ರಾಜಕೀಯದಲ್ಲಿ ಮತ್ತೆ ಮುನ್ನೆಲೆಗೆ ಬಂದ ಅಣೆ – ಪ್ರಮಾಣ
“ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರ ಹಸ್ತಾಂತರದ ಒಪ್ಪಂದ ಆಗಿಲ್ಲವೆಂದು ಚಾಮುಂಡಿಬೆಟ್ಟದ ಚಾಮುಂಡೇಶ್ವರಿ ಸನ್ನಿಧಿಗೆ ಬಂದು ಪ್ರಮಾಣ ಮಾಡಲಿ” ಎಂದು ವಿಧಾನಪರಿಷತ್ ಸದಸ್ಯ ಅಡಗೂರು ವಿಶ್ವನಾಥ್ ಹೇಳಿದ್ದಾರೆ. ಬಹುಶಃ ಈ ಮಾತನ್ನು ಬೇರೆ ರಾಜಕಾರಣಿಗಳು ಹೇಳಿದ್ದರೆ ಅಚ್ಚರಿಯಾಗುತ್ತಿರಲಿಲ್ಲ. ಕೊಂಚವಾದರೂ ವೈಚಾರಿಕವಾಗಿಯೋಚಿಸುತ್ತಾರೆಂದು ಹೆಸರು ಪಡೆದವರು ಹೀಗೆ ಹೇಳಿದರೆ ಆಶ್ಚರ್ಯವಾಗದೇ ಇರುತ್ತದೆಯೇ ?
ಸಿದ್ದರಾಮಯ್ಯ – ಡಿ.ಕೆ. ಶಿವಕುಮಾರ್ ಅವರ ನಡುವೆ ಅಧಿಕಾರ ಹಸ್ತಾಂತರದ ಒಪ್ಪಂದ ಆಗಿದೆ ಎನ್ನುವುದು ರಾಜಕಾರಣದಲ್ಲಿ ಇರುವ ಎಲ್ಲರಿಗೂ ಗೊತ್ತಿರುವ ಗುಟ್ಟು. ಆದರೂ ಸಿದ್ದರಾಮಯ್ಯ ಅವರ ಬಗ್ಗೆ ಒಲವು ಹೊಂದಿರುವ ರಾಜಕಾರಣಿಗಳು ಅದು ತಮಗೆ ಗೊತ್ತಿಲ್ಲದ ವಿಷಯ ಎಂದು ಹೇಳುವುದು ಸಾಮಾನ್ಯ
ಮೇ 2023 ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಭರ್ಜರಿ ಜಯಗಳಿಸಿದ ನಂತರ ಕರ್ನಾಟಕದ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಪ್ರಮಾಣ ವಚನ ಸ್ವೀಕರಿಸುವಲ್ಲಿ ವಿಳಂಬವಾಗಲು ಪಕ್ಷದ ನಾಯಕತ್ವದೊಳಗಿನ ತೀವ್ರ ಆಂತರಿಕ ಶಕ್ತಿ ಹೋರಾಟವೇ ಕಾರಣ ಎನ್ನುವುದು ನಿರ್ವಿವಾದ. ಮೇ 10 ರಂದು ಚುನಾವಣೆಗಳು ನಡೆದವು, ಮೇ 13 ರಂದು ಫಲಿತಾಂಶಗಳು ಪ್ರಕಟವಾದವು, ಕಾಂಗ್ರೆಸ್‌ಗೆ ಸ್ಪಷ್ಟ ಬಹುಮತ ದೊರೆಯಿತು. ಆದರೂ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಅಂತಿಮಗೊಳಿಸಲು ಕೆಲವಾರು ದಿನಗಳು ಬೇಕಾಯಿತು, ಏಕೆಂದರೆ ಹಿರಿಯ ನಾಯಕರಾದ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಇಬ್ಬರೂ ಈ ಹುದ್ದೆಯ ಬಗ್ಗೆ ಪ್ರಬಲವಾದ ಆಕಾಂಕ್ಷೆ ಹೊಂದಿದ್ದರು
ಸಾಕಷ್ಟು ಹಗ್ಗ-ಜಗ್ಗಾಟದನಂತರ ಮೇ 18 ರಂದು ಒಮ್ಮತಕ್ಕೆ ಬರಲಾಯಿತು, ಸಿದ್ದರಾಮಯ್ಯ ಅವರನ್ನು ಸಿಎಂ ಮತ್ತು ಶಿವಕುಮಾರ್ ಅವರನ್ನು ಉಪ ಮುಖ್ಯಮಂತ್ರಿ ಎಂದು ಹೆಸರಿಸಲಾಯಿತು. ಸರಿಸುಮಾರು ಒಂದು ವಾರದ ಕಾಯುವಿಕೆ ನಂತರ ಕಾಂಗ್ರೆಸ್ ಹೈ ಕಮಾಂಡ್ ಈ ನಿರ್ಧಾರಕ್ಕೆ ಬಂತು ಎನ್ನುವುದು ಸಹ ಗಮನಾರ್ಹ !! ಇದು ಕಾರಣವಾಯಿತು, ಅಂತಿಮವಾಗಿ ಮೇ 20 ರಂದು ಬೆಂಗಳೂರಿನ ವಿಧಾನಸೌಧದಲ್ಲಿ ಪ್ರಮಾಣವಚನ ಸಮಾರಂಭ ನಡೆಯಿತು.
ಎರಡೂವರೆ ವರ್ಷ ಸಮೀಪಿಸುತ್ತಿದ್ದಂತೆ ಮುಖ್ಯಮಂತ್ರಿ ಹುದ್ದೆ ಪ್ರಸ್ತಾಪ ವಿಚಾರ ಮತ್ತೆ ಮುನ್ನೆಲೆಗೆ ಬಂತು. ಆರಂಭದಲ್ಲಿ ಸಿದ್ದರಾಮಯ್ಯ ಬೆಂಬಲಿಗರಿರಲಿ ಸ್ವತಃ ಸಿದ್ದರಾಮಯ್ಯ ಅವರೇ ತಾನೇ ಪೂರ್ಣಾವಧಿಗೆ ಸಿಎಂ ಎಂದು ಪ್ರತಿಪಾದಿಸಿದರು. ನವದೆಹಲಿಯಲ್ಲಿ ನೀಡಿದ ಮಾಧ್ಯಮ ಸಂದರ್ಶನದಲ್ಲಿ “ಮುಖ್ಯಮಂತ್ರಿಯಾಗಲು ಶಾಸಕರ ಬೆಂಬಲ ಅಗತ್ಯ. ಡಿ.ಕೆ. ಶಿವಕುಮಾರ್ ಅವರಿಗೆ ಹೆಚ್ಚಿನ ಶಾಸಕರ ಬೆಂಬಲವಿಲ್ಲ” ಎನ್ನುವ ಮಾತು ಆಡಿದರು.
ಕಾಂಗ್ರೆಸ್ ಸಂಸ್ಕೃತಿಗೆ ಇಂಥ ಮಾತು ಹೊಸದು. ಏಕೆಂದರೆ ಹಿಂದೆ ಯಾವ ಮುಖ್ಯಮಂತ್ರಿಯೂ ಅಥವಾ ಮುಖ್ಯಮಂತ್ರಿ ಹುದ್ದೆ ಅಪೇಕ್ಷಿತ ಪ್ರಭಾವಿಗಳು ಹೀಗೆ ಮಾತನಾಡಿರಲಿಲ್ಲ. ಇದನ್ನು ಕಾಂಗ್ರೆಸ್ ಹೈ ಕಮಾಂಡ್ ಮೌನವಾಗಿಯೇ ಸಹಿಸಿತು.
ಹಿಂದುಳಿದ ಜಾತಿಗಳಿಗೆ ಸೇರಿದ ಬಂಗಾರಪ್ಪ, ವೀರಪ್ಪ ಮೊಯ್ಲಿ ಮತ್ತು ಧರ್ಮಸಿಂಗ್ ಅವರನ್ನು ಮುಖ್ಯಮಂತ್ರಿಯಾಗಿ ನೇಮಿಸುವಲ್ಲಿ ಹೈ ಕಮಾಂಡ್ ನಿರ್ಧಾರವೇ ಪ್ರಮುಖವಾಗಿತ್ತು. ೨೦೦೬ರಲ್ಲಿಯಷ್ಟೇ ಕಾಂಗ್ರೆಸಿಗೆ ಬಂದ ತಮ್ಮನ್ನು (ಸಿದ್ದರಾಮಯ್ಯ) ಶಾಸಕಾಂಗ ಪಕ್ಷದ ನಾಯಕ, ವಿರೋಧಪಕ್ಷದ ನಾಯಕನಾಗಿ ಮಾಡುವಲ್ಲಿ ಹೈ ಕಮಾಂಡ್ ನಿರ್ಧಾರವೇ ಪ್ರಮುಖವಾಗಿತ್ತು. ೨೦೧೩ರಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ ಮುಖ್ಯಮಂತ್ರಿಯಾಗಿ ನೇಮಕ ಮಾಡುವಲ್ಲಿ ಹೈ ಕಮಾಂಡ್ ತೀರ್ಮಾನವೇ ಅಗ್ರ ಪಾತ್ರ ವಹಿಸಿತ್ತು ಎಂಬುದನ್ನು ಸಿದ್ದರಾಮಯ್ಯ ಮರೆತರು.
ಕರ್ನಾಟಕದಲ್ಲಿ ೨೦೧೩, ೨೦೨೩ರಲ್ಲಿ ಅಧಿಕಾರಕ್ಕೆ ಬರುವಲ್ಲಿ ಸಿದ್ದರಾಮಯ್ಯ ಅವರೊಬ್ಬರೇ ನಿರ್ಣಾಯಕ ಪಾತ್ರ ವಹಿಸಿದರು ಎಂದು ಹೇಳಲು ಸಾಧ್ಯವಿಲ್ಲ. ಸತೀಶ್ ಜಾರಕಿಹೊಳಿ, ಡಿ.ಕೆ. ಶಿವಕುಮಾರ್ ಸೇರಿದಂತೆ ಅನೇಕ ಪ್ರಮುಖರು ಪಾತ್ರ ವಹಿಸಿದ್ದಾರೆ. ೨೦೧೩ರ ಚುನಾವಣೆಯಲ್ಲಿ ಮುಸ್ಲೀಮ್ ಸಮುದಾಯದ ಮತಗಳನ್ನು ಸಾರಸಗಟಾಗಿ ಕಾಂಗ್ರೆಸಿಗೆ ವರ್ಗಾಯಿಸುವಲ್ಲಿ ಜಮೀರ್ ಅಹ್ಮದ್ ಪಾತ್ರವೇ ಮುಖ್ಯವಾಗಿದೆ. ಇದೇ ಚುನಾವಣೆಗೂ ಮುನ್ನ ಪಕ್ಷದ ರಾಜ್ಯಧ್ಯಕ್ಷರಾಗಿ ಡಿ.ಕೆ. ಶಿವಕುಮಾರ್ ನೀಡಿದ ಹುರುಪು, ಹಮ್ಮಿಕೊಂಡ ನಿರಂತರ ವಿನೂತನ ಪ್ರತಿಭಟನೆಗಳು ಕಾಂಗ್ರೆಸ್ ಅನ್ನು ಮರಳಿ ಅಧಿಕಾರಕ್ಕೆ ತರುವಲ್ಲಿ ನಿರ್ಣಾಯಕ ಪಾತ್ರ ವಹಿಸಿತ್ತು.
ಈ ಎಲ್ಲ ಹಿನ್ನೆಲೆಯಲ್ಲಿ ತೀರ್ಮಾನ ಹೈ ಕಮಾಂಡಿಗೆ ಸೇರಿದ್ದು ಎಂಬ ನಿಲುವಿಗೆ ಸಿದ್ದರಾಮಯ್ಯ ಅಂಟಿಕೊಳ್ಳಬೇಕಿತ್ತು. ಇತ್ತೀಚಿನವರೆಗೂ ಅಂದರೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಬೆಂಗಳೂರಿನ ಸದಾಶಿವನಗರದ ಮನೆಯಲ್ಲಿ ನಡೆದ ಮಾತುಕತೆ ನಂತರವೇ ಅವರು ಮಾತನಾಡುವ ಶೈಲಿ ಬದಲಾಯಿತಷ್ಟೇ !
ನವೆಂಬರ್ ೨೯, ೨೦೨೫ರಂದು ಕಾಂಗ್ರೆಸ್ ಹೈ ಕಮಾಂಡ್ ಸೂಚನೆ ಮೇರೆಗಷ್ಟೇ ಇವರಿಬ್ಬರೂ ನಾಯಕರು ಉಪಹಾರ ನೆಪದಲ್ಲಿ ಭೇಟಿಯಾಗಿ ಮಾತುಕತೆ ಆಡಿದ್ದಾರೆ. ಸಂಪುಟದ ಸಹೋದ್ಯೋಗಿಗಳಾದರೂ ಈ ಭೇಟಿ ಅಧಿಕಾರ ಹಸ್ತಾಂತರ ಗೊಂದಲದ ಹಿನ್ನೆಲೆಯಲ್ಲಿ ಭಾರಿ ಮಹತ್ವ ಪಡೆದುಕೊಂಡಿತ್ತು ಎಂಬುದು ಮುಖ್ಯ ! ಜೊತೆಗೆ ಸಿದ್ದರಾಮಯ್ಯ ಬಳಸಿದ ಪದಗಳು, ಮಾತಿನ ಶೈಲಿ ಸಹ ಅಧಿಕಾರ ಹಸ್ತಾಂತರ ಸನ್ನಿಹಿತವಾಗಿದೆ ಎಂಬುದನ್ನು ತೋರಿಸುತ್ತಿವೆ. ಅವರ ಮಾತುಗಳು ಮುಂದಿವೆ !!
ಉಪಮುಖ್ಯಮಂತ್ರಿಗಳಾದ DK Shivakumar ಅವರ ಜೊತೆಗಿನ ಉಪಹಾರ ಹಾಗೂ ಚರ್ಚೆಯ ಬಳಿಕ ಮಾಧ್ಯಮಗೋಷ್ಠಿಯಲ್ಲಿ ನನ್ನ ಮಾತುಗಳು;
ಪಕ್ಷದ ವರಿಷ್ಠರ ತೀರ್ಮಾನ, ಸೂಚನೆಯಂತೆ ನಾನು ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನಡೆದುಕೊಳ್ಳುತ್ತೇವೆ ಎಂದು ನಾವಿಬ್ಬರೂ ತೀರ್ಮಾನಿಸಿದ್ದೇವೆ. ಸಚಿವರಾಗಲಿ, ಶಾಸಕರಾಗಲೀ ಯಾರೂ ನಮ್ಮ ಸರ್ಕಾರದ ವಿರುದ್ಧವಿಲ್ಲ.
ಅಧಿವೇಶನ ಇರುವುದರಿಂದ ಇಬ್ಬರಿಗೂ ಗೊಂದಲಗಳನ್ನು ತಿಳಿಗೊಳಿಸುವಂತೆ ಹೈಕಮಾಂಡ್‌ನವರು ಸೂಚಿಸಿದ್ದಾರೆ. ಈಗಲೂ ಯಾವ ಗೊಂದಲ ಇಲ್ಲ, ನಾಳೆಯೂ ಯಾವುದೇ ಗೊಂದಲ ಇರುವುದಿಲ್ಲ. ನಮ್ಮ ನಡುವೆ ಆಗಿರುವ ಒಪ್ಪಂದದ ಬಗ್ಗೆ ಹೈಕಮಾಂಡಿಗೆ ಮಾಹಿತಿ ನೀಡಲಾಗುವುದು.
ಪಕ್ಷದ ವರಿಷ್ಠರ ಸೂಚನೆಯಂತೆ ಡಿ.ಕೆ.ಶಿವಕುಮಾರ್ ಮತ್ತು ನಾನು ನಮ್ಮ ಮನೆಯಲ್ಲಿ ಒಟ್ಟಿಗೆ ಉಪಹಾರ ಸೇವಿಸಿದ್ದೇವೆ. ಇತ್ತೀಚಿನ ದಿನಗಳಲ್ಲಿ ಅನಗತ್ಯವಾಗಿ ಕೆಲವು ಗೊಂದಲಗಳು ನಿರ್ಮಾಣವಾಗಿವೆ. ನಾವು ಈ ಬಗ್ಗೆ ಮಾತನಾಡಿದ್ದೇವೆ. 2028ರ ಚುನಾವಣೆ ಹಾಗೂ ಸ್ಥಳೀಯ ಸಂಸ್ಥೆಗಳಾದ ಕಾರ್ಪೋರೇಷನ್, ತಾಲ್ಲೂಕು, ಜಿಲ್ಲಾ ಹಾಗೂ ಗ್ರಾಮ ಪಂಚಾಯತ್ ಚುನಾವಣೆಗಳು ಬಹಳ ಮುಖ್ಯವಾಗಿದ್ದು, ಈ ಬಗ್ಗೆ ಚರ್ಚೆ ಮಾಡಿದ್ದೇವೆ. 2028ರಲ್ಲಿ ಕಾಂಗ್ರೆಸ್‌ನ್ನು ಮತ್ತೆ ಅಧಿಕಾರಕ್ಕೆ ತರಬೇಕೆಂದು ಚರ್ಚಿಸಲಾಗಿದೆ. 2023ರ ವಿಧಾನಸಭಾ ಚುನಾವಣೆಯಲ್ಲಿ ಕೆಲಸ ಮಾಡಿದಂತೆಯೇ ಮುಂದೆಯೂ ಒಟ್ಟಿಗೆ ಸಾಗುವ ತೀರ್ಮಾನ ಮಾಡಿದ್ದೇವೆ.
ಕೆಂಪು ಬಣ್ಣದಲ್ಲಿ ಗುರುತು ಮಾಡಲಾದ ಮಾತುಗಳ ಒಳಾರ್ಥವನ್ನು ಗಮನಿಸಿ; ಇವುಗಳೇ ಸಿದ್ದರಾಮಯ್ಯ ಅವರು ಶೀಘ್ರದಲ್ಲೇ ಮುಖ್ಯಮಂತ್ರಿ ಹುದ್ದೆಯನ್ನು ಹಸ್ತಾಂತರ ಮಾಡುತ್ತಾರೆ ಎಂಬುದನ್ನು ಸೂಚಿಸುತ್ತವೆ.

If they had agreed on sharing the C.M chair after two & a half years, then one shld follow, do they want to follow the earlier fiasco between JDS & BJP? We Citizens are suffering, be it infra woes, Traffic, Metro work delays etc, because of lack of governance, & fight for Kursi is all that media wants to highlight….