ಸಾವು ಎಂದರೆ ತಲ್ಲಣ. ಅದು ನಮ್ಮ ಕಣ್ಣೆದುರೆ ನಡೆದುಬಂದರೆ… ನಾನಾ ಬಗೆಯ ಪ್ರತಿಕ್ರಿಯೆಗಳು ಮೂಡಬಹುದು. ಅದು ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗುತ್ತದೆ. ಏನೊಂದು ಮಾತಿಲ್ಲದೇ, ದೈನ್ಯತೆಯ ಮುಖಭಾವವಿಲ್ಲದೇ ನಿರ್ಲಿಪ್ತವಾಗಿ ಸಾವನ್ನು ಸ್ವೀಕರಿಸುವುದು ಎಂದರೆ ಅದೆಂಥಾ ಮನಸ್ಥಿತಿ. ಇಂಥದ್ದನ್ನು ಇಂಥದ್ದನ್ನು “ದ ಬಲ್ಲದ್ ಆಫ್ ಬಸ್ಟರ್ ಸ್ಕರ್ಗ್ಸ್” ಸಿನೆಮಾ ಅತ್ಯಂತ ಸಮರ್ಥವಾಗಿ ಕಟ್ಟಿಕೊಡುತ್ತದೆ.

ಈ ಸಿನೆಮಾ ಕೆಲವು ಕಥೆಗಳ ಸಂಗಮ. ಎಲ್ಲವೂ ಅನನ್ಯ. ಇಂಥಾ ಕಥಾ ಸಂಗಮದಲ್ಲಿನ ಒಂದು ಚಿತ್ರಣ “ ಮೀಲ್ಸ್ ಟಿಕೇಟ್” ಅರ್ಥಾತ್ ಊಟದ ಚೀಟಿ. ಇಲ್ಲಿ ಊಟದ ಚೀಟಿ ಎರಡು ಬಾರಿ ಬದಲಾಗುತ್ತದೆ. ವೃದ್ಧ ಇಪ್ರೆಸಾರಿಯೋ ಜೀವನಕ್ಕೆ ಹ್ಯಾರಿಸನ್ ಆಧಾರ. ಗಮನಾರ್ಹ ಸಂಗತಿಯೆಂದರೆ ಹ್ಯಾರಿಸನ್ಗೆ ತನ್ನ ಕಾಲುಕೈಗಳ ಆಧಾರವೇ ಇಲ್ಲ. ರುಂಡ-ಮುಂಡ ಮಾತ್ರ ಇರುವ ಅಸಾಧಾರಣ ಕಲಾವಿದ.

ಊರೂರು ತಿರುಗುತ್ತಾ ನಾಟಕ ಪ್ರದರ್ಶನ. ಹ್ಯಾರಿಸನ್ ಏಕಪಾತ್ರಭಿನಯ. ಸಂಭಾಷಣೆಯ ಏರಿಳಿತಗಳಿಂದಲೇ ಪ್ರೇಕ್ಷಕರನ್ನು ಮೋಡಿ ಮಾಡುವ ನಟನೆ. ನಾಟಕದ ಬಳಿಕ ಪ್ರೇಕ್ಷಕರು ಕೊಟ್ಟಷ್ಟೂ ಹಣ ಸಂಗ್ರಹಿಸುವ ಇಂಪ್ರೆಸಾರಿಯೋ. ಈತನ ಊಟ, ನೋಟ, ಕುಡಿತ ಮತ್ತು ಕಾಮ ಎಲ್ಲವೂ ಈ ಹಣದಿಂದಲೇ. ಸಂಪಾದನೆಗೆ ಕಾರಣನಾದವ ಬಗ್ಗೆ ಒಂದಷ್ಟು ಮುತುವರ್ಜಿ. ಅದೆಷ್ಟೆರ ಮಟ್ಟಿಗೆ ಎಂದರೆ ವೇಶ್ಯಾಗೃಹಕ್ಕೂ ಕರೆದುಕೊಂಡು ಹೋಗಿ ಆತನ ಬೆನ್ನೆದುರಿಗೆ ಕಾಮಕೇಳಿ ನಡೆಸುವಷ್ಟು.

ಹ್ಯಾರಿಸನ್ ತುಂಬು ಯೌವನದ ಯುವಕ. ಮುದುಕ ಇಂಪ್ರೆಸಾರಿಯೋ, ತುಂಬು ಉತ್ಸಾಹದ ಯುವತಿಯೊಡನೆ ಸಂಭಾಷಣೆ, ಕಾಮಕೇಳಿಯ ಸದ್ದು ಈತನ ಮುಖದಲ್ಲಿ ನೂರೆಂಟು ಭಾವಗಳು ಹಾದು ಹೋಗುವಂತೆ ಮಾಡುತ್ತವೆ. ಆದರೆ ಏನೊಂದು ವಾಚ್ಯ ಪ್ರತಿಕ್ರಿಯೆ ವ್ಯಕ್ತಪಡಿಸುವುದಿಲ್ಲ. ಈತನ ತಲ್ಲಣಗಳುನೋಡುಗರ ನೆಮ್ಮದಿಯನ್ನು ಕಲಕುತ್ತವೆ.

ಚಳಿಗಾಲದ ದಿನಗಳು. ನಾಟಕದಿಂದ ಬರುವ ಸಂಪಾದನೆ ಇಳಿಮುಖವಾಗುತ್ತಾ ಸಾಗುತ್ತದೆ. ಇಂಥ ದಿನಗಳಲ್ಲಿ ಇಂಪ್ರೆಸಾರಿಯೋ ಜನರ ಗಮನ ಸೆಳೆಯುವ ಜೂಜಿನ ಕೋಳಿ ಖರೀದಿ ಮಾಡುತ್ತಾನೆ. ಆತನ ಕಾಳಜಿ ಬದಲಾಗುತ್ತದೆ. ಹ್ಯಾರಿಸನ್ಗೆ ಇದೆಲ್ಲವೂ ಅರ್ಥವಾಗುತ್ತದೆ. ಬಂಡಿಯ ಗಾಲಿಗಳು ಮತ್ತೊಂದು ಊರಿನತ್ತ ಉರುಳತೊಡಗುತ್ತದೆ. ಗಾಡಿಯಲ್ಲಿ ಮೂರು ಜೀವಗಳು. ಹಿಂಬದಿಯಲ್ಲಿ ಹ್ಯಾರಿಸನ್ ಮತ್ತು ಪಂಜರದಲ್ಲಿರುವ ಕೋಳಿ. ಹಾದಿಯಲ್ಲಿ ದೊಡ್ಡದೊಂದು ಸೇತುವೆ. ಬಂಡಿಯಿಂದಿಳಿದ ಇಂಪ್ರೆಸಾರಿಯೋ ದೊಡ್ಡದೊಂದು ಕಲ್ಲು ಎತ್ತಿ ಕಮರಿಗೆ ಹಾಕುತ್ತಾನೆ. ನಂತರ ನಿಧಾನವಾಗಿ ಗಾಡಿಯತ್ತ ನಡೆದುಬರುತ್ತಾನೆ.

ಗಾಡಿ ಚಲಿಸತೊಡಗುತ್ತದೆ. ಹಿಂಬದಿಯಲ್ಲಿ ಈಗ ಪಂಜರದಲ್ಲಿನ ಕೋಳಿ ಮಾತ್ರ ಇರುತ್ತದೆ. ಪ್ರೇಕ್ಷಕರಿಗೆ ಎಲ್ಲವೂ ಅರ್ಥವಾಗುತ್ತದೆ. ಇಲ್ಲಿ ಎಲ್ಲಿಯೂ ಅನಾವಶ್ಯಕವಾದ ಒಂದೇ ಒಂದು ಸಂಭಾಷಣೆ ಇಲ್ಲ. ದೃಶ್ಯವೂ ಇಲ್ಲ. ಯಾವುದೇ ಒಂದು ದೃಶ‍್ಯ ತಪ್ಪಿದ್ದರೂ ಅದು ಕಥಾನಕಕ್ಕೊಂಡು ಅಡ್ಡಿ ಎನಿಸುವಂಥ ಬಿಗಿಯಾದ ನಿರೂಪಣೆ, ಸಂಕಲನ.

ಹ್ಯಾರಿಸನ್ ಪಾತ್ರದೊಳಗೆ ಹ್ಯಾರಿ ಮೆಲ್ಲಿಂಗ್  ಪರಕಾಯ ಪ್ರವೇಶ ಮಾಡಿದ್ದಾರೆ. ನಾಟಕದ ಸಂಭಾಷಣೆ ಹೇಳುವಾಗ ಕ್ಯಾಮೆರಾ ಮುಖದತ್ತ ಕ್ಲೋಸಫ್ ಆಗಿರುತ್ತದೆ. ಭಾನಲ್ಲಿ ಮೋಡಗಳು ಸರಿದು ಹೋಗುವಂತೆ ಹ್ಯಾರಿಯ ಮುಖಭಾವಗಳು ಬದಲಾಗುತ್ತಾ ಹೋಗುತ್ತವೆ. ಕೋಳಿ ಗಾಡಿಯ ಹಿಂಬದಿಗೆ ಬಂದಾಗ ಮೌನವಾಗಿ ಅದನ್ನು ದಿಟ್ಟಿಸುತ್ತಾನೆ. ಆಗಲೂ ಆತನ ಮೊಗದಲ್ಲಿ ಭಾವನೆಗಳ ಮಹಾಪೂರ.

ಇಂಪ್ರೆಸಾರಿಯೋ ಗಾಡಿ ನಿಲ್ಲಿಸಿ ಸೇತುವೆಯತ್ತ ನಡೆಯತೊಡಗಿದಾಗ ಕೌತುಕದ ನೋಟ. ನೀರಿಗೆ ಕಲ್ಲು ಬಿದ್ದಾಗ ಬದಲಾಗುವ ಮುಖಚರ್ಯೆ. ನಂತರ ಇಂಪ್ರೆಸಾರಿಯೋ  ಹೆಜ್ಜೆ ಮೇಲೆ ಹೆಜ್ಜೆ ಇಟ್ಟು, ಕಿಂಚಿತ್ತೂ ಅವಸರವಿಲ್ಲದೇ ನಡೆದು ಬರತೊಡಗಿದಾಗ ದೈನ್ಯತೆಗೆ, ಯಾಚನೆಗೆ ತಿರುಗದ ಮುಖಭಾವ. ಸಾವನ್ನು ಸ್ವಾಗತಿಸುವ ನಿರ್ಲಿಪ್ತತೆ. ಇದು ಪ್ರೇಕ್ಷಕರ ಮನದೊಳಗೆ ಎಬ್ಬಿಸುವ ಬಿರುಗಾಳಿ ದೊಡ್ಡದು.

ನಿರ್ದೇಶಕರಾದ ಜೊಯೆಲ್ ಕೊಯಿನ್, ಇಥನ್ ಕೊಯಿನ್ ಇಡೀ ಬೆಳವಣಿಗೆಯನ್ನು ಅತ್ಯಂತ ಸಮರ್ಥವಾಗಿ ನಿರೂಪಿಸಿದ್ದಾರೆ. ಕಥನಾ ನಡೆಯುವ ಪರಿಸರದಲ್ಲಿ ಅವಶ್ಯಕತೆಗೆ ತಕ್ಕಷ್ಟು ಮಾತ್ರ ಕ್ಯಾಮೆರಾ ಹರಿದಾಡುತ್ತದೆ. ಈ ಕಾರ್ಯವನ್ನು ಬರ್ನೋ ಡೆಲ್ಬೊನೆಲ್ ಅತ್ಯಂತ ಆಸ್ಥೆಯಿಂದ ನಿರ್ವಹಿಸಿದ್ದಾರೆ.

ಪ್ರಶಸ್ತಿಗಳು: ಆಗಸ್ಟ್, 2018ರಲ್ಲಿ ತೆರೆಕಂಡ  “ದ ಬಲ್ಲದ್ ಆಫ್ ಬಸ್ಟರ್ ಸ್ಕರ್ಗ್ಸ್” ಅಂತರಾಷ್ಟ್ರೀಯ ಸಿನೆಮೋತ್ಸವಗಳಲ್ಲಿ ಸಾಕಷ್ಟು ಪ್ರಶಸ್ತಿಗಳನ್ನು ಪಡೆದಿದೆ. ಎಲ್ಲಕ್ಕಿಂತಲೂ ಮಿಗಿಲಾಗಿ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ. ಬಹು ದೀರ್ಘಕಾ; ನೆನಪಿನ ಭಿತ್ತಿಯಲ್ಲಿ ಉಳಿಯುವಂಥ ಸಿನೆಮಾ.

Similar Posts

Leave a Reply

Your email address will not be published. Required fields are marked *