ವಿಜಯ್ ಟಿವಿಕೆ ಸರ್ಕಾರ ರಚನೆಗೆ ಅವಕಾಶ ನೀಡದ ರಾಜ್ಯಪಾಲ ನಡೆ ಸರಿಯೇ ?
ಬುಧವಾರ, ಮೇ 6, 2026ರಂದು ತಮಿಳುನಾಡು ರಾಜಭವನಕ್ಕೆ ಟಿವಿಕೆ ಮುಖ್ಯಸ್ಥ ವಿಜಯ್ ಭೇಟಿ ನೀಡಿದ್ದರು. ರಾಜ್ಯಪಾಲರಿಗೆ 112 ಶಾಸಕರ ಸಹಿ ಇರುವ ಮನವಿ ಪತ್ರ ಸಲ್ಲಿಸಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿದರು. ಈ ಸಂದರ್ಭದಲ್ಲಿಯೇ ಟಿವಿಕೆ ಸಂಖ್ಯಾಬಲದ ಬಗ್ಗೆ ರಾಜ್ಯಪಾಲ ರಾಜೇಂದ್ರ ಆರ್ಲೇಕರ್ ಆಕ್ಷೇಪ ವ್ಯಕ್ತಪಡಿಸಿದರು. 118 ಶಾಸಕರ ಬೆಂಬಲ ಪತ್ರ ತರಲು ಹೇಳಿದರು.
ರಾಜ್ಯಪಾಲರ ಈ ನಡೆ ಸಾಂವಿಧಾನಾತ್ಮಕವಾಗಿ ಇದೆಯೇ ಎಂಬ ಪ್ರಶ್ನೆ ಎದುರಾಗಿದೆ. ಇದು ನ್ಯಾಯಾಂಗ ತೀರ್ಪಿಗೆ ಅನುಗುಣವಾಗಿಯೂ ಇಲ್ಲ. ಈ ಕುರಿತ ವಿವರಗಳನ್ನು ನೀಡಿದ್ದೇನೆ. ವಿಜಯ್ ಮತ್ತವರ ತಂಡ ಪೂರ್ವಭಾವಿ ನಿದರ್ಶನಗಳೊಂದಿಗೆ ಹೋಗಿದ್ದರೆ ಸರ್ಕಾರ ರಚನೆಗೆ ರಾಜ್ಯಪಾಲ ನಿರಾಕರಿಸುವ ಸಂದರ್ಭವೇ ಬರುತ್ತಿರಲಿಲ್ಲ ಎನ್ನಬಹುದು.
ಮೊದಲ ನಿದರ್ಶನ:
1996 ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿತು (ಸುಮಾರು 161 ಸೀಟುಗಳು), ಆದರೆ ಬಹುಮತಕ್ಕೆ (272) ತುಂಬಾ ದೂರವಿತ್ತು. ಹೀಗಿದ್ದರೂ ಸಾಂವಿಧಾನಿಕವಾಗಿ ನಡೆದುಕೊಂಡ ರಾಷ್ಟ್ರಪತಿ ಶಂಕರ ದಯಾಳ್ ಶರ್ಮ ಅವರು ಅಟಲ್ ಬಿಹಾರಿ ವಾಜಪೇಯಿ ಅವರನ್ನು ಪ್ರಧಾನಮಂತ್ರಿಯಾಗಿ ಆಹ್ವಾನಿಸಿದರು. ಮೇ 16, 1996ರಂದು ವಾಜಪೇಯಿ ಅವರು ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಇದು ಅವರ ಮೊದಲ ಪ್ರಧಾನಿ ಅವಧಿ.
ವಿಶ್ವಾಸಮತದ ಘಟನೆ:
ಸರ್ಕಾರ ರಚನೆಗೆ ಬೆಂಬಲ ಸಂಗ್ರಹಿಸಲು ವಾಜಪೇಯಿ ಸರ್ಕಾರಕ್ಕೆ ಮೇ 31, 1996ರವರೆಗೆ ಸಮಯ ನೀಡಲಾಗಿತ್ತು.ಬಹುಮತ ಸಾಬೀತುಪಡಿಸುವುದು ಕಷ್ಟವೆಂದು ಗೊತ್ತಾದ ಕಾರಣ, ವಾಜಪೇಯಿ ಅವರು ಮತದಾನಕ್ಕೆ ಬಿಡದೆಯೇ ಮೇ 28, 1996ರಂದು (13 ದಿನಗಳಲ್ಲಿ) ರಾಷ್ಟ್ರಪತಿಗೆ ರಾಜೀನಾಮೆ ಸಲ್ಲಿಸಿದರು. ಆದರೆ ರಾಜೀನಾಮೆಗೂ ಮುನ್ನ ಲೋಕಸಭೆಯಲ್ಲಿ ವಿಶ್ವಾಸಮತ ನಿರ್ಣಯದ(Motion of Confidence) ಚರ್ಚೆ ನಡೆಯಿತು. ಈ ಸಂದರ್ಭದಲ್ಲಿ ವಾಜಪೇಯಿ ಅವರು ಇತಿಹಾಸ ಪ್ರಸಿದ್ಧ ಭಾಷಣ ಮಾಡಿದರು.
“ಸರ್ಕಾರಗಳು ಬರಬಹುದು, ಹೋಗಬಹುದು; ಪಕ್ಷಗಳು ಹುಟ್ಟಬಹುದು, ಅಳಿಯಬಹುದು; ಆದರೆ ಈ ದೇಶ ಉಳಿಯಬೇಕು, ಈ ದೇಶದ ಪ್ರಜಾಪ್ರಭುತ್ವ ಅಮರವಾಗಿರಬೇಕು.” ಎಂದು ಹೇಳಿದರು. ಇವರ ನಂತರ ಕೇಂದ್ರ ಸರ್ಕಾರದ ಚುಕ್ಕಾಣಿ ಹಿಡಿದ ಬಿಜೆಪಿ ವಾಜಪೇಯಿ ಅವರ ಆದರ್ಶಕ್ಕೆ ಅನುಗುಣವಾಗಿ ನಡೆದುಕೊಳ್ಳುತ್ತಿದೆಯೇ ?
ವಾಜಪೇಯಿ ರಾಜಿನಾಮೆ ನಂತರ ಹೆಚ್.ಡಿ. ದೇವೇಗೌಡ ಪ್ರಧಾನಿಯಾಗಿ ಯುನೈಟೆಡ್ ಫ್ರಂಟ್ ಸರ್ಕಾರ ರಚನೆಯಾಯಿತು. ವಾಜಪೇಯಿ ಅವರ ಈ 13 ದಿನಗಳ ಅವಧಿ ಭಾರತದ ರಾಜಕೀಯದಲ್ಲಿ ಬಹುಪಕ್ಷೀಯ ಸಹಕಾರದ (coalition politics) ಯುಗವನ್ನು ಆರಂಭಿಸಿದ ಮೈಲುಗಲ್ಲು ಎರಡನೇಯ ನಿದರ್ಶನ
ಎಸ್.ಆರ್. ಬೊಮ್ಮಾಯಿ ಪ್ರಕರಣ (S.R. Bommai vs Union of India, 1994) ಭಾರತದ ಸಂವಿಧಾನಿಕ ಇತಿಹಾಸದಲ್ಲಿ ಅತ್ಯಂತ ಮಹತ್ವದ ತೀರ್ಪು. ಇದು ಕರ್ನಾಟಕದಲ್ಲಿ ನಡೆದ ರಾಜಕೀಯ ಬಿಕ್ಕಟ್ಟಿನಿಂದ ಉದ್ಭವಿಸಿ, ಆರ್ಟಿಕಲ್ 356 (ರಾಷ್ಟ್ರಪತಿ ಆಳ್ವಿಕೆ) ದುರುಪಯೋಗವನ್ನು ತಡೆಯುವ ಮತ್ತು ವಿಶ್ವಾಸಮತ/ಬಹುಮತ ಪರೀಕ್ಷೆ (Floor Test) ಯ ಮಹತ್ವವನ್ನು ಸ್ಪಷ್ಟಪಡಿಸಿದ ಐತಿಹಾಸಿಕ ನಿರ್ಣಯ.
ಕರ್ನಾಟಕ ಸಂದರ್ಭ ಪ್ರಕರಣದ ಹಿನ್ನೆಲೆ
1988ರಲ್ಲಿ ಜನತಾ ಪಕ್ಷ ಮತ್ತು ಲೋಕದಳದ ವಿಲೀನದ ನಂತರ ಎಸ್.ಆರ್. ಬೊಮ್ಮಾಯಿ ಅವರು ಕರ್ನಾಟಕದ ಮುಖ್ಯಮಂತ್ರಿಯಾದರು. 1989ರಲ್ಲಿ ಕೆಲವು ಶಾಸಕರು ಬೆಂಬಲ ವಾಪಸ್ ಪಡೆದರು ಎಂಬ ಆರೋಪ ಉಂಟಾಯಿತು. ರಾಜ್ಯಪಾಲರು ಪಿ. ವೆಂಕಟಸುಬ್ಬಯ್ಯ ಅವರು ಸರ್ಕಾರ ಬಹುಮತ ಕಳೆದುಕೊಂಡಿದೆ ಎಂದು ರಾಷ್ಟ್ರಪತಿಗೆ ವರದಿ ಮಾಡಿದರು.
ಬೊಮ್ಮಾಯಿ ಅವರು ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸಲು ಸಿದ್ಧರಿದ್ದರೂ, ರಾಜ್ಯಪಾಲರು ಅವಕಾಶ ನೀಡದೆ ಏಪ್ರಿಲ್ 21, 1989ರಂದು ರಾಷ್ಟ್ರಪತಿ ಆಳ್ವಿಕೆ (Article 356) ಹೇರಿದರು. ವಿಧಾನಸಭೆಯನ್ನು ವಿಸರ್ಜಿಸಲಾಯಿತು.
ಈ ನಿರ್ಧಾರವನ್ನು ಪ್ರಶ್ನಿಸಿ ಬೊಮ್ಮಾಯಿ ಸುಪ್ರೀಂ ಕೋರ್ಟ್ಗೆ ಹೋದರು. 1994ರಲ್ಲಿ 9 ನ್ಯಾಯಾಧೀಶರ ಸಂವಿಧಾನ ಪೀಠ ತೀರ್ಪು ನೀಡಿತು. ಸರ್ಕಾರಕ್ಕೆ ಬಹುಮತವಿದೆಯೇ ಎಂಬುದನ್ನು ರಾಜ್ಯಪಾಲರ subjective ಅಭಿಪ್ರಾಯದ ಮೇಲೆ ಅಲ್ಲ, ಕೇವಲ ವಿಧಾನಸಭೆಯಲ್ಲಿ ಮತದಾನದ ಮೂಲಕ (Floor Test) ಮಾತ್ರ ಪರೀಕ್ಷಿಸಬೇಕು. ಎಲ್ಲಿ ಸಂದೇಹ ಉದ್ಭವಿಸಿದರೂ, ಸಚಿವ ಸಂಪುಟವು ಸದನದ ವಿಶ್ವಾಸ ಕಳೆದುಕೊಂಡಿದೆಯೇ ಎಂದು ಪರೀಕ್ಷಿಸುವ ಏಕೈಕ ವಿಧಾನವೆಂದರೆ ಸದನದ ತರೆಯ ಮೇಲೆ ಎಂದು ಸ್ಪಷ್ಟಪಡಿಸಲಾಯಿತು.
ಆರ್ಟಿಕಲ್ 356 ರಾಜ್ಯಪಾಲ/ರಾಷ್ಟ್ರಪತಿ ಅಧಿಕಾರಕ್ಕೆ ಮಿತಿ: ರಾಷ್ಟ್ರಪತಿ ತೃಪ್ತಿ (Satisfaction) judicial review ಗೆ ಒಳಪಡುತ್ತದೆ. ಅದು ಸಂಪೂರ್ಣ subjective ಅಲ್ಲ.ಆರ್ಟಿಕಲ್ 356 ಅನ್ನು ಅನಾವಶ್ಯಕವಾಗಿ ಅಥವಾ ರಾಜಕೀಯ ಕಾರಣಗಳಿಗಾಗಿ ಬಳಸುವುದನ್ನು ತಡೆಯಲು ಮಾರ್ಗಸೂಚಿಗಳನ್ನು ನೀಡಿದೆ.
ಮುಖ್ಯ ಮಾರ್ಗಸೂಚಿಗಳು: ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿ, ಉತ್ತರಕ್ಕೆ ಸಮಯ ಕೊಡಬೇಕು.ಬಹುಮತ ಕಳೆದುಕೊಂಡಿದೆ ಎಂದು ತಿಳಿದರೂ, ಪರ್ಯಾಯ ಸರ್ಕಾರ ರಚನೆ ಸಾಧ್ಯವಿದೆಯೇ ಎಂದು ಪರಿಶೀಲಿಸಬೇಕು.ರಾಜ್ಯಪಾಲರು ಸ್ವಂತವಾಗಿ ಬಹುಮತ ಅಂದಾಜು ಮಾಡಿ ರಾಷ್ಟ್ರಪತಿ ಆಳ್ವಿಕೆ ಶಿಫಾರಸು ಮಾಡುವುದು ಸರಿಯಲ್ಲ.
ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಮೂಲಕ ನೇಮಿತವಾದ ರಾಜ್ಯಪಾಲರುಗಳು ಪದೇಪದೇ ಸಾಂವಿಧಾನಿಕ ಸೂಕ್ಷ್ಮಗಳನ್ನು ಉಲ್ಲಂಘಿಸುತ್ತಿದ್ದಾರೆ. ಹಿಂದಿನ ರಾಜ್ಯಪಾಲ ರವಿ ಮತ್ತು ಈಗಿನ ರಾಜ್ಯಪಾಲ ರಾಜೇಂದ್ರ ಆರ್ಲೇಕರ್ ನಡೆ ಇದಕ್ಕೆ ನಿದರ್ಶನ
ತಮಿಳುನಾಡು 2026 ರ ವಿದಾನಸಭೆ ಚುನಾವಣೆ (ಒಟ್ಟು234 ಸ್ಥಾನಗಳು)ಯಲ್ಲಿ ದಳಪತಿ ವಿಜಯ್ ನೇತೃತ್ವದ ಟಿವಿಕೆ (TVK) (ತಮಿಳಗ ವೆಟ್ರಿ ಕಳಗಂ) 108 ಸ್ಥಾನಗಳು ಪಡೆದು ಏಕೈಕ ಅತಿದೊಡ್ಡ ಪಕ್ಷವಾಗಿ ಹೊರ ಹೊಮ್ಮಿದೆ. ಬಹುಮತಕ್ಕೆ 10 ಸ್ಥಾನ ಕಡಿಮೆ ಇದೆ.
– ಡಿಎಂಕೆ DMK (ದ್ರಾವಿಡ ಮುನ್ನೇತ್ರ ಕಝಗಂ) 59, ಎಐಎಡಿಎಂಕೆ AIADMK (ಅಖಿಲ ಭಾರತ ಅನ್ನಾ ದ್ರಾವಿಡ ಮುನ್ನೇತ್ರ ಕಳಗಂ) 47, ಕಾಂಗ್ರೆಸ್ INC (ಭಾರತೀಯ ರಾಷ್ಟ್ರೀಯ ಕಾಂಗ್ರೆಸ್) 5, ಪಿಎಂಕೆ PMK (ಪಟ್ಟಾಳಿ ಮಕ್ಕಳ್ ಕಚ್ಚಿ) 4, ವಿಸಿಕೆ VCK 2, CPI 2, CPI(M) ̧ 2 IUML 2, DMDK 1, BJP 1, AMMK 1
ಕಾಂಗ್ರೆಸ್ ಬೆಂಬಲ ನೀಡಿರುವುದರಿಂದ ಟಿವಿಕೆ ಒಟ್ಟು ಸ್ಥಾನಗಳು ಸದ್ಯಕ್ಕೆ 113 ಆಗಿದೆ. ದಳಪತಿ ಜೋಸೆಫ್ ವಿಜಯ್ ಅವರು ಎರಡು ಕ್ಷೇತ್ರಗಳಲ್ಲಿ ಗೆದ್ದಿದ್ದಾರೆ. ಒಂದಕ್ಕೆ ರಾಜಿನಾಮೆ ನೀಡಲೇಬೇಕು. ಆಗ ಬಲ 107ಕ್ಕೆ ಕುಸಿಯುತ್ತದೆ. ಕಾಂಗ್ರೆಸ್ ಬೆಂಬಲವೂ ಸೇರಿದರೆ 112 ಆಗುತ್ತದೆ. ಸದನದಲ್ಲಿ ವಿಶ್ವಾಸಮತ ಕೋರಿದಾಗ ಇತರ ಪಕ್ಷಗಳ ಶಾಸಕರಲ್ಲಿ ಯಾರಾದರೂ ಆತ್ಮಸಾಕ್ಷಿಗೆ ಅನುಗುಣವಾಗಿ ಮತ (ಎಐಎಡಿಎಂಕೆ ಕೆಲವು ಶಾಸಕರು ಟಿವಿಕೆಗೆ ಬೆಂಬಲ ನೀಡಬೇಕು ಎಂದು ಆಗ್ರಹಿಸಿದ್ದಾರೆ) ಚಲಾಯಿಸಿದರೆ ವಿಜಯ್ ಸರ್ಕಾರ ಬಹುಮತ ಪಡೆಯುತ್ತದೆ. ಅಷ್ಟರಲ್ಲಿ ಇತರ ಬಿಡಿಬಿಡಿ ಪಕ್ಷಗಳು ಬೆಂಬಲ ಸೂಚಿಸಿದರೆ ಸರಳ ಬಹುಮತದ ಸರ್ಕಾರ ರಚನೆಯಾಗುತ್ತದೆ.
