ಸಿನಿಮಾ ಪ್ರೇಮಿಗಳಿಗೆ ಪ್ರತಿದಿನ ರಸದೂಟ; ಪ್ರಕಾಶ್ ರಾಜ್ ವಿಶೇಷ
ಚಿತ್ರೋತ್ಸವ ನಡೆಯುವ ಎಂಟು ದಿನಗಳ ಕಾಲ ಪ್ರತೀ ದಿನ ಚಿತ್ರ ನಿರ್ಮಾಣ, ನಿರ್ದೇಶನ, ಚಿತ್ರಕತೆ, ತಂತ್ರಜ್ಞಾನ ಮತ್ತು ಉದ್ಯಮಕ್ಕೆ ಸಂಬಂಧಪಟ್ಟಂತೆ ತಜ್ಞರೊಂದಿಗೆ ಸಂವಾದ, ಉಪನ್ಯಾಸ, ಮಾಸ್ಟರ್ ಕ್ಲಾಸ್, ವಿಚಾರ ಸಂಕಿರಣ ಮೊದಲಾದ ಕಾರ್ಯಕ್ರಮಗಳಿರುತ್ತವೆ. ಚಿತ್ರೋತ್ಸವದ ರಾಯಭಾರಿ ಪ್ರಕಾಶ್ ರಾಜ್ ಅವರಿಂದ ‘ನಾವು ಮತ್ತು ನಮ್ಮ ಸಿನಿಮಾ’ ಎಂಬ ವಿಷಯದ ಕುರಿತು ಉಪನ್ಯಾಸ ನಡೆಯಲಿದೆ.
ಮಿಕ್ಕಂತೆ ಖ್ಯಾತ ಸಂಕಲನಕಾರರಾದ ಶ್ರೀಕರ್ ಪ್ರಸಾದ್ ಅವರಿಂದ ‘ಚಲನಚಿತ್ರದ ಸಂಕಲನದ ಮಹತ್ವ’, ನಿರ್ದೇಶಕ ಮತ್ತು ಸಂಕಲನಕಾರ ಮಹೇಶ್ ನಾರಾಯಣನ್ ಅವರಿಂದ ‘ಸಮಕಾಲೀನ ಚಲನಚಿತ್ರ ಕಥನ ನಿರೂಪಣೆ ಮತ್ತು ಶೈಲಿ’, ಹೆಸರಾಂತ ಧ್ವನಿ ವಿನ್ಯಾಸಕರಾದ ಬಿಶ್ವದೀಪ್ ಚಟರ್ಜಿ ಅವರಿಂದ ‘ದೃಶ್ಯಾತೀತ ಧ್ವನಿ – ಆಡಿಯೋಗ್ರಫಿಯ ಕಲೆ’, ಅನುರಾಗ್ ಕಶ್ಯಪ್‌ರವರಿಂದ ‘ಸಾಂಪ್ರದಾಯಿಕ ಕಲ್ಪನೆಗಳಾಚೆಗಿನ ಚಲನಚಿತ್ರ ಕಥನಗಾರಿಕೆ’ ಕುರಿತ ಉಪನ್ಯಾಸ ನಡೆಯಲಿದೆ.
ಹೆಸರಾಂತ ಛಾಯಾಗ್ರಾಹಕ ವಿ.ಕೆ. ಮೂರ್ತಿ ಕುರಿತು ವಾರ್ಷಿಕ ಸ್ಮಾರಕ ಉಪನ್ಯಾಸ ನಡೆಯಲಿದ್ದು, ‘ಲೆನ್ಸ್‌ಗಳ ಆಯ್ಕೆ, ಬೆಳಕಿನ ವಿನ್ಯಾಸ ಮತ್ತು ಛಾಯಾಗ್ರಹಣ ಕಲೆ’ ಕುರಿತು ಮಾತುಕತೆ ಆಯೋಜಿತವಾಗಿದೆ. ಹಿರಿಯ ಛಾಯಾಗ್ರಾಹಕರಾದ ಜಿ.ಎಸ್. ಭಾಸ್ಕರ್ ಕಾರ್ಯಕ್ರಮ ನಿರ್ವಹಣೆ ಮಾಡಲಿದ್ದಾರೆ.
ಡಾ. ಗಿರೀಶ್ ಕಾಸರವಳ್ಳಿ, ಡಾ. ಸಾಧು ಕೋಕಿಲ, ಡಾ. ಜಯಮಾಲ ಹಾಗೂ ಇತರರೊಂದಿಗೆ ಕಳೆದ ನಾಲ್ಕು ದಶಕಗಳ ಕನ್ನಡ ಸಿನಿಮಾ ಬಗ್ಗೆ ಸಂವಾದ, ಗಿರೀಶ್ ಕಾಸರವಳ್ಳಿ ಅವರಿಂದ ʼಚಲನಚಿತ್ರ ಕಥನಗಳಲ್ಲಿ ನಮ್ಮತನ ಮತ್ತು ನೈಜತೆʼ ಕುರಿತ ಉಪನ್ಯಾಸ ನಡೆಯಲಿದೆ. ಕರ್ನಾಟಕ ಲೇಖಕಿಯರ ಸಂಘದ ವತಿಯಿಂದ ಚಿತ್ರೋತ್ಸವದ ಧ್ಯೇಯವಾಕ್ಯ ಕೇಂದ್ರಿತ ಸಂವಾದ ಕಾರ್ಯಕ್ರಮ ಸೇರಿದಂತೆ ಹತ್ತು ಹಲವು ಕಾರ್ಯಕ್ರಮಗಳು ನಡೆಯಲಿವೆ.
ಚಿತ್ರೋತ್ಸವವು ಜನವರಿ 29ರಿಂದ ಫೆಬ್ರವರಿ 06ರವರೆಗೂ ನಡೆಯಲಿದ್ದು, ಬೆಂಗಳೂರಿನ ರಾಜಾಜಿನಗರದ ಲುಲು ಮಾಲ್‍ನ ಸಿನಿಪೊಲಿಸ್ ಮಲ್ಟಿಪ್ಲೆಕ್ಸ್ ಅಲ್ಲದೆ, ಬನಶಂಕರಿ 2ನೇ ಹಂತದಲ್ಲಿರುವ ಸುಚಿತ್ರಾ ಫಿಲಂ ಸೊಸೈಟಿ ಮತ್ತು ಕರ್ನಾಟಕ ಚಲನಚಿತ್ರ ಕಲಾವಿದರ ಸಂಘದಲ್ಲಿ ಚಿತ್ರಗಳು ಪ್ರದರ್ಶನವಾಗಲಿವೆ.
