ಕುಮಾರ ರೈತ

 

 

 

 

 

ಆಧುನಿಕ ಕಾಲಘಟ್ಟದಲ್ಲಿ ಬದುಕು ಒತ್ತಡಮಯ. ಇದಕ್ಕೆ ನಗರ-ಗ್ರಾಮೀಣ ಎಂಬಮ ಬೇಧವಿಲ್ಲ. ತೀವ್ರ ಒತ್ತಡದ ಜೀವನಶೈಲಿ ತೊಂದರೆ ಅನೇಕ. ಇದನ್ನು ಶೀಘ್ರ ಪರಿಹರಿಸಿಕೊಳ್ಳಬೇಕು. ಇಲ್ಲದಿದ್ದರೆ ಮನೋ-ದೈಹಿಕ ಸಮಸ್ಯೆಗಳು ಉಂಟಾಗಬಹುದು. ಇದರ ನಿವಾರಣೆಗೆ “ಸಾಕುಪ್ರಾಣಿ ಚಿಕಿತ್ಸೆ” ಎಂಬ ವಿಧಾನ ಜನಪ್ರಿಯವಾಗುತ್ತಿದೆ.

ಶ್ವಾನಗಳು, ಮನುಷ್ಯರ ನಂಬಿಕೆ ಭಂಟರು. ಚುರುಕು, ಜಾಣ್ಮೆಯಲ್ಲಿ ಶ್ವಾನಗಳಿಗೆ ಶ್ವಾನಗಳೇ ಸಾಟಿ. ಸಾಕಿದವರನ್ನು ಅಪತ್ಕಾಲದಲ್ಲಿ ರಕ್ಷಿಸಿದ ಉದಾಹರಣೆ ಸಾಕಷ್ಟು. ಆದ್ದರಿಂದಲೇ ಸಾಕಷ್ಟು ಮಂದಿಗೆ ಶ್ವಾನಗಳೆಂದರೆ ಅಚ್ಚುಮೆಚ್ಚು. ಅದರಲ್ಲಿಯೂ ಕೆಲವೊಂದು ತಳಿ ಶ್ವಾನಗಳನ್ನು ಬಹುಇಷ್ಟಪಟ್ಟು ಸಾಕುತ್ತಾರೆ. ಮನೆ ಸದಸ್ಯರ ರೀತಿ ಸಲಹುತ್ತಾರೆ.

ರಕ್ಷಣೆಗಾಗಿ ಸಾಕುವ ಶ್ವಾನಗಳಿವೆ. ಇದಕ್ಕಾಗಿಯೇ ಕೆಲವೊಂದು ತಳಿಗಳನ್ನು ಆಯ್ಕೆ ಮಾಡುತ್ತಾರೆ. ಒಂಟಿಮನೆ, ತೋಟ, ಸಂಪತ್ತು ಇಟ್ಟಿರುವಂಥ ಸ್ಥಳಗಳ ಕಾವಲಿಗೆ ಅವುಗಳನ್ನು ಇರಿಸಿರುತ್ತಾರೆ. ಇದರಂತೆ ಮುದ್ದಿಗಾಗಿಯೂ ಸಾಕುವ ಶ್ವಾನಗಳಿವೆ. ಅಬಾಲವೃದ್ಧರಿಗೆಲ್ಲ ಅವುಗಳು ಅಚ್ಚುಮೆಚ್ಚು.

ಶ್ವಾನಗಳನ್ನು ಸಾಕುವುದು, ಬಿಡುವಿನ ವೇಳೆ ಅವುಗಳೊಂದಿಗೆ ಆಟವಾಡುವುದು ಮನೋ ಒತ್ತಡ ನಿವಾರಣೆಗೆ ಸಹಾಯಕ. ಮನೋವೈದ್ಯರು ಈ ಬಗ್ಗೆ ಹೇಳುತ್ತಿರುತ್ತಾರೆ. ಆಧುನಿಕ ಬದುಕಿನಿಂದ ಉಂಟಾಗುವ ಒತ್ತಡಗಳನ್ನು ನಿವಾರಿಸಿಕೊಳ್ಳಲು ಶ್ವಾನಗಳನ್ನು ಸಾಕುವಿಕೆ ಹೆಚ್ಚಾಗುತ್ತಿದೆ. ಬಿಡುವಿನ  ದಿನಗಳಲ್ಲಿ ಮನೆಮಂದಿಯೆಲ್ಲ ವಿಹಾರಕ್ಕೆ ಹೋದಾಗ ತಾವು ಸಾಕುತ್ತಿರುವ ಶ್ವಾನಗಳನ್ನೂ ಕರೆದುಕೊಂಡು ಹೋಗುತ್ತಾರೆ. ಅವುಗಳೊಂದಿಗೆ ಆಟವಾಡುತ್ತಾರೆ. ಇದೆಲ್ಲ ಉಲ್ಲಾಸಕರ. ಇದರಿಂದ ಅರಿವಿಗೆ ಬಾರದೇ ಮನೋಒತ್ತಡಗಳು ಗಮನಾರ್ಹವಾಗಿ ಕಡಿಮೆಯಾಗಿರುತ್ತವೆ.

ಐಟಿ-ಬಿಟಿ , ಪತ್ರಿಕೋದ್ಯಮ, ಹಣಕಾಸು, ಪೊಲೀಸ್, ವಿಮಾ, ಮಿಲಿಟರಿ ಇತ್ಯಾದಿ ಕ್ಷೇತ್ರಗಳಲ್ಲಿ ಕೆಲಸ ಮಾಡುವ ವ್ಯಕ್ತಿಗಳ ಮೇಲೆ ಅಪಾರ ಒತ್ತಡ ಇರುತ್ತದೆ. ಇದರ ಪರಿಹಾರೋಪಾಯ ಕಂಡುಕೊಳ್ಳದಿದ್ದರೆ ಖಿನ್ನತೆ ಆವರಿಸಬಹುದು. ಖಿನ್ನತೆ ವೃದ್ಧಿಸಿದಷ್ಟು ಚಿಕಿತ್ಸೆ ಕಷ್ಟ. ರಜೆ ತೆಗೆದುಕೊಂಡು ಮನೆ ಅಥವಾ ಹೊರಗೆ ಇದ್ದ ಮಾತ್ರಕ್ಕೆ ಖಿನ್ನತೆ ಮತ್ತು ಒತ್ತಡ ಕಡಿಮೆಯಾಗುವುದಿಲ್ಲ. ಆದ್ದರಿಂದ ಇಂಥ ವ್ಯಕ್ತಿಗಳು ಬಿಡುವಿನ ವೇಳೆ ಸಾಕುಪ್ರಾಣಿಗಳು ಅದರಲ್ಲಿಯೂ ವಿಶೇಷವಾಗಿ ಶ್ವಾನಗಳ ಜೊತೆ ಒಂದಷ್ಟು ಸಮಯ ಕಳೆಯುವಂಥ ಪರಿಪಾಠ ಪಾಶ್ಚಾತ್ಯ ದೇಶಗಳಲ್ಲಿ ಹೆಚ್ಚುತ್ತಿದೆ.

ತಾನಿರುವ ಮನೆ ಸದಸ್ಯರನ್ನು ಶ್ವಾನ ಬಹಳ ಹಚ್ಚಿಕೊಂಡಿರುತ್ತದೆ. ಅವರಲ್ಲಿ ಯಾರಾದರೊಬ್ಬರು ಒಂದೆರಡು ದಿನ ಕಾಣಿಸದಿದ್ದರೂ ಅವು ಕೊರಗುತ್ತವೆ, ಅವರು ಬಂದ ಕೂಡಲೇ ಅವರ ಮೈಮೇಲೆ ಜಿಗಿದು ತಮ್ಮ ಆನಂದ ವ್ಯಕ್ತಪಡಿಸುತ್ತವೆ. ಇಂಥ ಸಂದರ್ಭಗಳಲ್ಲಿ ಆ ವ್ಯಕ್ತಿಗೆ ಆಗುವ ಸಂತೋಷವೂ ಅಪಾರ. ಅದರಲ್ಲಿಯೂ ಶ್ವಾನಗಳು ಸದಾ ಮನೆಮಕ್ಕಳ ಜೊತೆ ಇರುತ್ತವೆ.

ಭಾರತದಲ್ಲಿಯೂ ಸಾಕುಪ್ರಾಣಿ ಚಿಕಿತ್ಸೆ ಅಥವಾ ಪೆಟ್ ಥೆರಪಿ ಜನಪ್ರಿಯವಾಗುತ್ತಿದೆ. ಅನೇಕ ಕಂಪನಿಗಳು ತಮ್ಮ ಕಂಪನಿಗಳ ಮನ ಹಗುರಗೊಳಿಸಲು ಪೆಟ್ ಥೆರಪಿಗೆ ಅವಕಾಶ ಕಲ್ಪಿಸುತ್ತವೆ. ಈ ನಿಟ್ಟಿನಲ್ಲಿ ದೆಹಲಿ ಗುರುಗ್ರಾಮದ ಒಂದಷ್ಟು ಯುವಮಂದಿ ಪೆಟ್ ಥೆರಪಿಗಾಗಿ ಸಾಕುಪ್ರಾಣಿಗಳಿಗೆ ತರಬೇತಿ ನೀಡುವ ಕಾರ್ಯ ಮಾಡುತ್ತಿದ್ದಾರೆ.

ಪೆಟ್ ಥೆರಪಿ ಸಲುವಾಗಿ “ಫರ್ ಬಾಲ್ ಸ್ಟೋರಿ” ಎಂಬ ಕಂಪನಿ ಆರಂಭಿಸಿದ್ದಾರೆ. ಇವರೆಲ್ಲ ಸ್ನಾತಕೋತ್ತರ ಪದವೀಧರರು. ಕೈ ತುಂಬ ಸಂಬಳ ತರುವಂಥ ಉದ್ಯೋಗಗಳಲ್ಲಿ ಇದ್ದವರು. ಅನಿಮೇಶ್ ಕಟಿಯಾರ್. ಶೃತಿಶರ್ಮಾ, ಅರುಶಿ ದೀಕ್ಷಿತ್ ಕುನಾಲ್ ದರಾಲ್ ಅವರು ಈ ವಿಶಿಷ್ಟ ಕಂಪನಿ ಕಾರ್ಯನಿರ್ವಾಹಕರು.

ಬೃಹತ್ ಕಂಪನಿಗಳು ವಾರದಲ್ಲಿ ಒಂದು ದಿನ ತಮ್ಮ ಉದ್ಯೋಗಿಗಳಿಗೆ ಪೆಟ್ ಥೆರಪಿಗೆ ಅವಕಾಶ ಕಲ್ಪಿಸುತ್ತವೆ. ಫರ್ ಬಾಲ್ ಕಂಪನಿಗೆ ಕರೆ ಮಾಡುತ್ತವೆ. ಅವರು ತಾವು ಸಾಕುತ್ತಿರುವ ತರಬೇತಿ ಹೊಂದಿದ ಶ್ವಾನಗಳು ಇತರ ಸಾಕುಪ್ರಾಣಿಗಳೊಂದಿಗೆ ಅಲ್ಲಿಗೆ ತೆರಳುತ್ತಾರೆ. ನೌಕರರು ಒಂದಷ್ಟು ಸಮಯ ಇವುಗಳೊಂದಿಗೆ ಆಟವಾಡಿ ಮನ ಹಗುರ ಮಾಡಿಕೊಳ್ಳುತ್ತಾರೆ. ಈ ಸೇವೆಗೆಂದು ಫರ್ ಬಾಲ್ ಕಂಪನಿ ಸೇವಾಶುಲ್ಕ ಪಡೆದುಕೊಳ್ಳುತ್ತದೆ.

ಫರ್ ಬಾಲ್ ಕಂಪನಿ ಶ್ವಾನಗಳು ತಮ್ಮೊಂದಿಗೆ ಆಟವಾಡುವವರನ್ನು ಕಚ್ಚುವುದಿಲ್ಲ. ಕೆಲವರಿಗೆ ನಾಯಿಗಳ ಬಗ್ಗೆ ವಿಪರೀತ ಭಯ ಇರುತ್ತದೆ. ಅಂಥವರು ಈ ನಾಯಿಗಳೊಂದಿಗೆ ಆಟವಾಡಿದಾಗ ಅವರ ಆತಂಕ-ಭಯ ತಂತಾನೆ ನಿವಾರಣೆಯಾಗುತ್ತದೆ. ಪೆಟ್ ಥೆರಪಿಯಿಂದ ಆಗುವ ಅನುಕೂಲಗಳನ್ನು ಮನಗಂಡ ಈ ಯುವಮಂದಿ ಆರಂಭಿಸಿರುವ ಫರ್ ಬಾಲ್ ಕಂಪನಿ ಜನಪ್ರಿಯತೆ ಹೆಚ್ಚುತ್ತಿದೆ. ಇದರಿಂದ ಇವರಿಗೂ ಉದ್ಯೋಗ ದೊರೆತಂತಾಗಿದೆ. ಇವರು ಉತ್ತಮವಾಗಿ ಸಲಹುತ್ತಿರುವ ಶ್ವಾನಗಳೊಂದಿಗೆ ಒಂದಷ್ಟು ಸಮಯ ಕಳೆಯುವವರಿಗೂ ಮನ ಹಗುರವಾಗುತ್ತದೆ. ಇದು ಅವರ ವೃತ್ತಿದಕ್ಷತೆ ಹೆಚ್ಚಲು ಕಾರಣವಾಗಿದೆ.

ಚಿತ್ರಕೃಪೆ: ಅಂತರ್ಜಾಲ

Similar Posts

Leave a Reply

Your email address will not be published.