ಜಂಗಲ್ ಸಫಾರಿ ನಿಲ್ಲಬೇಕೆಂದು ರೈತರು ಹೇಳುತ್ತಿರುವುದು ಸರಿಯೇ ?
ಕಾಡುಗಳಲ್ಲಿ ಸಫಾರಿ (Jungle safari) ನಿಲ್ಲಬೇಕೆಂದು ರೈತರು (Farmers) ಒತ್ತಾಯಿಸುತ್ತಿದ್ದಾರೆ. ಮೇಲ್ನೋಟಕ್ಕೆ ಅವರು ಹೇಳುತ್ತಿರುವುದು ಸರಿಯಲ್ಲ ಎನಿಸಬಹುದು. ಆಳವಾಗಿ ವಿಚಾರ ಮಾಡಿದಾಗ ಅವರು ಮಾಡುತ್ತಿರುವ ಒತ್ತಾಯ ಸರಿಯಿದೆ, ತರ್ಕದಿಂದ ಕೂಡಿದೆ ಎಂದು ಮನವರಿಕೆಯಾಗುತ್ತದೆ. ಆದರೆ ಈ ವಿಚಾರ ಏಕೆ ಅರಣ್ಯ ಇಲಾಖೆಗೆ ಮನವರಿಕೆಯಾಗುತ್ತಿಲ್ಲ ? ಇದು ಯೋಚನೆ ಮಾಡಬೇಕಾದ ವಿಷಯ.
ಕಾಡಿನ ಸರಹದ್ದಿನಲ್ಲಿರುವ ಗ್ರಾಮಸ್ಥರಿಗೆ ಸಹಜವಾಗಿಯೇ ಪ್ರಾಣಿಗಳ ನಡವಳಿಕೆ ಕುರಿತು ತಿಳಿವಳಿಕೆ ಇರುತ್ತದೆ. ಎಷ್ಟೋ ಬಾರಿ ಇವರಿಗಿರುವ ಕಾಡಿನ ಜ್ಞಾನ, ಅರಣ್ಯ ಇಲಾಖೆಯ ಅಧಿಕಾರಿ (Forest officers)ಗಳಿಗೆ ಇರುವುದಿಲ್ಲ. ತಮಗಿರುವ ಕಾಡಿನ ಜ್ಞಾನದ ಹಿನ್ನೆಲೆಯಿಂದಲೇ ಅವರು ಕಾಡಿನಲ್ಲಿ ಸಫಾರಿ ನಿಲ್ಲಬೇಕೆಂದು ಪ್ರತಿಭಟಿಸುತ್ತಿದ್ದಾರೆ. ಆದರೆ ಪದೇಪದೇ ಹುಲಿ – ಮಾನವ ಸಂಘರ್ಷ ನಡೆಯುತ್ತಿರುವುದಕ್ಕೆ ಈ ಕಾರಣಗಳ ಜೊತೆಗೆ ಬೇರೆಬೇರೆ ಬಲವಾದ ಕಾರಣಗಳೂ ಇವೆ. ಅವುಗಳನ್ನು ಒಂದೊಂದಾಗಿ ನೋಡೋಣ
ಕಾಡಿನಂಚಿನ ಗ್ರಾಮಗಳ ರೈತರು ಏಕೆ ಸಫಾರಿ ನಿಲ್ಲಬೇಕೆಂದು ಒತ್ತಾಯಿಸುತ್ತಿದ್ದಾರೆ, ಇದರಿಂದ ಸಮಸ್ಯೆ ಬಗೆಹರಿಯುತ್ತದೆಯೇ ಎಂಬುದನ್ನು ಬಂಡೀಪುರ ಹುಲಿ ಅಭಯಾರಣ್ಯದಲ್ಲಿ ನಡೆಯುತ್ತಿರುವ ಮಾನವ-ಹುಲಿ ಸಂಘರ್ಷಗಳ ದುರ್ಘಟನೆಗಳನ್ನು ಆಧರಿಸಿಯೇ ಹಂತ ಹಂತವಾಗಿ ವಿವರಿಸುತ್ತೇನೆ.
ಗ್ರಾಮಸ್ಥರ ದೃಷ್ಟಿಕೋನದಲ್ಲಿ ಇರುವ ವೈಜ್ಞಾನಿಕ ಅಂಶ
ಅರಣ್ಯ ಸಚಿವ ಈಶ್ವರ್ ಬಿ. ಖಂಡ್ರೆ (Forest minister Eswar Khandre) ಅವರು ಅಕ್ಟೋಬರ್ 28, 2025 ರಂದು ಬಂಡೀಪುರಕ್ಕೆ ಭೇಟಿ ನೀಡುವ ಸಂದರ್ಭದಲ್ಲಿ ರೈತ ಸಂಘಗಳ ಪ್ರತಿನಿಧಿಗಳು ಅವರನ್ನು ಭೇಟಿಯಾದರು. ತಮ್ಮ ಆತಂಕ ವಿವರಿಸಿದರು. ಅಕ್ಟೋಬರ್ 26 ರಂದು ಹುಲಿ ದಾಳಿಯಿಂದ 55 ವರ್ಷದ ರೈತ ರಾಜಶೇಖರ್ ಅವರ ಸಾವು, ಇದಕ್ಕೂ ಎರಡು ವಾರಗಳ ಮೊದಲು ರೈತ ಮಹಾದೇವ ಗೌಡ ಅವರ ಮೇಲೆ ಹುಲಿಯಿಂದ ನಡೆದ ಭೀಕರ ದಾಳಿಯಿಂದ ಅವರು ಶಾಶ್ವತವಾಗಿ ದೃಷ್ಟಿ ಕಳೆದುಕೊಂಡಿರುವುದು ಗ್ರಾಮಸ್ಥರಲ್ಲಿ ಭಯ ಹೆಚ್ಚಸಿವೆ.
“ಮುಳ್ಳೂರು ಹುಂಡಿ, ಹೆಡಿಯಾಲ ಮತ್ತು ಬೊಮ್ಮಲಾಪುರದಂತಹ ಗ್ರಾಮಗಳ ಹೊಲಗಳಲ್ಲಿ ಹುಲಿಗಳು ಅಲೆದಾಡುತ್ತಿವೆ ದನಗಳನ್ನು ಕೊಲ್ಲುತ್ತಿವೆ. ದನಗಾಹಿಗಳು, ರೈತರ ಮೇಲೆ ದಾಳಿ ಮಾಡುತ್ತಿವೆ. ಇಂಥ ದುರ್ಘಟನೆಗಳಿಗೆ ಕಾಡಿನಲ್ಲಿ ನಿತ್ಯ ನಡೆಯುತ್ತಿರುವ ಸಫಾರಿ ಕಾರಣ. ವಾಹನಗಳು, ಜನರು ಕಾಡಿನೊಳಗೆ ಹೋಗುತ್ತಲೇ ಇರುವುದರಿಂದ ಹುಲಿಗಳ ಮೇಲೆ ಒತ್ತಡ ಹೆಚ್ಚಾಗಿದೆ. ಇದರಿಂದ ಅವುಗಳು ಕಾಡಿನ ಸರಹದ್ದಿನಲ್ಲಿ ಸಂಚರಿಸುತ್ತಿವೆ. ಆದ್ದರಿಂದ ಸಫಾರಿ ನಿಲ್ಲಿಸಿ” ಎಂದು ಒತ್ತಾಯಿಸಿದರು.
ಕಾಡಿನಲ್ಲಿ ಸಫಾರಿಗೆ ಹೋದ ಒಂದು ವಾಹನಕ್ಕೆ ಹುಲಿಯೊಂದು ಕಂಡ ಕೂಡಲೇ ಇತರ ವಾಹನಗಳ ಸಿಬ್ಬಂದಿಗೂ ಸಂದೇಶ ರವಾನೆಯಾಗುತ್ತದೆ. ಎಲ್ಲರೂ ಹುಲಿ ಕಂಡ ಜಾಗಕ್ಕೆ ಮುತ್ತಿಗೆ ಹಾಕುತ್ತಾರೆ. ಅದರಲ್ಲಿಯೂ ಪ್ರವಾಸಿ ಋತುಗಳಲ್ಲಿ ಪ್ರವಾಸಿಗರ ಸಂದಣಿ ಹೆಚ್ಚು. ಒಂದೇ ಸಮಯದಲ್ಲಿ ಒಂದರ ಹಿಂದೆ ಒಂದರಂತೆ 20 ರಿಂದ 30 ವಾಹನಗಳು ಮೆರವಣಿಗೆ ಮಾದರಿ ಕಾಡಿನೊಳಗೆ ಪ್ರವೇಶಿಸುತ್ತವೆ. ಇವುಗಳು ಮಾಡುವ ಸದ್ದು ಸಹಜವಾಗಿಯೇ ಮೌನವನ್ನು ಅಪೇಕ್ಷಿಸುವ ವನ್ಯಜೀವಿಗಳಿಗೆ ಕಿರಿಕಿರಿ ಉಂಟು ಮಾಡುತ್ತವೆ. ಈ ವಿಷಯದಲ್ಲಿ ಅರಣ್ಯ ಇಲಾಖೆಯು ವನ್ಯಪ್ರಾಣಿಗಳಿಗೆ ಸಂವೇದನೆಯೇ ಇಲ್ಲವೇನೋ ಎಂಬಂತೆ ನಡೆದುಕೊಳ್ಳುತ್ತಿದ್ದಾರೆ.
ಈ ಸಫಾರಿಯಲ್ಲದೇ ಬಂಡೀಪುರ, ನುಗು, ನಾಗರಹೊಳೆ, ಕಬಿನಿ, ದಮ್ಮನಕಟ್ಟೆ ಮುಂತಾದೆಡೆ ಕಾಡುಗಳ ಸುತ್ತಲೂ ನಾಯಿಕೊಡೆಗಳಂತೆ ರೆಸಾರ್ಟ್ ಗಳು ತಲೆ ಎತ್ತಿವೆ. ಇಲ್ಲಿಗೆ ಪ್ರವಾಸಿಗರು, ವಾಹನಗಳ ಸಂದಣಿಯೂ ವನ್ಯಜೀವಿಗಳ ಮೇಲೆ ಸಹಜವಾಗಿ ಒತ್ತಡ ಉಂಟು ಮಾಡುತ್ತವೆ. ಪ್ರಶಾಂತವಾದ ವಾತಾವರಣ ಕಲಕಿದಂತೆ ಆದಾಗ ಅವುಗಳು ಸಹಜವಾಗಿಯೇ ಕೆರಳುತ್ತವೆ. ಒಂದು ಅಂದಾಜಿನ ಪ್ರಕಾರ ಬಂಡೀಪುರ ಹುಲಿಧಾಮ (Bandipur Tiger Reserve) ವೊಂದೇ ಒಂದು ವರ್ಷಕ್ಕೆ 3 ಲಕ್ಷಕ್ಕೂ ಹೆಚ್ಚು ಪ್ರವಾಸಿ (Travellers) ಗರನ್ನು ಸೆಳೆಯುತ್ತಿದೆ. ಈ ಸಂಖ್ಯೆಯಿಂದಲೇ ಕಾಡು (Forest) ಕಾಡಿನ ಮೇಲೆ ಉಂಟಾಗುತ್ತಿರುವ ಒತ್ತಡ ಅಂದಾಜಿಸಬಹುದು.
ಪದೇಪದೇ ಹುಲಿ – ಮಾನವ ಸಂಘರ್ಷ (Man – Tiger conflict) ನಡೆಯುತ್ತಿರುವ ಕಾರಣ ಕಾಡಿನಂಚಿನ ಗ್ರಾಮಸ್ಥರು ಭಯದಿಂದ ತತ್ತರಿಸಿದ್ದಾರೆ. ಬೊಮ್ಮಲಾಪುರ ಗ್ರಾಮಸ್ಥರು ವಿಳಂಬಿತವಾಗಿ ಹುಲಿ ಸೆರೆ ಕಾರ್ಯಾಚರಣೆಗೆ ಬಂದ ಅರಣ್ಯ ಅಧಿಕಾರಿಗಳನ್ನು ಹುಲಿ ಪಂಜರದಲ್ಲಿ ಬಂಧಿಸಿದ್ದರ ಹಿಂದೆ ಈ ಭಯವೂ ಕಾರಣವಾಗಿರುವುದನ್ನು ಗಮನಿಸಬಹುದು.
ಬಂಡೀಪುರ ಕಾಡಿನ ಸುತ್ತ ಗ್ರಾಮಗಳಿವೆ. ಇಲ್ಲಿನ ಹಲವರಿಗೆ ಹೈನುಗಾರಿಕೆ, ಕೃಷಿಯೇ ಪ್ರಮುಖ ಜೀವನಾಧಾರ. ಇವರು ದನ, ಕುರಿ, ಮೇಕೆಗಳನ್ನು ಮೇಯಿಸುವಾಗ, ಹೊಲದಲ್ಲಿ ಕೆಲಸ ಮಾಡುವಾಗ ಹುಲಿ, ಚಿರತೆ ದಾಳಿ ಮಾಡಿದರೆ ತಪ್ಪಿಸಿಕೊಳ್ಳಲು ದಾರಿ ಇರುವುದಿಲ್ಲ. ಕುಟುಂಬಕ್ಕೆ ಆಧಾರವಾದ ವ್ಯಕ್ತಿಗಳು ಜೀವ ಕಳೆದುಕೊಂಡಾಗ ಅವಲಂಬಿತರ ಆಕ್ರಂದನ, ಆಕ್ರೋಶ ಮುಗಿಲು ಮುಟ್ಟುತ್ತದೆ. ಸರ್ಕಾರ ನೀಡುವ ಪರಿಹಾರ ನೆರವಾಗುತ್ತದೆ ಎಂಬುದು ಖಂಡಿತ ಸುಳ್ಳು. ೨೦೨೩ರಲ್ಲಿ ಬಂಡೀಪುರದ ಅಂಚಿನ ಗ್ರಾಮಗಳಲ್ಲಿ ವನ್ಯಜೀವಿಗಳ ದಾಳಿಯಿಂದ ೮ ಮಂದಿ ದಾರುಣವಾಗಿ ಸಾವನ್ನಪ್ಪಿದ್ದಾರೆ. ೨೦೨೫ರಲ್ಲಿ ವಿಶೇಷವಾಗಿ ಹುಲಿ – ಮಾನವ ಸಂಘರ್ಷ ಹೆಚ್ಚಾಗಿದೆ.
ಸಫಾರಿಯೇ ಮುಖ್ಯ ಅಪರಾಧಿ ಸ್ಥಾನದಲ್ಲಿ ನಿಲ್ಲುತ್ತದೆಯೇ
ಸಫಾರಿಯೇ ಮುಖ್ಯ ಅಪರಾಧಿ ಸ್ಥಾನದಲ್ಲಿ ನಿಲ್ಲದಿದ್ದರೂ ಅದು ಪ್ರಮುಖ ಕಾರಣ. ಸಫಾರಿ ಪ್ರವಾಸೋದ್ಯಮವು ವನ್ಯಜೀವಿಗಳ ಆವಾಸಸ್ಥಾನದ ಮೇಲಿನ ಒತ್ತಡವನ್ನು ಹೆಚ್ಚಿಸುತ್ತದೆ ಎಂದು ವನ್ಯಜೀವಿ ತಜ್ಞರು ಒಪ್ಪಿಕೊಳ್ಳುತ್ತಾರೆ. ಇದರ ಜೊತೆಗೆ ಮೊದಲೇ ಹೇಳಿದಂತೆ ರೆಸಾರ್ಟುಗಳಿಂದ ಉಂಟಾಗುತ್ತಿರುವ ಅಡಚಣೆ, ವಾಹನಗಳ ಸದ್ದು, ಪ್ರವಾಸಿಗರ ಚೀರಾಟ, ವಾಹನಗಳ ಇಂಧನದ ವಾಸನೆ, ವರ್ಷದಿಂದ ವರ್ಷಕ್ಕೆ ದಟ್ಟವಾಗುತ್ತಿರುವ ಲಂಟಾನಾ ಪೊದೆಗಳಿಂದ ಉಂಟಾಗುತ್ತಿರುವ ಕಿರಿಕಿರಿ ಇವೆಲ್ಲವೂ ಬೇಟೆಪ್ರಾಣಿಗಳ ನೆಮ್ಮದಿ ಕೆಡಿಸಿವೆ. ಹಾಗಾಗಿ ಅವು ಕಾಡಿನಿಂದ ನಾಡಿನ ಅಂಚಿಗೆ ಬರುತ್ತಿವೆ.
ಸಫಾರಿ ನಿಲ್ಲಿಸಿದಾಕ್ಷಣ ಹುಲಿ – ಮಾನವ ಸಂಘರ್ಷ ನಿಲ್ಲುತ್ತದೆಯೇ
ಸಫಾರಿ ನಿಲ್ಲಿಸಿದಾಕ್ಷಣ ಹುಲಿ – ಮಾನವ ಸಂಘರ್ಷ ನಿಲ್ಲದಿದ್ದರೂ ಗಣನೀಯವಾಗಿ ಕಡಿಮೆಯಾಗುತ್ತದೆ. ಇದರಲ್ಲಿ ಯಾವುದೇ ಸಂಶಯವಿಲ್ಲ. ಹಾಗಿದ್ದರೆ ಸಫಾರಿ ನಿಲ್ಲಿಸುವುದರ ಜೊತೆಗೆ ಮತ್ತೆ ಇನ್ನು ಯಾವ ಕ್ರಮಗಳನ್ನು ತೆಗೆದುಕೊಳ್ಳಬಹುದು ? ಇವುಗಳನ್ನು ಮುಂದಿನ ಸಂಚಿಕೆಯಲ್ಲಿ ಚರ್ಚಿಸೋಣ
