Home ಭಾಷೆKannadaಗಡಿನಾಡ ಕನ್ನಡಿಗರ ಭಾಷಾ ಹಕ್ಕುಗಳಿಗೆ ಕೇರಳ ಗದಾ ಪ್ರಹಾರ  !

ಗಡಿನಾಡ ಕನ್ನಡಿಗರ ಭಾಷಾ ಹಕ್ಕುಗಳಿಗೆ ಕೇರಳ ಗದಾ ಪ್ರಹಾರ  !

by Kumara Raitha
0 comments

ಕಾಸರಗೋಡು ಜಿಲ್ಲೆಯಲ್ಲಿ ಕನ್ನಡ ಧ್ವನಿ ಹತ್ತಿಕ್ಕಲು ಕೇಋಳ ಸರ್ಕಾರ ಒಂದಿಲ್ಲೊಂದು ಕುತಂತ್ರ ಅನುಸರಿಸುತ್ತಿದೆ. ಕೇರಳ ರಾಜ್ಯವು ಜಾರಿಗೆ ತಂದಿರುವ ಮಲೆಯಾಳಂ ಕಡ್ಡಾಯ ಕಲಿಕೆ ಕಾಯ್ದೆ ಮತ್ತು ಕಾಸರಗೋಡು ಭಾಗದ ಕನ್ನಡ ಶಾಲೆಗಳಲ್ಲಿ ನಡೆಯುತ್ತಿರುವ ಮಲೆಯಾಳಂ ಉಪನ್ಯಾಸಕರ ಹಾಗೂ ಶಿಕ್ಷಕರ ಅನಧಿಕೃತ ನೇಮಕಾತಿಗಳು, ಅಲ್ಲಿನ ಭಾಷಾ ಅಲ್ಪಸಂಖ್ಯಾತ ಕನ್ನಡಿಗರ ಅಸ್ತಿತ್ವಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಿವೆ. ಕರ್ನಾಟಕದ ಗಡಿಯಂಚಿನಲ್ಲಿರುವ, ಐತಿಹಾಸಿಕವಾಗಿ ಕನ್ನಡ ಸಂಸ್ಕೃತಿಯ ಹೆಮ್ಮೆಯ ಭಾಗವಾಗಿರುವ ಕಾಸರಗೋಡಿನ ಕನ್ನಡಿಗರು ಇಂದು ತಮ್ಮದೇ ನೆಲದಲ್ಲಿ ಪರಕೀಯರಾಗುವ ಭೀತಿಯನ್ನು ಎದುರಿಸುತ್ತಿದ್ದಾರೆ.

ಕಡ್ಡಾಯ ಮಲೆಯಾಳಂ ಕಾಯ್ದೆ ಮತ್ತು ವಿದ್ಯಾರ್ಥಿಗಳ ಸಂಕಷ್ಟ

ಕೇರಳ ಸರ್ಕಾರವು ಶಾಲಾ ಶಿಕ್ಷಣದಲ್ಲಿ ಮಲೆಯಾಳಂ ಭಾಷೆಯನ್ನು ಕಡ್ಡಾಯಗೊಳಿಸಿ ತಂದಿರುವ ಕಾನೂನು ಭಾಷಾ ಅಲ್ಪಸಂಖ್ಯಾತರ ಹಕ್ಕುಗಳ ಸ್ಪಷ್ಟ ಉಲ್ಲಂಘನೆಯಾಗಿದೆ. ಈ ಕಾಯ್ದೆಯಿಂದಾಗಿ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳು ತೀವ್ರ ತೊಂದರೆಗೆ ಸಿಲುಕಿದ್ದಾರೆ. ಪ್ರಾಥಮಿಕ ಹಂತದಿಂದಲೇ ಕನ್ನಡ ಮಾಧ್ಯಮದಲ್ಲಿ ಓದುತ್ತಿರುವ ಮಕ್ಕಳಿಗೆ, ಅವರ ಇಚ್ಛೆಗೆ ವಿರುದ್ಧವಾಗಿ ಮಲೆಯಾಳಂ ಭಾಷೆಯನ್ನು ಕಡ್ಡಾಯವಾಗಿ ಹೇರಲಾಗುತ್ತಿದೆ. ಇದು ಮಕ್ಕಳ ಮೇಲಿನ ಕಲಿಕಾ ಹೊರೆಯನ್ನು ಹೆಚ್ಚಿಸುವುದಲ್ಲದೆ, ಅವರ ಶೈಕ್ಷಣಿಕ ಪ್ರಗತಿಯ ಕುಂಠಿತಕ್ಕೆ ಕಾರಣವಾಗುತ್ತಿದೆ.

ಭಾರತೀಯ ಸಂವಿಧಾನದ 350(A) ವಿಧಿಯ ಪ್ರಕಾರ, ಭಾಷಾ ಅಲ್ಪಸಂಖ್ಯಾತ ಮಕ್ಕಳಿಗೆ ಅವರ ಮಾತೃಭಾಷೆಯಲ್ಲೇ ಪ್ರಾಥಮಿಕ ಶಿಕ್ಷಣವನ್ನು ಪಡೆಯುವ ಹಕ್ಕಿದೆ. ಆದರೆ, ಕೇರಳ ಸರ್ಕಾರದ ಈ ನಡೆ ಸಂವಿಧಾನ ನೀಡಿರುವ ಮೂಲಭೂತ ಹಕ್ಕನ್ನೇ ಕಸಿದುಕೊಂಡಿದೆ.

ಈ ಕಡ್ಡಾಯ ನೀತಿಯಿಂದಾಗಿ ಬೇಸತ್ತು ಅನೇಕ ಪೋಷಕರು ತಮ್ಮ ಮಕ್ಕಳನ್ನು ಕನ್ನಡ ಮಾಧ್ಯಮದಿಂದ ದೂರವಿಡಲು ಯೋಚಿಸುವಂತಾಗಿದೆ, ಇದು ಗಡಿನಾಡಿನಲ್ಲಿ ಕನ್ನಡ ಶಾಲೆಗಳ ಮುಚ್ಚುವಿಕೆಗೆ ಪರೋಕ್ಷವಾಗಿ ದಾರಿ ಮಾಡಿಕೊಡುತ್ತಿದೆ.

ಉಪನ್ಯಾಸಕರು ಮತ್ತು ಶಿಕ್ಷಕರ ನೇಮಕಾತಿಯಲ್ಲಿ ಪಕ್ಷಪಾತ ಹಾಗೂ ರಾಜಕೀಯ

ಕಾಸರಗೋಡಿನ ಕನ್ನಡ ಶಾಲೆ ಮತ್ತು ಕಾಲೇಜುಗಳಲ್ಲಿ ಕನ್ನಡ ಭಾಷೆ ತಿಳಿದಿರುವ ಶಿಕ್ಷಕರನ್ನು ನೇಮಿಸುವ ಬದಲು, ಮಲೆಯಾಳಂ ಮಾತ್ರ ತಿಳಿದಿರುವವರನ್ನು ನೇಮಿಸುತ್ತಿರುವುದು ವ್ಯವಸ್ಥಿತ ಪಕ್ಷಪಾತಕ್ಕೆ ಹಿಡಿದ ಕೈಗನ್ನಡಿಯಾಗಿದೆ.

ಕೇರಳ ಸಾರ್ವಜನಿಕ ಸೇವಾ ಆಯೋಗದ (PSC) ಮೂಲಕ ಕನ್ನಡ ಮಾಧ್ಯಮದ ಹುದ್ದೆಗಳಿಗೆ ಮಲೆಯಾಳಂ ಭಾಷಿಕರನ್ನು ನೇಮಿಸಲಾಗುತ್ತಿದೆ. ಕನ್ನಡ ಓದಲು, ಬರೆಯಲು ಹಾಗೂ ಮಾತನಾಡಲು ಬಾರದ ಶಿಕ್ಷಕರು ಕನ್ನಡ ಶಾಲೆಗಳಿಗೆ ಬರುತ್ತಿರುವುದರಿಂದ ವಿದ್ಯಾರ್ಥಿಗಳಿಗೆ ಪಾಠ ಅರ್ಥವಾಗದ ಪರಿಸ್ಥಿತಿ ನಿರ್ಮಾಣವಾಗಿದೆ.

ಕಾಸರಗೋಡು ಮತ್ತು ಕರ್ನಾಟಕದ ಗಡಿ ಭಾಗಗಳಲ್ಲಿ ಸಾವಿರಾರು ಅರ್ಹ ಕನ್ನಡ ಬಿ.ಇಡಿ ಮತ್ತು ನೆಟ್ (NET) ತೇರ್ಗಡೆಯಾದ ಅಭ್ಯರ್ಥಿಗಳಿದ್ದರೂ, ಅವರನ್ನು ಕಡೆಗಣಿಸಿ ರಾಜಕೀಯ ಪ್ರಭಾವ ಅಥವಾ ಭಾಷಾ ಪಕ್ಷಪಾತದ ಆಧಾರದ ಮೇಲೆ ಮಲೆಯಾಳಂ ಹಿನ್ನೆಲೆಯುಳ್ಳವರನ್ನು ತಂದು ಕೂರಿಸಲಾಗುತ್ತಿದೆ. ಇದು ಕನ್ನಡ ನಿರುದ್ಯೋಗಿ ಯುವಕರಿಗೆ ಮಾಡುತ್ತಿರುವ ದೊಡ್ಡ ಅನ್ಯಾಯ.

ಶಿಕ್ಷಣ ಸಂಸ್ಥೆಗಳಲ್ಲಿ ಕನ್ನಡದ ವಾತಾವರಣವನ್ನು ವ್ಯವಸ್ಥಿತವಾಗಿ ಧ್ವಂಸಗೊಳಿಸಿ, ಅಲ್ಲಿ ಮಲೆಯಾಳಂ ಭಾಷಾ ಪ್ರಭಾವವನ್ನು ಬಲವಂತವಾಗಿ ತುಂಬುವ ರಾಜಕೀಯ ಅಜೆಂಡಾ ಇದರ ಹಿಂದೆ ಎದ್ದು ಕಾಣುತ್ತಿದೆ.

ತುರ್ತು ಕ್ರಮದ ಅಗತ್ಯವಿದೆ

ಕಾಸರಗೋಡಿನ ಕನ್ನಡ ಅಸ್ಮಿತೆಯನ್ನು ಉಳಿಸಿಕೊಳ್ಳಲು ಕೇವಲ ಅಲ್ಲಿನ ಸ್ಥಳೀಯ ಹೋರಾಟಗಾರರ ಶ್ರಮ ಸಾಕಾಗುವುದಿಲ್ಲ. ಕೇರಳ ಸರ್ಕಾರವು ಭಾಷಾ ಅಲ್ಪಸಂಖ್ಯಾತರ ಹಿತರಕ್ಷಣೆಗೆ ಬದ್ಧವಾಗಿರಬೇಕು ಮತ್ತು ಕಡ್ಡಾಯ ಮಲೆಯಾಳಂ ನೀತಿಯಿಂದ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ವಿನಾಯಿತಿ ನೀಡಬೇಕು.

ಮಲೆಯಾಳಂ ಭಾಷಾ ಕಲಿಕೆ ಕಡ್ಡಾಯ ಕಾಯ್ದೆ ವಿರುದ್ಧ ಕನ್ನಡ ವಿದ್ಯಾರ್ಥಿಗಳು ಅಲ್ಲಿನ ಹೈಕೋರ್ಟ್‌ ಮೆಟ್ಟಿಲೇರಿದ್ದು ಇವರ ಅರ್ಜಿ ವಿಚಾರಣೆಗೆ ಸ್ವೀಕೃತವಾಗಿದೆ. ಇದರ ಜೊತೆಗೆ ಕರ್ನಾಟಕ ಸರ್ಕಾರವು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ಕೇರಳ ಸರ್ಕಾರದೊಂದಿಗೆ ಉನ್ನತ ಮಟ್ಟದ ಮಾತುಕತೆ ನಡೆಸಬೇಕಾಗಿದೆ. ಗಡಿನಾಡಿನ ಶಾಲೆಗಳಲ್ಲಿ ಅರ್ಹ ಕನ್ನಡ ಶಿಕ್ಷಕರೇ ನೇಮಕವಾಗುವಂತೆ ಕಾನೂನುಬದ್ಧ ಒತ್ತಡ ಹೇರಬೇಕಿದೆ. ಇಲ್ಲದಿದ್ದರೆ, ಮುಂದಿನ ದಿನಗಳಲ್ಲಿ ಕಾಸರಗೋಡಿನಲ್ಲಿ ಕನ್ನಡ ಕೇವಲ ಇತಿಹಾಸದ ಪುಟಗಳಿಗೆ ಸೀಮಿತವಾಗುವ ಅಪಾಯ ದೂರವಿಲ್ಲ

You may also like

Leave a Comment

error: Content is protected !!