ಅಭಿನೇತ್ರಿ ಬಿ. ಸರೋಜಾ ದೇವಿ ಅವರದು ತುಂಬು ಜೀವನೋತ್ಸವ. ಎಂದಿಗೂ ಸಾರ್ವಜನಿಕ ಸಮಾರಂಭಗಳಿರಲಿ, ಕೌಟುಂಬಿಕ ಸಮಾರಂಭಗಳಿರಲಿ ಉದಾಸೀನವಾಗಿ ಉಡುಪು ಧರಿಸಿದವರಲ್ಲ. ತಾರಾ ಬದುಕಿನಲ್ಲಿ ಯಶಸ್ಸಿನ ಉತ್ತುಂಗದಲ್ಲಿದಾಗಲೂ ಪಾತ್ರ ಪೋಷಣೆಯಲ್ಲಿ ಉದಾಸೀನ ತೋರಿದವರಲ್ಲ. ಉದಾಸೀನವಾಗಿ ಮಾತನಾಡಿದವರೂ ಅಲ್ಲ; ಆಯಾ ಸಂದರ್ಭದ ಔಚಿತ್ಯ ಅರಿತು “ನುಡಿದರೆ ಮುತ್ತಿನ ಹಾರದಂತಿರಬೇಕು, ಶಿವ ಮೆಚ್ಚಿ ಅಹುದಹುದು ಎನಬೇಕು” ಎನ್ನುವಂತೆ ಮಾತನಾಡುತ್ತಿದ್ದರು.
ಮೂಲತಃ ರಾಮನಗರ ಜಿಲ್ಲೆ (ಈಗ ಬೆಂಗಳೂರು ದಕ್ಷಿಣ ಜಿಲ್ಲೆ) ಚನ್ನಪಟ್ಟಣ ತಾಲ್ಲೂಕಿನವರಾದ ಪೊಲೀಸ್ ಇಲಾಖೆ ನೌಕರ ಭೈರಪ್ಪ ಮತ್ತು ರುದ್ರಮ್ಮ ದಂಪತಿ ಪುತ್ರಿ ಬಿ. ಸರೋಜಾ ದೇವಿ (ಅಂದಿನ ಮೈಸೂರು ಸಂಸ್ಥಾನದ ಬೆಂಗಳೂರಿನಲ್ಲಿ ಜನವರಿ 7, 1938ರಲ್ಲಿ ಜನನ) ಬಾಲ್ಯದಿಂದಲೂ ಹಾಡುಗಾರಿಕೆ, ನೃತ್ಯ ಕಲಿಕೆಯಲ್ಲಿ ಆಸಕ್ತಿ. 13ನೇ ವಯಸಿನಲ್ಲಿ ದೊಡ್ಡ ಸಮಾರಂಭವೊಂದರಲ್ಲಿ ಹಾಡಿದ್ದರು.
17 ನೇ ವಯಸ್ಸಿನಲ್ಲಿ ಕನ್ನಡ ಚಲನಚಿತ್ರ ಮಹಾಕವಿ ಕಾಳಿದಾಸ (1955) ದೊಂದಿಗೆ ನಟನೆಗೆ ಪಾದಾರ್ಪಣೆ ಮಾಡಿದರು. ಈ ಸಿನಿಮಾದ ಅಭಿನಯ, ರಾಷ್ಟ್ರೀಯ ಪ್ರಶಸ್ತಿ ಮನ್ನಣೆ ದೊರಕಿಸಿತು. ಕನ್ನಡ ಸೇರಿದಂತೆ ಇಡೀ ದಕ್ಷಿಣ ಭಾರತದ ಚಿತ್ರರಂಗದ ಗಮನ ಸೆಳೆಯುವಂತೆ ಮಾಡಿತು. ಕೆಲವೇ ವರ್ಷಗಳಲ್ಲಿ ವಿವಿಧ ಪಾತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡರು. ದಕ್ಷಿಣ ಭಾರತ ಚಿತ್ರರಂಗದ ಮೊದಲ ಮಹಿಳಾ ಸೂಪರ್ ಸ್ಟಾರ್ ಎಂಬ ಕೀರ್ತಿಗೂ ಪಾತ್ರರಾದರು ಜೊತೆಗೆ ಅಂದಿನ ಕಾಲಘಟ್ಟಕ್ಕೆ ಅತ್ಯಧಿಕ ಸಂಭಾವನೆ ಪಡೆಯುವ ಕಲಾವಿದೆ ಎಂಬ ಖ್ಯಾತಿಗೂ ಪಾತ್ರರಾದರು.
ತೆಲುಗು ಚಿತ್ರರಂಗಕ್ಕೆ ಪ್ರವೇಶ (1957):
ಪಾಂಡುರಂಗ ಮಹಾತ್ಮಂ (1957) ಮೂಲಕ ತೆಲುಗು ಚಿತ್ರರಂಗಕ್ಕೆ ಪಾದಾರ್ಪಣೆ. ಇದು ದಕ್ಷಿಣ ಭಾರತೀಯ ಚಲನಚಿತ್ರೋದ್ಯಮಗಳಲ್ಲಿ ಅವರ ಅಸ್ತಿತ್ವವನ್ನು ವಿಸ್ತರಿಸುವಲ್ಲಿ ಮಹತ್ವದ ಹೆಜ್ಜೆ. 1980ರ ತನಕ ಹಲವಾರು ಯಶಸ್ವಿ ತೆಲುಗು ಚಿತ್ರಗಳಲ್ಲಿ ನಟಿಸಿದರು.
ತಮಿಳು ಚಿತ್ರರಂಗದಲ್ಲಿ ತಾರಾಪಟ್ಟ (1958):
ಎಂ.ಜಿ. ರಾಮಚಂದ್ರನ್ (ಎಂಜಿಆರ್) ಅವರೊಂದಿಗೆ ನಟಿಸಿದ ನಾಡೋಡಿ ಮನ್ನನ್ (1958) ಭಾರಿ ಯಶಸ್ವಿಯಾಯಿತು. ಇದು ತಮಿಳು ಚಿತ್ರರಂಗದಲ್ಲಿ ಪ್ರಾಮುಖ್ಯತೆ ತಂದುಕೊಟ್ಟಿತು. ಆಗಿನ ದಿನಗಳಲ್ಲಿ ತಮಿಳು ಚಿತ್ರರಂಗದ ಅಗ್ರ ಕಲಾವಿದೆಯರಲ್ಲಿ ಒಬ್ಬರೆನ್ನಿಸಿದರು. ಎಂಗ ವೀಟು ಪಿಳ್ಳೈ ಮತ್ತು ಅನ್ಬೆ ವಾ ನಂತಹ ಚಿತ್ರಗಳಲ್ಲಿ ಎಂಜಿಆರ್ ಜೊತೆಯ ಅಭಿನಯ, ಪ್ರೇಕ್ಷಕರನ್ನು ಮೋಡಿಗೊಳಿಸಿತು. ತೆರೆಯ ಮೇಲಿನ ಈ ತಾರಾಜೋಡಿ ನಟಿಸಿರುವ ಸಿನಿಮಾಗಳಿಗೆ ಸೋಲು ಎಂಬುವ ಪದದ ಪರಿಚಯವೇ ಇರಲಿಲ್ಲ !!
ಕನ್ನಡದಲ್ಲಿ “ಅಭಿನಯ ಸರಸ್ವತಿ” ಎಂಬ ಬಿರುದಿಗೆ ಪಾತ್ರರಾಗಿದ್ದರೆ ತಮಿಳಿನಲ್ಲಿ “ಕನ್ನಡತು ಪೈಂಗಿಳಿ” (ಕನ್ನಡದ ಗಿಳಿ) ಎಂದೇ ಖ್ಯಾತರು. ಅಲ್ಲಿನ ಚಿತ್ರರಂಗ ಮತ್ತು ವೀಕ್ಷಕರು ಬಹು ಗೌರವದಿಂದ “ಕನ್ನಡದ ಗಿಳಿ” ಎಂದೇ ಕರೆಯುತ್ತಿದ್ದರು.
ಬಭ್ರುವಾಹನ ಸಿನಿಮಾದಲ್ಲಿ ವರನಟ ರಾಜ್ ಕುಮಾರ್ ಮತ್ತು ಬಿ.ಸರೋಜಾದೇವಿ
ಕನ್ನಡ ಚಿತ್ರರಂಗದ ತಾರೆ
ಕನ್ನಡ ಚಿತ್ರರಂಗದ ವರನಟ ರಾಜ್ ಕುಮಾರ್ ಮತ್ತು ಬಿ. ಸರೋಜಾದೇವಿ ಜೋಡಿಯಾಗಿರುವ ಸಿನಿಮಾಗಳು ಭಾರಿ ಯಶಸ್ವಿಯಾಗಿವೆ. ನ್ಯಾಯವೇ ದೇವರು, ಭಾಗ್ಯವಂತರು ಸಿನಿಮಾಗಳು ಇಂದಿಗೂ ಪ್ರೇಕ್ಷಕರ ಮೇಲೆ ಪ್ರಭಾವ ಬೀರುತ್ತಿವೆ. ಕನ್ನಡದಲ್ಲಿ ಇವರು ಸಂಭಾಷಣೆ ಹೇಳುವ ಪರಿಯೂ ವಿಶಿಷ್ಟ. ಪ್ರತಿ ಪಾತ್ರದ ಅಂತರಂಗ ಅರಿತು ಪರಕಾಯ ಪ್ರವೇಶ ಮಾಡಿ ಅಭಿನಯಿಸುತ್ತಿದ್ದರು.ಇದಕ್ಕೆ ಉದಾಹರಣೆಯೆಂದರೆ ಕಿತ್ತೂರು ರಾಣಿ ಚೆನ್ನಮ್ಮ ಸಿನಿಮಾದ ಚೆನ್ನಮ್ಮ ಪಾತ್ರ ! ನೋಡುಗರನ್ನು ರೋಮಾಂಚನಗೊಳಿಸುವ ಅಭಿನಯ. ಕನ್ನಡದ ಮೊದಲ ಬಣ್ಣದ ಚಿತ್ರ ಅಮರಶಿಲ್ಪಿ ಜಕಣಾಚಾರಿಯಲ್ಲಿ ಇವರ ನಟನೆ ಮಾಡುವ ಮೋಡಿ ಅಪಾರ.
ಬಹುಭಾಷಾ ಯಶಸ್ಸು:
ನೋಡುನೋಡುತ್ತಿದ್ದಂತೆಯೇ ಭಾರತೀಯ ಪ್ರಮುಖ ಚಿತ್ರರಂಗಗಳಿಂದ ಆಹ್ವಾನಗಳು ಬರತೊಡಗಿದವು. ಹಿಂದಿ ಸಿನಿಮಾಗಳಲ್ಲಿಯೂ ಅಭಿನಯಿಸಿ ಮೆಚ್ಚುಗೆ ಗಳಿಸಿದರು. ಏಳು ದಶಕಗಳಲ್ಲಿ ಕನ್ನಡ, ತಮಿಳು, ತೆಲುಗು ಮತ್ತು ಹಿಂದಿ ಸೇರಿದಂತೆ ಸುಮಾರು 200 ಚಿತ್ರಗಳಲ್ಲಿ ನಟಿಸಿದರು.
ವಿವಾಹದ ನಂತರ ಮುಂದುವರಿದ ವೃತ್ತಿಜೀವನ
ವೃತ್ತಿಯಲ್ಲಿ ಇಂಜಿನಿಯರ್ ಆಗಿದ್ದ ಶ್ರೀ ಹರ್ಷ ಅವರನ್ನು 1 ಮಾರ್ಚ್ 1967 ರಂದು ವಿವಾಹವಾದರು.ಸಾಮಾನ್ಯವಾಗಿ ಭಾರತೀಯ ಚಿತ್ರರಂಗಗಳ ಕಲಾವಿದೆಯರು ಮದುವೆಯಾದ ನಂತರ ನಟಿಸುವುದನ್ನು ನಿಲ್ಲಿಸುತ್ತಾರೆ. ಆದರೆ ಬಿ. ಸರೋಜಾ ದೇವಿ ಆ ದಾರಿ ಅನುಸರಿಸಲಿಲ್ಲ. ಸುಮಾರು 1975-76ರ ತನಕ ಬಹು ಬೇಡಿಕೆಯ ತಾರೆಯಾಗಿದ್ದರು.
ಪ್ರಶಸ್ತಿಗಳು ಮತ್ತು ಮನ್ನಣೆ:
ಬಿ. ಸರೋಜಾ ದೇವಿ ಅವರು ಕರ್ನಾಟಕ ಚಲನಚಿತ್ರ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿದ್ದರು. ಬೆಂಗಳೂರಿನ ಕಂಠೀರವ ಸ್ಟುಡಿಯೋಗಳ ಅಧ್ಯಕ್ಷರೂ ಆಗಿದ್ದರು. ಭಾರತೀಯ ಚಿತ್ರರಂಗಕ್ಕೆ ನೀಡಿದ ಕೊಡುಗೆಗಳಿಗಾಗಿ 1969 ರಲ್ಲಿ ಪದ್ಮಶ್ರೀ ಮತ್ತು 1992 ರಲ್ಲಿ ಪದ್ಮಭೂಷಣ ಪ್ರಶಸ್ತಿಗಳನ್ನು ನೀಡಿ ಪುರಸ್ಕರಿಸಲಾಗಿದೆ.
ಸರೋಜಾ ದೇವಿ ಅವರು ತಮ್ಮ ದಿವಂಗತ ಪತಿ ಶ್ರೀ ಹರ್ಷ, ಮಗಳು ಭುವನೇಶ್ವರಿ ಮತ್ತು ಅವರ ತಾಯಿಯ ಹೆಸರಿನಲ್ಲಿ ಅನೇಕ ಆರೋಗ್ಯ ಶಿಬಿರಗಳನ್ನು ಆಯೋಜಿಸಿದ್ದಾರೆ. ಆರ್ಥಿಕ ದುರ್ಬಲರಿಗೆ ಸಹಾಯಹಸ್ತ ಚಾಚಿದ್ದಾರೆ. ದತ್ತಿ ಟ್ರಸ್ಟ್ಗಳು, ಪುನರ್ವಸತಿ ಕೇಂದ್ರಗಳಿಗೆ ನೆರವಾಗಿದ್ದಾರೆ.
ಜುಲೈ 14, 2025 ರಂದು ಬೆಂಗಳೂರಿನಲ್ಲಿ ಬಿ. ಸರೋಜಾ ದೇವಿ ಅವರು ತಮ್ಮ 87 ನೇ ವಯಸ್ಸಿನಲ್ಲಿ ವಯೋಸಹಜ ಕಾಯಿಲೆಗಳಿಂದ ನಿಧನರಾದರು, ಈ ಮೂಲಕ ಮರೆಯಲಾಗದ ತಾರೆ, ಕಾಲನ ತೆರೆಮರೆಗೆ ಸರಿದಿದೆ.