ಆರೋಗ್ಯವಂತರಾಗಿ ಸದೃಢಕಾಯರಾಗಿರುವವರೇ ಎವರೆಸ್ಟ್ ಪರ್ವತ ಆರೋಹಣ ಮಾಡುವುದು ಕಷ್ಟ. ಹೀಗಿರುವಾಗ ಕ್ಯಾನ್ಸರ್ ಪೀಡಿತ ವ್ಯಕ್ತಿಯೊಬ್ಬರು ವಿಶ್ವದ ಅತಿ ಎತ್ತರದ ಪರ್ವತವನ್ನೇರಿ ಅಚ್ಚರಿ ಮೂಡಿಸಿದ್ದಾರೆ. ಐಯಾನ್ ಟೂಥಿಲ್. ಲಂಡನ್ ನಿವಾಸಿ. ಪುಟ್ಬಾಲ್ ಕ್ರೀಡಾ ಅಭಿಮಾನಿ. ಈಗಿವರಿಗೆ 47 ವರ್ಷ. 2015ರಲ್ಲಿ ಅನಾರೋಗ್ಯಕ್ಕೀಡಾಗಿದ್ದರು. ವೈದ್ಯಕೀಯ ತಪಾಸಣೆಗೊಳಪಡಿಸಿದಾಗ ಕರುಳಿನ ಕ್ಯಾನ್ಸರ್ ಪತ್ತೆಯಾಗಿತ್ತು. ದುರಾದೃಷ್ಟ ಎಂದರೆ ಅಷ್ಟರಲ್ಲಾಗಲೇ ಅದು ಬಲಿತ್ತಿತ್ತು. ಅವರು ಅಂಜಲಿಲ್ಲ. ರೋಗ ಹಿಮ್ಮೆಟ್ಟಿಸುವ ವಿಶ್ವಾಸದೊಂದಿಗೆ ಚಿಕಿತ್ಸೆ ಪಡೆಯಲಾರಂಭಿಸಿದರು. ಒಂದಷ್ಟು ಚೇತರಿಸಿಕೊಂಡ ಮೇಲೆ ತಮ್ಮ ದೈನಂದಿನ ಅಭ್ಯಾಸಗಳಾದ ವ್ಯಾಯಾಮ, ಓಡುವಿಕೆಗಳನ್ನು ಅಭ್ಯಾಸ ಮಾಡತೊಡಗಿದರು.

ಐಯಾನ್ ಟೂಥಿಲ್ ಅವರು ಮಹತ್ವಾಕಾಂಕ್ಷಿ. ಹಿಡಿದ ಕಾರ್ಯ ಮಾಡುವ ಸ್ವಭಾವದವರು. ವೈದ್ಯರು ಮಾರಣಾಂತಿಕ ಕ್ಯಾನ್ಸರ್ ಇದೆ ಎಂದಾಗಲೂ ಸಮಚಿತ್ತದಿಂದ ತಮ್ಮ ದೈನಂದಿನ ಕೆಲಸ ಮಾಡತೊಡಗಿದವರು. ಈ ಕಾಯಿಲೆಯಿಂದ ನರಳುತ್ತಿರುವ ಆರ್ಥಿಕ ದುರ್ಬಲರಿಗೆ ಸಹಾಯ ಮಾಡಲು ನಿರ್ಧರಿಸಿದರು. ಇದಕ್ಕಾಗಿ ವಿಶಿಷ್ಟ ಕಾರ್ಯ ಮಾಡಿ ದೇಣಿಗೆ ಸಂಗ್ರಹಿಸುವ ಗುರಿ ಹಾಕಿಕೊಂಡರು. ಇವರಿಗೆ ಪರ್ವತಾರೋಹಣದಲ್ಲಿ ಆಸಕ್ತಿ ಇತ್ತು. ಆದ್ದರಿಂದ ಅದೇ ಮಾರ್ಗದಲ್ಲಿ ಹಣ ಸಂಗ್ರಹಿಸಬೇಕೆಂದುಕೊಂಡರು. ಸಣ್ಣಪುಟ್ಟ ಪರ್ವತ ಹತ್ತಿ ಜನರಿಂದ ಹಣ ಕೇಳುವುದು ಸರಿ ಅಲ್ಲ ಎಂದುಕೊಂಡರು. ಆಗ ಅವರಿಗೆ ಹೊಳೆದಿದ್ದು ಹಿಮಾಲಯ ಶ್ರೇಣಿಯ ಎವರೆಸ್ಟ್ ಶಿಖರ.

ಎವರೆಸ್ಟ್. ವಿಶ್ವದಲ್ಲಿಯೇ ಅತಿ ಎತ್ತರದ ಶಿಖರ. 30 ಸಾವಿರ ಅಡಿಗಳಿಗೂ ಹೆಚ್ಚು ಎತ್ತರವಿದೆ. ಅದರ ನೆತ್ತಿಗೆ ಆರೋಹಣ ಮಾಡುವುದು ಕಠಿಣ. ಅತ್ಯಂತ ಸವಾಲಿನ ಕೆಲಸ. ಸಣ್ಣಪುಟ್ಟ ಪರ್ವತ ಏರಿದವರಿಗೆ ಅದನ್ನು ಏರುವುದು ಸುಲಭವಲ್ಲ. ಅದಕ್ಕಾಗಿ ವಿಶೇಷ ತರಬೇತಿ ಬೇಕು. ದೇಹವನ್ನು ಸಜ್ಜುಗೊಳಿಸಿಕೊಳ್ಳಬೇಕು. ಇದಕ್ಕಾಗಿ ಐಯಾನ್ ಟೂಥಿಲ್ ಅಭ್ಯಾಸ ಮಾಡತೊಡಗಿದರು. ಜೊತೆಗೆ ಎವರೆಸ್ಟ್ ಪರ್ವತಾರೋಹಿಗಳಿಂದ ತರಬೇತಿ ಪಡೆಯಲು ಆರಂಭಿಸಿದರು.

ಇಷ್ಟರಲ್ಲಾಗಲೇ ಕುರುಳಿನ ಕ್ಯಾನ್ಸರ್ ಪೀಡಿತ ವ್ಯಕ್ತಿಯೊಬ್ಬರು ದುರ್ಗಮ ಎವರೆಸ್ಟ್ ಏರಲು ಹೊರಟ ಸುದ್ದಿ ಇಂಗ್ಲೆಡಿನ ಎಲ್ಲೆಡೆ ಹರಡಿತ್ತು. ಜನತೆ ಉದಾರ ಮನಸಿನಿಂದ ಸಹಾಯ ಮಾಡಲು ತೊಡಗಿದರು. ಆದರೆ ಅದು ಅವರು ಅಂದುಕೊಂಡ ಗುರಿಯ ಒಂದಿಷ್ಟೂ ಭಾಗವೂ ಆಗಿರಲಿಲ್ಲ. ಆದರೆ ಟೂಥಿಲ್ ಈ ಬಗ್ಗೆ ಚಿಂತಿತರಾಗಲಿಲ್ಲ. ನನ್ನ ಪ್ರಯತ್ನ ನಾನು ಮಾಡುತ್ತೇನೆ ಎಂದುಕೊಂಡರು.

ಅಂತೂ ಐಯಾನ್ ಟೂಥಿಲ್ ನೇಪಾಳಕ್ಕೆ ಬಂದರು. ಒಂದಷ್ಟು ದಿನ ಅಲ್ಲಿಯೇ ತಂಗಿದ್ದರು. ನಿತ್ಯವೂ ಅನುಭವಿ ಪರ್ವತಾರೋಹಿಗಳೊಂದಿಗೆ ಚರ್ಚಿಸುತ್ತಿದ್ದರು. ನಂತರ ಪರ್ವತರೋಹಿ  ತಂಡದೊಂದಿಗೆ ಸೇರಿಕೊಂಡು ಎವರೆಸ್ಟ್ ನತ್ತ ಪಯಣ ಬೆಳೆಸಿದರು.

ಎವರೆಸ್ಟ್ ಬೇಸ್ ಕ್ಯಾಂಪಿನತ್ತ ಚಾರಣ ಆರಂಭವಾಯಿತು. ಇದು ಕೂಡ ಕಠಿಣ ಹಾದಿ. ಬಹುದೀರ್ಘಾವಧಿ ನಡೆಯಬೇಕು. ಪರ್ವತಗಳನ್ನು ಏರಬೇಕು. ಈ ಹಾದಿಯಲ್ಲಿ ಕೆಲವು ದಿನ ನಡೆದರು. ಎವರೆಸ್ಟ್ ಬೇಸ್ ಕ್ಯಾಂಪ್ ತಲುಪಿದರು. ಅಲ್ಲಿಂದ ಅವರ ಗುರಿ ಬಹುಸ್ಪಷ್ಟವಾಗಿ ಕಂಡಿತು. ಎವರೆಸ್ಟಿನ ಗಾಂಭೀರ್ಯ ಕಂಡು ಮೌನವಾಗಿ ನಮಿಸಿದರು.

ಎವರೆಸ್ಟ್ ಬೇಸ್ ಕ್ಯಾಂಪಿಗೆ ಬರುವ ಮುಂಚೆಯೇ ಐಯಾನ್ ಟೂಥಿಲ್ ಅವರು ಕ್ಯಾನ್ಸರ್ ನಿಂದ ಬಳಲುತ್ತಿರುವ ಸುದ್ದಿ ತಂಡದವರಿಗೆ ಗೊತ್ತಾಗಿತ್ತು. ಅಲ್ಲಿದ್ದ ಕೆಲವರು ಈ ಪರ್ವತ ಹತ್ತುವಾಗ ಅನುಭವಿಸಬೇಕಾದ ತೊಂದರೆಗಳ ಬಗ್ಗೆ ತಿಳಿಸಿದರು. ಭಾರಿ ಸದೃಢಕಾಯರಾದವರು ಕೂಡ ಜರ್ಜರಿತರಾಗಬಹುದು, ದೈಹಿಕ ತೊಂದರೆಗಳ ಜೊತೆಗೆ ಮಾನಸಿಕ ತೊಂದರೆಗಳೂ ಉಂಟಾಗಬಹುದೆಂದು ಹೇಳಿದರು. ಇವ್ಯಾವುದೂ ಕಪೋಲಕಲ್ಪಿತವಾಗಿರಲಿಲ್ಲ. ಅವರು ಹೇಳಿದ್ದೆಲ್ಲ ನಿಜವೇ ಆಗಿತ್ತು. ಟೂಥಿಲ್ ಅವರ ಬಗ್ಗೆ ಸಹಾನುಭೂತಿಯಿಂದಲೇ ಅವರು ಈ ಮಾತುಗಳನ್ನು ಹೇಳಿದ್ದರು. ಆದರೆ ಈ ವ್ಯಕ್ತಿ ಅದ್ಯಾವುದಕ್ಕೂ ಮಣಿಯಲಿಲ್ಲ.

ತಂಡದವರು 2017ರ ಮೇ 16ರಂದು ಎವರೆಸ್ಟ್ ಮೂಲಶಿಬಿರದಿಂದ ಮತ್ತೆ ಮೇಲೇರತೊಡಗಿದರು. ಮೈ ಕೊರೆಯುವ ಚಳಿ, ಆ ಮೂಳೆ ಕೊರೆಯುವ ಚಳಿ ತಡೆಯಲು ಅಗತ್ಯವಾದ ಉಡುಪು ಧರಿಸಿರಲೇಬೇಕು. ಇದರ ಜೊತೆಗೆ ಬಹುದಪ್ಪನೆಯ ಬೂಟ್ಸ್. ಇದರ ಅಡಿಗೆ ಮುಳ್ಳುಗಳ ಕವಚ ಹಾಕಿಕೊಳ್ಳಲೇಬೇಕು. ಇದು ಹಿಮದ ಮೇಲೆ ಪಾದದ ಹಿಡಿತ ಇರಲು ಅವಶ್ಯಕ. ಇಲ್ಲದಿದ್ದರೆ ಸಾವಿರಾರು ಅಡಿ ಎತ್ತರದಿಂದ ಜಾರಿ ಸಾವನ್ನಪ್ಪಬೇಕಾಗುತ್ತದೆ.

ಆ ಅಗಾಧ ಪರ್ವತದ ಮೇಲೇರಿದಂತೆಲ್ಲ ಗಾಳಿ, ಬಿರುಗಾಳಿಯಾಗುತ್ತದೆ. ಸುಳಿಗಾಳಿಯಾಗುತ್ತದೆ. ಹಿಮದ ಮೇಲೆ ಹಾಕಿಕೊಂಡ ಗುಡಾರಗಳನ್ನೇ ಕಿತ್ತೆಸೆಯುತ್ತದೆ. ಮೇಲಿನಿಂದ ಹಿಮದ ರಾಶಿಯನ್ನೇ ಸುರಿಸುತ್ತದೆ. ಅಡಿಗಡಿಗೆ ಅಪಾಯ.  ಒಮ್ಮೆಯಂತೂ  ತಂಡ ಭೀಕರ ಬಿರುಗಾಳಿಗೆ ಸಿಲುಕಿತು. ಗುಡಾರಗಳ ಜೊತೆ ತಮ್ಮನ್ನು ರಕ್ಷಿಸಿಕೊಳ್ಳುವುದು ಬಹಳ ಕಷ್ಟವಾಯಿತು ಎಂದು ಟೂಥಿಲ್ ಮಾರ್ಗದರ್ಶಕರು ಹೇಳುತ್ತಾರೆ.

ಹೆಜ್ಜೆ ಮೇಲೆ ಹೆಜ್ಜೆ ಇಟ್ಟು ಮೇಲೇರಬೇಕುಇದಕ್ಕಾಗಿಯೇ ಹೆಣೆಯಲಾದ ಬಹು ಬಲಿಷ್ಟ ಹಗ್ಗಗಳನ್ನು ಬಳಸಬೇಕು. ಮೇಲೆರಿದಂತೆಲ್ಲ ನೇಪಾಳದ ನುರಿತ ಶೇರ್ಪಾಗಳ ಅಗತ್ಯ, ಅವಲಂಬನೆ ಹೆಚ್ಚಾಗುತ್ತದೆ. ಪರ್ವತಗಳನ್ನು ಏರುವುದರಲ್ಲಿ ನಿಸ್ಸಿಮರಾದ ಅವರು ಮೊದಲು ಮೇಲೇರಿ ತುಸು ಭದ್ರ ಎನಿಸಿದ ಜಾಗದಲ್ಲಿ ಹುಕ್ಸ್ ಗಳನ್ನು ಹಾಕುತ್ತಾರೆ. ಅದಕ್ಕೆ ಹಗ್ಗ ಕಟ್ಟಿರುತ್ತಾರೆ. ಪ್ರತಿಯೋರ್ವ ಪರ್ವತರೋಹಿಯೂ ಸೊಂಟದ ಭಾಗಕ್ಕೆ ಹುಕ್ಸ್ ಹಾಕಿಕೊಂಡು ಹಗ್ಗದ ಸಂಪರ್ಕ ಪಡೆದುಕೊಂಡಿರುತ್ತಾರೆ. ಅನೇಕ ಭಾಗಗಳಲ್ಲಿ ಏರುವಿಕೆ ಲಂಬಾಕಾರವಾಗಿರುತ್ತದೆ. ತೀವ್ರ ಇಳಿಜಾರಿನಲ್ಲಿ ಬಹು ಎಚ್ಚರಿಕೆಯಿಂದ ಸಾಗಬೇಕಾಗುತ್ತದೆ.

ಪರ್ವತದಲ್ಲಿ 20 ಸಾವಿರ ಅಡಿ ಮೇಲೆ ಏರಿದಂತೆ ಆಮ್ಲಜನಕ ವಿರಳವಾಗತೊಡಗುತ್ತದೆ. ಮೇಲೇರಿದಂತೆಲ್ಲ ಉಸಿರಾಡಲು ಆಕ್ಸಿಜನ್ ಸಿಲಿಂಡರ್ ಅವಲಂಬಿಸಬೇಕಾಗುತ್ತದೆ. ಹಿಮಾಲಯದ ವಾತಾವರಣಕ್ಕೆ ಅಗತ್ಯವಾದ ದಪ್ಪನೆಯ ಸೂಟ್, ಬೂಟ್ ಧರಿಸಿರಬೇಕು. ಇವುಗಳ ಭಾರವೇ ಸಾಕಷ್ಟು. ಇದಲ್ಲದೇ ಆಕ್ಸಿಜನ್  ಸಿಲಿಂಡರ್ ಗಳು, ಅವಶ್ಯಕವಾದ ವಿಶೇಷ ಆಹಾರ, ನೀರು ಇವುಗಳನ್ನೆಲ್ಲ ನಿರ್ದಿಷ್ಟ ಹಂತದ ನಂತರ ಪರ್ವತಾರೋಹಿ ತನ್ನ ಬೆನ್ನ ಮೇಲೆಯೇ ಹೊತ್ತು ಏರಬೇಕು. ಏಕೆಂದರೆ ಒಂದು ಹಂತದ ನಂತರ ಶೇರ್ಪಾಗಳೆಲ್ಲರೂ ಬರುವುದಿಲ್ಲ. ಅತ್ಯಂತ ನುರಿತ ಒಬ್ಬರು ಅಥವಾ ಇಬ್ಬರು ಮಾತ್ರ ಜೊತೆಯಲ್ಲಿರುತ್ತಾರೆ. ಇವರು ಪರ್ವತಾರೋಹಿಗಳ ಸಾಮಗ್ರಿ ಹೊರುವುದಿಲ್ಲ.

ಐವಾನ್ ಟೂಥಿಲ್ ಅವರು ನಿತ್ಯವೂ ಕ್ಯಾನ್ಸರ್ ಚಿಕಿತ್ಸೆಗೆ ನೀಡುವ ಮಾತ್ರೆಗಳನ್ನು ಸೇವಿಸಬೇಕಾಗಿತ್ತು. ಆ ದುರ್ಗಮ ಏರುವಿಕೆಯಲ್ಲಿ ಅವುಗಳನ್ನೆಲ್ಲ ಮರೆಯದೇ ತೆಗೆದುಕೊಳ್ಳುವುದು ಅಷ್ಟು ಸುಲಭದ ಸಂಗತಿಯಾಗಿರಲಿಲ್ಲ. ಇಷ್ಟೆಲ್ಲ ಮಾಡುತ್ತಾ ಪರ್ವತ ಏರುತ್ತಾ ಹೋದ ಅವರಿಗೆ ಎವರೆಸ್ಟ್ ಎಂದರೇನು ಎಂಬ ಬಹು ಕಠಿಣ ಪ್ರಯೋಗಿಕ ಅನುಭವವಾಗತೊಡಗಿತು. ಜೊತೆಗಿದ್ದವರು ಮೇಲೇರಲು ಕಷ್ಟ ಎನಿಸಿದರೆ ಶೇರ್ಪಾ ಸಹಾಯ ತೆಗೆದುಕೊಂಡು ಇಳಿದುಹೋಗು ಎಂದು ಸಲಹೆ ನೀಡಿದರು. ಆದರೆ ಅದನ್ನೆಲ್ಲ ನಯವಾಗಿಯೇ ನಿರಾಕರಿಸಿದರು.

ಎರಡನೇ ಕ್ಯಾಂಪ್ ಹಂತದಲ್ಲಿ ಬಲವಾಗಿ ಬೀಸಿದ ಗಾಳಿಯಿಂದ ಟೂಥಿಲ್ ಟೆಂಟ್ ಸಹಿತ ಎಲ್ಲವನ್ನು ಕಳೆದುಕೊಳ್ಳಬೇಕಾಗಿತ್ತು. ಈ ಅಪಾಯದಿಂದ ಪಾರಾಗಿದ್ದೇ ಒಂದು ಪವಾಡ ಎನ್ನುತ್ತಾರೆ. ಇದರಿಂದ ಹೇಗೋ ಪಾರಾಗಿ ಮೇಲೇರತೊಡಗಿದಂತೆಲ್ಲ ದೇಹ ನಿರ್ಜಲೀಕರಣದ ಅಪಾಯ ಎದುರಿಸುತ್ತದೆ. ಅದರಿಂದಲೂ ಸಾವಿನ ದವಡೆಗೆ ಸಿಲುಕಬಹುದು.  ನಿರ್ದಿಷ್ಟ ಎತ್ತರ ಏರಿದ ನಂತರ ಮಂಜು ಕರಗಿಸಲು ಗ್ಯಾಸ್ ಸಿಲಿಂಡರ್ ಅನ್ನೂ ಕೂಡ ತೆಗೆದುಕೊಂಡು ಹೋಗಲಾಗುವುದಿಲ್ಲ. ಆದ್ದರಿಂದ ತೆಗೆದುಕೊಂಡು ಹೋಗಿರುವ ನೀರನ್ನೇ ಜತನದಿಂದ ಬಳಸಬೇಕು.

ಹಿಮಾಲಯ ಪರ್ವತಗಳನ್ನು ಏರಲು ಹೊರಟವರು ಎದುರಿಸಬೇಕಾದ ಬಹು ದೊಡ್ಡ ಅಪಾಯಗಳಲ್ಲಿ ಒಂದೆಂದರೆ ದೃಷ್ಟಿಹೀನತೆ. ಇದರಿಂದ ಎಲ್ಲರೂ ಪಾರಾಗುವುದಿಲ್ಲ. ಕೆಲವರು ತಾತ್ಕಾಲಿಕ ದೃಷ್ಟಿಹೀನತೆ ಅನಿಭವಿಸಿದರೆ ಕೆಲವರು ಶ್ವಾಶ್ವತ ದೃಷ್ಟಿಹೀನತೆಗೆ ಒಳಗಾಗುತ್ತಾರೆ. ಆದ್ದರಿಂದ ಬಹು ಎತ್ತರದ ಹಿಮಪರ್ವತಗಳನ್ನು ಏರುವುದು ಬಹುದೊಡ್ಡ ಸವಾಲು. ಟೂಥಿಲ್ ಕೂಡ ದೃಷ್ಟಿಯ ತೊಂದರೆಗೆ ಸಿಲುಕಿಕೊಂಡರು. ಅದು ಪರ್ವತದ ನೆತ್ತಿಯನ್ನು ಇನ್ನೇನು ಸಮೀಪಿಸಿದೆವು ಎನ್ನುವ ಹಂತದಲ್ಲಿ…..

2017ರ ಜೂನ್ 5. ಟೂಥಿಲ್  ವಿಶ್ವದ ಅತಿ ಎತ್ತರ ಪರ್ವತದ ನೆತ್ತಿ ಮೇಲಿದ್ದರು. ಆ ಎತ್ತರ ತಲುಪಿದವರು ಅಲ್ಲಿಂದ ವಿಹಂಗಮ ನೋಟ ಅನುಭವಿಸುತ್ತಾರೆ. ಪುಳಕಿತರಾಗುತ್ತಾರೆ. ಆದರೆ ಇವರಿಗೆ ಆ ಆದೃಷ್ಟ ಇರಲಿಲ್ಲ. ಇವರಿಗ ಸುಮಾರು 120 ಅಡಿ ಅಂತರದವರೆಗಿನ ದೃಶ್ಯಗಳಷ್ಟೆ ಕಾಣಿಸುತ್ತಿತ್ತು. ಇದರಿಂದ ದುಃಖಿತರಾದರೂ ಇಷ್ಟು ದೊಡ್ಡ ಪರ್ವತವನ್ನೇರಿದೆ ಎಂಬ ಖುಷಿ ಅದನ್ನು ಮರೆಸಿತು.

ಇತಿಹಾಸದಲ್ಲಿ ಮಾರಣಾಂತಿಕ ಕಾಯಿಲೆ ಉಳ್ಳವರು ಎವರೆಸ್ಟ್ ಪರ್ವತಾರೋಹಣ ಮಾಡಿ ಅದರ ನೆತ್ತಿ ತಲುಪಿರಲಿಲ್ಲ. ಟೂಥಿಲ್ ಅದನ್ನು ಸಾಧಿಸಿದರು. ಈ ವಿಷಯ ತಿಳಿದ ಕೂಡಲೇ ಇಂಗ್ಲೆಡಿಗರಷ್ಟೆ ಅಲ್ಲದೇ ಜಗತ್ತಿನ ಎಲ್ಲೆಡೆಯ ಜನ ಖುಷಿಪಟ್ಟರು. ಅಭಿನಂದಿಸಿದರು.

ಕ್ಯಾನ್ಸರ್ ರೋಗಿಗಳ ಸಹಾಯಾರ್ಥ ಟೂಥಿಲ್ ಅವರು 29. 100 ಪೌಂಡ್ ಸಂಗ್ರಹಿಸುವ ಗುರಿ ಇಟ್ಟುಕೊಂಡಿದ್ದರು. ಆದರೆ ಸಂಗ್ರಹವಾದ ಹಣ ಅದಕ್ಕೂ ಹೆಚ್ಚು. 31, 500 ಪೌಂಡುಗಳ ದೇಣಿಗೆ ಸಂಗ್ರಹವಾಗಿತ್ತು. ಇದು ಕೂಡ ಇತಿಹಾಸದಲ್ಲಿ ಒಂದು ದಾಖಲೆ. ವ್ಯಕ್ತಿಯೊಬ್ಬರು ಏಕಾಂಗಿಯಾಗಿ ಇಷ್ಟು ದೊಡ್ಡ ಮೊತ್ತದ ಹಣ ಸಂಗ್ರಹಿಸಿಕೊಟ್ಟಿದ್ದು ಇದೇ ಮೊದಲು

ಅಂದಹಾಗೆ ಐಯಾನ್ ಟೂಥಿಲ್ ಅವರ ಕರುಳಿನ ಕ್ಸಾನ್ಸರ್ ಕೊನೆಹಂತದಲ್ಲಿದೆ. ಇವರು ಇನ್ನು ಕೆಲವೇ ತಿಂಗಳು ಬದುಕಿರುತ್ತಾರೆ ಎಂದು ವೈದ್ಯರು ಹೇಳಿದ್ದಾರೆ. ಇದು ಇವರ ಅಭಿಮಾನಿಗಳೆಲ್ಲರ ಕಣ್ಣನ್ನು ತೇವಗೊಳಿಸಿದೆ. ಆದರೆ ಟೂಥಿಲ್ ಧೃತಿಗೆಟ್ಟಿಲ್ಲ. ಇಷ್ಟು ಸಾಧನೆ ಮಾಡಲು ಅವಕಾಶ ದೊರಕಿದ್ದೆ ನನ್ನ ಪುಣ್ಯ ಎನ್ನುತ್ತಾರೆ. ಎಲ್ಲರೂ ಜೀವನ್ಮುಖಿಗಳಾಗಿರಲಿ ಎಂದು ಹಾರೈಸುತ್ತಾರೆ.

Similar Posts

Leave a Reply

Your email address will not be published.