ಯಾವ ಲೆಕ್ಕದಲ್ಲಿ ಒಂದು ಸಫಾರಿ ಕಡಿಮೆಯಾಗುತ್ತದೆ ಸಚಿವರೇ
ಕಾಡಿನೊಳಗೆ ನಿತ್ಯವೂ ಸಫಾರಿ ವಾಹನಗಳು, ಪ್ರವಾಸಿಗರು ತೆರಳುವುದರಿಂದ ವನ್ಯಜೀವಿಗಳ ಮೇಲೆ ಒತ್ತಡ ಉಂಟಾಗುತ್ತಿದೆ. ಅವುಗಳು ನಾಡಿನತ್ತ ಮುಖ ಮಾಡುತ್ತಿವೆ. ಸಫಾರಿ ನಿಲ್ಲಿಸಿ. ಇದು ರೈತಸಂಘಗಳ ಆಗ್ರಹ. ಈ ಹಿನ್ನೆಲೆಯಲ್ಲಿ ಅರಣ್ಯ ಸಚಿವರು ಸಂಬಂಧಿಸಿದ ಅರಣ್ಯಾಧಾರಿಗಳೊಂದಿಗೆ ಚರ್ಚಿಸಿದ್ದಾರೆ. ಆದೇಶವನ್ನೂ ಹೊರಡಿಸಿದ್ದಾರೆ. ಅದರ ಪಠ್ಯ ಮುಂದಿದೆ.
ಟಿಪ್ಪಣಿ
ಬಂಡೀಪುರ, ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದಲ್ಲಿ ವನ್ಯಜೀವಿಗಳ ವೀಕ್ಷಣೆಗೆ ಬರುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತಿದ್ದು, ಸಫಾರಿಯ ಟ್ರಿಪ್ ಸಂಖ್ಯೆ ಹೆಚ್ಚಳ ಮಾಡಲಾಗಿದೆ. ರಾತ್ರಿ 6:00 ಗಂಟೆಯ ನಂತರವೂ ಕಾಡಿನಲ್ಲಿ ಸಫಾರಿ ವಾಹನಗಳು ಸಂಚರಿಸುತ್ತಿವೆ. ವಾಹನದ ಬೆಳಕು ಮತ್ತು ಶಬ್ದದಿಂದ ವನ್ಯಜೀವಿಗಳು ಕಾಡಿನಿಂದ ನಾಡಿಗೆ ಬಂದು ಉಪಟಳ ನೀಡುತ್ತಿವೆ ಎಂದು ವಿವಿಧ ರೈತ ಸಂಘಟನೆಗಳು ಆರೋಪಿಸಿ, ಕೂಡಲೇ ಸಫಾರಿ ನಿಲ್ಲಿಸುವಂತೆ ಮನವಿ ಮಾಡಿದ್ದಾರೆ. ಸಫಾರಿಯು ಕಾಡಿನ ಬಗ್ಗೆ, ವನ್ಯಜೀವಿಗಳ ಬಗ್ಗೆ ಪರಿಸರ ಆಸಕ್ತರಿಗೆ ಶಿಕ್ಷಣವೂ ಆಗಿದೆ. ಹಲವರಿಗೆ ಜೀವನೋಪಾಯವೂ ಆಗಿದೆ. ಈ ನಿಟ್ಟಿನಲ್ಲಿ ನಾಳೆಯಿಂದಲೇ ಅಂದರೆ 28.10.2025 ರಿಂದ ಹಾಲಿ ಇರುವ ಸಫಾರಿಯ ಟ್ರಿಪ್ ಗಳ ಪೈಕಿ 1 ಟ್ರಿಪ್ ಕಡಿತಗೊಳಿಸಲು ತುರ್ತು ಕ್ರಮ ಕೈಗೊಳ್ಳುವಂತೆ ಈ ಮೂಲಕ ಸೂಚಿಸಿದೆ.
ಸಚಿವರ ಟಿಪ್ಪಣಿ ಪ್ರಕಾರವೇ ವನ್ಯಜೀವಿಗಳ ವೀಕ್ಷಣೆಗೆ ತೆರಳುವ ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಿದೆ. ಒಂದು ದಿನಕ್ಕೆ ಇಂತಿಷ್ಟೇ ಸಫಾರಿ ಎಂದೇನೂ ಇರುವುದಿಲ್ಲ. ಪ್ರವಾಸಿಗರು ಹೆಚ್ಚಿದ್ದಾಗ ಹೆಚ್ಚು ಸಫಾರಿ ಟ್ರಿಪ್ ಗಳು, ಕಡಿಮೆ ಇದ್ದರೆ ಕಡಿಮೆ ಟ್ರಿಪ್ ಗಳು. ಹೀಗಾಗಿ ಒಂದು ದಿನಕ್ಕೆ ಇಂತಿಷ್ಟೇ ಸಫಾರಿ ಟ್ರಿಪ್ ಆಗುತ್ತದೆ ಎಂಬುದರ ಬಗ್ಗೆ ನಿರ್ದಿಷ್ಟತೆಯಿಲ್ಲ. ಸಾಮಾನ್ಯವಾಗಿ ಬಂಡೀಪುರ, ನಾಗರಹೊಳೆ ಮತ್ತು ಕಬಿನಿಯಲ್ಲಿ ಸಫಾರಿಗಳ ಸಂಖ್ಯೆ ಹೆಚ್ಚು. ಕಬಿನಿಯಲ್ಲಂತೂ ಹಣವಿದ್ದವರದ್ದೇ ಕಾರುಬಾರು. ಕಾಡಿನಲ್ಲಿ ಕಳೆಯುವ ಸಮಯಕ್ಕೆ ಲೆಕ್ಕವೇ ಇರುವುದಿಲ್ಲ.
ಇದನ್ನೂ ಓದಿ:ಜಂಗಲ್ ಸಫಾರಿ ನಿಲ್ಲಬೇಕೆಂದು ರೈತರು ಹೇಳುತ್ತಿರುವುದು ಸರಿಯೇ ?
“ಸಫಾರಿಯು ಕಾಡಿನ ಬಗ್ಗೆ, ವನ್ಯಜೀವಿಗಳ ಬಗ್ಗೆ ಪರಿಸರ ಆಸಕ್ತರಿಗೆ ಶಿಕ್ಷಣವೂ ಆಗಿದೆ. ಹಲವರಿಗೆ ಜೀವನೋಪಾಯವೂ ಆಗಿದೆ” ಎಂದು ಸಚಿವರು ಹೇಳಿದ್ದಾರೆ !! ಸಫಾರಿ ಎನ್ನುವುದು ಕೆಲವರಿಗೆ ಜೀವನೋಪಾಯವೂ ಆಗಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ಸಫಾರಿಯಲ್ಲಿ ಒಂದೆರಡು ಗಂಟೆ ಕಳೆದರೆ ಕಾಡಿನ ಬಗ್ಗೆ, ವನ್ಯಜೀವಿಗಳ ಬಗ್ಗೆ ಪರಿಸರ ಶಿಕ್ಷಣ ಸಿಗುವುದಾದರೂ ಹೇಗೆ ? ಅದನ್ನು ತಿಳಿಯಲು ಬೇರೆಯದೇ ಮಾರ್ಗಗಳಿವೆ ಹೊರತು ಸಫಾರಿಯಿಂದೇನೂ ಪರಿಸರ ಶಿಕ್ಷಣ ದೊರೆಯುವುದಿಲ್ಲ.
ಸಫಾರಿಯಿಂದ ಪರಿಸರ ಶಿಕ್ಷಣ ಸಿಗುತ್ತದೆ ಎಂಬ ವಾದವನ್ನು ಅರಣ್ಯಾಧಿಕಾರಿಗಳು ಮಂಡಿಸಿರುತ್ತಾರೆ, ಹಲವರಿಗೆ ಉದ್ಯೋಗ ಸಿಕ್ಕಿದೆ ಎಂದೂ ಹೇಳಿ ಸಫಾರಿ ನಿಷೇಧಿಸದಂತೆ ಸಚಿವರ ಮನವೊಲಿಸಿರುತ್ತಾರೆ. ವನ್ಯಜೀವಿಗಳು ವಿಶೇಷವಾಗಿ ಆನೆಗಳು, ಹುಲಿಗಳು ಮತ್ತು ಚಿರತೆಗಳು ಕಾಡಿನಿಂದ ಹೊರಗೆ ಬರುತ್ತಲೇ ಇರುವುದರಿಂದ ಆಗುತ್ತಿರುವ ಜೀವಹಾನಿ, ಶಾಶ್ವತ ಅಂಗವೈಕಲ್ಯಗಳ ಬಗ್ಗೆ ಏಕೆ ಅರಣ್ಯಾಧಿಕಾರಿಗಳು ಚಿಂತಿಸುತ್ತಿಲ್ಲ !?
ಹುಲಿ ಅಭಯಾರಣ್ಯಗಳಲ್ಲಿ ಜೀಪ್ ಅಥವಾ ಬಸ್ ಆಧಾರಿತ ಕಾಡು ಸಫಾರಿಗಳು ಹುಲಿಗಳು ಸೇರಿದಂತೆ ವನ್ಯಜೀವಿಗಳ ಮೇಲೆ ಗಮನಾರ್ಹ ಒತ್ತಡವನ್ನು ಉಂಟುಮಾಡಬಹುದು ಎಂದು ಅನೇಕ ವನ್ಯಜೀವಿ ತಜ್ಞರು, ಸಂರಕ್ಷಣಾವಾದಿಗಳು ಮತ್ತು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ. ಈ ಒತ್ತಡವು ವನ್ಯಜೀವಿಗಳ ನಡವಳಿಕೆಯ ಬದಲಾವಣೆಗಳು, ಆವಾಸಸ್ಥಾನದ ಒತ್ತಡ ಮತ್ತು ಹೆಚ್ಚಿದ ಮಾನವ-ಪ್ರಾಣಿ ಸಂಘರ್ಷಗಳಾಗಿ ಪ್ರಕಟವಾಗುತ್ತದೆ ಎಂಬುದರ ಬಗ್ಗೆಯೂ ಅಧ್ಯಯನಗಳು ನಡೆದಿವೆ. ಈ ಹಿನ್ನೆಲೆಯಲ್ಲಿ ರೈತಸಂಘಗಳ ಮುಖಂಡರು ವ್ಯಕ್ತಪಡಿಸಿರುವ ಅಭಿಪ್ರಾಯಕ್ಕೂ ವೈಜ್ಞಾನಿಕ ತಳಹದಿ ಇದೆ.
ಇದನ್ನೂ ಓದಿ:ಆನೆ ಶಿಬಿರಗಳನ್ನು ಸೂಕ್ತವಾಗಿ ನಿರ್ವಹಣೆ ಮಾಡಲು ಆಗದಿದ್ದರೆ ಮುಚ್ಚಿ
ಹುಲಿ ನಡವಳಿಕೆ ಮತ್ತು ಆವಾಸಸ್ಥಾನಕ್ಕೆ ಅಡಚಣೆ
ವನ್ಯಜೀವಿ ಚಲನಚಿತ್ರ ನಿರ್ಮಾಪಕ ಮತ್ತು ಸಂರಕ್ಷಣಾವಾದಿ ಶೇಖರ್ ದತ್ತಾತ್ರಿ ಅವರು ಸಫಾರಿಗಳು ಹೆಚ್ಚಾಗಿ ಅಭಯಾರಣ್ಯಗಳನ್ನು “ಮನರಂಜನಾ ಉದ್ಯಾನವನಗಳು” ಆಗಿ ಪರಿವರ್ತಿಸುತ್ತವೆ, ಅಲ್ಲಿ ಗದ್ದಲದ ಜನಸಂದಣಿ ಉಂಟಾಗುತ್ತದೆ. ವಾಹನಗಳಿಂದ ಹುಲಿಗಳ ಮೇಲೆ ಒತ್ತಡ ಉಂಟಾಗುತ್ತದೆ. ಅವುಗಳ ಬೇಟೆಯ ಮಾದರಿಗಳನ್ನೂ ಸಫಾರಿಗಳು ಬದಲಾಯಿಸುತ್ತವೆ. ಮುಖ್ಯವಾಗಿ ಅವುಗಳು ಬೇಟೆಗಾಗಿ, ವಿಶ್ರಾಂತಿಗಾಗಿ ಸಂಚರಿಸುವ ಪ್ರಮುಖ ಪ್ರದೇಶಗಳನ್ನು ತಪ್ಪಿಸಲು ಕಾರಣವಾಗುತ್ತವೆ ಎಂದು ಅಭಿಪ್ರಾಯಪಡುತ್ತಾರೆ.
ಒತ್ತಡದಿಂದ ಉಂಟಾಗುವ ಸ್ಥಳಾಂತರವು ಹುಲಿಗಳು ಮಾನವ ವಾಸಸ್ಥಾನದ ಸರಹದ್ದಿಗೆ ಬರಲು ಕಾರಣವಾಗಬಹುದು. ಈ ವಲಸೆಯು ಬಂಡೀಪುರದಲ್ಲಿರುವಂತೆ ಸಂಘರ್ಷಗಳನ್ನು ಉಲ್ಬಣಗೊಳಿಸಬಹುದು. ಬೇಜವಾಬ್ದಾರಿ ಪ್ರವಾಸೋದ್ಯಮಕ್ಕೂ ಕಾರಣವಾಗುತ್ತದೆ. ಉದಾಹರಣೆಗೆ ಹುಲಿಗಳು, ಚಿರತೆಗಳು ಎಲ್ಲಿ ಕಂಡರೂ ವಾಹನಗಳಲ್ಲಿ ಅವುಗಳನ್ನು ಬೆನ್ನತ್ತುವುದು ಅವುಗಳ ಮೇಲೆ ಸಹಜವಾಗಿ ಒತ್ತಡ ಉಂಟು ಮಾಡುತ್ತದೆ.
ಇದನ್ನೂ ಓದಿ:ಅರಣ್ಯ ಸುರಕ್ಷತೆ ನಿಯಮಗಳನ್ನು ಗಾಳಿಗೆ ತೂರಲಾಗುತ್ತಿದೆಯೇ ?

ಬಂಡೀಪುರ ಸೇರಿದಂತೆ ಭಾರತದ ಅಭಯಾರಣ್ಯಗಳಲ್ಲಿ ನಡೆಯುತ್ತಿರುವ ಸಫಾರಿ ಪ್ರವಾಸೋದ್ಯಮದಿಂದ ಆದಾಯ ಬರುತ್ತದೆ. ಆದರೆ ವಾಹನಗಳ ಶಬ್ದ, ಪದೇಪದೇ ಹೆಚ್ಚಿನ ಸಂಖ್ಯೆಯಲ್ಲಿ ಅವುಗಳ ಸಮೀಪ ದರ್ಶನದಿಂದ ವನ್ಯಜೀವಿಗಳ ಆವಾಸ ಸ್ಥಾನದ ಮೇಲೆ ಒತ್ತಡ ಉಂಟಾಗುತ್ತದೆ. ವಿಶೇಷವಾಗಿ ಹುಲಿಗಳ ಮೇಲೆ ತೀವ್ರ ಒತ್ತಡ ಉಂಟಾಗುತ್ತದೆ. ಎಂದು “ಡೌನ್ ಟು ಅರ್ಥ್” ನಲ್ಲಿ ಪ್ರಕಟವಾಗಿರುವ ವನ್ಯಜೀವಿ ತಜ್ಞರ ವಿಶ್ಲೇಷಣೆ ತಿಳಿಸುತ್ತದೆ.
ಇದನ್ನೂ ಓದಿ: ವನ್ಯಜೀವಿ ಕಾಡಿಗಟ್ಟುವ ವೇಳೆ ಎಸ್.ಓ.ಪಿ. ಪಾಲಿಸಿ
ಹುಲಿಗಳ ಸಂರಕ್ಷಣೆಗೆ ಸಂಬಂಧಿಸಿದಂತೆ ಭಾರತದ ಅತ್ಯುನ್ನತ ಸಂಸ್ಥೆಯಾದ ಎನ್‌ಟಿಸಿಎ, ಪ್ರವಾಸೋದ್ಯಮ ಒತ್ತಡವನ್ನು ಗಣನೀಯವಾಗಿ ಕಡಿಮೆ ಮಾಡಲು ಕೋರ್ ಮೀಸಲುಗಳ ಹೊರಗೆ ಮಾತ್ರ “ಸಫಾರಿ ಉದ್ಯಾನವನಗಳನ್ನು” ಬೆಂಬಲಿಸುತ್ತದೆ. ಏಕೆಂದರೆ ಕೋರ್-ಏರಿಯಾ ಸಫಾರಿಗಳು ಶಬ್ದ ಮಾಲಿನ್ಯವು ವನ್ಯಜೀವಿಗಳಿಗೆ ಒತ್ತಡವನ್ನುಂಟುಮಾಡಬಹುದು ಎಂದು ಅಭಿಪ್ರಾಯಪಡಲಾಗಿದೆ. ಎನ್‌ಟಿಸಿಎ ವರದಿಗಳಲ್ಲಿ ಉಲ್ಲೇಖಿತವಾಗಿರುವ ತಜ್ಞರು ಸಹ ಸಫಾರಿಯು ಹುಲಿಗಳಲ್ಲಿ ಪ್ರಾದೇಶಿಕ ಬದಲಾವಣೆಗಳಿಗೆ ಕಾರಣವಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಕಾಡಿನ ಪ್ರವಾಸೋದ್ಯಮ ಪರಿಣಾಮಗಳು
ಸುಪ್ರೀಂ ಕೋರ್ಟ್ (2024 ಜಿಮ್ ಕಾರ್ಬೆಟ್ ಮೇಲಿನ ತೀರ್ಪು, ಬಂಡೀಪುರಕ್ಕೂ ಅನ್ವಯಿಸುತ್ತದೆ) ತನ್ನ ಒಂದು ಪ್ರಮುಖ ತೀರ್ಪಿನಲ್ಲಿ “ಅರಣ್ಯದ ಕೋರ್ ವಲಯಗಳಲ್ಲಿ ಕೆಲವು ಹುಲಿ ಸಫಾರಿಗಳನ್ನು ನಿಷೇಧಿಸಿದೆ. ಈ ಸಂದರ್ಭದಲ್ಲಿ ಪರಿಸರಶಾಸ್ತ್ರಜ್ಞರು, ವನ್ಯಜೀವಿ ವಕೀಲರ ಅಮಿಕಸ್ ಕ್ಯೂರಿ ವರದಿಗಳನ್ನು ಉಲ್ಲೇಖಿಸಿದೆ. ವಾಹನಗಳ ಬೆಂಗಾವಲುಗಳು ಪ್ರಾಣಿಗಳ ನೈಸರ್ಗಿಕ ಚಲನೆಗೆ ಅಡ್ಡಿಯಾಗುತ್ತವೆ, ರೋಗಗಳನ್ನು ಹರಡುತ್ತವೆ ಮತ್ತು ದೀರ್ಘಕಾಲದ ಒತ್ತಡವನ್ನು ಹೇಗೆ ಸೃಷ್ಟಿಸುತ್ತವೆ ಎಂಬುದನ್ನು ಎತ್ತಿ ತೋರಿಸಲಾಗಿದೆ.
ಪಾಲ್ ಗೋಲ್ಡ್‌ಸ್ಟೈನ್ ಎನ್ನುವ ವನ್ಯಜೀವಿ ತಜ್ಞ, ಟೈಗರ್ ಸಫಾರಿ ಮಾರ್ಗದರ್ಶಿ ಸಹ “ಕಾಡಿನಲ್ಲಿ ಅತಿಯಾದ ಸಫಾರಿಗಳು ಹುಲಿಗಳ ನಡವಳಿ ಮೇಲೆ ಗಂಭಿರವಾದ ಪರಿಣಾಮ ಉಂಟು ಮಾಡುತ್ತವೆ, ಅವುಗಳು ಈ ಒತ್ತಡದಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತವೆ” ಎಂಬ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.
ಇದನ್ನೂ ಓದಿ:ಡಿಸಿಎಫ್ ಅಮಾನತು ನಂತರವೂ ಉಳಿಯುವ ಪ್ರಶ್ನೆಗಳಿಗೆ ಅರಣ್ಯ ಸಚಿವರು ಉತ್ತರಿಸುವರೇ ?
ಈ ಎಲ್ಲ ಹಿನ್ನೆಲೆಯಲ್ಲಿ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರು ರೈತ ಸಂಘಟನೆಗಳು “ಸಫಾರಿ ನಿಲ್ಲಿಸಿ” ಎಂದು ಒತ್ತಾಯಿಸುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಬೇಕು. ಕನಿಷ್ಟ ಒಂದು ವರ್ಷವಾದರೂ ರಾಜ್ಯದ ಎಲ್ಲೆಡೆ ಕಾಡಿನ ಸಫಾರಿಗಳನ್ನು ನಿಲ್ಲಿಸಬೇಕು. ಇದರಿಂದ ಆಗುವ ಪರಿಣಾಮಗಳನ್ನು ಅಧ್ಯಯನ ಮಾಡಿದ ನಂತರವೇ ಶಾಶ್ವತವಾಗಿ ಸಫಾರಿ ನಿರ್ಬಂಧಿಸುವ ಅಥವಾ ಆರಂಭಿಸುವ ನಿರ್ಧಾರ ತೆಗೆದುಕೊಳ್ಳಬಹುದು.
