ಪ್ರವಾಸ

ಕೊಂಕಣ ಸುತ್ತಿ ಮೈಲಾರಕ್ಕೆ ಹೋಗುವಾಗ ನೆರವಾದ ಆಲೂಗೆಡ್ಡೆ

ನನಗೆ ಆಲೂಗಡ್ಡೆ ಅಂದರೆ ತುಂಬ ಇಷ್ಟವಿತ್ತು. (ಈಗ ಇಷ್ಟವಿಲ್ವ ಎನ್ನುವ ಪ್ರಶ್ನೆ ಎದುರಾಗುತ್ತೆ ಅಂತ ಗೊತ್ತು! ಈಗಲೂ ಇಷ್ಟ ಆದರೆ ತಿನ್ನೋದಿಲ್ಲ ಅಷ್ಟೆ 😂 ) ಬೆಳಗ್ಗಿನ ಹೊತ್ತು ವೆಜ್ ಪಲಾವ್ ಮಾಡಿದೆ ಎಂದರೆ ಅದರಲ್ಲಿ ಆಲೂಗೆಡ್ಡೆಗೆ ಪ್ರಥಮ ಸ್ಥಾನ. ವೆಜ್ ಇರಲಿ, ನಾನ್ ವೆಜ್ ಇರಲಿ, ಇದನ್ನು ಹಾಕಿದರೆ ರುಚಿ ಹೆಚ್ಚು.‌ ಸಾಮಾನ್ಯವಾಗಿ ಸಿಪ್ಪೆ ತೆಗೆದು ಬೇಯಿಸುತ್ತಾರೆ. ಆದರೆ ನಾನು ಚೆನ್ನಾಗಿ ತೊಳೆದು ಸಿಪ್ಪೆ ತೆಗೆಯದೇ ಸಣ್ಣಸಣ್ಣ ಹೋಳು ಮಾಡಿ ಈರುಳ್ಳಿಯೊಂದಿಗೆ ಇದನ್ನು ಮತ್ತುಇತರ ತರಕಾರಿಗಳನ್ನು ಫ್ರೈ ಮಾಡಿ ಪಲಾವ್ ಗೆ ಅಣಿ ಮಾಡುತ್ತಿದ್ದೆ. ರುಚಿ ಅಂತೂ ಆಹ್ಹಾ ! ಅದಿರಲಿ ನಾನು ಹೇಳಲು ಹೊರಟ ವಿಷಯ ಇದಲ್ಲ !

ನಿರಂತರ ಕೆಲಸಗಳಿಂದ ಕಾಸರಗೋಡಿಗೆ ಹೋಗುವುದು ಮುಂದೂಡಿಕೆ ಆಗುತ್ತಲೇ ಇತ್ತು. ಜುಲೈ 26ರ ಬೆಳಗ್ಗೆ ದೃಢ ನಿರ್ಧಾರ ಮಾಡಿದೆ.  ಮುಂಜಾನೆಯೇ ಎದ್ದು ರೆಡಿಯಾದೆ. ಆಗಷ್ಟೇ ತುಂತುರು ಮಳೆ ಶುರುವಾಯಿತು. ಪಲ್ಸರ್ ಬೈಕ್ ಸವಾರಿಗೆ ಸದಾ ಸನ್ನದ್ದವಾಗಿರುತ್ತದೆ. ಬೈಕ್ ಚಾಲನೆ ಮಾಡಿದಾಗ ಸಮಯ 7. ಪಾರ್ಲೇ ಜಿ ಟೋಲ್ ಮುಂದೆ ನಿಲ್ಲಿಸಿದೆ. ಹಿಂದೆ ಕಟ್ಟಿದ್ದ ಲಗೇಜ್ ಮತ್ತಷ್ಟೂ ಬಿಗಿ ಮಾಡಿದೆ. ಅಲ್ಲಿ ಹೊಂಡಾ ಬೈಕರ್ ಸಮೀರ್ ಎದುರಾದರು. ಪರಸ್ಪರ ಹಾಯ್ ವಿನಿಮಯ. ಟೋಲ್ ದಾಟುತ್ತಿದ್ದಂತೆ ಮಳೆ ಜೋರಾಯ್ತ

ಬೈಕ್ ನಿಲ್ಲಿಸಿ ರೈನ್ ಗೌನ್ ಧರಿಸಿದೆ. ನೆಲಮಂಗಲ ಕ್ರಾಸ್ ದಾಟುತ್ತಿದ್ದಂತೆ ಮಳೆ ನಿಂತಿತು.‌ ಸೋಲೂರು ದಾಟುತ್ತಿದ್ದಂತೆ ಮತ್ತೆ ಮಳೆ ! ಕುಣಿಗಲ್ ಹತ್ತಿರವಾದಾಗ ಹನಿಹನಿ ಮಳೆ ನಿಂತಿತು. ಮಳೆಯ ಕಣ್ಣಾಮುಚ್ಚಾಲೆ ನೋಡಿ ರೈನ್ ಗೇರ್ ತೆಗೆಯುವುದೇ ಬೇಡ ಎನಿಸಿತು.

ಯಡಿಯೂರಿನಿಂದ ಮುಂದೆ ಹೆದ್ದಾರಿ ಬದಿಯಲ್ಲಿರುವ ಹರ್ಷ ಗ್ರಾಂಡ್ ಹೋಟೆಲ್ ಮುಂದೆ ನಿಲ್ಲಿಸಿದಾಗ ಸಮಯ 8.30. ರೈನ್ ಗೇರ್ ಕಳಚಿದೆ. ಉದ್ದಿನವಡೆ ಜೊತೆಗೆ ಬಿಸಿಬಿಸಿ ಕಾಫಿ ಉದರ ತಣಿಸಿದವು.

ಮತ್ತೆ ಬೈಕ್ ಚಾಲೂ ಮಾಡಿದಾಗ 9 ಗಂಟೆ.  ರೈನ್ ಗೇರ್ ಧರಿಸಲಿಲ್ಲ.  ಹೊಳೆ ನರಸೀಪುರ ದಾಟುತ್ತಿದ್ದಂತೆ ಮಳೆ ಶುರುವಾಯ್ತು. ಹನಿಯಾಗುತ್ತಿದ್ದಂತೆ ಮಳೆ ಉಡುಗೆ ಧರಿಸಿದೆ. ಕೊಣನೂರು ಕ್ರಾಸಿನಿಂದ ಮುಂದೆ ಐದಾರು ಕಿಲೋ ಮೀಟರ್ ತನಕ ಮಳೆ ಬಿಡುವು ಕೊಟ್ಟಿತು. ನಂತರ ಮಳೆಮಳೆ ಮತ್ತು ಮಳೆ.

ಅಪತ್ಬಾಂಧವನಂತೆ ಸಿಕ್ಕ ಆಲೂಗೆಡ್ಡೆ !

ಎದುರು ಮಳೆ. ಮುಖಕ್ಕೆ ದಪ್ಪನೆಯ ಹನಿ ರಪರಪನೆ ರಾಚುತ್ತದೆ. ಹೆಲ್ಮೆಟ್  ಶೀಲ್ಡ್ ಹಾಕಿದರೆ ಮಳೆ ಹನಿಗಳು ಹಾಗೆ ಉಳಿಯುತ್ತವೆ. ರಸ್ತೆಯೂ ಸರಿಯಾಗಿ ಕಾಣುವುದಿಲ್ಲ. ಆಗ ನೆನಪಾಗಿದ್ದೇ ಆಲೂಗೆಡ್ಡೆ. ನಿಧಾನವಾಗಿ ಬೈಕ್ ರೈಡ್ ಮಾಡುತ್ತಾ ರಸ್ತೆಯ ಎರಡೂ ಬದಿ ನೋಡುತ್ತಾ ತರಕಾರಿ ಅಂಗಡಿ ಹುಡುಕ ತೊಡಗಿದೆ. ಕಿರಾಣಿ ಅಂಗಡಿಯೊಂದರ ಮುಂದೆ ಆಲೂಗೆಡ್ಡೆ ಮೂಟೆ ಕಂಡ ಕೂಡಲೇ ಖುಷಿಯಾಯ್ತು. ಮುಂದಿನ ಸಂಭಾಷಣೆ ಕೇಳಿ

“ಒಂದ್ ಆಲೂಗೆಡ್ಡೆ ಕೊಡಿ” ಎಂದೇಳಿ ಪ್ಲಾಸ್ಟಿಕ್ ಕವರ್ ನಲ್ಲಿ ಬೆಚ್ಚಗೆ ಮಲಗಿದ್ದ ಮೊಬೈಲ್ ತೆಗೆದೆ. ಅಷ್ಟರಲ್ಲಿ ಅಂಗಡಿಯಾತ ಒಂದು ಕೆಜಿ ಆಲೂಗೆಡ್ಡೆ ತೂಗಿದ್ದರು. ತಗೊಳಿ ಒಂದ್ ಕೆಜಿ ಎಂದರು. ನಾನು ಒಂದ್ ಅಂದಿದ್ದನ್ನು ಒಂದು ಕೆಜಿ ಎಂದು ಅರ್ಥೈಸಿದ್ದರು. ಅದು ಸಹಜವೇ ಬಿಡಿ. ಯಾರು ತಾನೇ ಒಂದು ಆಲೂಗೆಡ್ಡೆ ಕೇಳಿಯಾರು 😂

ಒಂದೇ ಆಲೂಗೆಡ್ಡೆ ಸಾಕು ಎಂದಿದ್ದಕ್ಕೆ ಅವರ ಮೊಗದಲ್ಲಿ ಪ್ರಶ್ನಾರ್ಥಕ ಚಿಹ್ನೆ 😀 ಚಾಕು ಕೊಡಿ ಎಂದಾಗಲಂತೂ ಬೆಚ್ಚಿದಂತೆ ಅನಿಸಿತು 😂 ಯಾರೂ ಮರ್ಲು ಅಂದರೆ ಹುಚ್ಚು ಗಿರಾಗಿ ಅಂದುಕೊಂಡಿರಬೇಕು. ನಾನೇ ಅಲ್ಲೇ ಇದ್ದ ಚಾಕು ತೆಗೆದುಕೊಂಡು  ಆಲೂಗಡ್ಡೆ ಹೋಳು ಮಾಡಿದೆ. ಒಂದು ಹೋಳು ತೆಗೆದುಕೊಂಡು ಹೆಲ್ಮೆಟ್  ಶೀಲ್ಡಿಗೆ ಗಸಗಸನೇ ಉಜ್ಜಿ ಬ್ಯಾಗಿನಿಂದ ನೀರು ತೆಗೆದು ಅದರ ಮೇಲೆ ಹಾಕಿದೆ. ವಿಂಡ್ ಶೀಲ್ಡ್ ಫಳಫಳನೇ ಹೊಳೆಯತೊಡಗಿತು. ಆಗ ಅಂಗಡಿಯವರಿಗೆ ಅದರ ಪ್ರಯೋಜನ ಹೇಳಿದೆ. ಬೈಕ್ ಚಾಲೂ ಮಾಡಿದೆ.ಮಳೆ ಜೋರಾಗುತ್ತಲೇ ಇತ್ತು. ಹೆಲ್ಮೆಟ್ ಕವರ್ ಮೇಲೆ ಒಂದೇ ಒಂದು ಹನಿಯೂ ಕೂರಲಿಲ್ಲ. ಎದುರು ಹಾದಿ ಸ್ಪಷ್ಟವಾಯಿತು !

ಸುಂಟಿಕೊಪ್ಪ ದಾಟುತ್ತಿದ್ದಂತೆ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಮುಂದೆ ದೊಡ್ಡ ಮರ ಬಿದ್ದಿದೆ ಎಂದರು. ಅದನ್ನು ಹೆದ್ದಾರಿ ನಿರ್ವಹಣೆಗಾರರು ತೆರವು ಮಾಡುವುದರಲ್ಲಿ ಎರಡು ತಾಸು ಕಳೆದಿತ್ತು. ಅಷ್ಟರಲ್ಲಿ ಪಕ್ಕದಲ್ಲಿಯೇ ಇರುವ ಹೋಟೆಲಿನಲ್ಲಿ  ಬಿಸಿ ಪೂರಿ ಹೊಟ್ಟೆ ಸೇರಿತು. ಬಿಸಿಬಿಸಿ ಕಾಫಿಯಂತೂ ಮತ್ತಷ್ಟೂ ಉತ್ಸಾಹ ತುಂಬಿತು. ವಾಹನಗಳು‌ ನಿಧಾನವಾಗಿ ಚಾಲನೆಯಾದರೆ ಮಳೆ ಜೋರಾಗಿ ಚಾಲನೆಯಾಗುತ್ತಲೇ ಇತ್ತು. ಸಂಪಾಜೆ ಘಾಟಿ ಇಳಿದ ಬಳಿಕ ಪುಟ್ಟ ಹೋಟೆಲ್ ಮುಂದೆ ಬೈಕ್ ನಿಲ್ಲಿಸಿದೆ. ಬಿಸಿಬಿಸಿ ಸ್ಟ್ರಾಂಗ್ ಕಾಫಿ ಕೇಳಿದೆ. ಫ್ರೆಶ್ ಆಗಿ ಮಾಡಿಕೊಟ್ಟರು. ರುಚಿಯಾಗಿತ್ತು ! ಕುಡಿದು ಜಿ ಪೇ ತೆರೆದರೆ ನೆಟ್ ವರ್ಕ್ ಇಲ್ಲ. ಪೋನಿನಲ್ಲಷ್ಟೇ ಪೇ ಇದೆ. ಜೋಬಿನಲ್ಲಿ‌ ಇರಲಿಲ್ಲ.

” ಇಲ್ಲಿ‌ ಎರಡು ದಿನದಿಂದ‌ ಕರೆಂಟ್ ಇಲ್ಲ, ಮೊಬೈಲ್ ನೆಟ್ ವರ್ಕ್ ಸಹ ಇಲ್ಲ. ಇನ್ನೊಮ್ಮೆ ಬಂದಾಗ ಕೊಡಿ” ಎಂದರು. “ಈ ಜೋರು ಮಳೆಯಲ್ಲಿ ಎಲ್ಲಿ ಹೊರಟಿರಿ” ಎಂಬ ಪ್ರಶ್ನೆಯೂ ಸಹಜವಾಗಿ ಎದುರಾಯ್ತು. ಉತ್ತರಿಸಿದೆ. ಮಳೆ ಆರ್ಭಟಿಸುತ್ತಲೇ ಇತ್ತು. ದಾರಿಯುದ್ದಕ್ಕೂ ವಿದ್ಯುತ್ ಕಂಬಗಳ ಮೇಲೆ ಮರಗಳು ಉರುಳಿದ್ದವು. ಸಂಪಾಜೆ ಘಾಟಿ ಇಳಿಯುವಾಗಲಂತೂ ಐದಾರು ಕಾರುಗಳು‌ ನಿಯಂತ್ರಣ ಕಳೆದುಕೊಂಡು ರಸ್ತೆಬದಿ ಮೋರಿಗೆ ನುಗ್ಗಿದ್ದವು. ಒಂದೆಡೆಯಂತೂ ಕಾರು – ಲಾರಿ ಮುಖಾಮುಖಿ ಡಿಕ್ಕಿಯಾಗಿದ್ದವು. ಹೋಟೆಲಿನಲ್ಲಿ ಕಾಫಿ ಕುಡಿಯುವಾಗ ಈ ವಿಚಾರ ಪ್ರಸ್ತಾಪವಾಯಿತು. ಬೆಂಗಳೂರಿನ‌ ಮೂವರು ಯುವಕರು ಸ್ಪಾಟ್ ಡೆತ್ ಎಂದು ಹೋಟೆಲಿನವರು ಮರುಗಿದರು.

ತೀವ್ರ ತಿರುವುಗಳಿರುವ ರಸ್ತೆಯಲ್ಲಿ ನಿಧಾನವಾಗಿ ವಾಹನಗಳನ್ನು ಚಲಾಯಿಸಬೇಕು. ಮಳೆ ಜೋರಾಗಿದ್ದಾಗ ರಸ್ತೆ ತುಂಬ ಒದ್ದೆಯಾಗಿರುತ್ತದೆ. ಸ್ಪೀಡ್ ಹೆಚ್ಚಿದ್ದರೆ ಟೈರುಗಳಿಗೆ ಗ್ರಿಪ್ ಸಿಗದೇ ಬ್ರೇಕ್ ಹಾಕಿದರೂ ಥಟ್ಟನೇ ನಿಲ್ಲುವುದಿಲ್ಲ.‌ಅಪಘಾತವಾಗುವ ಸಾಧ್ಯತೆ ಹೆಚ್ಚು. ನಾನು ಕಾಫಿ ಕುಡಿಯಲು ನಿಲ್ಲಿಸಿದ ಜಾಗಗಳಲ್ಲಿ ಸ್ಥಳೀಯರು ” ಜೋರು ಮಳೆಯಲ್ಲಿ ಬೈಕ್ ನಲ್ಲಿ ಯಾಕೆ ಬಂದ್ರಿ ! ನಿಧಾನವಾಗಿ ಹೋಗಿ” ಎಂದು ಸಲಹೆ ಕೊಡುತ್ತಿದ್ದರು. ಅದನ್ನು ಮೀರಲಿಲ್ಲ !

ಕಾಸರಗೋಡು ತಲುಪಿದಾಗ ಸಮಯ‌ 5 ಗಂಟೆ ಆಗಿತ್ತು ! ದಟ್ಟವಾಗಿ ಬೀಳುತ್ತಿದ್ದ ಮಳೆಯಿಂದ ಸಮಯ ಸಂಜೆ 7 ಆಯಿತೇನೋ ಎನಿಸುತ್ತಿತ್ತು. ಬೈಕ್ ಇಳಿದೊಡನೆ‌ ಎದುರಾದ ಕಾಫಿ ಮೈಯನ್ನು ಬೆಚ್ಚಗೆ ಮಾಡಿತು !!

ಕೊಂಕಣ ಸುತ್ತಿ ಮೈಲಾರಕ್ಕೆ ಏಕೆ

ಕಾಸರಗೋಡಿಗೆ ಮೈಸೂರು, ಮಡಿಕೇರಿ, ಸುಳ್ಯದಿಂದ ಹೋಗಬಹುದು ಅಥವಾ ಹಾಸನ, ಸಕಲೇಶಪುರ, ಪುತ್ತೂರು ಮೂಲಕ ತಲುಪಬಹುದು. ಮೊದಲನೇ ಹಾದಿ ಚೆನ್ನಾಗಿದೆ. ಎರಡನೇ ಹಾದಿ ಐದಾರು ವರ್ಷಗಳಿಂದ ರೆಡಿಯಾಗುತ್ತಲೇ ಇದೆ. ಈಗ ಕಾರುಗಳಲ್ಲಿ ಹೋಗಬಹುದು. ಆದರೆ ಸಕಲೇಶಪುರ ದಾಟಿದ ಮೇಲೆ ನಿಧಾನ ಗತಿ. ಬೈಕಿನಲ್ಲಿ ಇನ್ನೂ ಆರಾಮವಾಗಿ ಹೋಗುವಷ್ಟೂ ರಸ್ತೆ ಸಿದ್ದವಾಗಿಲ್ಲ. ಕಳೆದ ವರ್ಷ ಈ ಹಾದಿಯಲ್ಲಿ ಹೋಗಿ ಭಾರಿ ಫಜೀತಿ ಅನುಭವಿಸಿದೆ. ಬೆಂಗಳೂರು, ಮೈಸೂರು, ಮಡಿಕೇರಿ‌ ಮಾರ್ಗವಾಗಿ ಕಾಸರಗೋಡಿಗೆ ಹೋಗುತ್ತಲೇ ಇರುತ್ತೇನೆ. ಹಾಗಾಗಿ ಹೊಸ ಮಾರ್ಗದಲ್ಲಿ ಹೋಗೋಣ ಎಂದು‌ ನಿರ್ಧರಿಸಿದೆ. ಹೊಲ-ಗದ್ದೆ-ತೋಟ-ಹೊಳೆ –ನದಿಗಳ ನಡುವಿನ ಹಾದಿ. ರಮ್ಯ ಅನುಭವ ನೀಡುತ್ತದೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!