17ನೇ ಬೆಂಗಳೂರು ಚಲನಚಿತ್ರೋತ್ಸವ; ರಾಯಭಾರಿಯಾಗಿ ಪ್ರಕಾಶ್ ರಾಜ್ ಆಯ್ಕೆ ಸಮಂಜಸವೇ ?
ಪ್ರತಿವರ್ಷ ಸಾಮಾನ್ಯವಾಗಿ ಮಾರ್ಚ್ ತಿಂಗಳಿನಲ್ಲಿ ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವ ಆಯೋಜನೆಯಾಗುತ್ತಿತ್ತು. ೨೦೨೬ರಲ್ಲಿ ಜನವರಿ ೨೯ರಿಂದ ಫೆಬ್ರವರಿ ೬ರ ತನಕ ನಡೆಯಲಿದೆ. ಹಾಗೆಯೇ ಇತ್ತೀಚಿನ ವರ್ಷಗಳಲ್ಲಿ ಬೆಂಗಳೂರು ಫಿಲಂ ಫೆಸ್ಟಿವಲ್ ಎಂದರೆ ಒರಾಯನ್ ಮಾಲ್ ಬಹು ಪರದೆಗಳಲ್ಲಿ ಎನ್ನುವುದು ಸಹ ಖಾಯಂ ಆಗಿತ್ತು. ಅದು ಕೂಡ ಈ ಬಾರಿ ಬದಲಾಗಿದೆ. ರಾಜಾಜಿನಗರದ ಲುಲು ಮಾಲ್ ನಲ್ಲಿ ಚಿತ್ರಗಳು ಪ್ರದರ್ಶಿತವಾಗುತ್ತವೆ. ಎಂದಿನಂತೆ ಡಾ. ರಾಜ್ ಕುಮಾರ್ ಭವನ, ಕಲಾವಿದರ ಸಂಘ, ಚಾಮರಾಜಪೇಟೆ ಹಾಗೂ ಬನಶಂಕರಿಯಲ್ಲಿರವ ಸುಚಿತ್ರ ಫಿಲಂ ಸೊಸೈಟಿ ಚಿತ್ರಮಂದಿರಗಳಲ್ಲೂ ಚಲನಚಿತ್ರಗಳ ಪ್ರದರ್ಶನವಿದೆ.
17ನೇ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ಪೂರ್ವ ಭಾವಿ ಸಭೆಯ ಬಳಿಕ ನಡೆದ ಪತ್ರಿಕಾಗೋಷ್ಠಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಸಂಬಂಧಿತ ವಿವರಗಳನ್ನು ನೀಡಿದರು. ಇದೇ ಸಂದರ್ಭದಲ್ಲಿ “ಹಿರಿಯ ಚಲನಚಿತ್ರ ಕಲಾವಿದರು, ನಿರ್ದೇಶಕರು ನಿರ್ಮಾಪಕರು ಆದ ಶ್ರೀ ಪ್ರಕಾಶ್ ರಾಜ್ ಅವರನ್ನು 17ನೇ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ರಾಯಭಾರಿಯಾಗಿ (Brand Ambassador) ಆಗಿ ನೇಮಿಸಲಾಗಿದೆ” ಎಂದು ಪ್ರಕಟಿಸಿದರು.
ಸಂವೇದನಾಶೀಲ ಕಲಾವಿದ ಪ್ರಕಾಶ್ ರಾಜ್ ಅವರು ಚಲನಚಿತ್ರೋತ್ಸವ ರಾಯಭಾರಿಯಾಗುವುದು ಸಂತೋಷದ ವಿಷಯ. ಆದರೆ ಈ ಬಾರಿಯ ಚಲನಚಿತ್ರೋತ್ಸವದಲ್ಲಿ ಪ್ರಮುಖವಾಗಿ “ಮಹಿಳಾ ಸಬಲೀಕರಣ” ಕುರಿತಾದ ಥೀಮ್ ಇರಲಿದೆ. ಹೀಗಿರುವಾಗ ಕನ್ನಡದವರೇ ಆದ ಮಹಿಳಾ ನಿರ್ದೇಶಕರು, ಕಲಾವಿದರಲ್ಲಿ ಒಬ್ಬರನ್ನು ರಾಯಭಾರಿಯಾಗಿ ನೇಮಿಸಿದ್ದರೆ ಸೂಕ್ತ ಎನಿಸುತ್ತಿತ್ತು.
ಸಾಮಾನ್ಯವಾಗಿ ಸರ್ಕಾರ ನಡೆಸುವ ರಾಜಕೀಯ ಪಕ್ಷದ ಪರ ಒಲವು – ನಿಲುವು ಹೊಂದಿದವರೇ ಫಿಲಂ ಫೆಸ್ಟಿವಲ್ ರಾಯಭಾರಿಯಾಗಿ ನೇಮಕಗೊಳ್ಳುತ್ತಾರೆ. ಯಾವುದೇ ಪಕ್ಷದ ಸರ್ಕಾರ ಇದ್ದರೂ ಈ ರೀತಿಯ ನೇಮಕಾತಿ ಇರುತ್ತದೆ. ಈ ಹಿನ್ನೆಲೆಯಲ್ಲಿ ಪ್ರಕಾಶ್ ರಾಜ್ ಆಯ್ಕೆ ಅಚ್ಚರಿ ವಿಷಯವೇನಲ್ಲ. ರಾಜಕೀಯ ಒಲವುಗಳನ್ನು ಹೊರತುಪಡಿಸಿ ನೋಡಿದರೂ ಪ್ರಕಾಶ್ ಅವರು ಪ್ರತಿಭಾವಂತ ಕಲಾವಿದರು. ರಾಯಭಾರಿಯಾಗಿ ನೇಮಕ ಆಗುವುದರಿಂದ ಇವರಿಗೆ ಲಾಭವೇನೂ ಇಲ್ಲ. ಬದಲಿಗೆ ಚಿತ್ರೋತ್ಸವದ ಮೆರಗು ಹೆಚ್ಚುತ್ತದೆ ಎಂಬುದೆಲ್ಲ ನಿಜ.
ಇಷ್ಟಿದ್ದರೂ ಫಿಲಂ ಫೆಸ್ಟಿವಲ್ “ಮಹಿಳಾ ಸಬಲೀಕರಣ” ಥೀಮ್ ಹೊಂದಿರುವಾಗ ರಾಯಭಾರಿ ಆಗುವ ಅರ್ಹತೆ ಹೊಂದಿರುವ ಕಲಾವಿದರು, ತಂತ್ರಜ್ಞರ ಕೊರತೆಯನ್ನುಕನ್ನಡ ಚಿತ್ರರಂಗ ಎದುರಿಸುತ್ತಿದೆಯೇ ಎಂಬ ಪ್ರಶ್ನೆ ಮೂಡುತ್ತದೆ ?
ಕವಿತಾ ಲಂಕೇಶ್, ಸುಮನ್ ಕಿತ್ತೂರು, ರೂಪಾ ಅಯ್ಯರ್ ಅವರುಗಳು ಸಿನಿಮಾ ನಿರ್ದೇಶನದಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. ಕಲಾವಿದರಲ್ಲಿ ಜಯಮಾಲಾ, ಉಮಾಶ್ರೀ, ಗಿರಿಜಾ ಲೋಕೇಶ್, ಸುಧಾರಾಣಿ, ರಮ್ಯ, ಪ್ರೇಮಾ, ಅನು ಪ್ರಭಾಕರ್ ಅವರುಗಳು ಉತ್ತಮ ಅಭಿನಯಕ್ಕಾಗಿ ಹೆಸರಾಗಿದ್ದಾರೆ. ಇವರಲ್ಲಿ ಒಬ್ಬರನ್ನು ರಾಯಭಾರಿಯಾಗಿ ಆಯ್ಕೆ ಮಾಡಿದ್ದರೆ ಸೂಕ್ತ ಎನಿಸುತ್ತಿತ್ತು.
“ಮಹಿಳಾ ಸಬಲೀಕರಣ” ಥೀಮ್ ಇದ್ದಾಕ್ಷಣ ಮಹಿಳೆಯರೇ ರಾಯಭಾರಿ ಆಗಬೇಕೇ ಎನ್ನುವ ಪ್ರಶ್ನೆಯೂ ಎದುರಾಗುತ್ತದೆ. ಹೀಗೆ ನೇಮಕ ಆಗಲೇಬೇಕು ಎಂಬ ನಿಯಮ ಇಲ್ಲದಿದ್ದರೂ ಅರ್ಥಪೂರ್ಣತೆ ದೃಷ್ಟಿಯಿಂದ ಮಹಿಳೆ, ರಾಯಭಾರಿ ಆಗುವುದು ಸಮಂಜಸ ಎನಿಸುತ್ತಿತ್ತು.
