ಪರಿಸರ

ನಾಡಿನ ಕಾಡುಗಳಿಗೆ ಜಾನುವಾರುಗಳಿಂದ ಸಿಕ್ತು ಮುಕ್ತಿ

ಜೂನ್‌ 26, 2025ರಂದು ಮಲೆ ಮಹದೇಶ್ವರ ಕಾಡಿನಲ್ಲಿ ಐದು ಹುಲಿಗಳಿಗೆ ಘಾತುಕರು ವಿಷ ಹಾಕಿ ಕೊಂದ ಪ್ರಕರಣ ಬೆಳಕಿಗೆ ಬಂತು. ಇದಕ್ಕೆ ಮುಖ್ಯ ಕಾರಣ ಕಾಡಿಗೆ ಮೇಯಲು ಹೋದ ಹಸುವನ್ನು ಹುಲಿ ಹಿಡಿಯಿತು ಎನ್ನುವುದೇ ನೆಪವಾಗಿತ್ತು. ಬಹುಶಃ ಮುಚ್ಚಿ ಹೋಗಬಹುದಾಗಿದ್ದ ದುರ್ಘಟನೆ ಹೇಗೋ ಬೆಳಕಿಗೆ ಬಂತು. ಬೆಳಕಿಗೆ ಬಾರದೇ ಇರುವ ಪ್ರಕರಣಗಳ ಸಂಖ್ಯೆ ಎಷ್ಟಿವೆಯೋ ?

ತಮಿಳುನಾಡಿನಲ್ಲಿ ಸಾಮಾನ್ಯವಾಗಿ ಎಲ್ಲ ಬಗೆಯ ಕಾಡುಗಳಲ್ಲಿಯೂ ಜಾನುವಾರುಗಳ ಪ್ರವೇಶ ನಿಷೇಧಿಸಿದ್ದಾರೆ. ಪರಂಪರಾಗತವಾಗಿ ಜಾನುವಾರು ಸಾಕಣೆ ಮಾಡಿಕೊಂಡು ಬರುತ್ತಿರುವ ಕೆಲವೇ ಕಾಡುಗಳ (ಹುಲಿ ಸಂರಕ್ಷಿತಾರಣ್ಯ, ವನ್ಯಜೀವಿಧಾಮ ಹೊರತುಪಡಿಸಿ) ಅಂಚಿನಲ್ಲಿ ಮೇವಿಗೆ ಅವಕಾಶ ನೀಡಲಾಗಿದೆ. ಆದರೆ ಕರ್ನಾಟಕದ ಕಾಡುಗಳಲ್ಲಿ ಹುಲಿ ಸಂರಕ್ಷಿತಾರಣ್ಯ ಹೊರತುಪಡಿಸಿ ಎಲ್ಲ ವನ್ಯಜೀವಿಧಾಮಗಳಲ್ಲಿ ಜಾನುವಾರು ಮೇಯಲು ಅವಕಾಶವಿತ್ತು.

ಇದರಿಂದ ಪ್ರತಿದಿನವೂ ಅಗಾಧ ಸಂಖ್ಯೆಯಲ್ಲಿ ಜಾನುವಾರುಗಳು ಅಂದರೆ ದನಗಳು, ಎಮ್ಮೆಗಳು, ಮೇಕೆಗಳನ್ನು ಅಕ್ಷರಶಃ ಸಾವಿರಾರು ಸಂಖ್ಯೆಯಲ್ಲಿ ಕಾಡಿಗೆ ನುಗ್ಗಿಸಲಾಗುತ್ತಿತ್ತು. ಇವುಗಳಿಂದ ವನ್ಯಜೀವಿಗಳಾದ ಜಿಂಕೆ, ಕಡವೆ, ಆನೆ ಇತ್ಯಾದಿ ಸಸ್ಯಹಾರಿಗಳಿಗೆ ಮೇವಿನ ಅಭಾವ ಉಂಟಾಗುತ್ತಿತ್ತು. ಪರಿಣಾಮ ಅವುಗಳ ಸಂಖ್ಯೆ ವೃದ್ದಿಸುತ್ತಿರಲಿಲ್ಲ. ಜಾನುವಾರು ಸಣ್ಣಸಣ್ಣ ಗಿಡಗಳನ್ನೂ ಬಿಡದೇ ಮೇಯುತ್ತಿದ್ದರಿಂದ ಕಾಡು ಸಹ ಸಮೃದ್ಧವಾಗುತ್ತಿರಲಿಲ್ಲ. ಆದರೂ ಅರಣ್ಯಾಧಿಕಾರಿಗಳು ಇದುವರೆಗೂ ಅವುಗಳ ಬಗ್ಗೆ ಚಿಂತನೆಯನ್ನೇ ಮಾಡಿರಲಿಲ್ಲ !!

ಪ್ರಸ್ತುತ ರಾಜ್ಯದಲ್ಲಿರುವ ಎಲ್ಲ ಅರಣ್ಯ ಪ್ರದೇಶದೊಳಗೆ ದನಕರು, ಮೇಕೆ, ಕುರಿ ಮೇಯಿಸುವುದನ್ನು ನಿಷೇಧಿಸಲು ನಿಯಮಾನುಸಾರ ಕ್ರಮ ವಹಿಸುವಂತೆ ಅರಣ್ಯ ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಕಟ್ಟುನಿಟ್ಟಿನ  ಸೂಚನೆ ನೀಡಿದ್ದಾರೆ.

“ದೊಡ್ಡ ಸಂಖ್ಯೆಯಲ್ಲಿ ಜಾನುವಾರುಗಳನ್ನು ಅರಣ್ಯ ಪ್ರದೇಶದೊಳಗೆ ಮೇಯಲು ಬಿಡುವುದರಿಂದ ಕಾಡಿನಲ್ಲಿ ಆಗಷ್ಟೇ ಮೊಳಕೆ ಒಡೆದ ಚಿಕ್ಕಪುಟ್ಟ ಸಸಿಗಳು ಸಾಕು ಪ್ರಾಣಿಗಳಿಗೆ ಆಹಾರವಾಗಿ,  ಅರಣ್ಯದಲ್ಲಿ ಹೊಸ ಗಿಡಗಳು ಬೆಳೆಯದೆ, ಅರಣ್ಯ ಸಂವರ್ಧನೆಗೆ ಅಡ್ಡಿಯಾಗುತ್ತಿದೆ.  ಮಿಗಿಲಾಗಿ ಊರಿನಿಂದ ಕಾಡಿಗೆ ಮೇಯಲು ಹೋಗುವ ಪ್ರಾಣಿಗಳಿಂದ ವನ್ಯಜೀವಿಗಳು ಸಾಂಕ್ರಾಮಿಕ ರೋಗಗಳಿಗೆ ತುತ್ತಾಗುವ ಸಾಧ್ಯತೆಯೂ ಇರುತ್ತದೆ ಎಂಬ ಅಂಶವನ್ನೂ ಉಲ್ಲೇಖಿಸಿದ್ದಾರೆ.

“ಅರಣ್ಯ ಸಂವರ್ಧನೆಯಾಗದಿದ್ದರೆ ಅದು ಆ ಅರಣ್ಯದಲ್ಲಿ ಹರಿಯುವ ನದಿಗಳ ಮೇಲೂ ಪರಿಣಾಮ ಬೀರುತ್ತದೆ. ಇದರಿಂದ ವನ್ಯಜೀವಿ-ಮಾನವ ಸಂಘರ್ಷ ಹೆಚ್ಚಳವಾಗುತ್ತದೆ, ಕಾಡಿನೊಳಗೆ ಹೋಗುವ ದನಗಾಹಿಗಳು ವನ್ಯಜೀವಿ ದಾಳಿಯಿಂದ ಮೃತಪಟ್ಟರೆ ಪರಿಹಾರ ನೀಡಲೂ ನಿಯಮದಲ್ಲಿ ಅವಕಾಶ ಇರುವುದಿಲ್ಲ. ಹೀಗಾಗಿ ಕೂಡಲೇ ಅಭಯಾರಣ್ಯಗಳಲ್ಲಿ ಮೇಕೆ, ಕುರಿ, ದನಕರುಗಳನ್ನು ಮೇಯಿಸುವುದನ್ನು ನಿಷೇಧಿಸುವುದರ ಅತ್ಯಗತ್ಯವಿದೆ” ಎಂದಿದ್ದಾರೆ.

ಕಾಡಿನಲ್ಲಿರುವ ವನ್ಯಜೀವಿಗಳು ಮೇಯಲು ಹೋದ ದನಕರುಗಳನ್ನು ಕೊಂದಾಗ, ಆಕ್ರೋಶಗೊಂಡು ಕೆಲವರು ಮೃತ ಜಾನುವಾರುಗಳಿಗೆ ವಿಷಹಾಕುವ ಕಾರಣ ವನ್ಯಜೀವಿಗಳು ಸಾವಿಗೀಡಾಗುತ್ತವೆ. ಇದಕ್ಕೆ ಇತ್ತೀಚೆಗೆ ಹೂಗ್ಯಂ ವಲಯದಲ್ಲಿ ಒಂದು ತಾಯಿ ಹುಲಿ ಮತ್ತು ನಾಲ್ಕು ಮರಿ ಹುಲಿಗಳು ಸಾವಿಗೀಡಾಗಿರುವುದೇ ಸಾಕ್ಷಿಯಾಗಿದೆ ಎಂದೂ ಪರಿಸರ ಪ್ರೇಮಿಗಳು ಅಭಿಪ್ರಾಯಪಟ್ಟಿರುತ್ತಾರೆ ಎಂದು ಅದೇಶದಲ್ಲಿ ಉಲ್ಲೇಖಿಸಿದ್ದಾರೆ.

Eswara Khandre
ಜಾನುವಾರುಗಳನ್ನು ಕಾಡಿನೊಳಗೆ ಬಿಡದಂತೆ ಅರಣ್ಯ ಸಚಿವರ ಆದೇಶ
Forest Eswara Khandre
ಜಾನುವಾರುಗಳನ್ನು ಕಾಡಿನೊಳಗೆ ಬಿಡದಂತೆ ಅರಣ್ಯ ಸಚಿವರ ಆದೇಶ ಪುಟ ೨

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!