ಪರಿಸರ

ಅರಣ್ಯ ಸುರಕ್ಷತೆ ನಿಯಮಗಳನ್ನು ಗಾಳಿಗೆ ತೂರಲಾಗುತ್ತಿದೆಯೇ ?

ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರು ಅಕ್ಟೋಬರ್ ೧೭ ರಂದು ಅರಣ್ಯ ಇಲಾಖೆಗೆ ಸೂಚನೆಯೊಂದನ್ನು ನೀಡಿದರು. ಅದರ ಹೇಳಿಕೆಯನ್ನು ಮಾಧ್ಯಮಗಳಿಗೆ ಕೂಡ ಬಿಡುಗಡೆ ಮಾಡಿದ್ದರು. ಅಂದೇ ನಾನು ಅದನ್ನು “ಕುಮಾರ ರೈತ ಡಾಟ್ ಕಾಮ್” ನಲ್ಲಿ ಪ್ರಕಟಿಸಿದ್ದೆ ! ಅದರ ವಿವರ ಮುಂದಿದೆ !

ಹುಲಿ, ಆನೆ ಸೇರಿದಂತೆ ಯಾವುದೇ ವನ್ಯಜೀವಿಯ ಸೆರೆ ಅಥವಾ ಕಾಡಿಗಟ್ಟುವ ಕಾರ್ಯಾಚರಣೆ ವೇಳೆ ಪ್ರಮಾಣಿತ ಕಾರ್ಯವಿಧಾನ (ಎಸ್.ಓ.ಪಿ.) ರೂಪಿಸಿ ಅದನ್ನು ಕಡ್ಡಾಯವಾಗಿ ಪಾಲಿಸಿ. ಕಾರ್ಯಾಚರಣೆ ನಡೆಸುವ ಮುನ್ನ ಸಾರ್ವಜನಿಕರನ್ನು ಸ್ಥಳದಿಂದ ಕಳುಹಿಸಬೇಕು ಮತ್ತು ಮೊದಲೇ ಕಾರ್ಯಾಚರಣೆಯ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಬೇಕು. ಅರಣ್ಯ ಇಲಾಖೆ ಅಧಿಕಾರಿ ಮತ್ತು ಸಿಬ್ಬಂದಿಯ ನಿರ್ಲಕ್ಷ್ಯ ಘಟನೆಗೆ ಕಾರಣವಾಗಿದ್ದರೆ ನಿಯಮಾನುಸಾರ ಶಿಸ್ತು ಕ್ರಮ ಜರುಗಿಸಲಾಗುವುದು.

ಅರಣ್ಯ ಸಚಿವರು ಈ ರೀತಿ ಕಟ್ಟುನಿಟ್ಟಿನ ಸೂಚನೆಯನ್ನು ಹೊರಡಿಸಲೂ ಕಾರಣವಿದೆ ಅಥವಾ ಕಾರಣಗಳಿವೆ. ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿಯ ನುಗು ವನ್ಯಜೀವಿ ವಲಯದ ಅರಣ್ಯ ಪ್ರದೇಶದ ಅಂಚಿನ ಸ್ಥಳಗಳಲ್ಲಿ ಹುಲಿಯೊಂದು ಸಂಚರಿಸುತ್ತಿತ್ತು ! ಗ್ರಾಮದಂಚಿನಲ್ಲಿಯೇ ಓಡಾಡುತ್ತಿದ್ದ ಕಾರಣ ಅಲ್ಲಿಯ ನಿವಾಸಿಗಳು ಸಹಜವಾಗಿಯೇ ಆತಂಕಗೊಂಡಿದ್ದರು. ಅಕ್ಟೋಬರ್ 16ರಂದು ಅರಣ್ಯ ಇಲಾಖೆ ಅದನ್ನು ಹಿಡಿಯುವ ಕಾರ್ಯಾಚರಣೆಯನ್ನು ನಡೆಸುತ್ತಿತ್ತು. ಆಗ ಸರಗೂರು ತಾಲೂಕು ಬಡಗಲಪುರದ ಬಳಿ ಹೊಲದಲ್ಲಿ ಕೆಲಸ ಮಾಡುತ್ತಿದ್ದ ರೈತ ಮಹದೇವ ಎಂಬುವವರ ಮೇಲೆ ಹುಲಿ ದಾಳಿ ಮಾಡಿತು. ಇದರಿಂದ ಅವರ ಮುಖ, ಕಣ್ಣುಗಳಿಗೆ ತೀವ್ರ ಸ್ವರೂಪದ ಗಾಯಗಳಾದವು. ಶಾಶ್ವತವಾಗಿ ದೃಷ್ಟಿಯನ್ನೇ ಕಳೆದುಕೊಂಡರು.

Tiger Attack 1
ಹುಲಿ ದಾಳಿಯಿಂದ ತೀವ್ರ ಗಾಯಗೊಂಡು, ದೃಷ್ಟಿ ಕಳೆದುಕೊಂಡಿರುವ ಕೃಷಿಕ

ದುರ್ಘಟನೆ ನಡೆದ ತಕ್ಷಣವೇ ಸಚಿವ ಈಶ್ವರ್ ಖಂಡ್ರೆ ಸ್ಪಂದಿಸಿದರು. ಗಾಯಾಳು ತುರ್ತುಚಿಕಿತ್ಸೆಗೆ ವ್ಯವಸ್ಥೆ ಮಾಡಲು, ಪರಿಹಾರ ನೀಡಲು ಸೂಚಿಸಿದರು. ಅರಣ್ಯ ಇಲಾಖೆಯು ಕಡ್ಡಾಯವಾಗಿ ಅನುಸರಿಸಬೇಕಾದ ಎಸ್.ಓ.ಪಿ. ಬಗ್ಗೆಯೂ ಸೂಚನೆ ನೀಡಿದರು.

ಇಲ್ಲಿ ಪ್ರಶ್ನೆಗಳು ಉದ್ಬವಿಸುವುದು ವನ್ಯಜೀವಿಗಳನ್ನು ಸೆರೆ ಹಿಡಿಯುವ ವೇಳೆ ಅಥವಾ ಕಾಡಿನ ಒಳಗೆ ಅಟ್ಟುವ ವೇಳೆ ಅನುಸರಿಸಲೇಬೇಕಾದ ಪ್ರಮಾಣಿತ ಕಾರ್ಯವಿಧಾನ (ಎಸ್.ಓ.ಪಿ.)ಯನ್ನು ಕರ್ನಾಟಕ ಅರಣ್ಯ ಇಲಾಖೆ ಏಕೆ ಪಾಲಿಸಿಲ್ಲ ? ಕಾರ್ಯಾಚರಣೆ ನಡೆಯುವ ಮುನ್ನ ಮತ್ತು ನಡೆಯುವ ವೇಳೆ ಸಿ.ಸಿ.ಎಫ್. ಮಟ್ಟದ ಅಧಿಕಾರಿಗಳೂ ಹಾಜರಿದ್ದು ಸೂಚನೆ, ಮಾರ್ಗದರ್ಶನ ನೀಡಬೇಕಿತ್ತಲ್ಲವೇ ? ಏಕೆ ಈ ಕಾರ್ಯಗಳನ್ನು ಮಾಡಿಲ್ಲ ? ಇದರ ಬಗ್ಗೆಯೂ ಅರಣ್ಯ ಸಚಿವರು ಹೇಳುವಂಥ ಸನ್ನಿವೇಶ ಏಕೆ ಸೃಷ್ಟಿಯಾಯಿತು ?

ಹೆಚ್.ಡಿ. ಕೋಟೆ ಸುತ್ತಮುತ್ತಲಿನ ಪರಿಸರದಲ್ಲಿ ಕನಿಷ್ಠ ಆರು ಅಸ್ಥಿರ ಹುಲಿಗಳು ಮೂಲಸ್ಥಳದಿಂದ ಸ್ಥಳಾಂತರಗೊಂಡಿವೆ ಎಂದು ಹೇಳಲಾಗುತ್ತಿದೆ. ಅದರಲ್ಲಿ ಒಂದು ಹುಲಿಯನ್ನು ಸೆರೆಹಿಡಿದು ಬನ್ನೇರುಘಟ್ಟದಲ್ಲಿರುವ ಪುನರ್ವಸತಿ ಕೇಂದ್ರಕ್ಕೆ ಕಳುಹಿಸಲಾಗಿದೆ. ಮೂಲಸ್ಥಳದಿಂದ ಹುಲಿಗಳು ಸ್ಥಳಾಂತರ ಆಗುವುದಕ್ಕೂ ಕಾರಣಗಳಿರುತ್ತವೆ. ಅವುಗಳನ್ನು ಅರಣ್ಯ ಇಲಾಖೆ ನಿರಂತರವಾಗಿ ಅಧ್ಯಯನ ಮಾಡುತ್ತಿರಬೇಕು. ತೊಂದರೆಗಳು ಸಂಭವಿಸುವ ಮುನ್ನವೇ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬೇಕು. ಹೀಗೆ ಏಕೆ ಆಗುತ್ತಿಲ್ಲ ?

ರಾತ್ರಿವೇಳೆಯೂ ಕೂಡ ಅರಣ್ಯ ಇಲಾಖೆ ಹುಲಿ ಹಿಡಿಯುವ ಕಾರ್ಯಾಚರಣೆ ಮಾಡುತ್ತದೆ ಎಂಬ ಆರೋಪಗಳೂ ಇವೆ. ಎನ್. ಟಿ. ಸಿ. ಎ. ಮಾರ್ಗಸೂಚಿಗಳ ಬಗ್ಗೆ ಅರಣ್ಯತಜ್ಞ ಜೋಸೆಫ್ ಹೂವರ್ ಅವರು ವಿವರವಾಗಿ ಹೇಳಿದ್ದು ಅದು ಮುಂದಿದೆ.

ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರವು (ಎನ್. ಟಿ. ಸಿ. ಎ) ರಾತ್ರಿ ವೇಳೆಯಲ್ಲಿ ಹುಲಿಗಳನ್ನು ಹಿಡಿಯಲು ಅನುಮತಿ ನೀಡುವುದಿಲ್ಲ. ಅದರ ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್ಸ್ (ಎಸ್ಒಪಿ) ಹುಲಿಗಳ ದೈಹಿಕ ನಿರ್ವಹಣೆಯನ್ನು ಒಳಗೊಂಡಿರುವ ಎಲ್ಲಾ ಕಾರ್ಯಾಚರಣೆಗಳನ್ನು-ಮರಣೋತ್ತರ ಪರೀಕ್ಷೆ ಮತ್ತು ಮೇಲ್ವಿಚಾರಣೆ ಸೇರಿದಂತೆ-ಸುರಕ್ಷತೆ ಮತ್ತು ಕಾನೂನು ಕಾರಣಗಳಿಗಾಗಿ ಹಗಲು ಹೊತ್ತಿನಲ್ಲಿ ನಡೆಸಬೇಕು ಎಂದು ಒತ್ತಿಹೇಳುತ್ತದೆ. ದಾರಿ ತಪ್ಪಿದ ಹುಲಿಗಳ ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್ (2013) ಎನ್. ಟಿ. ಸಿ. ಎ. ಯ ಎಸ್. ಓ. ಪಿ. ಯು‌ ಅಲೆದಾಡುವ ಹುಲಿಗಳನ್ನು ಎದುರಿಸಲು ಮಾನವ-ಪ್ರಾಣಿ ಸಂಘರ್ಷಕ್ಕೆ ಕಾರಣವಾಗುವ ವನ್ಯಜೀವಿಗಳನ್ನು ಸೆರೆಹಿಡಿಯುವ ಶಿಷ್ಟಾಚಾರವನ್ನು ಸ್ಪಷ್ಟವಾಗಿ ವಿವರಿಸುತ್ತದೆ. ಸೆರೆಹಿಡಿಯಲು ಅನ್ವಯವಾಗುವ ಪ್ರಮುಖ ಮಾರ್ಗಸೂಚಿಗಳಿವೆ.ಹಗಲಿನಲ್ಲಿ ಮಾತ್ರ ಕಾರ್ಯಾಚರಣೆ ನಡೆಸಬೇಕು ಎಂದು ಹೇಳಲಾಗಿದೆ. ಒಂದು ವೇಳೆ ಹುಲಿ ಸಿಕ್ಕಿಬೀಳಬೇಕಾದರೆ, ಹಗಲಿನ ವೇಳೆಯಲ್ಲಿ ಈ ಪ್ರಕ್ರಿಯೆಯನ್ನು ನಡೆಸಬೇಕು. ಮರಣೋತ್ತರ ಪರೀಕ್ಷೆ ಮತ್ತು ಇತರ ಕಾರ್ಯವಿಧಾನಗಳನ್ನು ಸಹ ಹಗಲು ಹೊತ್ತಿನ ಸಮಯಕ್ಕೆ ಸೀಮಿತಗೊಳಿಸಲಾಗಿದೆ. ರಾತ್ರಿಯ ಕಾರ್ಯಾಚರಣೆಗಳು ಪ್ರಾಣಿ ಮತ್ತು ಒಳಗೊಂಡಿರುವ ಸಿಬ್ಬಂದಿ ಇಬ್ಬರಿಗೂ ಹೆಚ್ಚಿನ ಅಪಾಯವನ್ನುಂಟುಮಾಡುತ್ತವೆ. ಕಡಿಮೆ ದೃಷ್ಟಿ ಗೋಚರತೆಯು ದೋಷ, ತಪ್ಪು ನಿರ್ಣಯ ಮತ್ತು ಅನಪೇಕ್ಷಿತ ಹಾನಿಯ ಸಾಧ್ಯತೆಗಳನ್ನು ಹೆಚ್ಚಿಸುತ್ತದೆ. ರಾತ್ರಿಯಲ್ಲಿ ಕೃತಕ ಬೆಳಕು, ಇತರ ಮಾನವ-ನೇತೃತ್ವದ ಚಟುವಟಿಕೆಗಳು ಪ್ರಾಣಿಗಳ ಮೇಲೆ ತೀವ್ರ ಒತ್ತಡವನ್ನು ಉಂಟು ಮಾಡಬಹುದು. ವನ್ಯಜೀವಿ ನಿರ್ವಹಣೆಯ ನೈತಿಕ ಮಾನದಂಡಗಳ ಉಲ್ಲಂಘನೆಯಾಗಬಹುದು.

ಎರಡನೇ ಪ್ರಕರಣವನ್ನು ನಿಮ್ಮ ಮುಂದೆ ಇಡುತ್ತೇನೆ. ಅದೇನೆಂದರೆ ಇತ್ತೀಚೆಗೆ ಬಂಡಿಪುರ ಹುಲಿ ಮೀಸಲು ಅರಣ್ಯದ ತವಾರೆ ಕಟ್ಟೆ ಟೆಂಪ್ಲರ್ಲೆ ಸಫಾರಿ ರಸ್ತೆಯಲ್ಲಿ ಖಾಸಗಿ ಜೀಪು ಅಕ್ರಮವಾಗಿ ಪ್ರವೇಶಿಸಲು ಅನುವು ಮಾಡಿಕೊಟ್ಟಿರುವುದು. ಇದರ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಈ ಘಟನೆ ಬಗ್ಗೆಯೂ ಅರಣ್ಯ ಮತ್ತು ವನ್ಯಜೀವಿಗಳ ಸುರಕ್ಷತೆ ಬಗ್ಗೆ ಕಾಳಜಿ ಹೊಂದಿದವರು ಆತಂಕ ವ್ಯಕ್ತಪಡಿಸಿದ್ದಾರೆ. ಅರಣ್ಯ ಇಲಾಖೆ ನಿಯಮಗಳ ಪ್ರಕಾರ ಹುಲಿಧಾಮದೊಳಗೆ ಖಾಸಗಿ ವಾಹನಗಳಿಗೆ ಪ್ರವೇಶವಿಲ್ಲ. ಒಂದುವೇಳೆ ಹೋಗಲೇಬೇಕಾದ ಸ್ಥಿತಿ ಇದ್ದರೆ ಖಾಸಗಿ ವ್ಯಕ್ತಿಗಳೊಂದಿಗೆ ಅರಣ್ಯ ಇಲಾಖೆಯ ಸಿಬ್ಬಂದಿ ಇರಲೇಬೇಕು. ಇದ್ಯಾವ ಕ್ರಮಗಳೂ ಆಗಿಲ್ಲ.

ಇಂಥ ದುರ್ಘಟನೆಗಳು ಪದೇಪದೇ ನಡೆಯುತ್ತಿವೆ. ಇವುಗಳು ಅರಣ್ಯದ ಸುರಕ್ಷತಾ ನಿಯಮಗಳನ್ನು ಗಾಳಿಗೆ ತೂರಲಾಗುತ್ತಿದೆ ಎಂಬುದಕ್ಕೆ ನಿದರ್ಶನಗಳು. ನಿಯಮಗಳನ್ನು ಜಾರಿ ಮಾಡಬೇಕಾದ ಹೊಣೆ ಹೊತ್ತ ಅರಣ್ಯ ಇಲಾಖೆಯೇ ಹೀಗೆ ನಿರ್ಲಕ್ಷ್ಯ ಮಾಡಿದರೆ ಅರಣ್ಯವನ್ನು ರಕ್ಷಿಸುವವರು ಯಾರು ?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!