ವೃದ್ಧ ತಂದೆ-ತಾಯಿ ಸಹಜ ಸಾವನ್ನಪ್ಪಿದರೆ ಮಕ್ಕಳು ಮಾನಸಿಕ ನೋವು, ಆಘಾತದಿಂದ ಬೇಗನೆ ಹೊರಬರುವ ಸಾಧ್ಯತೆ ಇದೆ. ಆದರೆ ಬೆಳೆದ ಮಗ/ಮಗಳು ತಮ್ಮ ಕಣ್ಣೆದುರಿಗೆ ಸಾವಿಗೀಡಾದರೆ ಅದು ಉಂಟು ಮಾಡುವ ತಲ್ಲಣದಿಂದ, ಆಘಾತದಿಂದ ತಂದೆ-ತಾಯಿ ಹೊರಬರುವುದಿಲ್ಲ. ಅದರಲ್ಲಿಯೂ ಅಮಾನವೀಯ ಸಾವು ಉಂಟಾಗಿದ್ದರಂತೂ ಅವರು ಜೀವನಪರ್ಯಂತ ಮಾನಸಿಕವಾಗಿ ಕುಗ್ಗಿ ಹೋಗುತ್ತಾರೆ.

ಇಂಥ ಸ್ಥಿತಿಯಲ್ಲಿರುವ ನಿರ್ಭಯಾ ತಾಯಿ ಎದುರೇ ಅಪಕ್ವವಾಗಿ ಮಾತನಾಡಿದರೆ ಆ ಜೀವಕ್ಕೆ ಅದೆಷ್ಟು ನೋವಾಗಬಹುದು. ಹೀಗೆ ಮಾತನಾಡಿದವರು ಉನ್ನತ ಪೊಲೀಸ್ ಅಧಿಕಾರಿ, ಶಾಸಕ/ಸಂಸದರಾಗಿದ್ದರೆ ಅದು ಉಂಟು ಮಾಡುವ ಸಾಮಾಜಿಕ ಆಘಾತ ಅಪಾರ. ಇದನ್ಯಾವುದನ್ನು ನಿವೃತ್ತ ಪೊಲೀಸ್ ಅಧಿಕಾರಿ, ಮಾಜಿ ಸಂಸದ ಹೆಚ್.ಟಿ. ಸಾಂಗ್ಲಿಯಾನ ಯೋಚಿಸಿಯೇ ಇಲ್ಲ. ಯೋಚನೆ ಮಾಡುವ ಮನಸ್ಥಿತಿಯೂ ಇವರಿಗೆ ಇದ್ದಂತೆ ಕಾಣವುದಿಲ್ಲ.

ಇತ್ತೀಚೆಗೆ ಬೆಂಗಳೂರಿನಲ್ಲಿ ಸಾಧಕ ಮಹಿಳೆಯರನ್ನು ಗೌರವಿಸುವ ಸಮಾರಂಭ ಏರ್ಪಾಡಾಗಿತ್ತು. ಇಲ್ಲಿಗೆ ದೆಹಲಿಯಿಂದ ನಿರ್ಭಯಾ ತಾಯಿ ಆಶಾದೇವಿ, ನಿವೃತ್ತ ಪೊಲೀಸ್ ಅಧಿಕಾರಿ ಸಾಂಗ್ಲಿಯಾನರನ್ನು ಮುಖ್ಯ ಅತಿಥಿಗಳಾಗಿ ಕರೆಸಲಾಗಿತ್ತು. ಇವರಿಬ್ಬರು ಗೌರವ ಪ್ರದಾನಲ್ಲಿ ಪಾಲ್ಗೊಂಡು ಸಾಧಕ ಮಹಿಳೆಯರಿಗೆ ನಿರ್ಭಯಾ ಹೆಸರಿನಲ್ಲಿ ನೀಡುವ ಪ್ರಶಸ್ತಿಗಳನ್ನು ವಿತರಿಸಿದರು. ಹಿರಿಯ ಪೊಲೀಸ್ ಅಧಿಕಾರಿ ರೂಪ ಅವರು ಈ ಗೌರವಕ್ಕೆ ಪಾತ್ರರಾದವರಲ್ಲಿ ಒಬ್ಬರು.

ಈ ನಂತರ ಮಾತನಾಡಿದ ಸಾಂಗ್ಲಿಯಾನ ಸಂದರ್ಭದ ಗಹನತೆ ಅರಿತು ಮಾತನಾಡುವುದು ಅಗತ್ಯವಾಗಿತ್ತು. ಆದರೆ ಅವರು ಮಾತನಾಡಿದ ರೀತಿ ಆಘಾತ ಉಂಟು ಮಾಡಿತು. ‘ನಿರ್ಭಯಾ ತಾಯಿ ಉತ್ತಮ ಮೈಕಟ್ಟು ಹೊಂದಿದ್ದಾರೆ. ಇವರನ್ನು ನೋಡಿದರೆ ಅವರ ಮಗಳು ನಿರ್ಭಯಾ ಹೇಗಿದ್ದರು ಎಂಬುದನ್ನು ಊಹಿಸಬಹುದು’ ಎಂದರು. ಮುಂದುವರಿದು ಮಾತನಾಡುತ್ತಾ ಎದುರಿರುವವರ ಬಲ ಹೆಚ್ಚಿದ್ದರೆ ಶರಣಾಗತಿ ಆಗುವುದೇ ಸೂಕ್ತ. ಇದರಿಂದ ಕೊಲೆಯಾಗುವುದನ್ನು ತಪ್ಪಿಸಿಕೊಳ್ಳಬಹುದು ಎಂದರು.

ಇಂಥ ಮಾತುಗಳನ್ನು ಕೇಳಿದಾಗ ಯಾರಿಗಾದರೂ ಬೇಸರ ಆಗುವುದು ಸಹಜ. ಇನ್ನು ನಿರ್ಭಯಾ ತಾಯಿಗೆ ಆಗಿರುವ ಮಾನಸಿಕ ಆಘಾತ/ ನೋವು ಅದೆಷ್ಟಿರಬಹುದು. ತಾನು ಹೇಳುವ ಮಾತು ಉಂಟು ಮಾಡುವ ಪರಿಣಾಮಗಳ ಬಗ್ಗೆ ಸಾಂಗ್ಲಿಯಾನ ಯೋಚಿಸುವುದು ಅಗತ್ಯವಾಗಿತ್ತು. ಇಂಥ ಮಾತನಾಡುವ ಮುನ್ನ ಕೊಂಚ ಸಮಚಿತ್ತದಿಂದ ಇದ್ದರೂ ಆಗುವ ದುಷ್ಪರಿಣಾಮಗಳನ್ನು ತಪ್ಪಿಸಬಹುದಾಗಿತ್ತು.

ಓರ್ವ ಅನುಭವಿ ಪೊಲೀಸ್ ಅಧಿಕಾರಿಗೆ ಕೊಲೆಗಾರರು, ಅತ್ಯಾಚಾರಿಗಳ ಮನಸ್ಥಿತಿ ಹೇಗಿರುತ್ತದೆ ಎಂಬುದು ಗೊತ್ತಿರುತ್ತದೆ. ಆದರೆ ಸಾಂಗ್ಲಿಯಾನ ಅವರ ಮಾತುಗಳನ್ನು ಕೇಳಿದರೆ ಅವರಿಗೆ ಅಪರಾಧಿಗಳ ಮನಸ್ಥಿತಿಯ ಪರಿಚಯ ಇಲ್ಲವೇ ? ಅಥವಾ ಮಾಜಿಯಾದ ನಂತರ ಆ ವಿವೇಚನೆಗೆ ತಿಲಾಂಜಲಿ ನೀಡಿದ್ದಾರಾ ಎಂಬ ಅನುಮಾನ ಉಂಟಾಗುತ್ತದೆ.

ಕೊಲೆಗಾರರಲ್ಲಿ ಅತ್ಯಾಚಾರದ ಮನಸ್ಥಿತಿ ಇಲ್ಲದೆ ಇರಬಹುದು. ಆದರೆ ಅತ್ಯಾಚಾರಿಗಳಲ್ಲಿ ಕೊಲೆಗಾರ ಮನಸ್ಥಿತಿ ಖಂಡಿತಾ ಇರುತ್ತದೆ. ಅಸಹಾಯಕ ಸ್ಥಿತಿಯಲ್ಲಿ ಇರುವವರನ್ನೇ ಸಾಮಾನ್ಯವಾಗಿ ಇವರು ಆರಿಸಿಕೊಳ್ಳುತ್ತಾರೆ. ಅದರಲ್ಲಿಯೂ ಇಂಥ ಮನಸ್ಥಿತಿಯ ಗ್ಯಾಂಗ್ ಗಳು ಅತ್ಯಂತ ಹೇಯ, ಭೀಕರವಾಗಿ ವರ್ತಿಸುತ್ತದೆ. ಇದಕ್ಕೆ 2012ರಲ್ಲಿ ಆದ ನಿರ್ಭಯಾ ಪ್ರಕರಣ ಬಹುದೊಡ್ಡ ಉದಾಹರಣೆ. ಈ ದಾರುಣ ಪ್ರಕರಣ ಎಲ್ಲರಿಗೂ ಗೊತ್ತಿದೆ.

ತನ್ನ ಮೇಲೆ ಅತ್ಯಾಚಾರಿಗಳು ಎರಗಿದಾಗ ನಿರ್ಭಯಾ ಕಡೆಕ್ಷಣದವರೆಗೂ ಪ್ರತಿರೋಧ ತೋರಿದರು, ಹೋರಾಡಿದರು ಎನ್ನುವುದು ತಿಳಿಯುತ್ತದೆ. ಈ ಪ್ರತಿರೋಧ ಅತ್ಯಂತ ಸಹಜ. ಪ್ರಾಣದ ಮೇಲಿನ ಹಂಗು ತೊರೆದಾಗ ಇಂಥ ಹೋರಾಟದ ಮನಸ್ಥಿತಿ ಉಂಟಾಗುತ್ತದೆ. ಅತ್ಯಾಚಾರ ಮಾಡಿದ ನಂತರ ಘಾತುಕ/ ಘಾತುಕರು ಕೃತ್ಯಕ್ಕೆ ಈಡಾದ ಮಹಿಳೆಯನ್ನು ಜೀವಂತವಾಗಿಯೇ ಉಳಿಯಗೊಡುತ್ತಾರೆ ಎಂದು ಹೇಳಲು ಸಾಧ್ಯವೇ ಇಲ್ಲ. ಏಕೆಂದರೆ ಕೃತ್ಯ ಎಸಗುವ ಸಂದರ್ಭದಲ್ಲಿ ಅತ್ಯಂತ ಅಮಾನವೀಯವಾಗಿ ವರ್ತಿಸಿರುತ್ತಾರೆ. ದೈಹಿಕವಾಗಿ ಅಪಾರ ಯಾತನೆ ನೀಡಿರುತ್ತಾರೆ. ಇದರಿಂದಲೇ ಮಹಿಳೆ ಜರ್ಜರಿತಳಾಗಿರುತ್ತಾಳೆ. ಆಗಿರುವ ಹಿಂಸೆಯಿಂದ ಜೀವ ಹೋಗುವ ಸಾಧ್ಯತೆಯೇ ಹೆಚ್ಚು.

ಒಂದು ವೇಳೆ ಮಹಿಳೆ ಕುಟುಕು ಜೀವದಿಂದ ಉಳಿದಿದ್ದರೂ ತಮ್ಮ ಗುರುತು ಪತ್ತೆಯಾಗುತ್ತದೆ, ದೂರು ಸಲ್ಲಿಸಬಹುದು ಎಂಬ ಕಾರಣಕ್ಕೆ ಘಾತುಕರು ಕೊಲೆಯನ್ನು ಮಾಡಬಹುದು. ಪರಿಚಿತರು ಇಂಥ ಕೃತ್ಯ ಎಸಗಿದ್ದಲ್ಲಿ ಕೊಲೆಯಾಗುವ ಸಾಧ್ಯತೆಗಳು ಹೆಚ್ಚಿರುತ್ತವೆ. ಹೀಗಿರುವಾಗ ಪ್ರತಿರೋಧ ತೋರಬೇಡಿ ಎಂದು ಹೇಳುವುದರಲ್ಲಿ ಅರ್ಥವಿದೆಯೇ…. ?

ರಾಜ್ಯದಲ್ಲಿ ಸಾಂಗ್ಲಿಯಾನ ದಕ್ಷ ಅಧಿಕಾರಿಯೆಂದು ಹೆಸರು ಮಾಡಿದ್ದವರು. ಇವರ ಬಗ್ಗೆ ಇವರ ಹೆಸರಿನಲ್ಲಿಯೇ ಸರಣಿ ಸಿನೆಮಾಗಳು ನಿರ್ಮಾಣವಾದವು. ಜನಪ್ರಿಯವೂ ಆದವು. ಈ ಹೆಸರಿನ ಬಲದಿಂದಲೇ ಬೆಂಗಳೂರು ಉತ್ತರ ಕ್ಷೇತ್ರದಿಂದ ಸಂಸದರು ಆದರು. ಇದಕ್ಕೆ ಕರ್ನಾಟಕದ ಜನತೆ ತೋರಿಸಿದ ಗೌರವ-ಆದರ ಕಾರಣ. ಇಂಥ ವ್ಯಕ್ತಿ ಹೀಗೆ ಅಪಕ್ವವಾಗಿ ಮಾತನಾಡಿದ್ದನ್ನು ಕೇಳಿದಾಗ ಆಚ್ಚರಿ ಜೊತೆಗೆ ಆಘಾತವೂ ಉಂಟಾಗುವುದು ಸಹಜ. ನಾವು ತಪ್ಪಾಗಿ ಈ ವ್ಯಕ್ತಿಯನ್ನು ಅರ್ಥೈಸಿಕೊಂಡೆವೇ ಎಂಬ ಅನುಮಾನ ಸಹಜವಾಗಿ ಕಾಡುತ್ತದೆ.

ವಯಸ್ಸಾದಂತೆ ಕೆಲವರು ಮಾತಿನ ಮೇಲೆ ಹಿಡಿತ ಕಳೆದುಕೊಳ್ಳುತ್ತಾರೆ. ವಯೋಸಹಜ ಪರಿಣಾಮಗಳಿಂದ ಹೀಗಾಗುತ್ತದೆ. ಸಾಂಗ್ಲಿಯಾನ ಇಂಥ ಸ್ಥಿತಿಯಲ್ಲಿದ್ದಾರಾ… ಒಂದುವೇಳೆ ಇಂಥ ಸ್ಥಿತಿಯಲ್ಲಿದ್ದರೆ ಅವರು ಸಾರ್ವಜನಿಕ ಜೀವನದಿಂದ ನಿವೃತ್ತಿ ಪಡೆದುಕೊಂಡು ಮನೆಯಲ್ಲಿ ಇರುವುದು ಸೂಕ್ತ. ಅವರ ಆತ್ಮೀಯರಾದವರು ಅವರಿಗೆ ಈ ಬಗ್ಗೆ ತಿಳಿ ಹೇಳುವುದು ಅಗತ್ಯ…..

Similar Posts

Leave a Reply

Your email address will not be published. Required fields are marked *