ಪರಿಸರ

ಡಿಸಿಎಫ್‌ ಅಮಾನತು ನಂತರವೂ ಉಳಿಯುವ ಪ್ರಶ್ನೆಗಳಿಗೆ ಅರಣ್ಯ ಸಚಿವರು ಉತ್ತರಿಸುವರೇ ?

ಜೂನ್ 26 ರಂದು ಎಂಎಂ ಹಿಲ್ಸ್ ವನ್ಯಜೀವಿ ಅಭಯಾರಣ್ಯದಲ್ಲಿ ಐದು ಹುಲಿಗಳ ಸಾವಿಗೆ ಕಾರಣವಾದ ಕರ್ತವ್ಯ ಲೋಪಕ್ಕಾಗಿ ಕರ್ನಾಟಕ ಸರ್ಕಾರವು ಉಪ ಅರಣ್ಯ ಸಂರಕ್ಷಣಾಧಿಕಾರಿ ವೈ ಚಕ್ರಪಾಣಿ ಅವರನ್ನು ಅಮಾನತುಗೊಳಿಸಿದೆ. ಅರಣ್ಯ ಸಚಿವರ ಆದೇಶದ ಮೇರೆಗೆ ಮಟ್ಟದ ಸಮಿತಿ ರಚನೆಯಾಗಿತ್ತು. ಇದು ಸಲ್ಲಿಸಿದ ವರದಿಯ ಆಧಾರದಿಂದ ರೂಪಿತವಾದ ಸರ್ಕಾರದ ನಡಾವಳಿಗಳನ್ನು ಓದಿದರೆ, ಕರ್ನಾಟಕ ಅರಣ್ಯ ಇಲಾಖೆ ಅರಣ್ಯ ವೀಕ್ಷಕರಿಗೆ ಸಂಬಳ ನೀಡಲು ವಿಫಲವಾಗಿದೆ ಎಂಬುದು ಸ್ಪಷ್ಟವಾಗುತ್ತದೆ ಎಂದು ಪರಿಸರತಜ್ಞ ಜೋಸೆಫ್‌ ಹೂವರ್‌ ಅಭಿಪ್ರಾಯಪಟ್ಟಿದ್ದಾರೆ.

Josep Hoover
 ಪರಿಸರವಾದಿ ಜೋಸೆಫ್ ಹೂವರ್

ಮೂರು ತಿಂಗಳಿನಿಂದ ವೇತನವಿಲ್ಲದೆ, ದಿನಗೂಲಿ ಸಿಬ್ಬಂದಿ ಅರಣ್ಯ ವೀಕ್ಷಣೆಗೆ ಹೋಗಲಿಲ್ಲ. ಸಂರಕ್ಷಕರು ಯಾರೂ ಇಲ್ಲದ ಕಾರಣ, ಆರೋಪಿಗಳು ಅರ್ಧ ತಿಂದ ಹಸುವಿನ ಮೃತದೇಹಕ್ಕೆ ವಿಷ ಹಾಕಿದರು. ಹುಲಿಗಳು ಮೃತದೇಹವನ್ನು ತಿಂದು ಸತ್ತವು. ಈ ಹಿನ್ನೆಲೆಯಲ್ಲಿ ನಮ್ಮಲ್ಲಿ ಅನೇಕ ಪ್ರಶ್ನೆಗಳು ಮೂಡಿವೆ ಎನ್ನುವ ಅವರು ಅವುಗಳನ್ನು ವಿವರಿಸಿದರು.

  1. ಮಡಿಕೇರಿಯ ಡಿಸಿಎಫ್ ಆಗಿದ್ದಾಗ ಅಕ್ರಮವಾಗಿ ಮರಗಳನ್ನು ಕಡಿತ ಮಾಡಿದ ಕಾರಣಕ್ಕಾಗಿ ವೈ ಚಕ್ರಪಾಣಿ ಅವರನ್ನು ಕರ್ನಾಟಕ ಸರ್ಕಾರ ಅಮಾನತುಗೊಳಿಸಿತ್ತು. ಅವರ ಕಳಂಕಿತ ಸೇವೆ ಇದ್ದರೂ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರು ಚಕ್ರಪಾಣಿ ಅವರನ್ನು ವನ್ಯಜೀವಿ ಅಭಯಾರಣ್ಯದಲ್ಲಿ ಕಾರ್ಯನಿರ್ವಾಹಕ ಹುದ್ದೆಗೆ ವರ್ಗಾವಣೆ ಮಾಡಲು ಏಕೆ ಅನುಮೋದನೆ ನೀಡಿದರು ?
  2. ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರನ್ನುಡಿಸಿಎಫ್‌ ಚಕ್ರಪಾಣಿಗೆ ಎಂಎಂ ಹಿಲ್ಸ್‌ ವನ್ಯಜೀವಿಧಾಮಕ್ಕೆ  ನಿಯೋಜಿಸಲು ಒತ್ತಾಯಿಸಲಾಗಿದೆಯೇ? ಒಂದು ವೇಳೆ ಒತ್ತಾಯ ಬಂದಿದ್ದರೆ ಆ ಕಾರ್ಯ ಮಾಡಿದವರು ಯಾರು ?
  3. ಚಕ್ರಪಾಣಿ ಅವರು ವಹಿಸಿದ ಕರ್ತವ್ಯ ಮಾಡದಿದ್ದ ಸಂದರ್ಭದಲ್ಲಿ ಅರಣ್ಯಗಳ ಮುಖ್ಯ ಸಂರಕ್ಷಣಾಧಿಕಾರಿ (ಹಿರಾಲಾಲ್) ಮತ್ತು ಹೆಚ್ಚುವರಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಶ್ರೀನಿವಾಸುಲು) ಏನು ಮಾಡುತ್ತಿದ್ದರು?
  4. ಒಂದು ತಾಯಿ ಹುಲಿ, ಮೂರು ಹೆಣ್ಣು ಹುಲಿಮರಿಗಳು, ಒಂದು ಗಂಡು ಹುಲಿ ಮರಿ ಸಾವಿಗೆ ಸಿಸಿಎಫ್ ಮತ್ತು ಎಪಿಸಿಸಿಎಫ್ ಸಮಾನವಾಗಿ ಕಾರಣರಲ್ಲವೇ?
  5. ಸಿಸಿಎಫ್ ಮತ್ತು ಎಪಿಸಿಸಿಎಫ್ ಅನ್ನು ‘ತಜ್ಞ’ ಸಮಿತಿಯಲ್ಲಿ ಸೇರಿಸುವ ಮೂಲಕ ಸರ್ಕಾರವು ಪ್ರಜ್ಞಾಪೂರ್ವಕವಾಗಿ ತಪ್ಪು ಮಾಡಿದೆಯಲ್ಲವೇ ?
  6. ನಿರ್ಲಕ್ಷಿಸಲ್ಪಟ್ಟ ಅರಣ್ಯ ವೀಕ್ಷಕರ ದುಃಸ್ಥಿತಿಯ ಬಗ್ಗೆ ಹಿರಿಯ ಅರಣ್ಯ ಅಧಿಕಾರಿಗಳಿಗೆ ತಿಳಿದಿರಲಿಲ್ಲವೇ ? ವೀಕ್ಷಕರಿಗೆ ಮಾಸಿಕ ಸಂಬಳ ಪಾವತಿಯಲ್ಲಿ ವಿಳಂಬವು 2000ನೇ ಇಸ್ವಿ ಆರಂಭದಿಂದಲೂ ನಡೆಯುತ್ತಿದೆ. ಅಂದರೆ 25 ವರ್ಷಗಳಿಂದ ವಿಳಂಬವಾಗುತ್ತಲೇ ಇದೆ. ಇದನ್ನು ಯಾರೂ ಏಕೆ ಸರಿ ಮಾಡಿಲ್ಲ ?
  7. ಸರ್ಕಾರವು ನಿಜವಾಗಿಯೂ ಸಮಸ್ಯೆಯನ್ನು ಪರಿಹರಿಸಲು ಬಯಸಿದ್ದರೆ ಸಂಬಂಧಿತ ಎಲ್ಲ ಹಿರಿಯ ಅರಣ್ಯ ಅಧಿಕಾರಿಗಳನ್ನು (ವನ್ಯಜೀವಿ) ಹೊಣೆಗಾರರನ್ನಾಗಿ ಮಾಡಬೇಕಾಗಿತ್ತು. ಆದರೆ ಮಾಡಿಲ್ಲವೇಕೆ ?

ಕೊನೆಯದಾಗಿ ಹೇಳುವುದೇನೆಂದರೆ ಪುಟ್ಟ ಮಕ್ಕಳಿಗೂ ಸಹ  ಹುಲಿಗಳಿಗೆ ವಿಷ ನೀಡಲಾಗುತ್ತಿದೆ ಎಂದು ತಿಳಿದಿತ್ತು. ಹಾಗೆಯೇ ಅರಣ್ಯ ಸಿಬ್ಬಂದಿಗೆ ಸಂಬಳ ನೀಡುತ್ತಿಲ್ಲ ಎಂದು ಪ್ರತಿಯೊಬ್ಬ ಟಾಮ್, ಡಿಕ್ ಮತ್ತು ಹ್ಯಾರಿಗೂ ಗೊತ್ತಿದೆ. ಒಟ್ಟಾರೆ ಹೇಳುವುದೇನೆಂದರೆ ಯಾವ ಗೌಪ್ಯ ಮಾಹಿತಿಯನ್ನೂ ಹೊರಗೆಡವದ ಉನ್ನತ ಮಟ್ಟದ ಸಮಿತಿ ರಚನೆ ಸಮಯ, ಸಂಪನ್ಮೂಲಗಳು ಮತ್ತು ಹಣದ ಸಂಪೂರ್ಣ ವ್ಯರ್ಥವಾಗಿತ್ತು ಎಂದು ವಿವರಿಸಿರುವ ಜೋಸೆಫ್‌ ಹೂವರ್‌ ಅವರು ಈಗಲಾದರೂ ರಾಜ್ಯ ಸರ್ಕಾರವು ತಪ್ಪು ಎಸಗಿರುವ ಸಂಬಂಧಿತ ಇತರ ಅಧಿಕಾರಿಗಳ ಮೇಲೆಯೂ ಕ್ರಮ ಜರುಗಿಸಲು ಒತ್ತಾಯಿಸಿದ್ದಾರೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!