Site icon ಕುಮಾರರೈತ

ನಾವು ಕಾಡನ್ನು ನೋಡುತ್ತೆವೊ; ಕಾಡು ನಮ್ಮನ್ನು ನೋಡುತ್ತದೆಯೊ ! ?

?

ಮೂರು ವರ್ಷದ ಹಿಂದೆ ಮುಖಪುಟ (Facebook) ದಲ್ಲಿ “ನಾವು ಕಾಡನ್ನು ನೋಡುತ್ತೆಯೋ ಅಥವಾ ಕಾಡು ನಮ್ಮನ್ನು ನೋಡುತ್ತದೆಯೋ” ಎಂದು ಪುಟ್ಟ ಟಪ್ಪಣಿ ಬರೆದಿದ್ದೆ. ಅದನ್ನಿಂದು ಫೇಸ್ಬುಕ್ ನನ್ನ ಟೈಮ್ ಲೈನ್ ಮೆಮೊರಿಯಲ್ಲಿ ನೆನಪಿಸಿತು. ಅಚ್ಚರಿಯೆಂದರೆ ಆ ಕ್ಷಣದಲ್ಲಿ ನಾನು ಕಾಡನ್ನು ನೆನಸುತ್ತಿದ್ದೆ !

ಪ್ರತಿಬಾರಿ ಕಾಡೊಳಗೆ ಹೊಕ್ಕಾಗಲೆಲ್ಲ ಖುಷಿ. ಓ.. ಅಲ್ಲಿ ಜಿಂಕೆ, ಅಲ್ಲಿಅಲ್ಲಿ ನೋಡು ಕಡವೆ, ಎಂಥಾ ಮರ ಅದು, ಆಕಾಶದೆತ್ತರಕ್ಕೆ ಬೆಳೆದು ನಿಂತಿದೆ, ಅದೋ ಆ ಮರ 15-20 ಜನ ಸೇರಿದ್ರು ತಬ್ಬೋಕೆ ಅಗೋಲ್ಲ. ಹೀಗೆಲ್ಲ ಉದ್ಗಾರಗಳು ಬರ್ತಾನೇ ಇರ್ತಾವೆ. ನಾವು ಕಾಡು ನೋಡ್ತಾ ಇದ್ದೀವಿ ಎಂಬ ಭಾವನೆ ನಮ್ಮಲ್ಲಿರುತ್ತದೆ… ಕಾಡು ಕೂಡ ನಮ್ಮನ್ನು ಗಮನಿಸುತ್ತದೆ ಎಂಬ ಭಾವ ಬಂದಾಗೊಮ್ಮೆ ಮೈ ಜುಮ್ ಎಂದಿತ್ತು” ನನ್ನ ಟಿಪ್ಪಣಿ ಇದಾಗಿತ್ತು.

ಹಲವು ಕಾಡುಗಳು ನೂರಾರು, ಸಾವಿರಾರು ಕಿಲೋ ಮೀಟರ್ ದೂರಕ್ಕೆ ಹರಡಿಕೊಂಡಿರುತ್ತವೆ. ಮನುಷ್ಯ ಹೇಗೆ ವಲಸೆ ಹೋಗುತ್ತಾನೋ ಹಾಗೆ ವನ್ಯಪ್ರಾಣಿಗಳು ನೂರಾರು, ಸಾವಿರಾರು ಕಿಲೋ ಮೀಟರ್ ದೂರದವರೆಗೆ ವಲಸೆ ಹೋಗುತ್ತದೆ. ಇಂಥ ಹೊತ್ತಿನಲ್ಲಿ ದೂರ ನಡೆಯಲಾಗದ ಅಶಕ್ತ, ವಯಸ್ಸಾದ ಅಥವಾ ಗುದ್ದಾಟಗಳಲ್ಲಿ ಗಾಯಗೊಂಡು ವನ್ಯಪ್ರಾಣಿಗಳು ಅಲ್ಲಿಯೇ ಉಳಿದುಕೊಳ್ಳುತ್ತದೆ.

ಇಂಥ ವನ್ಯಪ್ರಾಣಿಗಳು ಅಷ್ಟು ಸಲಭವಾಗಿ ನಮ್ಮ ಕಣ್ಣುಗಳಿಗೆ ಗೋಚರವಾಗುವುದಿಲ್ಲ. ಒಂದು ವೇಳೆ ಕಣ್ಣಿಗೆ ಬಿದ್ದರೆ ಅದು ತೀರಾ ಆಕಸ್ಮಿಕ. ಬಹುತೇಕ ವನ್ಯಪ್ರಾಣಿಗಳು ಸಾಧ್ಯವಾದಷ್ಟೂ ಮನುಷ್ಯರಿಂದ ದೂರವಿರಲು ಬಯಸುತ್ತವೆ. ಆದರೆ ಅವುಗಳು ಖಂಡಿತವಾಗಿಯೂ ನಮ್ಮನ್ನು ನೋಡುತ್ತಿರುತ್ತವೆ !

ಜಿಂಕೆ, ಕಡವೆ ಇಂಥ ಪ್ರಾಣಿಗಳು ಇವುಗಳಿಗೆ ಕೊಂಚ ವ್ಯತಿರಿಕ್ತ. ಅವುಗಳು ಸಾಮಾನ್ಯವಾಗಿ ಮನುಷ್ಯ ಸಂಚಾರ ಹೆಚ್ಚಿರುವ ಕಡೆಯೇ ಗುಂಪುಗುಂಪಾಗಿರುತ್ತವೆ. ಇಂಥ ವರ್ತನೆಗೆ ಕಾರಣವೇನೆಂದರೆ ಮನುಷ್ಯ ಇರುವ ಸ್ಥಳದ ಸನಿಹದಲ್ಲಿದ್ದರೆ ಹುಲಿ, ಚಿರತೆ ದಾಳಿಯಿಂದ ಪಾರಾಗುವ ಸಾಧ್ಯತೆ ಹೆಚ್ಚು ಎಂಬುದೇ ಆಗಿದೆ. ನೀವು ಬಂಡೀಪುರ, ನಾಗರಹೊಳೆ ಕಾಡುಗಳಿಗೆ ಹೋದಾಗ ಇದನ್ನು ಗಮನಿಸಬಹುದು.

ಬಂಡೀಪುರದಲ್ಲಿಯಂತೂ ಕತ್ತಲು ಕವಿಯುತ್ತಿದ್ದಂತೆ ಹುಲಿ ಸಂರಕ್ಷಣಾ ಯೋಜನೆ ನಿರ್ದೇಶಕರ ಕಚೇರಿಯಿಂದ ಹಿಡಿದು ಅತಿಥಿ ಗೃಹಗಳ ಸುತ್ತಮುತ್ತ ಇವುಗಳ ಹಿಂಡುಗಳು ನೆರೆಯಲು ಆನಂದಿಸುತ್ತವೆ. ಅಲ್ಲಿ ಲಭ್ಯವಿರುವ ಬೆಳಕಿನಲ್ಲಿಯೇ ನೂರಾರು ಜಿಂಕೆಗಳ ಹಿಂಡು ನೆರೆದಿರುವುದನ್ನು ಕಾಣಬಹುದು.

ಅಂದ ಹಾಗೆ ನಾನು ಹಿಂಡುಗಳು ಅಂದೆನಲ್ಲವೇ ! ಇಲ್ಲಿ ಜಿಂಕೆಗಳ ಬೇರೆಬೇರೆ ಹಿಂಡುಗಳು ಇರುತ್ತವೆ. ಒಂದು ಹಿಂಡಿನೊಳಗೆ ಮತ್ತೊಂದು ಹಿಂಡಿನ ಜಿಂಕೆಗೆ ಅಷ್ಟು ಸುಲಭವಾಗಿ ಪ್ರವೇಶವಿರುವುದಿಲ್ಲ. ಪ್ರತಿಯೊಂದು ಜಿಂಕೆಯೂ ತನ್ನದೇ ಹಿಂಡಿನ ವರ್ತುಲದೊಳಗೆ ಇರುತ್ತದೆ. ಹೀಗಿರುವಾಗಲೂ ಅಲ್ಲಿಯೂ ಪಕ್ಷಾಂತರ ಅಂದರೆ ಹಿಂಡಾಂತರ ನಡೆಯುತ್ತದೆ !

ಇದಕ್ಕೆ ಬಹುಮುಖ್ಯವಾಗಿ ಪ್ರೇಮ ಕಾರಣ. ಅರೇ ಜಿಂಕೆಗಳಲ್ಲಿಯೂ ಪ್ರೇಮ – ಪ್ರೀತಿ – ಪ್ರಣಯ ಇವೆಯೇ ಎಂದು ಕೇಳಬೇಡಿ. ಈ ಮೂರು ಪದಗಳು ಮನುಷ್ಯರ ಸ್ವತ್ತೇನೂ ಅಲ್ಲ ! ಎಲ್ಲ ಪ್ರಾಣಿಗಳಲ್ಲಿಯೂ ಇವುಗಳಿರುತ್ತವೆ. ಅವುಗಳಿಗೆ ಈ ಪದಗಳು ಗೊತ್ತಿಲ್ಲ ಅಷ್ಟೆ !

ಒಂದು ಹಿಂಡಿನ ಹೆಣ್ಣು ಜಿಂಕೆಯತ್ತ ಮತ್ತೊಂದು ಹಿಂಡಿನ ಗಂಡು ಜಿಂಕೆ ಆಕರ್ಷಿತವಾಗಿ ಆ ಹೆಣ್ಣು ಜಿಂಕೆಗೂ ಇದರ ಜೋಡಿ ಸಮಾಧಾನವೆನ್ನಿಸಿದರೆ ಆಗ ಸಮಾಗಮ ನಡೆಯುತ್ತದೆ. ಇದೇನೂ ಅಷ್ಟು ಸುಲಭವಾಗಿ ನಡೆಯುವುದಿಲ್ಲ. ಹೆಣ್ಣು ಜಿಂಕೆಯಿರುವ ಹಿಂಡಿನ ಗಂಡು ಜಿಂಕೆಗಳ ಪೈಪೋಟಿ ಎದುರಿಸಬೇಕು. ಕೆಲವೊಮ್ಮೆ ಕಾದಾಟವೂ ನಡೆಯುತ್ತದೆ. ಇವೆಲ್ಲ ಆದ ಬಳಿಕ ಸಮಾಗಮ ಏರ್ಪಟ್ಟ ನಂತರ ಹೆಣ್ಣು ಜಿಂಕೆ ತನ್ನ ಹಿಂಡಿನೊಳಗೆ ಧೈರ್ಯವಾಗಿ ಆ ಗಂಡುಜಿಂಕೆಯನ್ನು ಕರೆದೊಯ್ಯುತ್ತದೆ.

ಅರೇ ನಮ್ಮಲೆಲ್ಲ ಪ್ರೀತಿಪ್ರೇಮ, ಮದುವೆ ಆದ ಮೇಲೆ ಗಂಡಿನ ಮನೆಗೆ ಹೆಣ್ಣು ಹೋಯ್ತಾಳೆ, ಇಲ್ಲಿ ಉಲ್ಟಾ ಅನ್ನಬೇಡಿ, ವನ್ಯಪ್ರಾಣಿ ಲೋಕ ಇರುವುದೇ ಹಾಗೆ.ಹಾಗಾಗಿ ಅಲ್ಲಿ ಗಂಡಿಗಿಂತಲೂ ಹೆಣ್ಣಿಗೆ ಒಂದು ತೂಕ ಮರ್ಯಾದೆ ಹೆಚ್ಚು !

ಕೇರಳ, ತುಳುನಾಡಿನಲ್ಲಿಯೂ ಮದುವೆ ನಂತರ ಗಂಡು ಅಂದರೆ ವರ, ಹೆಣ್ಣಿನ ಅಂದರೆ ವಧುವಿನ ಮನೆಗೆ ತೆರಳುತ್ತಿದ್ದ ಸಂಪ್ರದಾಯ ದಟ್ಟವಾಗಿತ್ತು. ಆಧುನೀಕರಣ ದೆಶೆಯಿಂದ ಆ ಸಂಪ್ರದಾಯ ನಿಂತಿಲ್ಲವಾದರೂ ಕಣ್ಮರೆಯಾಗುತ್ತಾ ಬಂದಿದೆ ಎನ್ನಬಹುದು. ಇಂಥಲ್ಲಿಯೂ ಗಂಡಿಗಿಂತಲೂ ಹೆಣ್ಣಿನ ಸ್ತಾನಮಾನ ಹೆಚ್ಚು. ಹೆಣ್ಣು ಹುಟ್ಟಿದಾಗ ಸಂಭ್ರಮಿಸುವಷ್ಟು ಗಂಡು ಶಿಶು ಜನಿಸಿದಾಗ ಸಂಭ್ರಮಿಸುವುದಿಲ್ಲ.. ಸಾಮಾನ್ಯವಾಗಿ ಆಸ್ತಿಪಾಸ್ತಿಯೂ ಹೆಣ್ಣಿನ ಹೆಸರಿನ್ಲಲಿಯೇ ಇರುತ್ತಿತ್ತು. ಹೀಗೆ ಮದುವೆಯಾಗಿ ಹೆಂಡತಿ ಮನೆಗೆ ಹೋಗುವುದನ್ನು ಅಳಿಯ ಕಟ್ಟು ಸಂಪ್ರದಾಯ ಅಂತಲೂ ಕರೆಯುತ್ತಾರೆ.

ಅದಿರಲಿ, ವಿಷಯ ಎಲ್ಲಿಂದ ಎಲ್ಲಿಗೋ ಹೋಯಿತು. ಕಾಡಿನ ರಾಜ ಹುಲಿಯೇ ಆಗಲಿ, ಮೃಗರಾಜ ಸಿಂಹವೇ ಆಗಲಿ, ಹೆಣ್ಣುಲಿ, ಸಿಂಹಿಣಿ ಹಿಂಡಿಗೆ ಹೋಗಬೇಕು ಅಥವಾ ಪ್ರತ್ಯೇಕವಾಗಿ ಸಂಸಾರ ಹೂಡಬೇಕು. ನಾನು ಕಾಡಿನ ರಾಜ ಹಾಗೆ ಹೀಗೆ ಎಂಬ ಧಿಮಾಕು ಅಲ್ಲೆಲ್ಲ ನಡೆಯುವುದಿಲ್ಲ.

ವನ್ಯಪ್ರಾಣಿಗಳು ವಲಸೆ ಹೋಗದೇ ಇದ್ದ ಸಂದರ್ಭದಲ್ಲಿಯೂ ಕಾಡಿನಲ್ಲಿ ಅವು ಸುಲಭವಾಗಿ ಕಾಣುವುದಿಲ್ಲ. “ಅಯ್ಯೋ ನೂರಾರು ರುಪಾಯಿ (ರೂಪಾಯಿ ಅಲ್ಲ) ಕೊಟ್ಟು ಟಿಕೆಟ್ ತಗೊಂಡೆ, ಒಂದು ಪ್ರಾಣಿಯೂ ಕಾಣ್ತಾ ಇಲ್ವೇ “ ಎಂದು ಗೋಳಾಡುವವರಿದ್ದಾರೆ. ಇಂಥವರು ತಮ್ಮ ಕಣ್ಣಿಗೆ ವನ್ಯಪ್ರಾಣಿಗಳು ಕಾಣ್ತಾ ಇಲ್ಲ, ಆದರೆ ತಾವು ಮಾತ್ರ ಅವುಗಳ ಕಣ್ಣಿಗೆ ಕಾಣಿಸ್ತಿದ್ದೀವಿ ಅಂತ ಸಮಾಧಾನ ಪಟ್ಕೊಳ್ಳಬಹುದು.

ವನ್ಯಪ್ರಾಣಿಗಳು ದುರ್ಬಲವೇ ಆಗಿರಲಿ, ಸಬಲವೇ ಆಗಿರಲಿ ಅವು ಮನುಷ್ಯರ ವಾಸನೆ, ಸದ್ದು ಕೇಳಿಸಿದ ಕೂಡಲೇ ಕಾಡಿನಲ್ಲಿ ಮರೆಯಾಗುತ್ತವೆ. ಬಹು ಸೂಕ್ಷ್ಮವಾಗಿ ನಮ್ಮ ನಡೆಯನ್ನು ಗಮನಿಸುತ್ತಿರುತ್ತವೆ. ವಾಹನದಿಂದ ಇಳಿದು ಅಡ್ಡಾಡಲು ಹೋದಾಗ ಅವುಗಳಿಗೆ ಭೀತಿ ಹೆಚ್ಚಾಗಿ ದಾಳಿ ಮಾಡುವ ಸಾಧ್ಯತೆಗಳು ಇವೆ. ಈ ಕಾರಣದಿಂದಲೇ ಕಾಡಿನ ನಡುವೆ ಹೋಗುವ ರಸ್ತೆಗಳಲ್ಲಿ “ವಾಹನದಿಂದ ಇಳಿಯಬೇಡಿ, ಕಾಡಿನ ನಡುವೆ ಎಲ್ಲಿಯೂ ವಾಹನ ನಿಲ್ಲಿಸಬೇಡಿ” ಎ<ಬ ಫಲಕಗಳನ್ನು ಅರಣ್ಯ ಇಲಾಖೆಯವರು ಹಾಕಿರುತ್ತಾರೆ.

ಅಂದ ಹಾಗೆ ಕಬನಿ, ರಣಥಂಬೋರ್ ಇಂಥಾ ಕಡೆಗಳಲ್ಲಿ ಸಫಾರಿಗೆ ಕರೆದುಕೊಂಡು ಹೋದಾಗ ಸಾಮಾನ್ಯವಾಗಿ ಚಿರತೆ, ಹುಲಿ ಇವುಗಳನ್ನು ತೋರಿಸ್ತಾರಲ್ಲ ಅನ್ನುವ ಪ್ರಶ್ನೆ ಉದ್ಬವಿಸಬಹುದು.

ಅರಣ್ಯ ಪ್ರವಾಸೋದ್ಯಮ ಹೇಗಾಗಿದೆ ಎಂದರೆ ಭಾರಿ ದುಬಾರಿ ದರ ತೆತ್ತು ಸಫಾರಿಗೆ ಬಂದವರನ್ನು ನಿರಾಶೆಗೊಳಿಸಬಾರದು ಎಂಬಂತಾಗಿದೆ. ವಿಪರೀತ ಬೆಲೆಯ ಟಿಕೇಟು ಖರೀದಿಸಿ ಬಂದವರಿಗೆ ವನ್ಯಪ್ರಾಣಿಗಳು ಕಾಣದಿದ್ದರೆ ಮುಂದಿನ ದಿನಗಳಲ್ಲಿ ಬರುವ ಪ್ರವಾಸಿಗರ ಸಂಖ್ಯೆ ತಗ್ಗಬಹುದು ಎನ್ನುವ ಆತಂಕ ಆಯೋಜಕರಿಗಿರುತ್ತದೆ. ಆದ್ದರಿಂದಲೇ ಚಿರತೆ, ಹುಲಿಗಳ ಚಲನವಲನದ ಮೇಲೆ ನಿಗಾ ಇಟ್ಟು ಪರಸ್ಪರ ಸಂದೇಶಗಳನ್ನು ರವಾನಿಸುತ್ತಿರುತ್ತಾರೆ. ಹೀಗೆ ಸಿಗ್ನಲ್ ಬಂದ ಕಡೆ ವಾಹನಗಳಲ್ಲಿ ಪ್ರವಾಸಿಗರನ್ನು ಕರೆದೊಯ್ಯುತ್ತಾರೆ.

ಇಂಥ ಸಂದರ್ಭದಲ್ಲಿ ಚಿರತೆಯೋ, ಹುಲಿಯೋ ಕಾಣುವ ಸಾಧ್ಯತೆ ಹೆಚ್ಚು. ಆದರೆ ಇಲ್ಲಿಯೂ ಅದೃಷ್ಟದಾಟವೇ ನಡೆಯುತ್ತದೆ. ಅವುಗಳು ಕಾಣದಿರುವ ಸಾಧ್ಯತೆಯೂ ಇದೆ.

ಇವೆಲ್ಲದರ ನಡುವೆ ಕಾಡು ನಮ್ಮನ್ನು ನೋಡುತ್ತಿರುತ್ತದೆ ಎಂಬುದನ್ನಂತೂ ಮರೆಯದಿರೋಣ !

Exit mobile version