Kannadaಪ್ರಸ್ತುತ

ನಾನೊಂದು ಸ್ವತಂತ್ರ ತನಿಖೆ ಕೈಗೊಂಡೆ

ಮೇ 22,  2026. ಬೆಂಗಳೂರು ರಾಜಾಜಿನಗರ ಭಾಷ್ಯಂ ಸರ್ಕಲ್ ಸನಿಹ ಇರುವ ಕಚೇರಿಯಿಂದ ಹೊರಬಂದೆ. ಬೈಕ್ ಅನ್ನು ಸರ್ವೀಸಿಗೆ ಕೊಟ್ಟಿದ್ದೆ. ಮಹಾಲಕ್ಷ್ಮಿ ಲೇಔಟ್ ನಲ್ಲಿ ಇರುವ ಅಂಚೆ ಅಧೀಕ್ಷಕರ ಕಚೇರಿಗೆ ಹೋಗಬೇಕಿತ್ತು. ದಾಖಲಾತಿಗಳಿದ್ದ ಫೈಲ್ ಅನ್ನು ಭದ್ರವಾಗಿ ಹಿಡಿದಿದ್ದೆ. ಹಿಂದಿನ ದಿನ ಕನ್ನಡಕದ ಅಂಗಡಿಯವರು “ನಿಮ್ಮ ಕನ್ನಡಕ ರೆಡಿಯಾಗಿದೆ. ಬಂದು ತೆಗೆದುಕೊಳ್ಳಿ” ಎಂದು ಕರೆ ಮಾಡಿದ್ದರು. ಈ ಅಂಗಡಿಯೂ ಭಾಷ್ಯಂ ಸರ್ಕಲ್ ಸನಿಹವೇ ಇದೆ. ಆನ್ ದ ವೇ ತೆಗೆದುಕೊಂಡು ಹೋಗೋಣ ಎಂದು ಹೊರಟೆ.
ಇತ್ತೀಚೆಗೆ ಸಣ್ಣಸಣ್ಣ ಅಕ್ಷರಗಳು ಸ್ಪಷ್ಟವಾಗಿ ಕಾಣಿಸುತ್ತಿರಲಿಲ್ಲ. ನೇತ್ರತಜ್ಞರನ್ನು ಸಂಪರ್ಕಿಸಿದ್ದೆ. ಲ್ಯಾಪ್ ಟಾಪ್ ನಲ್ಲಿ ಕೆಲಸ ಮಾಡಲು, ಪೇಪರ್ ಓದಲು ಅನುಕೂಲವಾಗುವಂಥ ಕನ್ನಡಕ ಬರೆದುಕೊಟ್ಟಿದ್ದರು. ಬೈಕ್ ರೈಡ್ ಮಾಡುವಾಗ ಕೂಲಿಂಗ್ ಗ್ಲಾಸ್ ಧರಿಸುವ ರೂಢಿ ಇದೆ. ಆದ್ದರಿಂದ ಡೇ ಅಂಡ್ ನೈಟ್ (ಬಿಸಿಲಿನಲ್ಲಿ ಕಪ್ಪಾಗುವುದು, ಉಳಿದಂತೆ ಪಾರದರ್ಶಕವಾಗುವುದು) ಕನ್ನಡಕ ತೆಗೆದುಕೊಳ್ಳಲು ನಿರ್ಧರಿಸಿದೆ.
ಇದೇ ಮೊದಲ ಬಾರಿಗೆ ಟೆಸ್ಟೆಡ್ ಕನ್ನಡಕ ತೆಗೆದುಕೊಳ್ಳಲು ಹೊರಟವನು ಅವುಗಳ ಬೆಲೆ ಕೇಳಿ ಆಶ್ಚರ್ಯವಾಯಿತು. ನಾನು ನಿರ್ಧರಿಸಿದ್ದ ಪ್ರೊಗ್ರೆಸೀವ್ ಹಾಗೂ ಡೇ ಅಂಡ್ ನೈಟ್ ಮಾದರಿ ಕನ್ನಡಕದ ಕನಿಷ್ಟ ಬೆಲೆ 12 ಸಾವಿರ ರೂಪಾಯಿ. ಅದಕ್ಕೆ ಆರ್ಡರ್ ಕೊಟ್ಟಿದ್ದೆ. ಅಂಗಡಿಗೆ ಹೋಗಿ ಕನ್ನಡಕ ತೆಗೆದುಕೊಂಡು ಟೆಸ್ಟ್ ಮಾಡಿದೆ. ಫರ್ ಫೆಕ್ಟ್ ಆಗಿತ್ತು. ಅದನ್ನು ಚೆಂದನೆಯ ವಿನ್ಯಾಸದ ಕಪ್ಪುಬಣ್ಣದ ಬಾಕ್ಸಿಗೆ ಹಾಕಿಕೊಟ್ಟರು.
ಅಂಗಡಿಯಿಂದ ಫೈಲು, ಕನ್ನಡಕದ ಬಾಕ್ಸ್ ಹಿಡಿದು ಹೊರಬಂದೆ. ಆಟೋ ಏರಿದೆ. ಅಂಚೆ ಅಧೀಕ್ಷಕರ ಕಚೇರಿಯಲ್ಲಿ ಸಂಬಂಧಿಸಿದ ಸಿಬ್ಬಂದಿಯೊಂದಿಗೆ ಮಾತನಾಡಿದೆ. ಹೊರಬಂದೆ. ತುಸು ದೂರ ನಡೆದು ಬಂದೆ. ಆಟೋ ಬುಕ್ ಮಾಡಿರಲಿಲ್ಲ. ಸಿಕ್ಕಿದ ಆಟೋ ಹತ್ತಿಕೊಳ್ಳೋಣ ಎಂದುಕೊಂಡೆ. ಸಾಮಾನ್ಯವಾಗಿ ಖಾಲಿ ಇರುವ ಆಟೋಗಳು ರಸ್ತೆಯ ತೀರಾ ಎಡಬದಿಗೆ ಸಂಚರಿಸುತ್ತವೆ. ಆಟೋ ಬಂತು. ರಾಜಾಜಿನಗರ ಭಾಷ್ಯಂ ಸರ್ಕಲ್ ಎಂದು ಹೇಳಿ ಕುಳಿತುಕೊಂಡೆ.
ಲೇಖಕರೊಬ್ಬರಿಗೆ ಮೆಸೇಜ್ ಮಾಡಬೇಕಿತ್ತು. ಜೇಬಿನಲ್ಲಿದ್ದ, ನೇತ್ರತಜ್ಞರು ತಾತ್ಕಾಲಿಕವಾಗಿ ಬಳಸಲು ಹೇಳಿದ್ದ 500 ರೂ ಬೆಲೆಯ ರೀಡಿಂಗ್ ಗ್ಲಾಸ್ ತೆಗೆದು ಹಾಕಿಕೊಂಡು ಮೆಸೇಜ್ ಮಾಡಿದೆ. ಆ ಸಂದರ್ಭದಲ್ಲಿ ಫೈಲ್ ಅನ್ನು ಕೆಳಗಿಡದೇ ಹೊಸ ಕನ್ನಡಕವನ್ನು ಬಾಕ್ಸ್ ಸಮೇತ ಪಕ್ಕಕ್ಕಿಟ್ಟುಕೊಂಡಿದ್ದೆ. ಮೆಸೇಜ್ ಮಾಡಿದ ನಂತರ ಧರಿಸಿದ್ದ ಕನ್ನಡಕ ತೆಗೆದು ಜೇಬಿನಲ್ಲಿಟ್ಟುಕೊಂಡೆ. ಮುಂದಿನ ಯೋಜನೆಗಳ ಬಗ್ಗೆ ತೀವ್ರವಾಗಿ ಯೋಚಿಸತೊಡಗಿದೆ. ಭಾಷ್ಯಂ ಸರ್ಕಲ್ ಬಳಿ ಇರುವ ಕಾಫಿಶಾಪ್ ಮುಂದೆ ಇಳಿದುಕೊಂಡೆ. ಆಟೋ ಚಾಲಕ “ ಕ್ಯಾಶ್ ಇದ್ದರೆ ಕೊಡಿ” ಎಂದರು. ಸಾಮಾನ್ಯವಾಗಿ ನಾನು ಗೂಗಲ್ ಪೇ/ ಪೋನ್ ಪೇ ಮಾಡುತ್ತೇನೆ. ಕ್ಯಾಶ್ ಕೇಳಿದ್ದರಿಂದ 50 ರೂಪಾಯಿ ಕೊಟ್ಟು ಮುಂದೆ ನಡೆದೆ. ಒಂದೆರಡು ನಿಮಿಷ ಕಳೆಯುವಷ್ಟರಲ್ಲಿ ಕನ್ನಡಕದ ಬಾಕ್ಸ್ ಅನ್ನು ಆಟೋದಲ್ಲಿಯೇ ಬಿಟ್ಟಿದ್ದು ನೆನಪಾಯಿತು. ಆಟೋ ಎತ್ತ ಹೋಯಿತು ಎಂದು ಗೊತ್ತಿರಲಿಲ್ಲ. ಮತ್ತೊಂದು ಆಟೋ ಹತ್ತಿ ಹುಡುಕಿದೆ. ನಾನು ಬಂದಿದ್ದ ಆಟೋ ಕಪ್ಪು ಬಣ್ಣದ ಬಾಡಿ ಮತ್ತು ಹಳದಿ ಬಣ್ಣದ ಟಾಪ್ ಹೊಂದಿತ್ತು. ಇಂಥ ಕಲರ್ ಆಟೋಗಳೀಗ ಬೆಂಗಳೂರಿನಲ್ಲಿ ಅಪರೂಪ. ಆದರೆ ಆ ಆಟೋ ಎಲ್ಲಿಯೂ ಕಾಣಲಿಲ್ಲ.
ತೀರಾ ದುಗುಡವಾಗತೊಡಗಿತು. ಹೋಟೆಲಿಗೆ ಬಂದವನು ಕಾಫಿ ಕುಡಿಯುತ್ತಾ ಯೋಚಿಸತೊಡಗಿದೆ. ನಾನು ಇಳಿದಲ್ಲಿ ಇರುವ ಕಾಫಿಶಾಪ್ ಹೊರಭಾಗದಲ್ಲಿ ಸಿಸಿ ಕ್ಯಾಮೆರಾವಿದೆ. ಅಲ್ಲಿಗೆ ಹೋಗಿ ಹೀಗೀಗೆ ಎಂದು ಹೇಳಿದೆ. “ರೆಕಾರ್ಡ್ ಆಗಿರುವ ದೃಶ್ಯ ನೋಡಲು ಮಾನಿಟರ್ ಇಲ್ಲ, ನಮ್ಮ ಕೇಂದ್ರ ಕಚೇರಿಯಲ್ಲಿ ಇರುವ ಬ್ಯಾಕ್ ಎಂಡ್ ಟೀಮ್ ನವರಿಗೆ ಕೇಳಬೇಕು. ನಮ್ಮ ಮ್ಯಾನೇಜರ್ ನಾಳೆ ಬರ್ತಾರೆ ಬನ್ನಿ” ಎಂದರು.
ಹೊರಬಂದು ಅಕ್ಕಪಕ್ಕದಲ್ಲಿ ಸಿಸಿ ಕ್ಯಾಮೆರಾಗಳಿವೆಯೇ ಎಂದು ನೋಡಿದೆ. ನಾನು ಇಳಿದುಕೊಂಡ ಸ್ಥಳದ ಎದುರಿಗೆ ಇರುವ ಮನೆಯ ಹೊರಭಾಗದಲ್ಲಿ ಮೂರು ಸಿಸಿ ಕ್ಯಾಮೆರಾಗಳಿದ್ದವು. ಕಾಲಿಂಗ್ ಬೆಲ್ ಮಾಡಿದೆ. ಮನೆಯಿಂದ ಒಬ್ಬ ಪುರುಷ ಹೊರಬಂದರು. ಹೀಗೀಗೆ ಎಂದೆ. ಅವರು “ ಸಿಸಿ ಕ್ಯಾಮೆರಾಗಳು ವರ್ಕ್ ಆಗುತ್ತವೆ. ಆದರೆ ದೃಶ್ಯಾವಳಿ ಶೇಖರಿಸಲು ಮೆಮೊರಿ ಕಾರ್ಡ್ ಇಲ್ಲ” ಎಂದರು. ಮತ್ತೇನು ಮಾಡುವುದು ? ಮತ್ತೆ ಸುತ್ತಲೂ ಪರಿಶೀಲಿಸಿದೆ. ಸನಿಹದಲ್ಲಿಯೇ ಮೂರು ಸಿಸಿ ಕ್ಯಾಮೆರಾಗಳಿರುವ ಪೋಲ್ ಕಣ್ಣಿಗೆ ಬಿತ್ತು. ಸಂಚಾರಿ ಪೊಲೀಸ್ ಕ್ಯಾಮೆರಾ ಇರಬಹುದೆಂದು ಭಾವಿಸಿ ರಾಜಾಜಿನಗರ ಸಂಚಾರಿ ಪೊಲೀಸ್ ಠಾಣೆಗೆ ಬಂದೆ. “ನೀವು ಹೇಳಿದ ಸ್ಥಳದಲ್ಲಿ ನಮ್ಮ ಕ್ಯಾಮೆರಾಗಳು ಇಲ್ಲ” ಎಂದರು. ಯಾವುದಕ್ಕೂ ಕಾನೂನು ಸುವ್ಯವಸ್ಥೆ ಮತ್ತು ಅಪರಾಧ ಪತ್ತೆ ಹಚ್ಚುವಿಕೆಯ ಠಾಣೆಯಲ್ಲಿ ವಿಚಾರಿಸೋಣ ಎಂದುಕೊಂಡೆ. ಸಂಚಾರಿ ಮತ್ತು ರೆಗ್ಯಲರ್ ಪೊಲೀಸ್ ಠಾಣೆ ಒಂದೇ ಆವರಣದಲ್ಲಿವೆ.
ಠಾಣೆಗೆ ಹೋದಾಗ ರೈಟರ್ “ಔಪಚಾರಿಕವಾಗಿ ಒಂದು ದೂರು ಬರೆದುಕೊಡಿ” ಎಂದೇಳಿ ನೋಟ್ ಬುಕ್ ಕೊಟ್ಟರು. ಇದಕ್ಕೆ ಯಾವುದೇ ರಶೀದಿ ನೀಡುವುದಿಲ್ಲ.ಪೊಲೀಸ್ ಪರಿಭಾಷೆಯಲ್ಲಿ ಹೇಳುವುದಾದರೆ ಇದು NCR – Non Cognizable Report ಸಹ ಅಲ್ಲ. NCR ಅಥವಾ FIR ಮಾಡಿದಾಗ ಮಾತ್ರ ರಶೀದಿ ಕೊಡುತ್ತಾರೆ. “ಕ್ರೈಮ್ ಸ್ಟಾಪ್ ಯಾರೂ ಇಲ್ಲ ನೀವು ನಾಳೆ ಬನ್ನಿ” ಎಂದು ರೈಟರ್ ಹೇಳಿದರು.
ಮರುದಿನ ಬೆಳಗ್ಗೆಯೇ ಠಾಣೆಯಲ್ಲಿ ಹಾಜರು. ರೈಟರ್ ಅವರು ಕ್ರೈಮ್ ಸಿಬ್ಬಂದಿಯನ್ನು ಪರಿಚಯಿಸಿದರು. ಅವರು ನನ್ನಿಂದ ವಿವರ ಪಡೆದುಕೊಂಡು ತಕ್ಷಣವೇ ನಾನು ಆಟೋದಿಂದ ಇಳಿದುಕೊಂಡ ಸ್ಪಾಟ್ ಗೆ ಬಂದರು. ಕಾಫಿಶಾಪ್ ನಲ್ಲಿ ಅದೇ ಉತ್ತರ “ಮಾನಿಟರ್ ಇಲ್ಲ” ಪಕ್ಕದಲ್ಲಿಯೇ ಇರುವ ಮೂರು ಸಿಸಿ ಕ್ಯಾಮೆರಾ ನಿಮ್ಮದಲ್ಲವೇ” ಎಂದು ಕೇಳಿದೆ. ಅದಕ್ಕೆ ಪೊಲೀಸರು ಅದನ್ನು ಬಿಬಿಎಂಪಿ ನಿರ್ವಹಣೆ ಮಾಡುತ್ತದೆ. ಸದ್ಯಕ್ಕೆ ಆ ಕ್ಯಾಮೆರಾಗಳು ವರ್ಕ್ ಮಾಡುತ್ತಿಲ್ಲ” ಎಂದರು. ನಂತರ ಬನ್ನಿ ಧೋಬಿಘಾಟ್ ಸರ್ಕಲ್ ನಲ್ಲಿರುವ ನಮ್ಮ ಕ್ಯಾಮೆರಾ ಪೂಟೇಜ್ ಪರಿಶೀಲಿಸೋಣ ಎಂದರು. ವಾಪಸ್ಸು ಠಾಣೆಗೆ ಬಂದೆವು. ಅಲ್ಲಿನ ಕ್ಯಾಮೆರಾ ಕಮಾಂಡಿಗ್ ಸೆಂಟರಿನಲ್ಲಿ ಪರಿಶೀಲಿಸಿದರು. ನಾನು ಇಳಿದಿದ್ದ ಆಟೋ ಗುರುತಾಗಲಿಲ್ಲ.
ಆಗ ನನಗೆ ಆ ಆಟೋ ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣೆಯ ಮುಂದೆಯೇ ಹಾದು ಬಂದಿದ್ದು ನೆನಪಾಯಿತು. ಅಲ್ಲಿಯೂ ಒಮ್ಮೆ ಕೇಳುತ್ತೇನೆ ಎಂದು ಬಂದೆ. ಆದರೆ ಅಲ್ಲಿ ರಸ್ತೆಗೆ ಅಭಿಮುಖವಾಗಿ ಯಾವುದೇ ಕ್ಯಾಮೆರಾ ಸಹ ಇಲ್ಲ. ಪೊಲೀಸ್ ಠಾಣೆಗಳ ಹೊರಭಾಗದಲ್ಲಿ ಕ್ಯಾಮೆರಾ ಇರಲೇಬೇಕು. ಇದ್ದಾಗ ಏನಾದರೂ ಗಲಾಟೆ – ಪ್ರತಿಭಟನೆ ಆದಾಗ ರೆಕಾರ್ಡ್ ಆಗುತ್ತದೆ. ಇಲ್ಲಿಯೂ ಕ್ಯಾಮೆರಾ ಇಲ್ಲವಲ್ಲ ಏನು ಮಾಡುವುದು ಎಂದು ಚಿಂತಿಸುತ್ತಾ ಹೊರಬಂದೆ. ನಾನು ಆಟೋ ಹತ್ತಿದ್ದ ಸ್ಥಳ ಅಲ್ಲಿಂದ ಕೆಲವೇ ಹೆಜ್ಜೆ ಅಂತರ. ಅಲ್ಲಿಗೆ ಬಂದು ಸುತ್ತಲೂ ನೋಡಿದೆ. ನಾನು ಆಟೋ ಹತ್ತಿದ ಸ್ಥಳದ ಮಗ್ಗಲಿನಲ್ಲಿಯೇ ಒಂದೇ ಪೋಲಿನಲ್ಲಿ ಎರಡು ಸಿಸಿ ಕ್ಯಾಮೆರಾ ಇತ್ತು. ಪಕ್ಕದ ಅಂಗಡಿಯಲ್ಲಿಯೂ ಒಂದು ಕ್ಯಾಮೆರಾವಿತ್ತು.
ಅಂಗಡಿಯಲ್ಲಿ ವಿಚಾರಿಸಿದೆ. “ಈ ಕ್ಯಾಮೆರಾ ಕೇವಲ ಅಂಗಡಿಯ ಶಟರ್ ಗಳತ್ತ ಪೋಕಸ್ ಆಗಿದೆ” ಎಂದರು. ಪಕ್ಕದಲ್ಲಿರುವ ಕ್ಯಾಮೆರಾ ಬಿಬಿಎಂಪಿಯದು ಎಂದು ಗೊತ್ತಾಗಿತ್ತು. ರಾಜಾಜಿನಗರದಂತೆ ಇದು ಸಹ ವರ್ಕ್ ಮಾಡದೇ ಇದ್ದರೆ ಏನಪ್ಪ ಎಂದು ಆತಂಕವಾಯಿತು. ಆದರೂ ಪೋಲ್ ನಲ್ಲಿ ಇದ್ದ ನಂಬರ್ ಪ್ಲೇಟ್ ಪೋಟೋ ತೆಗೆದುಕೊಂಡೆ. ವಿಚಾರಿಸೋಣ ಎಂದು ಬಿಬಿಎಂಪಿ ವಾರ್ಡ್ ಆಫೀಸಿನತ್ತ ಬಂದೆ. ಅವತ್ತು ಆಫೀಸಿಗೆ ರಜೆ. ಆದರೂ ಯಾರಾದರೂ ಬರುತ್ತಾರೆಯೇ ನೋಡೋಣ ಎಂದು ಕಾದು ಕುಳಿತೆ. ತುಸು ಹೊತ್ತು ಕಳೆದ ಮೇಲೆ ಸ್ಕೂಟರ್ ನಲ್ಲಿ ಇಬ್ಬರು ಬಂದರು. ಅದೃಷ್ಟಕ್ಕೆ ಅವರು ಬಿಬಿಎಂಪಿಯ ಮಹಾಲಕ್ಷ್ಮಿ ಲೇಔಟ್ ವಾರ್ಡ್ ಕ್ಯಾಮೆರಾ ನಿರ್ವಹಣೆ ಮಾಡುವ ಸಿಬ್ಬಂದಿ. ಹೀಗೀಗೆ ಎಂದೆ. “ಇತ್ತೀಚೆಗೆ ಬಿದ್ದ ಮಳೆಯಿಂದ ಸುಮಾರು ಕ್ಯಾಮೆರಾಗಳು ವರ್ಕ್ ಆಗುತ್ತಿಲ್ಲ. ನೀವು ಯಾವ ಕ್ಯಾಮೆರಾ ಬಗ್ಗೆ ಕೇಳುತ್ತಿದ್ದೀರಿ” ಎಂದರು. ಪೋಟೋ ತೋರಿಸಿದೆ. “ಬನ್ನಿ ಚೆಕ್ ಮಾಡೋಣ ನಿಮ್ಮ ಅದೃಷ್ಟ ಪರೀಕ್ಷೆಯೂ ಆಗುತ್ತದೆ” ಎಂದರು.
ನಾನು ಮಧ್ಯಾಹ್ನ 2.30   ಸುಮಾರಿಗೆ ಅಂಚೆ ಅಧೀಕ್ಷಕರ ಕಚೇರಿಗೆ ಬಂದಿದ್ದೆ. ಅಲ್ಲಿ ಇದ್ದಿದ್ದು ಐದು ನಿಮಿಷ ಅಷ್ಟೆ. ಹೇಳಿದೆ. ಚೆಕ್ ಮಾಡಿದರು. ನಾನು ಆಟೋದಿಂದ ಇಳಿದಿದ್ದು, ಅಂಚೆ ಕಚೇರಿ ಕಡೆ ಹೋಗಿದ್ದು ಮತ್ತೆ ನಡೆದು ಬಂದಿದ್ದು ದಾಖಲಾಗಿತ್ತು. ನಾನು ನಡೆದುಕೊಂಡು ಬಂದು ಕ್ಯಾಮೆರಾ ಕೆಳಗಿಯೇ ನಿಂತಿದ್ದೇನೆ. ಇದು ರೆಕಾರ್ಡ್ ಆಗಿಲ್ಲ (ಬಹುಶಃ ಇಂಥ ಸಂದರ್ಭಗಳಿಗೆ ದೀಪದ ಕೆಳಗೆ ಕತ್ತಲು ಎಂದಿರಬಹುದು) ನಾನು ಬಂದ ನಂತರ ಎರಡು ಖಾಲಿ ಆಟೋ ರಸ್ತೆಯ ತೀರಾ ಎಡಬದಿಯಲ್ಲಿಯೇ ಬಂದಿವೆ. ಕ್ಯಾಮೆರಾ ರೆಶುಲ್ಯೂಶನ್ ಕಡಿಮೆ ಇದ್ದ ಕಾರಣ ದೊಡ್ಡ ಮಾನಿಟರ್ ನಲ್ಲಿಯೂ ಅವುಗಳ ನಂಬರ್ ಸ್ಪಷ್ಟವಾಗಿ ಕಾಣಿಸುತ್ತಿರಲಿಲ್ಲ. ವಿಡಿಯೋವನ್ನು ಸ್ಟಿಲ್ ಮಾಡಿ ಜೂಮ್ ಮಾಡುವಂತೆ ಹೇಳಿದೆ. ಹಾಗೆ ಮಾಡಿದರು. ಮೊಬೈಲಿನಲ್ಲಿ ಅದರ ಪೋಟೋ ತೆಗೆದಕೊಂಡೆ.
ಎರಡು ಖಾಲಿ ಆಟೋದಲ್ಲಿ ಯಾವ ಆಟೋ ಹತ್ತಿದೆ ಎಂಬುದನ್ನು ಕ್ರಾಸ್ ಚೆಕ್ ಮಾಡಬೇಕಿತ್ತು. ನನಗೆ ಸ್ಪಷ್ಟವಾಗಿ ಆಟೋ ಹತ್ತಿದ್ದ ಸಮಯ ನೆನಪಿತ್ತು. ಆಗ 2. 40 ನಿಮಿಷ. ಮಹಾಲಕ್ಷ್ಮಿ ಸ್ಟೇಷನ್ ಮುಂದೆ ಹೋಗುವಾಗ ಮೆಸೇಜ್ ಮಾಡಿದ್ದೆ. ಆಗ ಸಮಯ 2. 41  ನಿಮಿಷ. ಆದರೆ ಬಿಬಿಎಂಪಿ ಕ್ಯಾಮೆರಾದಲ್ಲಿ ಖಾಲಿ ಆಟೋಗಳು ಬಂದ ಸಮಯ 2. 47 ನಿಮಿಷ ಎಂದು ತೋರಿಸುತ್ತಿತ್ತು.
ರಾಜಾಜಿನಗರ ಪೊಲೀಸ್ ಠಾಣೆಗೆ ಬಂದೆ. ಕ್ರೈಮ್ ಸಿಬ್ಬಂದಿ ಮತ್ತೆ ದೃಶ್ಯಾವಳಿ ಜಾಲಾಡತೊಡಗಿದರು. ನಿಧಾನವಾಗಿ ಪರಿಶೀಲಿಸಿದರು. ನಾನು ಧೋಭಿಘಾಟ್ ಹಾದು ಹೋಗುವಾಗ ಒಂದು ಕಾರು ನಿಲ್ಲುತ್ತದೆ ಅದರ ಮುಂದೆ ಆಟೋ ಹೋಗಿದ್ದು ನೆನಪಿತ್ತು. ಇಂಥ ದೃಶ್ಯವನ್ನೇ ಜೂಮ್ ಮಾಡಿ ಪರಿಶೀಲನೆ ಮಾಡಿದಾಗ ಕಪ್ಪು ಬಣ್ಣದ ಬಾಡಿ, ಹಳದಿ ಬಣ್ಣದ ಟಾಪ್ ಇರುವ ಆಟೋದಲ್ಲಿ ಕುಳಿತಿದ್ದ ನನ್ನ ಕಾಲುಗಳು ಕಾಣಿಸಿದವು. ಬ್ಲೂ ಕಲರ್ ಜೀನ್ಸ್ ಪ್ಯಾಂಟ್ ಹಾಕಿದ್ದೆ. ಧರಿಸಿದ್ದ ಚಪ್ಪಲಿಗಳು ಕಾಣಿಸಿದವು. ಆಟೋ ಪತ್ತೆಯಾಯಿತು. ಅದರ ನಂಬರ್ KA O2 AA 0145. ನೋಂದಣಿ ವಿಳಾಸ ಮಹಾಲಕ್ಷ್ಮಿ ಲೇಔಟಿನದು. ಆದರೆ ಆಟೋ ಮಾಲಿಕನ ನಂಬರ್ ಇರಲಿಲ್ಲ. ಧೋಬಿಘಾಟ್ ಸರ್ಕಲ್ ನಲ್ಲಿ ಆಟೋ ಬಂದ ಸಮಯ 2. 40. ಅಂದರೆ ಸಿಸಿ ಕ್ಯಾಮೆರಾಗಳಲ್ಲಿ ರೇಡಿಯೂ ಟೈಮ್ ಅಥವಾ ಆಕ್ಯುರೆಟ್ ಟೈಮಿಂಗ್ ದಾಖಲಾಗುತ್ತಿಲ್ಲ.
ಮತ್ತೆ ಮಹಾಲಕ್ಷ್ಮಿ ಲೇಔಟಿಗೆ ಬಂದು ಮನೆ ಪತ್ತೆ ಹಚ್ಚಿದೆ. ಅಕ್ಕಪಕ್ಕದಲ್ಲಿ ವಿಚಾರಿಸಿದರೆ “ಆಟೋ ಮಾಲಿಕ ಆ ಮನೆಯನ್ನು ಮಾರಿ ಹತ್ತು ವರ್ಷದ ಮೇಲಾಗಿದೆ, ಎಲ್ಲಿದ್ದಾರೆ ಎಂಬುದು ಗೊತ್ತಿಲ್ಲ” ಎಂದರು. ಆ ಮನೆಯ ಸನಿಹದಲ್ಲಿಯೇ ಇರುವ ವೃದ್ದರೊಬ್ಬರು “ನಿಮ್ಮ ನಂಬರ್ ಕೊಟ್ಟರಿʼ ಅವರ ಬಗ್ಗೆ ವಿಚಾರಿಸುತ್ತೇನೆ. ಗೊತ್ತಾದರೆ ಕಾಲ್ ಮಾಡುತ್ತೇನೆ ಎಂದರು. ಮೊಬೈಲ್ ನಂಬರ್ ಕೊಟ್ಟೆ. ಅಲ್ಲಿಂದ ಸೀದಾ ರಾಜಾಜಿನಗರದ ಫಸ್ಟ್ ಬ್ಲಾಕಿನಲ್ಲಿನಲ್ಲಿರುವ ಆಟೋ ಚಾಲಕರ ಸಂಘದ ಕಚೇರಿಗೆ ಬಂದೆ. ಬಾಗಿಲಾಕಿತ್ತು. ಅದರ ಬೋರ್ಡಿನಲ್ಲಿದ್ದ ನಂಬರಿಗೆ ಕಾಲ್ ಮಾಡಿದೆ. ರಿಸೀವ್ ಮಾಡಿದವರು ವಿವರ ವಾಟ್ಸಪ್ ಮಾಡಿ, ಜೊತೆಗೆ ಸ್ಥಳೀಯ ಆಟೋ ಚಾಲಕರ ಇಬ್ಬರು ಮುಖಂಡರ ನಂಬರ್ ಕೊಡುತ್ತೇನೆ, ವಿಚಾರಿಸಿ ಎಂದರು. ಕೊಟ್ಟರು. ವಿಚಾರಿಸಿದೆ. ಅವರಿಬ್ಬರಿಗೂ ಆ ಆಟೋ ಮಾಲಿಕರ ಹೆಸರು, ಆಟೋ ನಂಬರ್ ಹೇಳಿದೆ. ಅವರಿಗೂ ಗೊತ್ತಾಗಲಿಲ್ಲ.
ಅಲ್ಲಿಂದ ಸೀದಾ ರಾಜಾಜಿನಗರ ಆರ್ ಟಿ ಒ ಕಚೇರಿಗೆ ಬಂದೆ. ಅಲ್ಲಿ ಪೋನ್ ನಂಬರ್ ಸಿಕ್ಕಬಹುದು ಎಂಬ ಭರವಸೆ ಇತ್ತು. ಆದರೆ ಅಲ್ಲಿಯೂ ಆಟೋ ಮಾಲಿಕರ ಪೋನ್ ನಂಬರ್ ದಾಖಲಾಗಿರಲಿಲ್ಲ. ಆಗ ಫಕ್ಕನೆ ಆಟೋ ಚಾಲಕರ ಸೀಟ್ ಹಿಂಬದಿ ಇರುವ ಡಿಸ್ ಪ್ಲೇ ಕಾರ್ಡ್ ನೆನಪಾಯಿತು. ಇದನ್ನು ಎಲ್ಲಿ ಕೊಡುತ್ತಾರೆ ಎಂದು ವಿಚಾರಿಸಿದಾಗ ಯಶವಂತಪುರ ಸಂಚಾರಿ ಎಸಿಪಿ ಕಚೇರಿಯಲ್ಲಿ ಎಂದು ಗೊತ್ತಾಯಿತು. ಅಲ್ಲಿಗೆ ಹೋದೆ. ಪರಿಶೀಲಿಸಿದರು. “ನಮ್ಮ ವಿಭಾಗದಿಂದ ಈ ಆಟೋಗೆ ಡಿಸ್ ಪ್ಲೇ ಕಾರ್ಡ್ ಕೊಟ್ಟಿಲ್ಲ” ಎಂದರು. “ಎಲ್ಲಿ ಕೊಟ್ಟಿರಬಹುದು” ಎಂದು ಕೇಳಿದೆ. “ಗೊತ್ತಿಲ್ಲ” ಎಂಬ ಉತ್ತರ ಬಂತು.
ಇಂಡಿಯನ್ ಎಕ್ಸ್ ಪ್ರೆಸ್ ಹಿಂಭಾಗದಲ್ಲಿರುವ ಜಂಟಿ ಪೊಲೀಸ್ ಆಯುಕ್ತರು ಸಂಚಾರಿ ವಿಭಾಗ ಇವರ ಕಚೇರಿಯಲ್ಲಿ ಕಮಾಂಡಿಗ್ ಸೆಂಟರ್ ಇದೆ. ಇಲ್ಲಿ ಪತ್ತೆಯಾಗಬಹುದು ಎಂದು ಅಲ್ಲಿಗೆ ಹೋದೆ. ಅಲ್ಲಿಯೂ ಪೋನ್ ನಂಬರ್ ಪತ್ತೆ ಆಗಲಿಲ್ಲ. ಉಪ್ಪಾರಪೇಟೆ ಪೊಲೀಸ್ ಠಾಣೆ ಆವರಣದಲ್ಲಿಯೇ ಪಶ್ಚಿಮ ಸಂಚಾರಿ ವಿಭಾಗದ ಎಸಿಪಿ ಕಚೇರಿ ಇದೆ. ಯಾವುದಕ್ಕೂ ಒಮ್ಮೆ ವಿಚಾರಿಸೋಣ ಎಂದು ಹೊರಟೆ. ಅಲ್ಲಿ ಡಿಸ್ ಪ್ಲೇ ಕಾರ್ಡ್ ವಿವರ ಪೋನ್ ನಂಬರ್ ಸಮೇತ ಪತ್ತೆಯಾಯಿತು. ಒಂದೆರಡು ವರ್ಷದ ಹಿಂದೆ ಮಾಡಿಸಿರುವ ಡಿಸ್ ಪ್ಲೇ ಕಾರ್ಡಿನಲ್ಲಿಯೂ ಹಳೇ ವಿಳಾಸವೇ ಇದೆ. ಆದರೆ ಅಲ್ಲಿ ಆಟೋ ಮಾಲಿಕ ವಾಸವಿಲ್ಲ. ಡಿಸ್‌ ಪ್ಲೇ ಮಾಡಿಸುವಾಗ ಬದಲಾಯಿಸಿದ್ದ ಮನೆ ವಿಳಾಸ ಕೊಟ್ಟಿಲ್ಲ.
ಪತ್ತೆಯಾದ ನಂಬರಿಗೆ ಸಂಚಾರಿ ಪೊಲೀಸರು ಕಾಲ್ ಮಾಡಿದರು. ರಿಸೀವ್ ಆಗಲಿಲ್ಲ. ಸ್ವಲ್ಪ ಅವಧಿಗಳನ್ನು ಕಳೆದು ಮೂರು ಬಾರಿ ಕಾಲ್ ಮಾಡಿದರು. ಪೋನ್ ರಿಂಗ್ ಆಗುತ್ತದೆ. ಆದರೆ ರಿಸೀವ್ ಆಗುತ್ತಿಲ್ಲ.
ರಾಜಾಜಿನಗರ ಕ್ರೈಮ್ ಪೊಲೀಸರಿಗೆ ಹೇಳಿ ಅಲ್ಲಿಂದಲೂ ಕಾಲ್ ಮಾಡಿಸಿ ಎಂದರು. ಅದರಂತೆಯೇ ಹೋಗಿ ಕಾಲ್ ಮಾಡಿಸಿದೆ. ಇವರು ಮೂರ್ನಾಲ್ಕು ಬಾರಿ ಕಾಲ್ ಮಾಡಿದರು ಪೋನ್ ರಿಂಗ್ ಆಗುತ್ತದೆಯೇ ವಿನಃ ರಿಸೀವ್ ಆಗುತ್ತಿಲ್ಲ. ಪತ್ತೆಯಾದ ಪೋನ್ ನಂಬರ್ ಗೆ ವಿನಂತಿಯ ಮೆಸೇಜ್ ಕಳಿಸಿದೆ. ರಿಪ್ಲೈ ಬಂದೇ ಇಲ್ಲ. ಎಸ್ ಎಂ ಎಸ್ ನಲ್ಲಿಯೂ ವಿನಂತಿ ಕಳಿಸಿದೆ. ಇದರಿಂದಲೂ ರಿಪ್ಲೈ ಬಂದಿಲ್ಲ. ಸಂಬಂಧಿಸಿದವರು ಈ ಮೆಸೇಜಿಗೆ “ನಿಮ್ಮ ಕನ್ನಡಕ ಸಿಕ್ಕಿದೆ ಅಥವಾ ಸಿಕ್ಕಿಲ್ಲ” ಎಂದಿದ್ದರೂ ಆಯ್ತು ಈ ವಿಷಯ ಬಿಟ್ಟು ಬಿಡೋಣ ಎಂದು ನಿರ್ಧರಿಸಿ ಸಮಾಧಾನ ಮಾಡಿಕೊಳ್ಳುತ್ತಿದ್ದೆ. ಯಾವ ಉತ್ತರವೂ ದಕ್ಕಿಲ್ಲ ! ಮುಂದೇನು ಮಾಡುವುದು ?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!