ಪರಿಸರ

ಕರ್ನಾಟಕದ ಕಾಡುಗಳಲ್ಲಿ ಪರಿಣಾಮಕಾರಿ ಗಸ್ತು ಇದೆಯೇ ?

ಟೈಗರ್‌ ರಿಸರ್ವ (Tiger reserve forest)ಳಲ್ಲಿ ನಾಡಿನ ಜಾನುವಾರುಗಳಿಗೆ ಪ್ರವೇಶವಿಲ್ಲ. ಅರಣ್ಯ ಇಲಾಖೆ ಅನುಮತಿಯಿಲ್ಲದೇ ಇತರ ಯಾವುದೇ ಇಲಾಖೆಗಳವರಾಗಲಿ, ಜನಸಾಮಾನ್ಯರಾಗಲಿ ಒಳ ಪ್ರವೇಶಿಸುವಂತಿಲ್ಲ. ವನ್ಯಧಾಮ (Wildlife Sanctuary) ಗಳಲ್ಲಿ ಕಾಡಿನಂಚಿನ ಗ್ರಾಮಸ್ಥರು ಸಾಕಣೆ ಮಾಡುತ್ತಿರುವ ಜಾನುವಾರುಗಳನ್ನು ಮೇಯಿಸಲು ಅವಕಾಶವಿದೆ.  ಬಿ.ಆರ್.ಟಿ. (BRT), ಬಂಡೀಪುರ (Bandipur), ನಾಗರಹೊಳೆ (Nagara hole) ಟೈಗರ್‌ ರಿಸವರ್ವ್‌ ಗಳ ಸನಿಹದ ಹಳ್ಳಿಗಳಲ್ಲಿ ಸಾಕಣೆಯಾಗುತ್ತಿರುವ ಜಾನುವಾರುಗಳ ಸಂಖ್ಯೆ ತೀರಾ ಕಡಿಮೆ.

ಗೌಳಿ ಅಥವಾ ದೊಡ್ಡಿ ದನಗಳು ತಮಿಳುನಾಡು(Tamil Nadu)ಅರಣ್ಯದ ಜೊತೆಗೆ ಹೊಂದಾಣಿಕೆಯಾಗಿರುವ ಕರ್ನಾಟಕದ (Karnataka) ಕಾಡುಗಳ ಅಂಚಿನ ಗ್ರಾಮಗಳಲ್ಲಿವೆ. ಇವುಗಳಲ್ಲಿ ಶೇಕಡ 90ಕ್ಕೂ ಹೆಚ್ಚು ಭಾಗ ತಮಿಳುನಾಡು ಹಳ್ಳಿಗಳಿಂದ ಮೇಯಿಸಲು ಅಟ್ಟಿಕೊಂಡು ಬಂದಿರುವಂಥವುಗಳೇ ಆಗಿವೆ. ಪುಣಜನೂರು, ಬೈಲೂರು, ಪಿ.ಜಿ.ಪಾಳ್ಯ ಸೇರಿದಂತೆ ಇನ್ನಿತರ ಗ್ರಾಮಗಳಲ್ಲಿ ದೊಡ್ಡಿ ದನಗಳಿವೆ.

ಇಲ್ಲಿ ದನಗಳನ್ನು ಮೇಯಿಸಲು ಯಾರೋ ಒಬ್ಬರೋ ಇಬ್ಬರೋ ಇರುತ್ತಾರೆ. ಇವರಿಗೆ ನೂರು ದನಗಳನ್ನು ನೋಡಿಕೊಂಡರೆ ವರ್ಷಕ್ಕೆ ಇಂತಿಷ್ಟು ದುಡ್ಡು ಎಂದು ಮಾತುಕಥೆಯಾಗಿರುತ್ತದೆ. ಹೀಗೆ ನೇಮಕವಾದವರು ತಮಿಳುನಾಡಿನ ದನಗಳನ್ನು ಎಂಎಂ ಹಿಲ್ಸ್‌ ವನ್ಯಧಾಮದ ಕಾಡುಗಳಲ್ಲಿ ಮೇಯಿಸುತ್ತಾರೆ.

ವನ್ಯಜೀವಿಧಾಮದ ಡಿ.ಸಿಎಫ್‌ ಆಗಿ ಬಂದವರು ಪದೇಪದೇ ರೇಂಜ್‌ ಮತ್ತು ಕಳ್ಳ ಬೇಟೆ ತಡೆ ಶಿಬಿರಗಳಿಗೆ ಭೇಟಿ ಮಾಡುತ್ತಿದ್ದರೆ ಫೀಲ್ಡ್‌ ಸ್ಟಾಪ್‌ ಸಹ ಬಿಗಿಯಾಗಿರುತ್ತಾರೆ. ಗಸ್ತು ಕೆಲಸ ಉತ್ತಮವಾಗಿ ನಡೆಯುತ್ತದೆ. ಆಗ ದನಗಾಹಿಗಳ ವೇಷದಲ್ಲಿ ಕಾಡುಗಳ್ಳರು, ವನ್ಯಜೀವಿಗಳ  ಕಳ್ಳ ಬೇಟೆಗಾರರು ಇದ್ದರೆ ಬೇಗ ತಿಳಿಯುತ್ತದೆ. ಯಾವಾಗ ಮೇಲಾಧಿಕಾರಿಗಳು ಬರುವುದಿಲ್ಲವೆಂದು ಖಾತ್ರಿಯಾಗುತ್ತದೋ ಆಗ ಫೀಲ್ಡ್‌ ಸ್ಟಾಪ್‌ ನಲ್ಲಿ ಉದಾಸೀನ ಬರುತ್ತದೆ. ಹೂಗ್ಯಂ ರೇಂಜ್‌ ನಲ್ಲಿ ಹುಲಿಗಳ ಹತ್ಯೆಯಾಗುವಲ್ಲಿ ಈ ಕಾರಣವೂ ಇದೆ.

ಹಿಂದೆ ಎಂಎಂ ಹಿಲ್ಸ್‌ ವನ್ಯಜೀವಿಧಾಮದಲ್ಲಿ ಸಂತೋಷ್‌ ಕುಮಾರ್‌ ಅವರು ಡಿ.ಸಿ.ಎಫ್‌ ಆಗಿದ್ದರು. ಅವರ ಅವಧಿಯಲ್ಲಿ ಎಲ್ಲ ರೇಂಜ್‌ ಗಳ ಕಳ್ಳಬೇಟೆ ತಡೆ ಶಿಬಿರಗಳಲ್ಲಿಯೂ ಗಸ್ತು ಕಾರ್ಯ ಬಿಗಿಯಾಗಿತ್ತು. ಅವರು ಸಿಬ್ಬಂದಿಯೊಂದಿಗೆ ಸ್ನೇಹಮಯವಾಗಿ ಮಾತನಾಡಿ ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿದ್ದರು. ಸಿಬ್ಬಂದಿಯ ಕಷ್ಟಗಳನ್ನು ವಿಚಾರಿಸಿ ತಮ್ಮ ಮಟ್ಟದಲ್ಲಾಗುವ ಸಹಾಯ ಮಾಡುತ್ತಿದ್ದರು. ಕಾಡಿನಲ್ಲಿ ಏನು ನಡೀತಿದೆ ಎಂಬ ಮಾಹಿತಿಯನ್ನು ಪಡೆದುಕೊಳ್ಳುತ್ತಿದ್ದರು. ಖುದ್ದಾಗಿ ಕಳ್ಳಬೇಟೆ ತಡೆ ಶಿಬಿರಗಳಲ್ಲಿ ಮತ್ತು ಕಾಡಿನ ಗಡಿಗಳಲ್ಲಿ ತಂಗುತ್ತಿದ್ದರು. ಈ ಪ್ರವೃತ್ತಿ ಚಕ್ರಪಾಣಿಯವರಲ್ಲಿ ಇರಲಿಲ್ಲ. ಇವರು ಇಲಾಖೆಯ ಸಿಬ್ಬಂದಿ ಜೊತೆಗೂ ಸಾರ್ವಜನಿಕರ ಜೊತೆಗೂ ಚೆನ್ನಾಗಿರಲಿಲ್ಲ.

ಟೈಗರ್‌ ರಿಸರ್ವ್‌ ನಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ ಕಡ್ಡಾಯವಾಗಿ ಎಂ – ಸ್ಟ್ರೈಪ್ಸ್‌ ಆಪ್‌ (M-Stripes application) ಇರುವ ಮೊಬೈಲ್ (Mobile Phone) ಅನ್ನು ಇಲಾಖೆಯೇ ನೀಡಿರುತ್ತದೆ. ಒಬ್ಬೊಬ್ಬ ಬೀಟ್‌ ಗಾರ್ಡಿಗೂ (Beat Guard) ಇಂತಿಷ್ಟು ವಿಸ್ತೀರ್ಣದ ಕಾಡನ್ನು ಕಾಲ್ನಡಿಗೆ ಮೂಲಕ ಗಸ್ತು ತಿರುಗುವ ಜವಾಬ್ದಾರಿ ವಹಿಸಲಾಗಿರುತ್ತದೆ. ಅವರು ಒಂದು ವಾರದ ಅವಧಿಯಲ್ಲಿ ತಮಗೆ ವಹಿಸಿದ ಕಾಡಿನ ವಿಸ್ತೀರ್ಣದ ಗಸ್ತು ಕಾರ್ಯವನ್ನು ಪೂರ್ಣಗೊಳಿಸಿರಬೇಕು. ಉದಾಹರಣೆಗೆ ಹೇಳುವುದಾದರೆ ಓರ್ವ ಫಾರೆಸ್ಟ್‌ ಗಾರ್ಡ್‌ ಮತ್ತು ಕನಿಷ್ಟ ಮೂವರು ವಾಚರ್ಸ್‌ ಗಳಿಗೆ ನೂರು ಎಕರೆ ವಿಸ್ತೀರ್ಣದ ಕಾಡಿನ ಬೀಟ್‌ (Forest beat)ಜವಾಬ್ದಾರಿ ಕೊಟ್ಟಿದ್ದರೆ ಅವರು ಒಂದು ದಿನಕ್ಕೆ 14 ಎಕರೆಯನ್ನು ಕವರ್‌ ಮಾಡಿರಬೇಕು. ಒಂದು ವಾರದೊಳಗೆ 100 ಎಕರೆ ಬೀಟ್‌ ಪೂರ್ಣಗೊಳಿಸಿರಬೇಕು.

ಬೀಟ್‌ ಕಾರ್ಯಕ್ಕೆ ಹೊರಡುವ ಮುನ್ನ ಫಾರೆಸ್ಟ್‌ ಗಾರ್ಡ್‌ ತನ್ನ ಜೊತೆಗೆ ಇರುವ ವಾಚರ್ಸ್‌ ಜೊತೆಗೆ ಬೀಟ್‌ ಹೊರಟ ಸ್ಥಳದಿಂದ ಸೆಲ್ಫಿ ಪೋಟೋ ತೆಗೆದುಕೊಂಡು ಇಲಾಖೆಯ ಸರ್ವರ್‌ ಗೆ ಅಪ್‌ ಲೋಡ್‌ ಮಾಡಬೇಕು. ಆ ದಿನದ ಸಂಜೆ ಬೀಟ್ ಪೂರ್ಣಗೊಳಿಸಿದ ಜಾಗದಲ್ಲಿ ಮತ್ತೆ ವಾಚರ್ಸ್‌ ಜೊತೆಗೆ ಸೆಲ್ಫಿ (selfie)ತೆಗೆದುಕೊಂಡು ಅಪ್‌ ಲೋಡ್‌ ಮಾಡಬೇಕು. ಎಂ- ಸ್ಟ್ರೈಪ್‌ ಅಪ್ಲಿಕೇಶನ್‌ (M-Stripes application)  ನಲ್ಲಿ ಜಿಪಿಎಸ್ (GPS)‌ ಇರುವುದರಿಂದ ಪೋಟೋದ ಜೊತೆಗೆ ಆಯಾ ಜಾಗಗಳ ಲೊಕೇಶನ್‌ ಸಹ ಲಗತ್ತಾಗಿರುತ್ತದೆ. ಇದನ್ನು ನಿತ್ಯವೂ ಮೇಲಾಧಿಕಾರಿಗಳು ಪರಿಶೀಲಿಸುತ್ತಿರುತ್ತಾರೆ. ಇವೆಲ್ಲ ಪರಿಶೀಲನೆ ಟೈಗರ್‌ ರಿಸರ್ವ್‌ ಗಳಲ್ಲಿ ನಡೆಯುತ್ತದೆ.

ಎಂಎಂ ಹಿಲ್ಸ್‌ ವನ್ಯಜೀವಿಧಾಮ, ಕಾವೇರಿ ವನ್ಯಜೀವಿಧಾಮಗಳಲ್ಲಿ ಈ ರೀತಿಯ ಪರಿಶೀಲನೆ ಇಲ್ಲ. ಇದಕ್ಕೆ ಕಾರಣ ಅಲ್ಲಿಯ ಸಿಬ್ಬಂದಿಗೆ ಎಂ – ಸ್ಟ್ರೈಪ್ಸ್‌ ಅಪ್ಲಿಕೇಶನ್‌ ಇರುವ ಮೊಬೈಲ್‌ ಗಳನ್ನು ವಿತರಿಸಿಲ್ಲ. ಆಗ ಅವರು ತಮ್ಮ ಮೊಬೈಲ್‌ ಬಳಸಬೇಕು. ಆದರೆ ಕಾಡಿನಲ್ಲಿ ಮೊಬೈಲ್‌ ನೆಟ್‌ ವರ್ಕ್‌ (Mobile Network) ಇರುವುದಿಲ್ಲ. ಇವರ ಖಾಸಗಿ ಮೊಬೈಲ್‌ ಗಳಿಗೆ ಎಂ – ಸ್ಟ್ರೈಪ್ಸ್‌ ಅಪ್ಲಿಕೇಶನ್‌ ಇನ್‌ ಸ್ಟಾಲ್‌ (M-Stripes application Installation)  ಮಾಡಿರುವುದಿಲ್ಲ.

ಎಂ – ಸ್ಟ್ರೈಪ್ಸ್‌ ಅಪ್ಲಿಕೇಶನ್‌ ಇನ್‌ ಸ್ಟಾಲ್‌ ಆದ ಮೊಬೈಲ್‌ ಗಳಲ್ಲಿ ಇದೊಂದನ್ನು ಬಿಟ್ಟು ಯಾವುದೇ ಉಳಿದ ಅಪ್ಲಿಕೇಶನ್‌ ಗಳು ಉದಾಹರಣೆಗೆ ಯೂ ಟ್ಯೂಬ್‌ (Youtubȩ)  ಫೇಸ್‌ ಬುಕ್‌ (Facebooķ) ಇನ್ಸ್‌ ಸ್ಟಾಗ್ರಾಮ್‌(Instagram) ಇತ್ಯಾದಿ ಆಪ್‌ ಗಳು ವರ್ಕ್‌ ಆಗುವುದಿಲ್ಲ. ಪೋನ್‌ ಅಷ್ಟೇ ಮಾಡಬಹುದು. ಅರಣ್ಯ ಇಲಾಖೆ (Forest Department)ಯ ವ್ಯಾಪ್ತಿಯ ಕೆಲಸಗಳಿಗಷ್ಟೇ ಬಳಸಲು ಸಾಧ್ಯ  !

Forest Staff
ಲೇಖನಕ್ಕೆ ಪೂರಕವಾಗಿ ಚಿತ್ರಗಳನ್ನು ಬಳಸಲಾಗಿದೆ.

ಹೀಗೆ ಬಿಗಿಯಾದ ಪರಿವೀಕ್ಷಣೆ (Inspection) ಇರುವ ಹಿನ್ನೆಲೆಯಲ್ಲಿ ಟೈಗರ್ ರಿಸರ್ವ್‌ ಕಾಡುಗಳಿಗೆ ನಿಯೋಜನೆಯಾಗಿರುವ ಅರಣ್ಯ ಇಲಾಖೆಯ ಖಾಯಂ ಸಿಬ್ಬಂದಿಯಲ್ಲಿ ಬಹುತೇಕರು ಸಾಧ್ಯವಾದಷ್ಟೂ ಬೇಗ ಅಲ್ಲಿಂದ ವರ್ಗಾವಣೆ ತೆಗೆದುಕೊಂಡು ವನ್ಯಜೀವಿಧಾಮಗಳಿಗೆ ತೆರಳಲು ಬಯಸುತ್ತಾರೆ. ಏಕೆಂದರೆ ಗಾರ್ಡ್‌,  ಡೆಫ್ಯುಟಿ ರೇಂಜ್‌ ಫಾರೆಸ್ಟ್‌ ಆಫೀಸರ್‌,  ರೇಂಜ್‌ ಫಾರೆಸ್ಟ್‌ ಆಫೀಸರ್‌,  ಎ.ಸಿ.ಎಫ್.‌ ಹೀಗೆ ಯಾವುದೇ ಹಂತದ ಅಧಿಕಾರಿ ಇರಲಿ ಟೈಗರ್‌ ರಿಸರ್ವ್‌ ಕಾಡುಗಳಲ್ಲಿ ತಮಗೆ ನಿಯೋಜನೆ ಆದ ಸ್ಥಳದಲ್ಲಿಯೇ ಇರಬೇಕು. ಅದರ ವ್ಯಾಪ್ತಿ ಬಿಟ್ಟು ಕದಲುವಂತಿಲ್ಲ.  ರಜೆ ಮಂಜೂರಾಗಿದ್ದರೆ ಮಾತ್ರ ಕರ್ತವ್ಯ ನಿಗದಿಪಡಿಸಿದ ವ್ಯಾಪ್ತಿಯಿಂದ ಹೊರಗೆ ಹೋಗಬಹುದು.

ಬಿಳಿರಂಗನ ದೇಗುಲ ಹುಲಿ ಸಂರಕ್ಷಿತಾರಣ್ಯ (BRT Tiger Reservȩ)  ಬಂಡೀಪುರ ಹುಲಿ ಸಂರಕ್ಷಿತಾರಣ್ಯ (Bandipur Tiger Reserve)ಗಳಲ್ಲಿ ಕೆಲಸ ಮಾಡುತ್ತಿದ್ದ ಫಾರೆಸ್ಟ್‌ ಗಾರ್ಡ್‌ ಗಳಲ್ಲಿ ಹೆಚ್ಚಿನವರು ಕಾವೇರಿ ವನ್ಯಜೀವಿಧಾಮ (Kaveri wildlife sanctuary)  ಮಲೆ ಮಹದೇಶ್ವರ ವನ್ಯಜೀವಿಧಾಮ (MM hills wildlife sanctuary) ಗಳಿಗೆ ವರ್ಗಾವಣೆ (Transfer) ತೆಗೆದುಕೊಂಡಿದ್ದಾರೆ. ಈ ವನ್ಯಜೀವಿಧಾಮಗಳಲ್ಲಿದ್ದರೆ ಒತ್ತಡವಿರುವುದಿಲ್ಲ ಎನ್ನುವುದೂ ಒಂದು ಲೆಕ್ಕಾಚಾರ. ಹೀಗೆ ವರ್ಗಾವಣೆಯಾಗಿ ಬಂದ ಗಾರ್ಡ್‌ ಗಳಲ್ಲಿ ಶೇಕಡ 70 ರಷ್ಟು ಮಂದಿ ಹೆಚ್ಚಿನ ಸಮಯ ಕಳ್ಳಬೇಟೆ ತಡೆ ಶಿಬಿರಗಳಲ್ಲಿ ಇರುವುದಿಲ್ಲ, ವಾಚರ್ಸ್‌ ಗಳ ಜೊತೆ ನಿಯಮಿತವಾಗಿ ಕಾಡಿಗೆ ಗಸ್ತು ಕೆಲಸಕ್ಕಾಗಿ ಹೋಗುವುದಿಲ್ಲ ಎಂಬ ಆರೋಪಗಳಿವೆ.

ಈ ಆರೋಪಕ್ಕೆ ಪುಷ್ಟಿ ನೀಡುವಂಥ ದುರ್ಘಟನೆಗಳು ಈ ವನ್ಯಜೀವಿಧಾಮಗಳಲ್ಲಿ ನಡೆದಿವೆ. ಯಾವಾಗ ಗಾರ್ಡ್‌ ತಮ್ಮ ಜೊತೆಗೆ ಬೀಟಿಗೆ ಬರುವುದಿಲ್ಲವೋ ಆಗ ಹೊರ ಗುತ್ತಿಗೆ ಆಧಾರದಲ್ಲಿ ನೇಮಕವಾದ ವಾಚರ್ಸ್‌ (watchers) ಸಹ “ಕೈ ತುಂಬ ಸಂಬಳ ತೆಗೆದುಕೊಳ್ಳುವ ಫಾರೆಸ್ಟ್‌ ಗಾರ್ಡಿಗೆ ಇಲ್ಲದ ದರ್ದು ನಮಗೇಕೆ” ಎಂದು ಹತ್ತು ಕಿಲೋ ಮೀಟರ್‌ ಗಸ್ತು ತಿರುಗುವ ಬದಲು ಎರಡೇ ಕಿಲೋ ಮೀಟರ್‌ ಗಸ್ತು ತಿರುಗಿ ವಾಪಸಾಗುವ ಸಾಧ್ಯತೆ ಇದೆ.

ಈ ಎಲ್ಲ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಸಚಿವರು ಎಲ್ಲ ಥರದ ಕಾಡುಗಳಲ್ಲಿ ಇರುವ ಎಲ್ಲ ಖಾಯಂ ಸಿಬ್ಬಂದಿಗೆ ಎಂ- ಸ್ಟ್ರೈಪ್‌ ಅಪ್ಲಿಕೇಶನ್‌ ಇರುವ ಮೊಬೈಲು (M-Stripes application mobile phone)  ಗಳನ್ನು ವಿತರಿಸಬೇಕು. ಇದರಿಂದ ಫಾರೆಸ್‌ ಗಾರ್ಡುಗಳ ಕೆಲಸ, ಡಿ.ಆರ್.ಎಫ್.ಒ., ಆರ್.ಎಫ್.ಒ., ಎ.ಸಿ.ಎಫ್.‌, ಡಿ.ಸಿ.ಎಫ್.‌ ಗಳು ತಮ್ಮತಮ್ಮ ವ್ಯಾಪ್ತಿಯ ಕಳ್ಳಬೇಟೆ ತಡೆ ಶೀಬಿರಗಳಿಗೆ ತಿಂಗಳಿನಲ್ಲಿ ಎಷ್ಟು ಬಾರಿ ಭೇಟಿ ಕೊಟ್ಟರು, ಇವರು ಖುದ್ದಾಗಿ ಗಸ್ತು ತಿರುಗಿದ್ದಾರೆಯೇ ಇಲ್ಲವೇ ಎಂಬುದು ಸಹ ನಿಖರವಾಗಿ ತಿಳಿಯುತ್ತದೆ. ಅಲ್ಲಿಯ ತನಕ ಏನೇ ಮಾತನಾಡಿದರೂ ಪ್ರಯೋಜನವಿಲ್ಲ !

ಲೇಖನ ಮುಗಿಸುವ ಮುನ್ನ

ಅರಣ್ಯ ಇಲಾಖೆಯಲ್ಲಿ ವರ್ಗಾವಣೆಗೆ ಕೌನ್ಸಿಲಿಂಗ್‌ (Counseling) ಸಿಸ್ಟಮ್‌ ತಂದಿರುವ ಕಾರಣ ಬಿಗಿಯಾದ ಪರಿವೀಕ್ಷಣೆ ಇರುವ ಟೈಗರ್‌ ರಿಸರ್ವ್‌ ಗಳಲ್ಲಿ ಒಂದಷ್ಟು ಸಿಬ್ಬಂದಿಯಾದರೂ ಇದ್ದಾರೆ. ಇಲ್ಲದಿದ್ದರೆ  !?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!