ಆಸಕ್ತರನ್ನು ಸೆಳೆಯುತ್ತಿರುವ ಅಪರೂಪದ ಮೋಟರ್ ಬೈಕ್
ಬೆಂಗಳೂರು ರಾಜಾಜಿನಗರದಲ್ಲಿರುವ ಲುಲು ಮಾಲ್ ಮುಖ್ಯದ್ವಾರ ಪ್ರವೇಶಿಸುತ್ತಿದ್ದಂತೆ ಪ್ರದರ್ಶನಕ್ಕಿಟ್ಟ ಬೈಕ್ ಆಕರ್ಷಿಸುತ್ತದೆ. ಬೈಕುಗಳ ಬಗ್ಗೆ ಆಸಕ್ತಿ ಇರುವವರನ್ನು ತಡೆದು ನಿಲ್ಲಿಸಿ ನೋಡುವಂತೆ ಮಾಡುತ್ತದೆ. ಇದು ಅಂತಿಂಥ ಬೈಕ್ ಅಲ್ಲ ! ಭಾರತೀಯ ಚಿತ್ರರಂಗದ ಗಮನಾರ್ಹ ಹೆಗ್ಗುರುತಾಗಿರುವ “ಶೋಲೆ” ಹಿಂದಿ ಸಿನಿಮಾದಲ್ಲಿ ಬಳಕೆಯಾಗಿರುವ ಬೈಕ್
ಬಹುಶಃ ಭಾರತದಲ್ಲಿ ಶೋಲೆ ಸಿನಿಮಾದವರನ್ನು ನೋಡದೇ ಇರುವವರನ್ನು ಹುಡುಕಬೇಕು. ಇಂದಿನ ಜಮಾನದ ಯುವಜನತೆಗೂ ಶೋಲೆ ಚಿರಪರಿಚಿತ ! ಯೂ ಟ್ಯೂಬ್ ನಲ್ಲಿ ಸಿನಿಮಾ ಇದೆ. ಮನರಂಜನೆ ಆಧರಿತ ಟೆಲಿವಿಷನ್ ಗಳಲ್ಲಿ ಆಗಾಗ ಪ್ರದರ್ಶನ ಕಾಣುತ್ತಿರುತ್ತದೆ. ಈ ಸಿನಿಮಾದ ಹೀರೋಗಳಾದ ಜೈ ಮತ್ತು ವೀರು ಈ ಬೈಕ್ ಸವಾರಿ ಮಾಡುತ್ತಾ “ಯೇ ದೋಸ್ತಿ ಹಮ್ ನಹಿ ತೋಡೆಂಗೆ” ಎಂದು ಹೇಳುವ ಹಾಡು ಇಂದಿಗೂ ಅತೀ ಜನಪ್ರಿಯ !
ಸೈಡ್ ಕಾರ್ ಸಹ ಇದ್ದ ಬೈಕ್ ನಲ್ಲಿ ಅಮಿತಾಭ್ – ಧರ್ಮೇಂದ್ರ ಸವಾರಿ ಜೊತೆಗೆ ಹಾಡು ಇರುವ ದೃಶ್ಯಗಳ ಶೂಟಿಂಗ್ ಕರ್ನಾಟಕದ ರಾಮನಗರದ ಬೆಟ್ಟಗುಡ್ಡಗಳ ನಡುವಿನ ಪ್ರದೇಶದಲ್ಲಿ ೨೧ ದಿನ ನಡೆದಿದೆ ಎಂದರೆ ಅಚ್ಚರಿಯಾಗುತ್ತದೆ. ಚಿತ್ರೀಕರಣದ ನಂತರವೂ ಈ ಬೈಕ್ ನೆನಪು ಮಾಸಿರಲಿಲ್ಲ. ಶೋಲೆ ಸಿನಿಮಾ ತೆರೆಕಂಡು ೫೦ ವರ್ಷ ಸಂದಿದ್ದರೂ ಇನ್ನು ಆಕರ್ಷಣೆ ಉಳಿಸಿಕೊಂಡಿರುವಂತೆ ಈ ಬೈಕ್ ಸಹ ಅದೇ ಆಕರ್ಷಣೆ ಉಳಿಸಿಕೊಂಡಿದೆ.
ಶಸ್ತ್ರಾಸ್ತಗಳ ತಯಾರಿಕೆಯಲ್ಲಿ ಭಾರಿ ಹೆಸರು ಮಾಡಿದ್ದ ಬಿ.ಎಸ್.ಎ. ಕಂಪನಿಯು ಮಿಲಿಟರಿಗಾಗಿಯೇ ೧೯೩೭ರಲ್ಲಿ ಬೈಕುಗಳ ತಯಾರಿಕೆ ಆರಂಭಿಸಿತು. ಈ ಬೈಕ್ ೧೯೪೨ರಲ್ಲಿ ತಯಾರಾದ 1942 BSA WM20 ಮಾಡೆಲ್. ಇದರ ವಿವರಗಳು ಮುಂದಿವೆ.
ನೋಂದಣಿ: MYB 3047
ತಯಾರಿಸಿದ ವರ್ಷ: 1942
ಮಾದರಿ: BSA WM20
ಚಾಸಿಸ್ ಸಂಖ್ಯೆ: M20 116283
ಎಂಜಿನ್ ಸಂಖ್ಯೆ: M20 4299
ವಿಶೇಷವಾಗಿ BSA ಕಂಪನಿ ತಯಾರಿಸಿದ WM20 ಮಾಡೆಲ್ ಬೈಕುಗಳು ಬ್ರಿಟನ್‌ನ ಯುದ್ಧ ಯೋಜನೆಗೆ BSA ಕಂನಿ ನೀಡಿದ್ದ ಯುದ್ಧಕಾಲದ ಕೊಡುಗೆಯ ಭಾಗವಾಗಿತ್ತು. 1937 ಅದರ ಮೊದಲ ಉತ್ಪಾದನೆಯ ವರ್ಷ. ಈ ಸರಣಿ ಬೈಕುಗಳ ತಯಾರಿಕೆಯು 1950 ರ ದಶಕದ ಅಂತ್ಯದವರೆಗೆ ಇತ್ತು. ಮಾದರಿ ಪದನಾಮದಲ್ಲಿರುವ “W” ಇದನ್ನು ಮಿಲಿಟರಿ ಮೋಟಾರ್‌ಸೈಕಲ್‌ಗಾಗಿ ನಿರ್ದಿಷ್ಟವಾಗಿ ವಿನ್ಯಾಸಗೊಳಿಸಲಾಗಿದೆ ಎಂದು ಸೂಚಿಸುತ್ತದೆ.
ಬಹು ಮುಖ್ಯವಾದ ವಿಷಯ ಎಂದರೆ ಈ ಬೈಕ್ ಮಾಲಿಕತ್ವ ಹೊಂದಿರುವವರು ಬಹಳ ಕಷ್ಟಪಟ್ಟು ಎಲ್ಲೆಲ್ಲಿಂದಲೋ ಬಿಡಿಭಾಗಗಳನ್ನು ಸಂಗ್ರಹಿಸಿ ರಿಸ್ಟೋರ್ ಮಾಡಿದ್ದಾರೆ. ಇದು ಇಂದಿಗೂ ಚಾಲನೆ ಹೊಂದಿರುವುದು ಗಮನಾರ್ಹ. ಭಾರತೀಯ ಚಿತ್ರರಂಗದ ನೆನಪಿನ ಭಾಗವಾಗಿರುವ ಈ ಬೈಕ್ ಅನ್ನು ೧೭ನೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಸಂದರ್ಭದಲ್ಲಿ ಇದನ್ನು ತಂದು ಪ್ರದರ್ಶನಕ್ಕಿಟ್ಟಿರುವುದು ಶ್ಲಾಘನೀಯ ಕಾರ್ಯ.
