Kannadaಪರಿಸರ

ಒಣಗಿದ ಒಡಲು ಹಸಿರಿಗೆ ಸಿಡಿಲು ಅಬ್ಬರಿಸುತ್ತಿದೆ ಕಡಲು

ಪ್ರತಿವರ್ಷ ಜೂನ್‌ 5 ರಂದು “ವಿಶ್ವ ಪರಿಸರ ದಿನದ ಶುಭಾಶಯಗಳು” ಎಂದು ಹೇಳಿದರಷ್ಟೇ ನಮ್ಮ ಕರ್ತವ್ಯ ಮುಗಿಯಿತೇ? ಸರ್ಕಾರಗಳು ಸಹ ಈ ದಿನದಂದು ಸಮಾರಂಭ ಆಯೋಜಿಸುವುದರ ಹೊರತಾಗಿ ಗಮನಾರ್ಹ ಕೆಲಸಗಳನ್ನು ಮಾಡುತ್ತಿಲ್ಲ. ಕರ್ನಾಟಕವು ರಾಜಸ್ಥಾನದ ನಂತರ ಅತೀಹೆಚ್ಚು ಒಣಭೂಮಿ ಇರುವ ರಾಜ್ಯ. ಇದು ಎದುರಿಸುತ್ತಿರುವ ಪರಿಸರ ಸವಾಲು ಅನೇಕ. ವಿಶ್ವ ಪರಿಸರ ದಿನಾಚರಣೆ ಸಂದರ್ಭದಲ್ಲಿ ಅವುಗಳತ್ತ ಅವಲೋಕನ ಮಾಡಿ ಕಾರ್ಯಪ್ರವೃತ್ತರಾಗಬೇಕಾಗಿದೆ.

ಕರ್ನಾಟಕ ಇಂದು ಎದುರಿಸುತ್ತಿರುವ ಹಲವು ಪರಿಸರ ಸವಾಲುಗಳಲ್ಲಿ ಅತ್ಯಂತ ತೀವ್ರವಾಗಿ ಕಾಡುತ್ತಿರುವ ಸಮಸ್ಯೆ ಎಂದರೆ  “ವೇಗದ ನಗರೀಕರಣ,  ಹವಾಮಾನ ವೈಪರೀತ್ಯ, ಜಲಕ್ಷಾಮ ಅತೀಯಾದ ಅಂತರ್ಜಲ ಶೋಷಣೆ ಹಸಿರು ಹೊದಿಕೆಯ ನಾಶ” ಕಾವೇರಿ, ಕೃಷ್ಣಾ, ಶರಾವತಿಯಂತಹ ಜೀವ ನದಿಗಳ ತಾಯಿಯಾದ, ಪಶ್ಚಿಮ ಘಟ್ಟಗಳಂತಹ ಜಾಗತಿಕ ಜೀವವೈವಿಧ್ಯದ ತಾಣವನ್ನು ಹೊಂದಿರುವ ಕರ್ನಾಟಕ ಇಂದು ಅತ್ಯಂತ ಕಠಿಣ ಪರಿಸರ ಬಿಕ್ಕಟ್ಟನ್ನು ಎದುರಿಸುತ್ತಿದೆ. ಅದುವೇ ಮೊದಲೇ ಹೇಳಿದಂತೆ ಅನಿಯಂತ್ರಿತ ನಗರೀಕರಣದಿಂದ ಉಂಟಾಗುತ್ತಿರುವ ತೀವ್ರ ಜಲಕ್ಷಾಮ ಮತ್ತು ಹಸಿರು ಹೊದಿಕೆಯ ಕ್ಷೀಣತೆ.

ಕಾಂಕ್ರೀಟ್ ಕಾಡದ ನಗರಗಳು ಮತ್ತು ಅಂತರ್ಜಲ ಕುಸಿತ

ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಪ್ರಮುಖ ನಗರಗಳು ಇಂದು ನೀರಿನ ಕೊರತೆಯಿಂದ ತತ್ತರಿಸುತ್ತಿವೆ. ಕೆರೆಗಳ ಒತ್ತುವರಿ, ರಾಜಕಾಲುವೆಗಳ ನಾಶ ಮತ್ತು ಅವೈಜ್ಞಾನಿಕ ನಗರೀಕರಣದಿಂದಾಗಿ ಮಳೆ ನೀರು ಭೂಮಿಗೆ ಇಂಗುತ್ತಿಲ್ಲ. ಇದರ ಪರಿಣಾಮವಾಗಿ ಅಂತರ್ಜಲ ಮಟ್ಟ ಸಾವಿರ ಅಡಿಗಳಿಗಿಂತಲೂ ಕೆಳಗೆ ಕುಸಿದಿದೆ. ಬೇಸಿಗೆ ಬಂತೆಂದರೆ ಕುಡಿಯುವ ನೀರಿಗಾಗಿ ಟ್ಯಾಂಕರ್‌ಗಳ ಮುಂದೆ ಕಾಯುವ ಪರಿಸ್ಥಿತಿ ಕೇವಲ ನಗರಗಳಿಗಷ್ಟೇ ಅಲ್ಲ, ಗ್ರಾಮೀಣ ಭಾಗಗಳಿಗೂ ಹರಡುತ್ತಿದೆ. ಕೊಳವೆಬಾವಿ ನಿಯಂತ್ರಣ ಎನ್ನುವುದು ಕಾಗದದ ಮೇಲಷ್ಟೇ ಉಳಿದಿದೆ. ಎಗ್ಗುಸಿಗ್ಗಿಲ್ಲದೇ ಕೊಳವೆ ಬಾವಿ ಕೊರೆಯಿಸುವ ಕಾರ್ಯ ನಡೆಯುತ್ತಿದೆ. ಇದಕ್ಕೆ ಕಡಿವಾಣ ಹಾಕಲೇಬೇಕು.

ಪಶ್ಚಿಮ ಘಟ್ಟಗಳ ಮೇಲಿನ ಒತ್ತಡ ಮತ್ತು ಹವಾಮಾನ ವೈಪರೀತ್ಯ

ಕರ್ನಾಟಕದ ಮಳೆಗೆ ಮುಖ್ಯ ಆಧಾರವಾಗಿರುವ ಪಶ್ಚಿಮ ಘಟ್ಟಗಳು ಇಂದು ಅಭಿವೃದ್ಧಿಯ ಹೆಸರಿನಲ್ಲಿ ಮರಗಳ ಕಡಿತ, ರೆಸಾರ್ಟ್‌ಗಳ ನಿರ್ಮಾಣ ಮತ್ತು ರಸ್ತೆ ಅಗಲೀಕರಣದಿಂದಾಗಿ ನಲುಗುತ್ತಿವೆ. ಕಾಡುಗಳು ನಾಶವಾಗುತ್ತಿರುವುದರಿಂದ ಮಳೆಯ ವಿನ್ಯಾಸ (pattern) ಸಂಪೂರ್ಣ ಬದಲಾಗಿದೆ. ಒಂದೋ ತೀವ್ರ ಬರಗಾಲ, ಇಲ್ಲವೇ ಹಠಾತ್ ಮೇಘಸ್ಫೋಟದಂತಹ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗುತ್ತಿದೆ.

ಕಾಡ್ಗಿಚ್ಚು ಮತ್ತು ಜೀವವೈವಿಧ್ಯ ನಾಶ

ಬಂದೀಪುರ, ನಾಗರಹೊಳೆ ಸೇರಿದಂತೆ ರಾಜ್ಯದ ಪ್ರಮುಖ ಅರಣ್ಯಗಳು ಪ್ರತಿವರ್ಷ ಬೇಸಿಗೆಯಲ್ಲಿ ಕಾಡ್ಗಿಚ್ಚಿಗೆ ತುತ್ತಾಗುತ್ತಿವೆ. ಇದರಿಂದಾಗಿ ಅಪರೂಪದ ವನ್ಯಜೀವಿಗಳು, ಗಿಡಮೂಲಿಕೆಗಳು ನಾಶವಾಗುತ್ತಿದೆ. ಪರಿಸರದ ಸಮತೋಲನ ಸಂಪೂರ್ಣವಾಗಿ ಏರುಪೇರಾಗುತ್ತಿದೆ.

ಬಿಕ್ಕಟ್ಟಿಗೆ ಪರಿಹಾರಗಳೇನು? ಸಮಸ್ಯೆಗಳನ್ನಷ್ಟೇ ಮಾತನಾಡದೇ ಪರಿಹಾರವನ್ನೂ ಚರ್ಚಿಸಬೇಕಲ್ಲವೇ?  ನಮ್ಮ ಪರಿಸರವನ್ನು ಉಳಿಸಿಕೊಳ್ಳಲು ಮತ್ತು ಮುಂದಿನ ಪೀಳಿಗೆಗೆ ಸುರಕ್ಷಿತ ಕರ್ನಾಟಕವನ್ನು ನೀಡಲು ನಾವು ತಕ್ಷಣವೇ ಈ ಕೆಳಗಿನ ಕ್ರಮಗಳನ್ನು ಕೈಗೊಳ್ಳಲೇಬೇಕು

 ಮಳೆನೀರು ಕೊಯ್ಲು ಮತ್ತು ಕೆರೆಗಳ ಪುನಶ್ಚೇತನ: ಪ್ರತಿ ಮನೆ ಹಾಗೂ ವಾಣಿಜ್ಯ ಕಟ್ಟಡಗಳಲ್ಲಿ ಮಳೆನೀರು ಕೊಯ್ಲು (Rainwater Harvesting) ಕಡ್ಡಾಯಗೊಳಿಸಬೇಕು. ಕೇವಲ ಕಾನೂನಿಗೆ ಸೀಮಿತವಾಗದೆ ಕಟ್ಟುನಿಟ್ಟಾಗಿ ಜಾರಿಯಾಗಬೇಕು. ರಾಜ್ಯದ ಸಾವಿರಾರು ಸಾಂಪ್ರದಾಯಿಕ ಕೆರೆಗಳ ಹೂಳು ಎತ್ತಿ, ಒತ್ತುವರಿ ಮುಕ್ತಗೊಳಿಸಿ ಪುನಶ್ಚೇತನಗೊಳಿಸಬೇಕು.

 ಪಶ್ಚಿಮ ಘಟ್ಟಗಳ ರಕ್ಷಣೆ:  ಪಶ್ಚಿಮ ಘಟ್ಟಗಳ ಪರಿಸರ ಸೂಕ್ಷ್ಮ ವಲಯಗಳಲ್ಲಿ ವಾಣಿಜ್ಯ ಚಟುವಟಿಕೆಗಳಿಗೆ ಸಂಪೂರ್ಣ ಕಡಿವಾಣ ಹಾಕಬೇಕು. ಅಭಿವೃದ್ಧಿ ಮತ್ತು ಪರಿಸರದ ನಡುವೆ ಸಮತೋಲನ ಕಾಯ್ದುಕೊಳ್ಳುವುದು ಇಂದಿನ ತುರ್ತು ಅಗತ್ಯವಾಗಿದೆ.

 ಮರುಅರಣ್ಯೀಕರಣ ಮತ್ತು ನಗರ ಅರಣ್ಯಗಳು (Miyawaki Woods): ಕಡಿದು ಹಾಕಿದ ಪ್ರತಿ ಮರಕ್ಕೂ ಪ್ರತಿಯಾಗಿ ಹತ್ತು ಗಿಡಗಳನ್ನು ನೆಟ್ಟು ಪೋಷಿಸಬೇಕು. ನಗರಗಳಲ್ಲಿ ತಾಪಮಾನ ಕಡಿಮೆ ಮಾಡಲು ‘ಮಿಯಾವಾಕಿ’ ಪದ್ಧತಿಯ ಮೂಲಕ ಸಣ್ಣ ಕಾಡುಗಳನ್ನು ಬೆಳೆಸಬೇಕು. ತೀರಾ ಅನಿವಾರ್ಯತೆಯಿಂದ ಹೊಸದಾಗಿ ಆಗುವ ಬಡಾವಣೆಗಳಲ್ಲಿ ಪ್ರತಿ ಮನೆ ಮುಂದೆ ಎರಡು ಸಸಿಗಳನ್ನಾದರೂ ನೆಟ್ಟು ಬೆಳೆಸುವ ಜವಾಬ್ದಾರಿಯನ್ನು ಆಯಾ ಮನೆಯವರಿಗೆ ವಹಿಸಬೇಕು. ಇದಕ್ಕೆ ತಕ್ಕಂತೆ ಬಡಾವಣೆಯ ರಸ್ತೆ ವಿನ್ಯಾಸವಾಗಬೇಕು.

 ತ್ಯಾಜ್ಯ ನಿರ್ವಹಣೆ ಮತ್ತು ಜಲಮೂಲಗಳ ರಕ್ಷಣೆ: ಕೈಗಾರಿಕಾ ರಾಸಾಯನಿಕಗಳು ಮತ್ತು ನಗರದ ಒಳಚರಂಡಿ ನೀರು ಶುದ್ಧೀಕರಣಗೊಳ್ಳದೆ ನದಿ, ಕೆರೆಗಳಿಗೆ ಸೇರುವುದನ್ನು ತಡೆಯಬೇಕು. ಕಟ್ಟುನಿಟ್ಟಾದ ತ್ಯಾಜ್ಯ ವಿಲೇವಾರಿ ನಿಯಮಗಳು ಜಾರಿಗೆ ಬರಬೇಕು.

ಕಡಲು ಕೊರೆತ ಹೆಚ್ಚಾಗುತ್ತಲೇ ಇದೆ. ಇದನ್ನು ತಡೆಯಲು ಅಪಾರ ಹಣ ವೆಚ್ಚದಲ್ಲಿ ಮಾಡುತ್ತಿರುವ ಕಾಮಗಾರಿಗಳು ಪ್ರಯೋಜನಕ್ಕೆ ಬರುತ್ತಿಲ್ಲ. ಕಡಲಿನ ಭೂ ಆಕ್ರಮಭ ತಡೆಯಲು ಮ್ಯಾಂಗ್ರೋವ್‌ ಅರಣ್ಯ ಬೆಳೆಸುವುದರತ್ತ ಗಮನ ನೀಡಿಲ್ಲ ! ಇದೇ ದುಸ್ಥಿತಿಗೆ ಕಾರಣ. ಪ್ರವಾಸೋದ್ಯಮ ಕಾರಣದಿಂದಲೂ ಮ್ಯಾಂಗ್ರೋವ್‌ ಫಾರೆಸ್ಟ್‌ ಬೆಳೆಸುವುದರತ್ತ ಗಮನ ನೀಡಿಲ್ಲ. ಮೊದಲು ಸುರಕ್ಷತೆ ನಂತರ ಪ್ರವಾಸೋದ್ಯಮ ಎಂಬ ನೀತಿಗೆ ಬದ್ಧರಾಗಬೇಕು.

ಪರಿಸರ ರಕ್ಷಣೆ ಎನ್ನುವುದು ಕೇವಲ ಸರ್ಕಾರ ಅಥವಾ ಅರಣ್ಯ ಇಲಾಖೆಯ ಕೆಲಸವಲ್ಲ. ಇದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ. ನೀರಿನ ಮಿತ ಬಳಕೆ, ಪ್ಲಾಸ್ಟಿಕ್ ಮುಕ್ತ ಜೀವನಶೈಲಿ ಮತ್ತು ಸಸಿಗಳನ್ನು ನೆಟ್ಟು ಬೆಳೆಸುವ ಸಂಕಲ್ಪವನ್ನು ನಾವು ಇಂದಿನಿಂದಲೇ ಮಾಡಬೇಕಿದೆ.

“ಪ್ರಕೃತಿಯು ಮಾನವನ ಅಗತ್ಯಗಳನ್ನು ಪೂರೈಸಬಲ್ಲದೇ ಹೊರತು, ಅವನ ದುರಾಶೆಯನ್ನಲ್ಲ” ಎಂಬ ಮಹಾತ್ಮಾ ಗಾಂಧಿ ಅವರ ಮಾತು, “ಈ ಜಗತ್ತು ನಮಗೆ ನಮ್ಮ ಪೂರ್ವಜರಿಂದ ಬಂದ ಆಸ್ತಿಯಲ್ಲ, ಬದಲಿಗೆ ನಮ್ಮ ಮಕ್ಕಳಿಂದ ನಾವು ಪಡೆದ ಸಾಲ” ಎಂಬ ರೆಡ್‌ ಇಂಡಿಯನ್ಸ್‌ ಮಾತು ನೆನಪಿನಲ್ಲಿರಬೇಕು.  ಅವರಿಗೆ ಭೂಮಿಯನ್ನು ಸುಸ್ಥಿತಿಯಲ್ಲಿ ಮರಳಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ.  ಈ ಹಿನ್ನೆಲೆಯಲ್ಲಿ ಒಟ್ಟಾಗಿ – ಒಗ್ಗಟಾಗಿ ಹಸಿರು ಕರ್ನಾಟಕವನ್ನು ಮರು ಸೃಷ್ಟಿಸೋಣ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!