ಜವಾಬ್ದಾರಿ ಮರೆತ ಮಾಧ್ಯಮ; ಶಂಕರ್ ವಿಷಾದ
ಬೆಂಗಳೂರು: (ಜುಲೈ 17) ಸುದ್ದಿಗಳು ಸರಕುಗಳಾಗಿವೆ (News become a commodity) ಸುದ್ದಿ ಪತ್ರಿಕೆಗಳು ನ್ಯೂಸ್ ಮಾಲ್ ಆಗಿವೆ. ನೀವು ಓದಬೇಕು, ತೆಗೆದುಕೊಳ್ಳಬೇಕು ಮತ್ತು ದುಡ್ಡುಕೊಡಬೇಕು. ಇವತ್ತಿನ ಪತ್ರಿಕೋದ್ಯಮ ಹೇಗಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ಪತ್ರಕರ್ತರು ಬೇಜವಾಬ್ದಾರಿಗಳಲ್ಲ; ಪತ್ರಕರ್ತರು ಜವಾಬ್ದಾರರು ಆದರೆ ಪತ್ರಿಕೋದ್ಯಮ ಅಲ್ಲ. (Journalist are not irresponsible; journalist are responsible but journalism is not) ಎಂದು ಹಿರಿಯ ಪತ್ರಕರ್ತ ಎನ್. ಎಸ್. ಶಂಕರ್ ವಿಷಾದಿಸಿದರು.
ಕರ್ನಾಟಕ ಸರ್ಕಾರದ ಅರಣ್ಯ, ಜೀವಿ ಪರಿಸ್ಥಿತಿ ಮತ್ತು ಪರಿಸರ ಇಲಾಖೆ ಅಧೀನದಲ್ಲಿ ಕಾರ್ಯನಿರ್ವಹಿವ “ಪರಿಸರ ನಿರ್ವಹಣೆ ಮತ್ತು ನೀತಿ ನಿರೂಪಣಾ ಸಂಸ್ಥೆ” ಪತ್ರಕರ್ತರಿಗಾಗಿ ಆಯೋಜಿದ್ದ. “ಹವಾಮಾನ ನಿರೂಪಣೆಗಳನ್ನು ರಚಿಸುವುದು; ಸುಸ್ಥಿರ ಅಭಿವೃದ್ಧಿ ಮತ್ತು ಜವಾಬ್ದಾರಿಯುತ ಪತ್ರಿಕೋದ್ಯಮ” ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಪತ್ರಕರ್ತರಾದ ನಾವು ಸುತ್ತಮುತ್ತಲಿನ ಘಟನೆಗಳಿಗೂ ಹೇಗೆ ಪ್ರತಿಕ್ರಿಯಿಸಬೇಕು ಎಂಬ ಅರಿವು ಕಳೆದುಕೊಂಡಿದ್ದೇವೆ. ಉದಾಹರಣೆಗೆ ಎತ್ತಿನಹೊಳೆ ಯೋಜನೆ. ಅದರಿಂದ ಏನಾಗುತ್ತದೆ ಎಂಬುದನ್ನು ಅಧ್ಯಯನ ಮಾಡಿದ್ದೇವೆಯೇ ?ಮೇಕೆದಾಟು ಯೋಜನೆ ಎನ್ನುವುದು ರಾಜಕೀಯಾತ್ಮಕ ವಿಷಯ ಸರಿ ಆದರೆ ಅದನ್ನು ಬಿಟ್ಟು ಅದರಿಂದ ಏನೆಲ್ಲ ಪರಿಣಾಮಗಳಾಗುತ್ತವೆ ? ಪರಿಸರದ ಮೇಲೆ, ಮನುಷ್ಯರ ಮೇಲೆ ಏನೆಲ್ಲ ಪರಿಣಾಮಗಳಾಗುತ್ತದೆ, ಏನೆಲ್ಲ ಬೆಲೆ ತೆರಬೇಕಾಗುತ್ತದೆ ಎಂಬುದರ ಬಗ್ಗೆ ಅನಕ್ಷರಸ್ಥರಾಗಿದ್ದೇವೆ ಎಂದು ಹೇಳಲು ಬೇಸರವಾಗುತ್ತದೆ ಎಂದರು.
ಪ್ರಸ್ತುತ ಅನಕ್ಷರಸ್ಥ ಪತ್ರಿಕೋದ್ಯಮ ನಡೆಯುತ್ತದೆ. ಜಾಗತಿಕ ತಾಪಮಾನ ಏರಿಕೆಯಾದರೆ ಎಲ್ಲರಿಗೂ ಅದರ ಬಿಸಿ ತಟ್ಟುತ್ತದೆ. ಪತ್ರಕರ್ತರಿಗೂ ಹಾನಿಯಾಗುತ್ತದೆ. ಇವೆಲ್ಲ ಜನಸಾಮಾನ್ಯರನ್ನು ಬಾಧಿಸುವ ವಿಷಯಗಳು ಎಂದು ಪರಿಗಣಿಸಿ ಆ ಆಯಾಮದಿಂದ ಪತ್ರಕರ್ತರು ಸ್ಪಂದಿಸಬೇಕಾದ ಅವಶ್ಯಕತೆಯಿದೆ. ಅಂಥ ಅರಿವು ಮೂಡಿಸುವ ಪರಿಸರ ಕುರಿತ ಈ ಕಾರ್ಯಾಗಾರಕ್ಕೆ ಧನ್ಯವಾದ ಹೇಳುತ್ತೇನೆ ಎಂದರು.
“ಪರಿಸರ ನಿರ್ವಹಣೆ ಮತ್ತು ನೀತಿ ನಿರೂಪಣಾ ಸಂಸ್ಥೆ” (ಎಂಪ್ರಿ) ಯಿಂದ ಮೊದಲ ಬಾರಿಗೆ ಪತ್ರಕರ್ತರಿಗೆ ಪರಿಸರ ವಿಜ್ಞಾನದ ಕುರಿತು ಕಾರ್ಯಾಗಾರ ಆಯೋಜಿಸಿದ್ದೇವೆ. ಪರಿಸರದ ಬದಲಾವಣೆಗಳನ್ನು ಜನತೆಗೆ ತಲುಪಿಸುವಲ್ಲಿ ಮಾಧ್ಯಮದ ಪಾತ್ರ ಅಪಾರ. ಸರ್ಕಾರದ ಮಟ್ಟದಲ್ಲಿ ಏನಾಗುತ್ತಿದೆ. ಏನೆಲ್ಲ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುತ್ತದೆ ಮತ್ತು ಏಕೆ ತೆಗೆದುಕೊಳ್ಳಲಾಗುತ್ತಿದೆ ಎಂಬುದನ್ನೆಲ್ಲ ಮಾಧ್ಯಮದಿಂದ ಜನತೆಗೆ ನೇರವಾಗಿ ತಲುಪಿಸಲು ಸಾಧ್ಯವಾಗುತ್ತದೆ ಎಂದು “ಎಂಪ್ರಿ”ಯ ಮುಖ್ಯಸ್ಥರು, ಅಪರ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಜಾಗೃತ ದಳ) ಶಾಶ್ವತಿ ಮಿಶ್ರಾ, ಅಭಿಪ್ರಾಯಪಟ್ಟರು
ಪತ್ರಕರ್ತರು ಏನು ಪ್ರತಿಕ್ರಿಯೆ ಕೊಡುತ್ತಾರೆ ಎಂಬುದು ಬಹಳ ಮುಖ್ಯವಾಗಿರುತ್ತದೆ. ಆಗ ವಿಷಯದ ಬಗ್ಗೆ ಮೂಲಭೂತ ಜ್ಞಾನ ಎನ್ನುವುದು ಅಗತ್ಯವಾಗಿರುತ್ತದೆ. ಉದಾಹರಣೆಗೆ ಹೇಳುವುದಾದರೆ ವನ್ಯಜೀವನದ ಬಗ್ಗೆ ಬಹಳಷ್ಟು ಜನ ಬರೆಯುತ್ತಾರೆ. ಇತ್ತೀಚಿನ ವರ್ಷಗಳಲ್ಲಿ ಮಾನವ – ವನ್ಯಪ್ರಾಣೀ ಸಂಘರ್ಷ ತುಂಬ ಜಾಸ್ತಿಯಾಗುತ್ತಿದೆ. ಇದನ್ನೆಲ್ಲ ಬರೆಯುವಾಗ ವೈಜ್ಞಾನಿಕ ಮಾಹಿತಿಗಳು ಗೊತ್ತಿರುವುದು ಸೂಕ್ತ. ಇಲ್ಲದಿದ್ದರೆ ಸಮತೋಲಿತ ನೋಟ ಹೊಂದುವುದು ಬಹಳ ಕಷ್ಟ ಎಂದು ಶಾಶ್ವತಿ ಮಿಶ್ರಾ ಪ್ರತಿಪಾದಿಸಿದರು.
ಪರಿಸರದ ಪರಿಸ್ಥಿತಿಗಳನ್ನು ಸುಧಾರಿಸುವಲ್ಲಿ ಸರ್ಕಾರದ ಪಾತ್ರವಷ್ಟೇ ಮುಖ್ಯವಾಗಿರುವುದಿಲ್ಲ; ಎಲ್ಲರ ಪಾತ್ರವೂ ಮುಖ್ಯವಾಗಿರುತ್ತದೆ. ವಿದ್ಯಾರ್ಥಿಗಳು, ಶಿಕ್ಷಕರು, ಪೋಷಕರು ಮತ್ತು ಮಾಧ್ಯಮ ಹೀಗೆ ಎಲ್ಲರ ಪಾತ್ರವೂ ಇದೆ. ಎಲ್ಲರೂ ತಮ್ಮತಮ್ಮ ಪಾತ್ರಗಳನ್ನು ನಿರ್ವಹಣೆ ಮಾಡಿದರೆ ಮಾತ್ರ ಉತ್ತಮ ಸಮಾಜ ರೂಪಿಸಲು ಸಾಧ್ಯವಾವಾಗುತ್ತದೆ ಎಂದು ಅಪರ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಜಾಗೃತ ದಳ) ಶಾಶ್ವತಿ ಮಿಶ್ರಾ, ಹೇಳಿದರು.
ಇದೇ ಸಂದರ್ಭದಲ್ಲಿ ಕರ್ನಾಟಕ ರಾಜ್ಯದ ಬೇರೆಬೇರೆ ಜಿಲ್ಲೆಗಳಿಂದ ಬಂದು ಮೂರು ದಿನದ ಕಾರ್ಯಾಗಾರದಲ್ಲಿ ಭಾಗವಹಿಸಿದ್ದ ಪತ್ರಕರ್ತರಿಗೆ ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು. ಪರಿಸರ ತಜ್ಞ ವಿ.ಜೆ. ಜಗನ್ನಾಥ, “ಪರಿಸರ ನಿರ್ವಹಣೆ ಮತ್ತು ನೀತಿ ನಿರೂಪಣಾ ಸಂಸ್ಥೆ” (ಎಂಪ್ರಿ) ಯ ನಿರ್ದೇಶಕ ಡಾ. ಪ್ರಮೋದ ಕಟ್ಟಿ ಹಾಜರಿದ್ದರು. ಎಂಪ್ರಿಯ ನಿರ್ದೇಶಕ ಟಿ.ಮಹೇಶ್ ಸ್ವಾಗತಿಸಿದರು.
