Home ಪರಿಸರತೇಜಸ್ವಿಗೆ ಚಾರ್ಮಾಡಿ ಕಣಿವೆಗಳ ಕಾಡುಗಳ ಕುರಿತು ಇದ್ದ ಆತಂಕವೇನು ?

ತೇಜಸ್ವಿಗೆ ಚಾರ್ಮಾಡಿ ಕಣಿವೆಗಳ ಕಾಡುಗಳ ಕುರಿತು ಇದ್ದ ಆತಂಕವೇನು ?

by Kumara Raitha
0 comments

ತೇಜಸ್ವಿ ಅವರೊಂದಿಗೆ “ನಿರುತ್ತರ” ದಲ್ಲಿ ಗಂಟೆಗಟ್ಟಲೇ ಕುಳಿತು ಮಾತನಾಡಿದ್ದೇನೆ. ರಾಜೇಶ್ವರಿ ಅವರು ಕೊಳಗದಂಥ ಲೋಟಗಳಲ್ಲಿ ಕಾಫಿ ತಂದಾಗ ನಾನು, ಸ್ನೇಹಿತರು “ಇಷ್ಟೊಂದು ಕಾಫಿ ಕುಡಿಯಲ್ಲ” ಎಂದು ರಾಗ ಎಳೆಯುತ್ತಿದ್ದೆವು ! ಆಗ ತೇಜಸ್ವಿ ಅವರು ” ಮುಚ್ಕಂಡು ಕುಡಿರಯ್ಯ, ಅಷ್ಟು ದೊಡ್ಡ ಬಾಟಲ್ ಬಿಯರ್ ಕುಡೀತೀರಿ, ಕಾಫಿ ಕುಡಿಯೋಕೆ ಆಗೋಲ್ವ” ಎಂದು ಪ್ರೀತಿಯಿಂದ ಗದರುತ್ತಿದ್ದರು. ಟ್ರೆಕ್ಕಿಂಗ್ ಹೋದಾಗ ಲ್ಯಾಂಡ್ ಲೈನಿಗೆ ಕಾಲ್  ಮಾಡಿದರೆ ಅದೃಷ್ಟಕ್ಕೆ ತೇಜಸ್ವಿ ಅವರೇ ಪೋನ್ ರಿಸೀವ್ ಮಾಡುತ್ತಿದ್ದರು. ಸರ್ ಹೀಗೀಗೆ ಬಂದಿದ್ದು, ಮನೆಗೆ ಬರ್ತೀನಿ” ಎಂದರೆ “ಬೇಡ ಎಂದರೆ ಎಲ್ಲಿ ಬಿಡ್ತೀಯಾ, ಬಾ” ಎನ್ನುತ್ತಿದ್ದರು.

Poorna Chandra Tejaswi

ಚಾರ್ಮಾಡಿ ಘಾಟಿಯಲ್ಲಿರುವ ಸರಣಿ ಕಣಿವೆಗಳ ಕಾಡುಗಳ ಬಗ್ಗೆ, ಅಲ್ಲಿಯ ಜೀವವೈವಿಧ್ಯತೆ ಕುರಿತು ಅವರಿಗೆ ಸಂಪೂರ್ಣ ತಿಳಿದಿತ್ತು. ಅವುಗಳ ಬಗ್ಗೆ ಹೇಳುತ್ತಿದ್ದರು. ಕಣಿವೆಗಳ ಕಾಡು ಅಳಿದು ಹೋಗುತ್ತಿದೆ. ಇದರಿಂದ ಅಪಾಯ ಉಂಟಾಗಬಹುದು ಎಂಬ ಆತಂಕ ಅವರಿಗಿತ್ತು ಪದೇಪದೇ “ಸೋಮೇಶ್ವರ (ಚಾರ್ಮಾಡಿ ಕಣಿವೆ) ಕಾಡಿಗೆ ಹೋಗಿದ್ದು ಬಾ” ಎನ್ನುತ್ತಿದ್ದರು.

ಮುಂದೆ ತೇಜಸ್ವಿ ಪ್ರತಿಷ್ಢಾನದ ಕಾರ್ಯದರ್ಶಿ ಬಾಪೂ‌ ದಿನೇಶ್, ಲೇಖಕ, ಚಾರಣಿಗ ಧನಂಜಯ ಜೀವಾಳ ನೇತೃತ್ವದಲ್ಲಿ ಕಡಿದಾದ ಕಣಿವೆಗೆ ಇಳಿದಿದ್ದೂ ಆಯ್ತು ! ಕಣಿವೆಗಳಲ್ಲಿ ಕಾಡಾನೆಗಳು ಅಡ್ಡಾಡಿರುತ್ತವೆ. ಆದರೆ ನಮಗೆ ಅವು ಅಡ್ಡ ಆಗಲಿಲ್ಲ. ಏಕೋ ಏನೋ ಗುಂಪು ತುಸು ದಾರಿ ತಪ್ಪಿತು. ಬೇರೊಂದು ಕಡೆ ಹೋದಾಗ ನಾಲ್ಕೈದು ಮಂದಿ ಅಡ್ಡ ಹಾಕಿ “ಇಲ್ಲಿಗೆ ಬಂದಿದ್ದು ಏಕೆ ? ವಾಪಸ್‌ ಹೋಗಿ ಎಂದು ಹಲ್ಲೆ ಮಾಡುವ ರೀತಿಯಲ್ಲಿಯೇ ಧಮಕಿ ಹಾಕಿದರು. ಬೇರೊಂದು ದಾರಿಯ ಮೂಲಕ ವಾಪಸ್‌ ಬಂದೆವು.

ನಾನು ಧನಂಜಯ ಜೀವಾಳ ಇಬ್ಬರೇ ತೇಜಸ್ವಿ ವಿವರಿಸಿದ್ದನ್ನು ತಿಳಿಯಲೆಂದೇ ಮತ್ತೆ ಒಂದಷ್ಟು ದಿನ ಕಳೆದು ಮತ್ತೆ ಸೋಮೇಶ್ವರ ಕಾಡಿನ ಕಣಿವೆಗೆ ಇಳಿದು ಸುತ್ತಾಡಿದ್ದೆವು. ತೇಜಸ್ವಿ ಹೇಳಿದ್ದು ಅಕ್ಷರಶಃ ನಿಜ ! ಅಲ್ಲಿ ಕಾಡೇ ಇರಲಿಲ್ಲ. ಅಂದು ಏನಾದರೂ ಕಾಡುಗಳ್ಳರ ಕೈಗೆ ನಾವಿಬ್ಬರು ಸಿಲುಕಿದ್ದರೆ ಕಥೆ ಏನಾಗುತ್ತಿತ್ತೋ ? ಯಾವುದೇ ಆಯುಧಗಳಿಲ್ಲದೇ ನಾವಿಬ್ಬರೇ ಆ ಕಡಿದಾದ ಕಣಿವೆ ಇಳಿದು ಸುತ್ತಾಡಿದ್ದು ರೋಚಕವಾಗಿತ್ತು.

ಇದಿರಲಿ, ಕಾಲೇಜು ದಿನಗಳಲ್ಲಿ ತೇಜಸ್ವಿ ಅವರನ್ನು ನೋಡಲು ಹೋಗುವಾಗ ನನ್ನ ಬಳಿಯೂ ಅವರ ಸ್ಕೂಟರ್ ಕಲರ್ ಬಜಾಜ್ ಚೇತಕ್ ಸ್ಕೂಟರ್ ಇತ್ತು. ತೇಜಸ್ವಿ ಅವರಿಗೆ ಕಾರು, ಜೀಪು, ಬೈಕ್ ಮತ್ತು ಸ್ಕೂಟರ್ ಬಗ್ಗೆ ಭಯಂಕರ ಆಸಕ್ತಿ. ತಮ್ಮ ವಾಹನಗಳಲ್ಲಿ ತಾಂತ್ರಿಕ‌ ದೋಷ ಇದ್ದರೆ ಸ್ವತಃ ರಿಪೇರಿ ಮಾಡಿಕೊಳ್ಳುತ್ತಿದ್ದರು. ಅವರಿದ್ದಾಗಲೇ ಅವರ ಸ್ಕೂಟರನ್ನು ಆತ್ಮೀಯವಾಗಿ ನೇವರಿಸಿದ್ದೆ. ‌

ಒಂದೆರಡು ಬಾರಿ ನಾನು ಮೂಡಿಗೆರೆಯ ಟೌನಿನಲ್ಲಿ ಗೆಳೆಯರೊಂದಿಗೆ ಇದ್ದಾಗ ಸ್ಕೂಟರಿನಲ್ಲಿ ತೇಜಸ್ವಿ ಎದುರಾಗಿದ್ದು ಇದೆ. ಹಿಂದೆ ಕುಳಿತು ಹೋಗೋಣ ಎಂದರೆ‌ ಹಿಂದಿನ‌‌ ಸೀಟೇ‌ ಇರಲಿಲ್ಲ. ಬಹುಶಃ ನನ್ನಂಥ ಅಭಿಮಾನಿಗಳ ಕಾಟದಿಂದ ತಪ್ಪಿಸಿಕೊಳ್ಳಲೆಂದೇ ಹಿಂದಿನ ಸೀಟು ತೆಗೆಸಿದ್ದರು ಎನಿಸುತ್ತದೆ

Kumara Raitha At Kottigehaara

ಕೊಟ್ಟಿಗೆಹಾರದ ಚಾರ್ಮಾಡಿ ಘಾಟಿ ಪ್ರವೇಶದ್ವಾರದಲ್ಲಿಯೇ ಇರುವ ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದಲ್ಲಿ   ೨೦೨೫ರ ಜೂನ್‌ ೭, ೮ ಸಿನಿಮಾ ಹಬ್ಬವಿತ್ತು. “ನಾನು ಸದಸ್ಯನಾಗಿ ಇರುವ “ಮನುಜಮತ ಸಿನಿಯಾನ” ಬಳಗದ ಆಯೋಜನೆ. ಸಿನಿಮಾ ನೋಡುವಾಗ ಅವರದೇ ಸ್ಕೂಟರ್ ಮಾದರಿಯ ಈ ಸ್ಕೂಟರ್ ಪಕ್ಕದಲ್ಲಿ ಕುಳಿತಿದ್ದು  ಆಕಸ್ಮಿಕ. ಆ ಸಂದರ್ಭದಲ್ಲಿ ಛಾಯಾಗ್ರಹಕರು ಈ ಪೋಟೋ ಕ್ಲಿಕ್ ಮಾಡಿದ್ದಾರೆ. ಸಿನಿಮಾ ನೋಡಿ ಅದರ ಬಗ್ಗೆ ಅಭಿಪ್ರಾಯ ಹಂಚಿಕೊಳ್ಳುವ ಭರದಲ್ಲಿ ಈ ಪೋಟೋ ಕ್ಲಿಕ್‌ ಆಗಿರುವುದೇ ಗೊತ್ತಿರಲಿಲ್ಲ. ನಂತರ ವಾಟ್ಸಪ್‌ ಗ್ರೂಪಿನಲ್ಲಿ ಹಂಚಿಕೊಂಡಾಗಲೇ ತಿಳಿಯಿತು. ಇದನ್ನು ಕ್ಲಿಕ್‌ ಮಾಡಿದವರಿಗೆ ಧನ್ಯವಾದ.

You may also like

Leave a Comment

error: Content is protected !!