Kannadaಸಾಹಿತ್ಯ

ಜಾತಿ ಅವಮಾನವನ್ನು ಮೆಟ್ಟಿ ನಿಲ್ಲಲ್ಲೂ ಸಾಹಿತಿಯಾದೆ: ಕುಂ.ವೀ

“ಪ್ರತಿಯೊಬ್ಬರೂ ಸೃಜನಶೀಲ ಸಾಹಿತಿಗಳೇ ಆದರೆ ಕೆಲವರು ಬರೆಯುತ್ತಾರೆ ಹಲವರು ಬರೆಯುವುದಿಲ್ಲ ಅಷ್ಟೇ ವ್ಯತ್ಯಾಸ. ಇವರನ್ನು ಮೌಖಿಕ ಸಾಹಿತಿ, ಲಿಖಿತ ಸಾಹಿತಿ ಎಂದು ವಿಂಗಡಿಸಬಹುದು. ಮೌಖಿಕ ಸಾಹಿತಿ ಇನ್ನೊಬ್ಬರ ಅನುಭವವನ್ನು ಮೌಖಿಕವಾಗಿ ನಿರೂಪಿಸುತ್ತಾನೆ. ಲಿಖಿತ ಸಾಹಿತಿ ಬರೆಯುವುದರ ಮೂಲಕ ಜನರಿಗೆ ತನ್ನ ಅಥವಾ ಇತರರ ಅನುಭವಗಳನ್ನು ಓದುಗ ಜಗತ್ತಿಗೆ ಪರಿಚಯಿಸುತ್ತಾನೆ” ಎಂದು ಖ್ಯಾತ ಸಾಹಿತಿ ಕುಂ.ವೀರಭದ್ರಪ್ಪ ಪ್ರತಿಪಾದಿಸಿದರು.

ಕನ್ನಡ ಕರ್ನಾಟಕ ಫೌಂಡೇಶನ್ , ಎಂಪ್ಟಿ ಪಾಕೆಟ್ ಡ್ರೀಮ್ಸ್, ಮಂಡ್ಯ ನಗರದ  ಗಾಂಧಿ ಭವನದಲ್ಲಿ ಇಂದು ಆಯೋಜಿಸಿದ್ದ ಆಪ್ತ ಸಂವಾದ: ಒಂದು ಪುಸ್ತಕ ಕ್ರಾಂತಿ’ಯ ಐದನೇ ಕಂತಿನ ಅತಿಥಿ ಲೇಖಕರಾಗಿ  ಕುಂ. ವೀರಭದ್ರಪ್ಪ ಭಾಗವಹಿಸಿ ಮಾತನಾಡಿದರು.

“ಅನಕ್ಷರಸ್ಥರ ಕಲ್ಪನೆಯ ಜಗತ್ತು ದೊಡ್ಡದು. ನಮ್ಮ ಕುಟುಂಬದ ಹಿರಿಯರೆಲ್ಲರೂ ಅನಕ್ಷರಸ್ಥರಾಗಿದ್ದರು. ನಮ್ಮ ತಂದೆ ಏನೇ ಮಾತನಾಡಿದರೂ ರಸಭರಿತ ಕಥೆಯ ಹಾಗೆ ನಿರೂಪಿಸುತ್ತಿದ್ದರು. ಅದನ್ನು ಕೇಳಿಸಿಕೊಳ್ಳುತ್ತಿದ್ದೆ. ೫ನೇ ತರಗತಿ ಓದುವಾಗ ಎ.ಆರ್.ಕೃಷ್ಣಶಾಸ್ತ್ರಿಗಳ ವಚನಭಾರತ, ತಿಪ್ಪೆರುದ್ರಸ್ವಾಮಿ ಅವರ ಕಥಾಮೃತ ಪುಸ್ತಕಗಳನ್ನು ತಂದುಕೊಟ್ಟು ಪ್ರತಿದಿನವೂ ನನ್ನಿಂದ ಓದಿಸುತ್ತಿದ್ದರು. ಆಗ ಗದ್ಯವನ್ನು ಹೇಗೆ ಓದಬೇಕೆಂದು ಹೇಳಿಕೊಟ್ಟವರು ನಮ್ಮಪ್ಪ. ಹೀಗಾಗಿ ಬಾಲ್ಯದಲ್ಲಿಯೇ ನಾನು ಮೌಖಿಕ ಕಥೆಗಾರನಾಗಿದ್ದೆ. ಶಾಲೆಯಲ್ಲಿ ಕಥೆಗಳನ್ನು ಹೇಳುತ್ತಿದ್ದೆ. ಸಹಪಾಠಿಗಳು ಮಂತ್ರಮುಗ್ದರಾಗಿ ಕೇಳುವ ರೀತಿ ಕಥೆ ಹೇಳುತ್ತಿದ್ದೆ. ಹೆಚ್ಚು ಕಥೆಗಳನ್ನು ಹೇಳುವ ಸಲುವಾಗಿ ಸಾಹಿತ್ಯವನ್ನು ಓದತೊಡಗಿದೆ. ೧೦ನೇ ತರಗತಿಗೆ ಬರುವಷ್ಟರಲ್ಲಿ ಸಾರ್ವಜನಿಕ ಗ್ರಂಥಾಲಯದಲ್ಲಿ ಸಾವಿರಕ್ಕೂ ಹೆಚ್ಚು ಕಥಾ ಸಾಹಿತ್ಯ ಪುಸ್ತಕಗಳನ್ನು ಓದಿಕೊಂಡಿದ್ದೆ. ನಾನು ಕಥೆಗಾರನಾಗುವುದರಲ್ಲಿ ಅಜ್ಜಿ, ತಂದೆಯ ಪ್ರಭಾವ, ಪಾತ್ರ ಅಪಾರ ಎಂದು ಹೇಳಿದರು.

ನಾನು ಉತ್ಪಾದಕ ಸಮುದಾಯವಾದ ಕುಂಬಾರ ಜಾತಿಯಿಂದ ಬಂದವನು. ಅದು ನಿರ್ಲಕ್ಷ್ಯಕ್ಕೆ, ಅವಮಾನಕ್ಕೆ ಒಳಗಾದ ಸಮುದಾಯ. ಈ ನಿರ್ಲಕ್ಷ್ಯವನ್ನು ಮೆಟ್ಟಿ ನಿಲ್ಲುವ ಸಲುವಾಗಿಯೂ ಬರೆಯತೊಡಗಿದೆ. ಇವೆಲ್ಲ ಅಂಶಗಳು ನಾನು ಕಥೆಗಾರನಾಗುವಂತೆ ಪ್ರೇರೇಪಿಸಿವೆ ಎಂದರು.

ನಾನು ಸಣ್ಣ ಕಥೆಗಳನ್ನು ಆಯ್ಕೆ ಮಾಡಿಕೊಳ್ಳಲಿಲ್ಲ. ಕಥೆಗಳೇ ನನ್ನನ್ನು ಆಯ್ಕೆ ಮಾಡಿಕೊಂಡಿವೆ ಎಂದು ಅನಿಸುತ್ತದೆ. ನೀನು ಬರೆಯಪ್ಪ ಎಂದು ಹೇಳಿದವು. ಬರೆಯತೊಡಗಿದೆ ಅಷ್ಟೆ ! ೧೯೬೯ ರಿಂದ ೧೯೭೫ರ ಕಾಲಘಟ್ಟ ಏನಿದೆ ಅದು ಭೀಕರ ಬರಗಾಲ ಕಂಡಿದೆ. ಹಸಿವು ಎಲ್ಲೆಡೆ ತಾಂಡವಾಡುತ್ತಿತ್ತು. ಆ ಸಂದರ್ಭದಲ್ಲಿ ಅಮೆರಿಕಾದಿಂದ ಕೆಂಪುಜೋಳ ಬರ್ತಿತ್ತು. ಅದರಲ್ಲಿ ರೊಟ್ಟಿ ಮಾಡಲು ಆಗುತ್ತಿರಲಿಲ್ಲ. ಅದನ್ನು ರೊಟ್ಟಿ ಮಾಡಲು ನಮ್ಮ ತಾಯಿ ಪ್ರಯತ್ನಗಳನ್ನು ಮಾಡುತ್ತಿದ್ದರು. ಆಂಧ್ರದ ಗಡಿ ಭಾಗದಲ್ಲಿ ಭೀಕರ ಬರಗಾಲದ ಬಗ್ಗೆ ಜನಪದ ಕಥೆ ಕಾವ್ಯಗಳಿವೆ. ಅವುಗಳಲ್ಲಿ ಬರಗಾಲದಿಂದ ತೀವ್ರವಾಗಿ ಹಸಿದಿದ್ದ ಜನರು ಸಂತೃಪ್ತವಾಗಿ ಉಂಡು ಹೊಟ್ಟೆ ಬೆಳೆಸಿಕೊಂಡಿದ್ದ ವ್ಯಕ್ತಿ ಕಂಡರೆ ಅವನನ್ನು ಕೊಂದು ಹೊಟ್ಟೆ ಬಗೆದು ಅದರಲ್ಲಿದ್ದ ಆಹಾರ ಉಣ್ಣುತ್ತಿದ್ದರು ಎಂಬ ಭೀಕರ ವರ್ಣನೆಗಳಿವೆ. ಇಂಥ ಅಂಶಗಳೂ ನನ್ನ ಮೇಲೆ ಪ್ರಭಾವ ಬೀರಿ ಬರೆಯುವಂತೆ ಪ್ರೇರೇಪಿಸಿವೆ ಎಂದರು.

ಆಪ್ತ ಸಂವಾದವನ್ನು  ಸಿನಿತಜ್ಞ  ವಿನಯ್‌ ಕುಮಾರ್‌ ಎಂ.ಜಿ. ನಡೆಸಿಕೊಟ್ಟರು. ಸಂವಾದದಲ್ಲಿ ಅನೇಕ ಸಾಹಿತ್ಯಾಸಕ್ತರು ಭಾಗವಹಿಸಿ ಪ್ರಶ್ನೆಗಳನ್ನು ಕೇಳಿದರು. ಅವುಗಳಿಗೆ ಕುಂ.ವೀ ನೀಡಿದ ಉತ್ತರ ಅರ್ಥಪೂರ್ಣವಾಗಿತ್ತು.

ಇದು ಪ್ರತೀ ತಿಂಗಳ ಮೊದಲ ಭಾನುವಾರ ಮಂಡ್ಯದ ಗಾಂಧಿ ಭವನದಲ್ಲಿ ನಡೆಯುವ ಖಾಯಂ ಕಾರ್ಯಕ್ರಮ. ಪ್ರತಿಬಾರಿಯೂ ಬೇರೆಬೇರೆ ಸಾಹಿತಿಗಳು, ಸಿನಿಮಾ ತಜ್ಞರು, ವನ್ಯಜೀವಿ ತಜ್ಞರು ಹೀಗೆ ಬೇರೆಬೇರೆ ರಂಗಗಳ ಸಾಧಕರು ಭಾಗವಹಿಸಿ ತಮ್ಮ ಅನುಭವಗಳನ್ನು ಹಂಚಿಕೊಳ್ಳುತ್ತಾರೆ. ಆಸಕ್ತರು ಆಪ್ತ ಸಂವಾದ ಕಮ್ಯೂನಿಟಿ ಸೇರುವ ಮೂಲಕ ತಿಂಗಳಿಗೊಂದು ಪುಸ್ತಕ ಓದಿ ಆ ಪುಸ್ತಕದ ಲೇಖಕರೊಡನೆ ಸಂವಾದ ನಡೆಸಬಹುದು. ಆ ಸಂವಾದ ಪಾಡ್‘ಕಾಸ್ಟ್ ಆಗಿಯೂ ಪ್ರಸಾರಗೊಳ್ಳಲಿದೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!