ಕರ್ನಾಟಕ ಅರಣ್ಯ ಅಕ್ರಮ ಬೇಟೆ ಮಾಫಿಯಾ ತಾಣವಾಗುತ್ತಿದೆಯೇ ?
ಚಿಕ್ಕಮಗಳೂರು ಪ್ರಾದೇಶಿಕ ವಿಭಾಗದ ಮುತ್ತೋಡಿ ವಲಯ ವ್ಯಾಪ್ತಿಯ ಏಳುನೂರು ಖಾನ್ ತೋಟ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹುಲಿಯೊಂದಕ್ಕೆ ಅಕ್ರಮವಾಗಿ ತಂತಿ ಉರುಳು ಹಾಕಲಾಗಿದ್ದು, ಅದು ಗಂಭೀರವಾಗಿ ಗಾಯಗೊಂಡು ಜೀವನ್ಮರಣ ಸ್ಥಿತಿಯಲ್ಲಿ ಹೋರಾಡುತ್ತಿದೆ.
ಕ್ಯಾಮೆರಾ ಟ್ರಾಪ್‌ನಲ್ಲಿ ಸೆರೆಯಾಯ್ತು ಭೀಕರ ದೃಶ್ಯ!
ಸ್ಥಳೀಯ ಖಾಸಗಿ ತೋಟವೊಂದರಲ್ಲಿ ಅಳವಡಿಸಲಾಗಿದ್ದ ಕ್ಯಾಮೆರಾ ಟ್ರಾಪ್‌ಗಳಲ್ಲಿ ಈ ಭೀಕರ ದೃಶ್ಯ ಸೆರೆಯಾಗಿದೆ. ಹುಲಿಯ ಹೊಟ್ಟೆಯ ಭಾಗಕ್ಕೆ ತಂತಿ ಉರುಳು ಅತ್ಯಂತ ಬಿಗಿಯಾಗಿ ಸುತ್ತಿಕೊಂಡಿದೆ. ಅದು ತೀವ್ರ ನೋವಿನಿಂದ ಇಡೀ ಅರಣ್ಯ ಪ್ರದೇಶದಲ್ಲಿ ಸಂಚರಿಸುತ್ತಿದೆ. ದಿನ ಕಳೆದಂತೆ ಈ ಗಾಯವು ಮತ್ತಷ್ಟು ಗಂಭೀರವಾಗುತ್ತಿದೆ. ಹುಲಿಯು ಜೀವಂತವಾಗಿಯೇ ತಿರುಗಾಡುತ್ತಿದ್ದರೂ ಅದರ ಪರಿಸ್ಥಿತಿ ಅತ್ಯಂತ ಆತಂಕಕಾರಿಯಾಗಿದೆ.
ಕಾನೂನುಗಳ ಉಲ್ಲಂಘನೆ ಮತ್ತು ಅಧಿಕಾರಿಗಳ ನಿರ್ಲಕ್ಷ್ಯದ ಆರೋಪ
ಸಾಮಾಜಿಕ ಕಾರ್ಯಕರ್ತರಾದ ದಿನೇಶ್ ಕಲ್ಲಹಳ್ಳಿ ಅವರು ಈ ಕುರಿತು ಅರಣ್ಯ ಇಲಾಖೆಯ ಉನ್ನತ ಅಧಿಕಾರಿಗಳಾದ ಡಾ. ಮೀನಾಕ್ಷಿ ನೇಗಿ, ಐಎಫ್‌ಎಸ್ (ಪಿಸಿಸಿಎಫ್) ಮತ್ತು ಕುಮಾರ್ ಪುಷ್ಕರ್, ಐಎಫ್‌ಎಸ್ (ಮುಖ್ಯ ವನ್ಯಜೀವಿ ಪರಿಪಾಲಕರು) ಅವರಿಗೆ ತುರ್ತು ಸಾರ್ವಜನಿಕ ಹಿತಾಸಕ್ತಿ ದೂರು ಸಲ್ಲಿಸಿದ್ದಾರೆ. ದೂರಿನಲ್ಲಿ ಉಲ್ಲೇಖಿಸಲಾದ ಪ್ರಮುಖ ಅಂಶಗಳು ಮುಂದಿವೆ.
ಹುಲಿಯು ವನ್ಯಜೀವಿ ಸಂರಕ್ಷಣಾ ಕಾಯ್ದೆ, 1972 ರ ಅನುಸೂಚಿ-1 (Schedule-1) ರ ಅಡಿಯಲ್ಲಿ ರಕ್ಷಣೆ ಹೊಂದಿದೆ. ಕಾಯ್ದೆಯ ಸೆಕ್ಷನ್ 9ರ ಪ್ರಕಾರ ಹುಲಿಯನ್ನು ಬೇಟೆಯಾಡುವುದು ಅಥವಾ ಗಾಯಗೊಳಿಸುವುದು ಸಂಪೂರ್ಣ ನಿಷೇಧಿತ. ಸೆಕ್ಷನ್ 51ರ ಅಡಿಯಲ್ಲಿ ಇದು ಕಠಿಣ ಶಿಕ್ಷಾರ್ಹ ಅಪರಾಧ.
ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ (NTCA) ಮತ್ತು ಪ್ರಾಜೆಕ್ಟ್ ಟೈಗರ್ ನಿಯಮಗಳ ಪ್ರಕಾರ, ಹುಲಿ ಗಾಯಗೊಂಡ ತಕ್ಷಣ ಡ್ರೋನ್, ಕ್ಯಾಮೆರಾ ಟ್ರಾಪ್, ಪಶುವೈದ್ಯರು ಮತ್ತು ಟ್ರಾಂಕ್ವಿಲೈಸಿಂಗ್ ತಂಡ ಒಳಗೊಂಡ ವಿಶೇಷ ಕಾರ್ಯಪಡೆ ರಚಿಸಿ ಕಾರ್ಯಾಚರಣೆ ನಡೆಸಬೇಕು.
ಕಳೆದ ಹಲವು ದಿನಗಳಿಂದ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳದಲ್ಲಿದ್ದರೂ, ಹುಲಿಯನ್ನು ಸುರಕ್ಷಿತವಾಗಿ ಪತ್ತೆಹಚ್ಚಿ ಚಿಕಿತ್ಸೆ ನೀಡುವಲ್ಲಿ ಸಮರ್ಪಕ ಕ್ರಮ ಕೈಗೊಂಡಿಲ್ಲ. ಅಲ್ಲದೆ, ಇಷ್ಟು ದೊಡ್ಡ ಅಪರಾಧ ನಡೆದಿದ್ದರೂ ತಕ್ಷಣವೇ ಅರಣ್ಯ ಅಪರಾಧ ಪ್ರಕರಣ (FOC) ದಾಖಲಿಸಿಲ್ಲ. ಇದು ಅಧಿಕಾರಿಗಳ ಕರ್ತವ್ಯಲೋಪವನ್ನು ಎತ್ತಿ ತೋರಿಸುತ್ತದೆ.
ಮಾಫಿಯಾಗಳ ತಾಣವಾಗುತ್ತಿದೆಯೇ ಅರಣ್ಯ ಪ್ರದೇಶ?
ಸ್ಥಳೀಯ ಮೂಲಗಳ ಪ್ರಕಾರ, ಏಳುನೂರುಖಾನ್, ಪಂಡರವಳ್ಳಿ, ಕೊಳಗಾವೆ ಮತ್ತು ಸುತ್ತಮುತ್ತಲಿನ ಸೂಕ್ಷ್ಮ ಪ್ರದೇಶಗಳಲ್ಲಿ ಕೇವಲ ಕಳ್ಳಬೇಟೆ ಅಷ್ಟೇ ಅಲ್ಲದೆ ವನ್ಯಜೀವಿಗಳ ಆವಾಸಸ್ಥಾನಕ್ಕೆ ಧಕ್ಕೆ ತರುವಂತಹ ಅನೇಕ ಅಕ್ರಮ ಚಟುವಟಿಕೆಗಳು ಮುಕ್ತವಾಗಿ ನಡೆಯುತ್ತಿವೆ ಎಂಬ ಗಂಭೀರ ಆರೋಪಗಳಿವೆ.
ಅಕ್ರಮ ರೆಸಾರ್ಟ್ ನಿರ್ಮಾಣಗಳು, ಅರಣ್ಯ ಪ್ರದೇಶಗಳ ಅತಿಕ್ರಮಣ, ನಿಯಮಬಾಹಿರ ರಸ್ತೆ ಅಗಲೀಕರಣ, ಸಂಘಟಿತ ಕಳ್ಳಬೇಟೆ ಮತ್ತು ಉರುಳು ಜಾಲಗಳ ಸಕ್ರಿಯತೆ ಇವೆಲ್ಲವೂ ಅರಣ್ಯ (ಸಂರಕ್ಷಣೆ) ಕಾಯ್ದೆ 1980 ಮತ್ತು ಪರಿಸರ (ಸಂರಕ್ಷಣೆ) ಕಾಯ್ದೆ 1986 ರ ಸಂಪೂರ್ಣ ಉಲ್ಲಂಘನೆಯಾಗಿದೆ.
ಈ ದುರಂತದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಹಾಗೂ ಸರ್ಕಾರ ತಕ್ಷಣವೇ ಅಗತ್ಯ ಕ್ರಮಗಳನ್ನು ಯುದ್ಧೋಪಾದಿಯಲ್ಲಿ ಕೈಗೊಳ್ಳಬೇಕಿದೆ. ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಗಾಯಗೊಂಡಿರುವ ಹುಲಿಯನ್ನು ತಕ್ಷಣ ಪತ್ತೆಹಚ್ಚಿ, ಅದಕ್ಕೆ ಸೂಕ್ತ ವೈದ್ಯಕೀಯ ಚಿಕಿತ್ಸೆ ನೀಡಿ ರಕ್ಷಿಸಬೇಕು. ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ತಕ್ಷಣವೇ ಪ್ರಕರಣ ದಾಖಲಿಸಿ, ಉರುಳು ಹಾಕಿದ ಅಪರಾಧಿಗಳನ್ನು ಹಾಗೂ ಕಳ್ಳಬೇಟೆಯ ಜಾಲವನ್ನು ಬಂಧಿಸಬೇಕು. ಘಟನೆಯ ಕುರಿತು ಉನ್ನತ ಮಟ್ಟದ ಸ್ವತಂತ್ರ ತನಿಖೆ ನಡೆಯಬೇಕು ಹಾಗೂ ಕರ್ತವ್ಯಲೋಪ ಎಸಗಿದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕು. ಮುತ್ತೋಡಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ತಲೆಎತ್ತಿರುವ ಅಕ್ರಮ ರೆಸಾರ್ಟ್ ಹಾಗೂ ಪರಿಸರ ವಿರೋಧಿ ಚಟುವಟಿಕೆಗಳ ಕುರಿತು ಸಮಗ್ರ ಸಮೀಕ್ಷೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕು.
ಕಾಡಿನ ಸೌಂದರ್ಯ ಮತ್ತು ಪರಿಸರ ಸಮತೋಲನದ ಸಂಕೇತವಾಗಿರುವ ಹುಲಿಗಳು ಹೀಗೆ ಅಕ್ರಮ ಉರುಳುಗಳಿಗೆ ಬಲಿಯಾಗುತ್ತಿದ್ದರೆ, ಮುಂದಿನ ದಿನಗಳಲ್ಲಿ ನಾವು ಕೇವಲ ಕಾಗದದ ಮೇಲಷ್ಟೇ ಹುಲಿಗಳನ್ನು ನೋಡಬೇಕಾಗಬಹುದು. ಅರಣ್ಯ ಇಲಾಖೆ ಇನ್ನಾದರೂ ಎಚ್ಚೆತ್ತುಕೊಂಡು ಈ ಮೂಕಪ್ರಾಣಿಯ ಜೀವ ಉಳಿಸಲು ಧಾವಿಸಲಿ.
