Site icon ಕುಮಾರರೈತ

ಸಮುದ್ರತೀರಗಳ ಸ್ವಚ್ಛತೆ

ಸುಂದರ ಸಮುದ್ರತೀರಗಳಿಗೆ ಪ್ರವಾಸಿಗರು ಭೇಟಿ ನೀಡುತ್ತಿರುತ್ತಾರೆ. ವರ್ಷದ ಕೆಲವು ತಿಂಗಳುಗಳಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ಜನಸಂದಣಿ ಇರುತ್ತದೆ. ಅದರಲ್ಲಿಯೂ ಮಹಾನಗರಗಳು ಇರುವ ಪ್ರದೇಶಗಳಲ್ಲಿ ಪ್ರತಿದಿನ ಸ್ಥಳೀಯರ ದಂಡೇ ಇರುತ್ತದೆ. ಈ ಸಂದರ್ಭದಲ್ಲಿ ಸಂಗ್ರಹವಾಗುವ ತಿನಿಸುಗಳ ತ್ಯಾಜ್ಯ ಅಪಾರ. ಚೆನ್ನೈಯಲ್ಲಿ ಚಾರಣಿಗರ ಗುಂಪೊಂದು ಇದಕ್ಕೆ ಪರಿಹಾರ ನೀಡಲು ಹೊರಟಿದೆ.
ಚೆನ್ನೈ. ಬಂಗಾಳಕೊಲ್ಲಿ ಸಮುದ್ರತೀರದಲ್ಲಿ ಬೆಳೆದು ನಿಂತ ನಗರ. ತಮಿಳುನಾಡು ರಾಜ್ಯದ ರಾಜಧಾನಿ. ರಾಷ್ಟ್ರದ ಪ್ರಮುಖ ವಾಣಿಜ್ಯ ಕೇಂದ್ರ. ಜೊತೆಗೆ ಪ್ರವಾಸೀಕೇಂದ್ರವೂ ಹೌದು. ಇಲ್ಲಿ ಆಕರ್ಷಕ ಸಮುದ್ರತೀರಗಳಿವೆ. ಇವುಗಳನ್ನು ನೋಡಲು ಸಾಕಷ್ಟು ಸಂಖ್ಯೆಯಲ್ಲಿ ಪ್ರವಾಸಿಗರು ಇಲ್ಲಿಗೆ ಬರುತ್ತಾರೆ.
ಮೆರಿನಾ. ಚೆನ್ನೈ ನಗರದ ಪ್ರಮುಖ ಸಮುದ್ರತೀರ. ಇಲ್ಲಿ ಬೆಳಗ್ಗೆ ಬಿಸಿಲು ರಾಚುತ್ತಿರುತ್ತದೆ. ಸಂಜೆ ಆಯಿತೆಂದರೆ ಸಮುದ್ರದ ಮೇಲಿನಿಂದ ತುಸು ತಂಪಾದ ಗಾಳಿ ಬೀಸುತ್ತದೆ. ಆದ್ದರಿಂದ ಸ್ಥಳೀಯರು ಇಲ್ಲಿಗೆ ದಂಡುದಂಡಾಗಿ ಭೇಟಿ ನೀಡುತ್ತಾರೆ. ಒಂದಷ್ಟು ಸಮಯ ಇಲ್ಲಿದ್ದು ತೆರಳುತ್ತಾರೆ.
ಪ್ರವಾಸಿಗರು, ಸ್ಥಳೀಯರು ಅಪಾರ ಸಂಖ್ಯೆಯಲ್ಲಿ ಬರುವ ಕಾರಣ ತಿನಿಸುಗಳ ಅಂಗಡಿಗಳೂ ಸಾಕಷ್ಟು. ಇಲ್ಲಿಗೆ ಬರುವವರೂ ಹೊರಗಿನಿಂದಲೂ ತಿನಿಸುಗಳನ್ನು ತಂದಿರುತ್ತಾರೆ. ಹೆಚ್ಚಿನವುಗಳು ಪ್ಲಾಸ್ಟಿಕ್ ಚೀಲಗಳಲ್ಲಿಯೇ ಬಂದಿರುತ್ತವೆ. ತಿಂಡಿ ತಿಂದ ನಂತರ ತ್ಯಾಜ್ಯವನ್ನು ಅಲ್ಲಿಯೇ ಬಿಸಾಡುತ್ತಾರೆ. ಇದರಿಂದ ವಿಶಾಲ ಸಮುದ್ರತೀರದಲ್ಲಿ ಅಪಾರ ಪ್ರಮಾಣದ ತ್ಯಾಜ್ಯ ಸಂಗ್ರಹಣೆಯಾಗುತ್ತದೆ.
ಸಮುದ್ರತೀರದಲ್ಲಿ ತ್ಯಾಜ್ಯ ಸಂಗ್ರಹಣೆಯಾಗುವುದು ಅನೇಕ ರೀತಿಯಲ್ಲಿ ಹಾನಿಕಾರಕ. ಪರಿಸರ ಹಾಳಾಗುತ್ತದೆ. ದುರ್ವಾಸನೆ ಉಂಟಾಗುತ್ತದೆ. ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಹೆಚ್ಚು. ಇವೆಲ್ಲದಕ್ಕಿಂತಲೂ ಹೆಚ್ಚಾಗಿ ಪ್ಲಾಸ್ಟಿಕ್ ಮತ್ತಿತರ ತ್ಯಾಜ್ಯಗಳುಸ ಸಮುದ್ರ ಸೇರಿ ಕೊನೆಗೆ ಮೀನುಗಳ ಉದರವನ್ನೂ ಸೇರುತ್ತವೆ. ಇದರಿಂದ ಜಲಚರಗಳಿಗೆ ಕುತ್ತು ಉಂಟಾಗುತ್ತದೆ.
ಇವೆಲ್ಲವನ್ನೂ ಗಮನಿಸಿದ ಚೆನ್ನೈ ಮಹಾನಗರದ ಚಾರಣಿಗರ ಗುಂಪೊಂದು ಪರಿಹಾರ ಹುಡುಕಲು ನಿರ್ಧರಿಸಿತು. ಸಮಾನಮನಸ್ಕರಿಗೆ ಈ ಬಗ್ಗೆ ಮಾಹಿತಿ ನೀಡಿತು. ಇವೆಲ್ಲದರಿಂದ ಆರು ಸಾವಿರಕ್ಕೂ ಹೆಚ್ಚು ಮಂದಿ ಪರಿಸರಾಸಕ್ತರು ಒಗ್ಗೂಡಿದರು. ಸಮುದ್ರತೀರ ಸ್ವಚ್ಛಗೊಳಿಸಲು ಮುಂದಾದರು.
ಈ ಕಾರ್ಯಕ್ಕೆ ಒಂದಷ್ಟು ಸಂಘಟನೆಗಳು ಸಹಕಾರ ನೀಡಿದವು. ಅವುಗಳಲ್ಲಿ ಭಾರತೀಯ ಪರಿಸರವಾದಿಗಳ ಸಂಘಟನೆ ಪ್ರಮುಖ. ಐಟಿ ಕಂಪನಿಗಳೂ ಸಹಭಾಗಿತ್ವ ನೀಡಿದವು. ಇದು ಬೃಹತ್ ಆಂದೋಲನ ಸ್ವರೂಪ ಪಡೆದುಕೊಳ್ಳತೊಡಗಿತು. ಸ್ಥಳೀಯ ಜನಸಾಮಾನ್ಯರೂ ಈ ಕಾರ್ಯದಲ್ಲಿ ಉತ್ಸಾಹದಿಂದ ಪಾಲ್ಗೊಂಡರು. ಮರಿನಾ ಸೇರಿದಂತೆ ಉಳಿದ ಸಮುದ್ರತೀರಗಳು ಸ್ವಚ್ಛಗೊಳತೊಡಗಿದವು
ಈ ಕಾರ್ಯ ಆರಂಭಿಸಿದ ಗುಂಪು ಈ ಸ್ವಚ್ಛತಾ ಆಂದೋಲವನ್ನು ಇತರ ನಗರಗಳಿಗೂ ಹಬ್ಬಿಸುತ್ತಿದೆ. ಹೈದ್ರಾಬಾದ್, ಕೊಯಮತ್ತೂರು, ವಿಶಾಖಪಟ್ಟಣಮ್ ಮತ್ತು ಕನ್ಯಾಕುಮಾರಿಯಲ್ಲಿಯೂ ಈ ಬಗ್ಗೆ ಅರಿವು ಮೂಡಿಸಲಾಗಿದೆ. ಅಲ್ಲಿಯೂ ಸ್ಥಳೀಯ ಸಂಘಟನೆಗಳ ನೆರವಿನಿಂದ ಸ್ವಚ್ಛತಾ ಕಾರ್ಯ ನಡೆಯುತ್ತಿದೆ.
ಚೆನ್ನೈ ಚಾರಣಿಗರ ಗುಂಪು, ತ್ಯಾಜ್ಯ ವಿಲೇವಾರಿ ಮಹತ್ವದ ಬಗ್ಗೆ ಅರಿವು ಮೂಡಿಸತೊಡಗಿದೆ. ಸಮುದ್ರತೀರಗಳಲ್ಲಿ ಇರುವ ಮೀನುಗಾರರ ಕುಟುಂಬಗಳನ್ನು ಈ ಕಾರ್ಯದಲ್ಲಿ ತೊಡಗಿಸಿಕೊಳ್ಳುವಂತೆ ಮಾಡಿದೆ. ಮುಖ್ಯವಾಗಿ ಮಹಿಳೆಯರು ಮತ್ತು ಮಕ್ಕಳಲ್ಲಿ ಸ್ವಚ್ಛ ಪರಿಸರದ ಅಗತ್ಯದ ಬಗ್ಗೆ ಮನವರಿಕೆ ಮಾಡಿಕೊಟ್ಟಿದೆ. ಇವೆಲ್ಲದರಿಂದ ಸಂಗ್ರಹಣೆಯಾದ ತ್ಯಾಜ್ಯ, ಸಮರ್ಪಕವಾಗಿ ವಿಲೇವಾರಿಯಾಗತೊಡಗಿದೆ.

Exit mobile version