ಹೆಣ್ಣು – ಗಂಡು. ಒಂದೇ ನಾಣ್ಯದ ಆಚೀಚೆ ಮುಖಗಳು ! ಆ ಬದಿಯವರು ಆಚೆ ಬದಿಯ ಮುಖ ಅರ್ಥ ಮಾಡಿಕೊಂಡಿದ್ದೇವೆ ಎಂದು ಭಾವಿಸುವುದು, ಇನ್ನೊಂದು ಬದಿಯವರು ಹಾಗೆ ಅಂದುಕೊಳ್ಳುವುದು ಅರ್ಧ ಸತ್ಯವೂ ಆಗಿರಲಾರದು. ಒಂದುವೇಳೆ ಇಬ್ಬರಲ್ಲಿ ಒಬ್ಬರು ನಾನು ಆಚೆ ಬದಿಗೆ ಹೋಗುತ್ತೇನೆ ಎಂದುಕೊಂಡು ಹೋದರೆ ಸತ್ಯ ದಕ್ಕುತ್ತದೆಯೇ ? ಸತ್ಯ ದಕ್ಕಲಾರದೇ ಇರಬಹುದು ! ಸವಾಲುಗಳ ಸ್ವರೂಪವೂ ಬದಲಾಗದೇ ಇರಬಹುದು. ಕೊನೆಗೆ ಅವಳು ಅವಳಾಗಿ, ಅವನು ಅವನಾಗಿ ಉಳಿಯಬಹುದು.
“ಎಮಿಲಿಯಾ ಪೆರೆಜ್” ಸ್ಪಾನಿಶ್ ಸಿನೆಮಾ ! ಇದು ತನ್ನ ಅಂತರಂಗದಲ್ಲಿ ಇಂಥ ಸಂಕೀರ್ಣ ಕಥಾವಸ್ತು ಇಟ್ಟುಕೊಂಡಿದೆ. ಅದರ ನಿರೂಪಣೆಗಾಗಿ ಭಿನ್ನರೂಪದ ಹೊರ ಹಂದರ ಹೊಂದಿದೆ ! ಮೂಲತಃ ಇದು ಒಪೇರಾ ಮಾದರಿಯ ಕೃತಿ. ಸಂಗೀತಾ ನಾಟಕದ ಮಾದರಿಯ ಇದರ ಚಿತ್ರಕಥೆಯನ್ನು ನಿರ್ದೇಶಕ ಜಾಕ್ವೆಸ್ ಆಡಿಯಾರ್ಡ್ ರಚಿಸಿರುವುದು ವಿಶೇಷ.
ನಾನು ಪೂರ್ಣ ಕಥೆಯನ್ನು ನಿಮ್ಮ ಮುಂದೆ ಇಡಲು ಹೋಗುವುದಿಲ್ಲ. ಇದು ಸಿನೆಮಾ ನೋಡುವ ಆಸಕ್ತಿ ಕುಗ್ಗಿಸಬಹುದು. ಆದರೆ ಸಿನೆಮಾ ಪರಿಚಯ/ವಿಮರ್ಶೆ ಸಂದರ್ಭದಲ್ಲಿ ಅದರ ಕಿರು ಸಾರಾಂಶ ಮುಂದಿಡುವುದು ಅವಶ್ಯಕ !
ಜುವಾನ್ “ಮ್ಯಾನಿಟಾಸ್” ಡೆಲ್ ಮಾಂಟೆ ಮೆಕ್ಸಿಕೋ “ಕಾರ್ಟೆಲ್ ಕಿಂಗ್‌ಪಿನ್” ಸರಳವಾಗಿ ಹೇಳುವುದಾದರೆ ಮಾದಕವಸ್ತುಗಳ ದಂಧೆ ನಡೆಸುವ ಮಾಫಿಯಾ ಕಿಂಗ್ !! ಇಂಥವರಿಗೆ ಎದುರಾಳಿ ಕಾರ್ಟೆಲ್ ಕಿಂಗ್ ಪಿನ್ ಗಳು, ಅಂತರಾಷ್ಟ್ರೀಯ ಬೇಹುಗಾರಿಕಾ ಏಜೆನ್ಸಿಗಳು, ವಿಶೇಷವಾಗಿ ಅಮೆರಿಕಾದ ಡಿಇಎ (The American DEA/Drug Enforcement Administration), ಪೊಲೀಸ್ ಏಜೆನ್ಸಿಗಳಿಂದ ಬಂಧನ, ಪ್ರಾಣಭಯದ ಭೀತಿ ಇರುತ್ತದೆ.
ಜುವಾನ್ “ಮ್ಯಾನಿಟಾಸ್” ಡೆಲ್ ಮಾಂಟೆ, ಪುರುಷ. ಆದರೂ ಹೆಣ್ಣಾಗಿ ಪರಿವರ್ತಿತವಾಗುವ ಅದಮ್ಯ ಬಯಕೆ. ಇದರ ಜೊತೆಗೆ ಕಾಡುವ ಭೀತಿಗಳಿಂದ ಪಾರಾಗುವ ಬಯಕೆ. ಇವೆರಡೂ ಬಯಕೆ ಈಡೇರಿಸಿಕೊಳ್ಳುವ ಸಲುವಾಗಿ ಹೆಣ್ಣಾಗಿ ರೂಪಾಂತರ ಹೊಂದುತ್ತಾನೆ. ಈತ ಆಕೆಯಾಗಿ ಅಂದರೆ ಎಮಿಲಿಯಾ ಪೆರೆಜ್ ಆಗಿ ಬದಲಾಗಲು ಮೆಕ್ಸಿಕೋದ ಚಾಣಾಕ್ಷ ವಕೀಲೆ ಜೊಯಿ ಸಲ್ಡಾನಾ ಸಹಕರಿಸುತ್ತಾಳೆ. ಇದಕ್ಕೆ ಪ್ರತಿಫಲವಾಗಿ ಈಕೆ ಊಹಿಸಿಯೂ ಇರದಷ್ಟು ಹಣ ದೊರೆಯುತ್ತದೆ.
ಓರ್ವ ಪತ್ನಿ, ಇಬ್ಬರು ಮಕ್ಕಳು, ಓರ್ವ ಪ್ರೆಯಸಿ ಹೊಂದಿರುವ ಮ್ಯಾನಿಟಾಸ್ ಹೆಣ್ಣಾಗಿ ರೂಪಾಂತರ ಹೊಂದಿದ ನಂತರ ಹೊಸ ಪಾತ್ರ ಹೇಗೆ ನಿರ್ವಹಿಸುತ್ತಾನೆ, ಸಂಬಂಧಗಳ ತಾಕಲಾಟದಿಂದ ಉದ್ಬವಿಸುವ ಸಂಘರ್ಷಗಳೇನು ? ರೂಪಾಂತರಗೊಂಡರೂ ಎದುರಾಗುವ ಸವಾಲುಗಳಿಂದ ತಪ್ಪಿಸಿಕೊಳ್ಳಲು ಸಾಧ್ಯವಾಯಿತೇ ? ಇದರ ತಾರ್ಕಿಕ ಅಂತ್ಯವೇನು ?
ಇದನ್ನೆಲ್ಲ ನಿರ್ದೇಶಕ ಜಾಕ್ವೆಸ್ ಆಡಿಯಾರ್ಡ್ ಸ್ವಾರಸ್ಯಕರವಾಗಿ ನಿರೂಪಿಸುತ್ತಾ ಹೋಗುತ್ತಾರೆ. ಇದಕ್ಕಾಗಿ ಸಂಗೀತಾ ನಾಟಕದ ಒಪೇರಾ ಮಾದರಿ ಬಳಸಿಕೊಳ್ಳುತ್ತಾರೆ. ಇದು ಸಿನೆಮಾಕ್ಕೆ ಹೊಸ ಚರ್ಯೆ ನೀಡಿದೆ. ಹಾಡುಗಳ ಜೊತೆಗೆ ಸಂಭಾಷಣೆಗಳೂ ಹಾಡಿನ ಮಾದರಿಯಲ್ಲಿವೆ. ಆದರೆ ಇಡೀ ಸಿನೆಮಾ ಇದೇ ಮಾದರಿಯಲಿಲ್ಲ. ಇವೆಲ್ಲದರ ಮಿಶ್ರಣವಾಗಿ ಹೊರ ಹೊಮ್ಮಿದೆ.
ಇಲ್ಲಿನ ವಿಶೇಷತೆ ಏನೆಂದರೆ ಕಾರ್ಟೆಲ್ ಕಿಂಗ್ ಪಿನ್ ಮ್ಯಾನಿಟಾಸ್ ಪಾತ್ರದಲ್ಲಿ ಮತ್ತು ನಂತರ ಈತ ಹೆಣ್ಣಾಗಿ ಎಮಿಲಿಯಾ ಪೆರೆಜ್ ಆಗಿ ರೂಪಾಂತರಗೊಳ್ಳುವ ಪಾತ್ರಗಳಲ್ಲಿ ತೃತೀಯ ಲಿಂಗಿ ಅಥವಾ ಮಂಗಳಮುಖಿ ಕಾರ್ಲಾ ಸೋಫಿಯಾ ಗ್ಯಾಸ್ಕಾನ್ ಸಮರ್ಥವಾಗಿ ಅಭಿನಯಿಸಿದ್ದಾರೆ !
2024ರಲ್ಲಿ ತೆರೆಕಂಡ “ಎಮಿಲಿಯಾ ಪೆರೆಜ್” ಸಿನೆಮಾಕ್ಕೆ ಹಲವು ಅಂತರಾಷ್ಟ್ರೀಯ ಪ್ರಶಸ್ತಿಗಳು ಸಂದಿವೆ. ಮುಖ್ಯವಾಗಿ ಕ್ಯಾನ್ ಫಿಲ್ಮ್ ಫೆಸ್ಟಿವಲ್ನಲ್ಲಿ ಜ್ಯೂರಿ ಅವಾರ್ಡ್, ಅತ್ಯುತ್ತಮ ನಟಿ (ವಕೀಲೆ ರೀಟಾ ಮೋರಾ ಕ್ಯಾಸ್ಟ್ರೋ ಪಾತ್ರದ ಅಭಿನಯಕ್ಕಾಗಿ ಜೊಯಿ ಸಲ್ಡಾನಾ ಅವರಿಗೆ ಸಂದಿದೆ) ಪ್ರಶಸ್ತಿಗಳನ್ನು ಪಡೆದಿದೆ.
ಅಕಾಡೆಮಿ ಅವಾರ್ಡ್ ಗಾಗಿ ಹದಿಮೂರು ವಿಭಾಗಗಳಲ್ಲಿ “ಎಮಿಲಿಯಾ ಪೆರೆಜ್” ನಾಮನಿರ್ದೇಶನಗೊಂಡಿತ್ತು. ಇವುಗಳಲ್ಲಿ ಹಾಡು (ಎಲ್ ಮಾಲ್) ನಟನೆ (ಜೊಯಿ ಸಲ್ಡಾನಾ) ಎರಡು ವಿಭಾಗಗಳಲ್ಲಿ ಪ್ರಶಸ್ತಿ ಸಂದಿದೆ. ಇದಲ್ಲದೇ 82 ನೇ ಗೋಲ್ಡನ್ ಗ್ಲೋಬ್ ಪ್ರಶಸ್ತಿಗಳಲ್ಲಿ ಅತ್ಯುತ್ತಮ ಚಲನಚಿತ್ರ – ಸಂಗೀತ – ಅತ್ಯುತ್ತಮ ವಿದೇಶಿ ಭಾಷಾ ಚಲನಚಿತ್ರ ಸೇರಿದಂತೆ ನಾಲ್ಕು ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದೆ. ಬ್ರಿಟಿಷ್ ಅಕಾಡೆಮಿ ಪ್ರಶಸ್ತಿಗಳಲ್ಲಿ ಎರಡು ಪ್ರಶಸ್ತಿಗಳನ್ನು ಪಡೆದಿದೆ.
ಕಾರ್ಲಾ ಸೋಫಿಯಾ ಗ್ಯಾಸ್ಕಾನ್ ಅವರು ಎರಡು ಪಾತ್ರಗಳಲ್ಲಿ ಸಮರ್ಥವಾಗಿ ಅಭಿನಯಿಸಿದ್ದರೂ ಅವರ ಬಾಡಿ ಲಾಂಗ್ವೇಜ್ ಮೂಲ ಚಹರೆಯಿಂದ ಕಳಚಿಕೊಂಡಿಲ್ಲದೇ ಇರುವುದು ಎದ್ದು ಕಾಣುತ್ತದೆ. ಬಹುಶಃ ಇದು ಸಾಧ್ಯವಾಗಿದ್ದರೆ ಅಕಾಡೆಮಿ ಅವಾರ್ಡ್ ಅವರಿಗೆ ಸಲ್ಲುವ ಸಾಧ್ಯತೆ ಇತ್ತು ಎನಿಸುತ್ತದೆ. ವಕೀಲೆ ಪಾತ್ರದಲ್ಲಿ ಜೊಯಿ ಸಲ್ಡಾನಾ ಬಹು ಸಮರ್ಥವಾಗಿ ನಟಿಸಿದ್ದಾರೆ. ಹಾಡು-ನೃತ್ಯದ ದೃಶ್ಯಗಳಲ್ಲಿಯೂ ಸೈ ಎನಿಸಿಕೊಳ್ಳುತ್ತಾರೆ.