ಮನುಷ್ಯ ಕೇಂದ್ರೀತ ಅಭಿವೃದ್ಧಿಯ ಕುರೂಪಗಳ ಅನಾವರಣ
‘Nilgiris: A Shared Wilderness’ ಪ್ರಶ್ನೆಗಳನ್ನು ಎತ್ತುತ್ತಲೇ ಉತ್ತರಗಳನ್ನೂ ಮೌನವಾಗಿ ತಿಳಿಸುವ ಸಶಕ್ತ ಕಥನ ! ಇದನ್ನು ಸಿನಿಮಾ ಎನ್ನುವುದಕ್ಕಿಂತಲೂ ಡಾಕ್ಯುಮೆಂಟರಿ ಎನ್ನುವುದೇ ಸೂಕ್ತ. ಪರಿಸರದೆಡೆಗೆ ತಿರಸ್ಕಾರ ಮತ್ತೊಂದೆಡೆ ಕಾಳಜಿ, ಉದ್ಯಮಿಗಳ ಪಾಲಿಗೆ ನಿಧಿ; ಸರ್ಕಾರಗಳ ಪಾಲಿಗೆ ತೆರಿಗೆ ರೂಪದ ಹಣ; ಭ್ರಷ್ಟ ಅಧಿಕಾರಸ್ಥ ರಾಜಕಾರಣಿಗಳಿಗೆ, ಅಧಿಕಾರಿಗಳಿಗೆ ಹಣದ ಅಕ್ಷಯ ಪಾತ್ರೆಯಂತೆ ಕಾಣಿಸುವ ಪರಿಸರ, ಕಾನನ ಹೇಗೆ ನಶಿಸುತ್ತಿದೆ, ಹೀಗೆ ನಶಿಸುತ್ತಿರುವ ವನ್ಯಜೀವನದ ಜೊತೆಗೆ ಮನುಷ್ಯರು ತಮ್ಮ ಅವನತಿಯನ್ನು ತಾವೇ ಹೇಗೆ ಆಹ್ವಾನಿಸಿಸುತ್ತಿದ್ದಾರೆ ಎಂಬುದನ್ನು ಭಾಷಣಗಳಿಲ್ಲದೇ ಹೇಳುತ್ತದೆ.
ಇವೆಲ್ಲವನ್ನೂ ಹುಲಿ ಇರುವ ಫ್ರೇಮಿನಲ್ಲಿ ಕಾಣುವ ನಗರಾಭಿವೃದ್ಧಿಯ ಚಿತ್ರಣ, ಕೆಲವೇ ದಶಕಗಳಿಂದಾಚೆಗೆ ತನ್ನ ಪೂರ್ವಜರು ನಿರ್ಭಿಡೆಯಿಂದ ಸಂಚರಿಸಿದ ಜಾಗದಲ್ಲಿ ಎದ್ದುನಿಂತ ಕಟ್ಟಡಗಳ ಸುತ್ತ ಕರಡಿಗಳು ಆತಂಕದಿಂದ ಇರುವ ದೃಶ್ಯಗಳು ಸಶಕ್ತವಾಗಿ ಹೇಳುತ್ತವೆ.
ನೀಲಗಿರೀಸ್ ಎನ್ನುವುದು ತಮಿಳುನಾಡು ರಾಜ್ಯಕ್ಕೆ ಸೇರಿದ ಪ್ರದೇಶವಷ್ಟೇ ಅಲ್ಲ; ಈ ಭೂಮಿಯ ಸೂಕ್ಷ್ಮ ಪರಿಸರದ ಒಂದು ತಂತು. ಇದು ಹೇಗೆ ಸಮಗ್ರ ಪರಿಸರದ ವಾಹಿನಿಯಿಂದ ಕಳಚಿಕೊಳ್ಳುತ್ತಾ, ಅನಾಥವಾಗುತ್ತಾ ಇನ್ನೇನು ಕೆಲವೇ ವರ್ಷಗಳಲ್ಲಿ ತನ್ನ ಅಸ್ತಿತ್ವವನ್ನೇ ಕಳಚಿಕೊಳ್ಳುತ್ತದೆಯೋ ಎಂಬ ಆತಂಕವನ್ನು ಡಾಕ್ಯುಮೆಂಟರಿ ವ್ಯಕ್ತಪಡಿಸುತ್ತದೆ.
ನೀಲಗಿರೀಸ್ ಪರ್ವತ ಶ್ರೇಣಿಗಳು, ಕಾಡುಗಳು ಕರ್ನಾಟಕ ರಾಜ್ಯದೊಳಗೂ ಹರಡಿವೆ. ಬಂಡೀಪುರದ ಕಾಡು ಸಹ ಈ ಪರಿಸರದ ಕೊಂಡಿಯೇ ಆಗಿದೆ. ಅಭಿವೃದ್ಧಿಯ ಭೂತಗಳು ಇಲ್ಲಿಯೂ ಕುಣಿಯುತ್ತಿವೆ. ದಿನದ ೨೪ ಗಂಟೆಯೂ ಕಾಡಿನ ನಡುವಿನ ರಸ್ತೆಯನ್ನು ವಾಹನಗಳ ಸಂಚಾರಕ್ಕೆ ಮುಕ್ತವಾಗಿರಿಸಬೇಕು ಎಂಬ ಒತ್ತಡ ನೆರೆಯ ಕೇರಳ ರಾಜ್ಯದಿಂದ ಉಂಟಾಗುತ್ತಲೇ ಇದೆ. ಸೂಕ್ಷ್ಮ ಪರಿಸರದ ನಡುವೆ ರಸ್ತೆಗಳು ಅಣಬೆಗಳಂತೆ ಮೂಡಿದರೆ ಕಾಡಿನ ಸಾಮ್ರಾಜ್ಯದ ನಿಜ ವಾರಸುದಾರರಾದ ವನ್ಯಪ್ರಾಣಿಗಳ ಸಹಜ ಬದುಕು ಹೇಗೆ ನಲುಗುತ್ತದೆ; ಅವುಗಳ ಪ್ರಾಣಗಳು ಯಾವ ಕ್ಷಣದಲ್ಲಿಯೂ ಹಾರಿ ಹೋಗಬಹುದು ಎನ್ನುವುದನ್ನು ಈ ಕಥನ ಪರಿಣಾಮಕಾರಿಯಾಗಿ ಹೇಳುತ್ತದೆ.

ಹುಸಿ ಅಭಿವೃದ್ಧಿಯ ಅಮಲು ಏರಿಸಿಕೊಂಡರು, ಕಾಸೇ ಸರ್ವಸ್ವ ಎಂದುಕೊಂಡ ಭ್ರಷ್ಟರೂ ಸಾವಧಾನವಾಗಿ ‘Nilgiris: A Shared Wilderness’ ಕಥನ ನೋಡಿದರೆ ನಿಜ ಏನು ಎಂಬುದು ಅರಿವಾಗಬಹುದು ಅಥವಾ ಇದು ನಮ್ಮ ಆಧಾರವಿಲ್ಲದ ನಿರೀಕ್ಷೆಯೂ ಆಗಿರಬಹುದು. ಪ್ರಕೃತಿಯ ಸಹಜತೆಯನ್ನು ಪ್ರೀತಿಸುವ ಪ್ರತಿಯೊಬ್ಬರೂ ಅದರ ಸಹಜತೆ ಉಳಿಸಲು ಶ್ರಮಿಸಬೇಕಾದ ಅಗತ್ಯದ ಬಗ್ಗೆಯೂ ಕಥನ ಹೇಳುತ್ತದೆ.
ವನ್ಯಪ್ರಾಣಿಗಳ ಸಹಜ ಸಂಚಾರಕ್ಕೆ ಕ್ಯಾಮೆರಾಗಳಿಂದ, ಇನ್ನಿತರ ಪರಿಕರಗಳಿಂದ ಮುಖ್ಯವಾಗಿ ಚಿತ್ರತಂಡದವರಿಂದ ಅಡ್ಡಿಯಾಗದ ಹಾಗೆ ಚಿತ್ರೀಕರಣ ನಡೆಸುವುದು ಬಹುದೊಡ್ಡ ಸವಾಲು. ಇದನ್ನು ಸ್ವೀಕರಿಸಿರುವ ಕಥನದ ಪರಿಕಲ್ಪನೆಯ ನಿರ್ದೇಶಕ, ಛಾಯಾಗ್ರಹಕ ಸಂದೇಶ್ ಕಡೂರ್ ಮತ್ತು ತಂಡ ಅದರಲ್ಲಿ ಯಶಸ್ವಿಯಾಗಿದ್ದಾರೆ.
ಸಿನೆಮಾದಲ್ಲಿ ಹಿನ್ನೆಲೆ ಧ್ವನಿ (ಸುಶೀಲಾ ರಾಮನ್), ಹಿನ್ನೆಲೆ ಸಂಗೀತ (ನೀಲ್ ಅಧಿಕಾರಿ, ಸ್ಯಾಮ್ ಮಿಲ್ಸ್, ಸುಶೀಲಾ ರಾಮನ್) ಛಾಯಾಗ್ರಹಣ (ಸಂದೇಶ್ ಕಡೂರ್, ನಕುಲ್ ರಾಜ್) ಸಮನ್ವಯದಿಂದ ಕೂಡಿ ಪರಿಣಾಮಕಾರಿಯಾಗಿವೆ. ಇಂಥದ್ದೊಂದು ಪರಿಣಾಮಕಾರಿ ಡಾಕ್ಯುಮೆಂಟರಿ ಸಮರ್ಥವಾಗಿ ಮೂಡಿ ಬರಲು ಮತ್ತು ಸಿನಿಮಾ ಮಂದಿರಗಳಲ್ಲಿ ಬಿಡುಗಡೆಯಾಗಲು ಇದರ ಕಾರ್ಯಕಾರಿ ನಿರ್ಮಾಪಕರಾದ ರೋಹಿಣಿ ನಿಲೇಕಣಿ ಕಾರಣರಾಗಿದ್ದಾರೆ.
