Home ಸಿನಿಮಾಬೆಂಗಳೂರು ಸಿನಿಮೋತ್ಸವ; ಮುಜುಗರ ತಂದೊಡ್ಡುತ್ತಿರುವ ಸಮಸ್ಯೆಗಳು

ಬೆಂಗಳೂರು ಸಿನಿಮೋತ್ಸವ; ಮುಜುಗರ ತಂದೊಡ್ಡುತ್ತಿರುವ ಸಮಸ್ಯೆಗಳು

by Kumara Raitha
0 comments

ಲುಲು ಮಾಲ್‌ ನಲ್ಲಿ ಪ್ರತಿಷ್ಠಿತ ಬೆಂಗಳೂರು ಚಲನಚಿತ್ರೋತ್ಸವ ಆರಂಭವಾಗಿ ಎರಡು ದಿನ ಸಂದಿದೆ. (ಜನವರಿ 30ರಿಂದ) ಈಗಾಗಲೇ ತಾಂತ್ರಿಕ ಸಮಸ್ಯೆಗಳು ಸೇರಿದಂತೆ ಬೇರೆಬೇರೆ ಸಮಸ್ಯೆಗಳು ಎದುರಾಗಿವೆ. ದೂರದ ದೇಶ-ರಾಜ್ಯ- ಕರ್ನಾಟಕದ ಬೇರೆಬೇರೆ ಊರುಗಳಿಂದ ಬಂದವರು ಬೇಸರಿಸುವಂತೆ ಆಗಿದೆ.

ಇಂದು (ಜನವರಿ 31) ಮಧ್ಯಾಹ್ನ 5.20ಕ್ಕೆ ಸ್ಕ್ರೀನ್‌ ನಂಬರ್‌ ೪ರಲ್ಲಿ ಮಲೆಯಾಳಂ ಚಲನಚಿತ್ರ “ಭೂತಲಮ್”‌ ಪ್ರದರ್ಶನವಿತ್ತು. ನಿರ್ದೇಶಕ ಶ್ರೀಕಾಂತ್‌ ಪಂಗಲಪಟ್ಟು ಸೇರಿದಂತೆ ಅವರ ಚಿತ್ರತಂಡ ಹಾಜರಿತ್ತು. ಸಿನಿಮಾ ಮಂದಿರ ಹೌಸ್‌ ಪುಲ್‌ ಆಗಿತ್ತು. ಸಿನಿಮಾ ಶುರುವಾದ ಏಳೆಂಟು ನಿಮಿಷದಲ್ಲಿಯೇ ಪ್ರದರ್ಶನ ಸ್ಥಗಿತವಾಯಿತು. 10 ನಿಮಿಷ ಕಳೆದ ನಂತರ ಮತ್ತೆ ಶುರುವಾದರೂ ಮತ್ತೆ ಸ್ಥಗಿತವಾಯಿತು. ಹೀಗೆ ಮೂರು ಬಾರಿ ಅಡಚಣೆಯಾಯಿತು. ಇದರಿಂದ ಆಸಕ್ತಿಯಿಂದ ಕುಳಿತಿದ್ದವರಲ್ಲಿ ಸಾಕಷ್ಟು ಮಂದಿ ಹೊರಗೆ ನಡೆದರು.

ಈ ರೀತಿಯ ತಾಂತ್ರಿಕ ಸಮಸ್ಯೆ ಇದೇ ಮೊದಲಲ್ಲ. ಸ್ಕ್ರೀನ್‌ ನಂ. 3ರಲ್ಲಿಯೂ ಮೊದಲ ದಿನವೇ ಇದೇ ಸಮಸ್ಯೆ ಉಂಟಾಗಿತ್ತು. ವಿಐಪಿ ಸ್ಕ್ರೀನ್‌ ನಂಬರ್‌ 1ರಲ್ಲಿಯೂ ಜನವರಿ 30ರ ಸಂಜೆ 5.10ಕ್ಕೆ “ತಬತಬ” ಪ್ರದರ್ಶನ ಸಂದರ್ಭದಲ್ಲಿಯೂ ತಾಂತ್ರಿಕ ಸಮಸ್ಯೆಯಿಂದ ಸಿನಿಮಾ ತಡವಾಗಿ ಪ್ರದರ್ಶನವಾಯಿತು.

ಈ ರೀತಿ ಪದೇಪದೇ ತಾಂತ್ರಿಕ ಸಮಸ್ಯೆಗಳು ಎದುರಾಗುವುದು ಖಂಡಿತವಾಗಿಯೂ “ಕರ್ನಾಟಕ ಚಲನಚಿತ್ರ ಅಕಾಡೆಮಿ”ಗೆ ಮುಜುಗರದ ಸಂಗತಿಯಾಗುತ್ತದೆ. ಇದು ಕರ್ನಾಟಕ ಸರ್ಕಾರದ ಅಂಗಸಂಸ್ಥೆ ಆಗಿರುವುದರಿಂದ ರಾಜ್ಯ ಸರ್ಕಾರಕ್ಕೂ ಮುಜುಗರದ ಸಂಗತಿಯಾಗುತ್ತದೆ. ನಾವು ಕನ್ನಡಿಗರು ಸಹಿಸಿಕೊಳ್ಳಬಹುದು. ಆದರೆ ಹೊರಗಿನಿಂದ ಬಂದವರು ಖಂಡಿತವಾಗಿಯೂ ಟೀಕಿಸುತ್ತಾರೆ. ಇಂಥ ತೊಂದರೆಗಳನ್ನು ಮೊದಲೇ ಅಂದಾಜಿಸಿ ಟ್ರಯಲ್‌ ರನ್‌ ಮಾಡಿ ಸರಿ ಮಾಡಲು ಸಾಧ್ಯವಿಲ್ಲವೇ ?

ಈ ರೀತಿಯ ತಾಂತ್ರಿಕ ಸಮಸ್ಯೆ ಜೊತೆಗೆ ಇತರ ಸಮಸ್ಯೆಗಳೂ ಇವೆ. ಸ್ಕ್ರೀನ್‌ ನಂಬರ್‌ 3 ರಿಂದ 8ರವರೆಗೂ ಪ್ರವೇಶ ದ್ವಾರಗಳು ಇಕ್ಕಟ್ಟಾದ ಜಾಗದಲ್ಲಿವೆ. ಯಾವ ಸರದಿ ಯಾವ ಸ್ಕ್ರೀನ್‌ ಪ್ರದರ್ಶನಕ್ಕೆ ಹೋಗಲು ನಿಂತಿದೆ ಎಂಬುದೇ ತಿಳಿಯುತ್ತಿಲ್ಲ. ಇದರಿಂದ ಅನಗತ್ಯವಾದ ಮಾತಿನ ಚಕಮಕಿ ಉಂಟಾಗುತ್ತಿದೆ.

ವಿಐಪಿ ಸ್ಕ್ರೀನ್‌ 1 ರಿಂದ 3ರ ತನಕದ ಸ್ಕ್ರೀನ್‌ ಗಳಿರುವ ಥಿಯೇಟರ್‌ ಗಳಲ್ಲಿ ಮಾತ್ರ ಸುಖಾಸನವಿದೆ. ಸ್ಕ್ರೀನ್‌ ನಂಬರ್‌ 3 ರಿಂದ 8ರವರೆಗಿನ ಸೀಟುಗಳು ತುಂಬ ಹಾರ್ಡ್‌ ಆಗಿವೆ. ಜೊತೆಗೆ ಪುಷ್‌ ಬ್ಯಾಕ್‌ ಸಹ ಇಲ್ಲ. ಇಂಥ ಸೀಟುಗಳಲ್ಲಿ ಕುಳಿತು ಒಂದು ದಿನಕ್ಕೆ ಕನಿಷ್ಟ 2 ರಿಂದ 4 ಪ್ರದರ್ಶನಗಳನ್ನು ನೋಡುವವರ ದೇಹಸ್ಥಿತಿ ಹೇಗಾಗಬಹುದು. ಪಾರ್ಕಿಂಗ್‌ ಸಹ ದುಬಾರಿಯಾಗಿದೆ.

ಹೊರಗೆ 35 ಎಂಎಂ ಪ್ರೊಜೆಕ್ಟರ್‌ ನಲ್ಲಿ ಸಂಜೆ 7ರ ನಂತರ ಬಯಲು ಪ್ರದರ್ಶನದ ರೀತಿ ಸಿನಿಮಾ ತೋರಿಸಲಾಗುತ್ತಿದೆ. ರಸ್ತೆಬದಿಯೇ ಇರುವುದರಿಂದ ವಾಹನಗಳ ಹೆಡ್‌ ಲೈಟ್‌ ಬೆಳಕು ಸ್ಕ್ರೀನ್‌ ಮೇಲೆ ಬಿದ್ದು ಸಿನಿಮಾ ದೃಶ್ಯಗಳೇ ಕಾಣುತ್ತಿಲ್ಲ. ವಾಹನಗಳ ಭರಾಟೆ, ಹಾರ್ನ್‌ ಗಳ ಕಿರಿಕಿರಿ ನಡುವೆ ಧ್ವನಿಯೂ ಸಮರ್ಪಕವಾಗಿ ಕೇಳುವುದಿಲ್ಲ. ಪ್ರದರ್ಶನಕ್ಕೂ ಮೊದಲೇ ಇದರ ಅಂದಾಜು ಆಯೋಜಕರಿಗೆ ಇರಲಿಲ್ಲವೇ ?

You may also like

Leave a Comment

error: Content is protected !!