹಳಿತಪ್ಪದ ಹಾಗೆ ಬಿಗಿಯಾದ ಬಂಧದಲ್ಲಿ ಇರುವುದು ಗಮನಾಹರ್ಹ. ಇವರ ಪರಿಶ್ರಮಕ್ಕೆ ಹಿನ್ನೆಲೆ ಸಹಕಾರ ನೀಡಿರುವ ವಿನೀತ್ ಚಿಮ್ಮಲಗಿ, ನಿರ್ವಹಣೆ ಹೊಣೆಹೊತ್ತ ಸಿದ್ದರಾಮು ಕೆ.ಎಸ್., ಅಭಿಷೇಕ್ ಚಿಕ್ಕಣ್ಣನವರ್, ವಸ್ತ್ರವಿನ್ಯಾಸ ಮಾಡಿರುವ ಮುರುಳೀಧರ ಚಿಮ್ಮಲಗಿ, ಕಲೆ ಜವಾಬ್ದಾರಿ ಹೊತ್ತ ಬನದೇಶ್ ವಿ,, ಮೇಘ ಜೆ.ಕಟ್ಟಿ, ಸಂಗೀತ ನೀಡಿರುವ ಸತ್ಯ ರಾಧಾಕೃಷ್ಣ ಹೆಗಲೇಣೆಯಾಗಿದ್ದಾರೆ. ಈ ತಾಂತ್ರಿಕ ತಂಡದ ಸಂಯೋಜಿತ ಕಾರ್ಯ ನುರಿತ ಬಾಣಸಿಗನೋರ್ವ ಉತ್ತಮವಾಗಿ ಅರ್ಪಿಸಿದ ರಸಪಾಕದ ಹಾಗೆ ಇದೆ ಎಂದರೆ ಉತ್ಪ್ರೇಕ್ಷೆ ಆಗುವುದಿಲ್ಲ.

ಸಾಮಾನ್ಯವಾಗಿ ನಾಟಕಗಳಲ್ಲಿ ಸಣ್ಣಪುಟ್ಟ ಪಾತ್ರಗಳು ಪ್ರೇಕ್ಷಕರ ಮನದಲ್ಲಿ ರಿಜಿಸ್ಟ್ರರ್ ಆಗುವುದು ಅಪರೂಪ. ಮಾನಸಪುತ್ರದಲ್ಲಿ ಲೋಕಕಲ್ಯಾಣ ಶಾಸ್ತ್ರಿ, ಬಿಟ್ಟಿ ಆಳು, ಮುದಿ ಯಜಮಾನ, ಪುಟ್ಟ ಹೆಂಡತಿ, ಹಂಗಾಮಿ ಗಂಡ, ಕಿವುಡು ಲಕ್ಷ್ಮಿ ಪಾತ್ರಗಳು ದಾಖಲಾಗುತ್ತವೆ. ಈ ಪಾತ್ರಗಳಲ್ಲಿ ನಟಿಸಿರುವವರು ಅಷ್ಟು ಸಹಜವಾಗಿ, ಭಾವಪೂರ್ಣವಾಗಿ ನಟಿಸಿದ್ದಾರೆ. ಕಿವುಡು ಲಕ್ಷ್ಮಿ ಪಾತ್ರಧಾರಿಯ ನಟನೆಯಂತೂ ದೀರ್ಘಕಾಲ ನೆನಪಿನಲ್ಲಿ ಉಳಿಯುತ್ತದೆ. ಆ ಪಾತ್ರಕ್ಕೆ ತಕ್ಕ ದೇಹಭಾಷೆ, ಸಂಭಾಷಣೆ ಒಪ್ಪಿಸುವ ವೈಖರಿ, ಭಾವಾಭಿನಯವನ್ನು ಈ ಪಾತ್ರಧಾರಿ ನೀಡಿದ್ದಾರೆ.

ಬೀಚಿ ಅವರ ಪಾತ್ರದಲ್ಲಿ ನಟಿಸಿರುವ ಪಾತ್ರಧಾರಿಯಂತೂ ಆ ಪಾತ್ರದೊಳಗೆ ಪರಕಾಯ ಪ್ರವೇಶ ಮಾಡಿದ್ದಾರೆ. ಎಲ್ಲಿಯೂ ಇವರ ನಟನೆ ಕೃತಕವೆನ್ನಿಸದಿರುವುದು, ಬೇಸರ ತರಿಸುವುದು, ತಾನು ನಗದೇ ತನ್ನ ಸಂಭಾಷಣೆ ಮೂಲಕವೇ ನೋಡುಗರನ್ನು ನಗಿಸಿ, ಯೋಚನೆಗೆ ಹಚ್ಚುವ ಮಾತುಗಳನ್ನಾಡುವ ರೀತಿ ಮೆಚ್ಚುಗೆ ಮೂಡಿಸುತ್ತದೆ. ತಿಂಮ್ಮ, ವಕೀಲ, ಆತನ ಹೆಂಡತಿ, ರಿಂದಮ್ಮ ಅವರ ಪಾತ್ರಗಳನ್ನು ಮಾಡಿರುವವರ ಅಭಿನಯವೂ ಅಚ್ಚುಕಟ್ಟು.

ಎಲ್ಲಿಯೂ ಕೂಡ ಯಾವ ಕಲಾವಿದರು ಓವರ್ ಆಕ್ಟಿಂಗ್ ಮಾಡಿಲ್ಲದಿರುವುದು, ಎಲ್ಲ ವಿಭಾಗಗಳನ್ನು ಸಮನ್ವಯಗೊಳಿಸಿ ನಾಟಕವನ್ನು ಪ್ರಸ್ತುತಿಗೊಳಿಸಿರುವ ನಿರ್ದೇಶಕರ ಪರಿಶ್ರಮ ಪ್ರತಿಹಂತದಲ್ಲಿಯೂ ಕಾಣುತ್ತದೆ. ಇದು ಹೇಗಿದೆ ಎಂದರೆ ಬೇರೇಬೇರೆ ಹೂಗಳನ್ನು ತಂದು ಚೆಂದವಾಗಿ ಕಟ್ಟಿಕೊಟ್ಟ ಮಾಲೆಯಂತಿದೆ. ಮುಂದೆ “ಮಾನಸಪುತ್ರ” ನಾಟಕ ಪ್ರದರ್ಶಿತಗೊಂಡಾಗ ಖಂಡಿತ ನೋಡಿ. ಬಹುದಿನ ನೆನಪಿನಲ್ಲಿ ಉಳಿಯುವ ಉತ್ತಮ ನಾಟಕ ನೋಡಿದ ಅನುಭವ ನಿಮ್ಮದಾಗುತ್ತದೆ.

Similar Posts

2 Comments

  1. Bichi’s Manas putra show was too good I enjoyed

  2. ಧನ್ಯವಾದಗಳು ಚಂದದ ಬರವಣಿಗೆಗೆ

Leave a Reply

Your email address will not be published. Required fields are marked *