ನನ್ನ ಸ್ಪಷ್ಟ ಅಭಿಪ್ರಾಯವೆಂದರೆ ಟಾಕ್ಸಿಕ್ (Toxic) ಆಗಲಿ ಅಥವಾ ಈ ಬಗೆಯ ಜಾನರ್ ಸಿನಿಮಾಗಳನ್ನು ನೋಡಲು ಯಾವುದೇ ವಿಶೇಷ ಪೂರ್ವ ತಯಾರಿ’ಯ ಅಗತ್ಯವಿಲ್ಲ. ಆದರೆ ಮುಕ್ತ ಮನಸ್ಸು ಮತ್ತು ಸರಿಯಾದ ನಿರೀಕ್ಷೆ ಅತ್ಯಗತ್ಯ.
‘ಟಾಕ್ಸಿಕ್’ ಸಿನಿಮಾದ ಸುತ್ತ ನಡೆಯುತ್ತಿರುವ ನೆಗೆಟಿವ್ ಚರ್ಚೆಗಳನ್ನು ಗಮನಿಸಿದಾಗ ಆಶ್ಚರ್ಯವಾಯಿತು. ಹೀಗೆಂದರೆ ಒಂದು ಸಿನಿಮಾದ ಬಗ್ಗೆ ಭಿನ್ನ ಬಗೆಯ ನೋಟಗಳು, ಗ್ರಹಿಕೆಗಳು ಇರಲೇಬಾರದು ಎಂದಲ್ಲ. ಆದರೆ ಹಲವೊಮ್ಮೆ ಪೂರ್ವಾಗ್ರಹಗಳು ನಮ್ಮ ಗ್ರಹಿಕೆಗಳ ಮೇಲೆ ಪ್ರಭಾವ ಬೀರುತ್ತವೆ.
ಬಹುತೇಕ ಪ್ರೇಕ್ಷಕರು ನಟರನ್ನು ಒಂದು ನಿರ್ದಿಷ್ಟ ಚೌಕಟ್ಟಿನಲ್ಲಿ ನೋಡಿ ಅಭ್ಯಾಸ ಮಾಡಿಕೊಂಡಿರುತ್ತಾರೆ. ‘ಕೆಜಿಎಫ್’ ನಂತರ ಯಶ್ ಎಂದರೆ ಬರಿ ಮಾಸ್, ಎಲಿವೇಷನ್ ಮತ್ತು ಅಬ್ಬರದ ಆಕ್ಷನ್ ಇರಬೇಕೆಂಬ ನಿರೀಕ್ಷೆ ಹುಟ್ಟಿದೆ. ಆದರೆ ‘ಟಾಕ್ಸಿಕ್’ನಲ್ಲಿ ಪ್ರಯೋಗಾತ್ಮಕ ಅಥವಾ ಡಾರ್ಕ್ ನಿರೂಪಣೆ ಇದೆ. ಕನ್ನಡವೂ ಸೇರಿದಂತೆ ಇತರ ಭಾರತೀಯ ಚಿತ್ರರಂಗಗಳಲ್ಲಿ ಈ ಬಗೆಯ ಸಿನಿಮಾಗಳು ತೀರಾ ಅಪರೂಪ. ಆದ್ದರಿಂದ ಸಾಂಪ್ರದಾಯಿಕ ಮಾಸ್ ಪ್ರಿಯರಿಗೆ ಟಾಕ್ಸಿಕ್ ತಕ್ಷಣಕ್ಕೆ ಇಷ್ಟವಾಗದಿರಬಹುದು.

ಓರ್ವ ಕಲಾವಿದ ಅಥವಾ ಕಲಾವಿದೆ ಜಾಗತಿಕ ಮಟ್ಟಕ್ಕೆ ಬೆಳೆಯುವಾಗ, ಬೆಳೆದಾಗ ಒಂದೇ ರೀತಿಯ ಪಾತ್ರಗಳಿಗೆ ಸೀಮಿತವಾಗದೆ ಭಿನ್ನ ಜಾನರ್ ಅಂದರೆ ಉದಾಹರಣೆಗೆ ಡಾರ್ಕ್, ಇಂಟೆನ್ಸ್ ಶೈಲಿ ಸಿನಿಮಾಗಳಲ್ಲಿ ನಟಿಸುವುದು ವೃತ್ತಿಜೀವನಕ್ಕೆ ಒಳ್ಳೆಯದು. ಇದೊಂದು ಬಗೆಯ ಸಾಹಸ. ಏಕೆಂದರೆ ಹಿಂಸೆ ಮತ್ತು ಲೈಂಗಿಕತೆ ದೃಶ್ಯಗಳು ಸಾಂಪ್ರದಾಯಿಕ ಶೈಲಿ ಇಷ್ಟಪಡುವ ಪ್ರೇಕ್ಷಕರಲ್ಲಿ ಕಲಾವಿದರ ಬಗ್ಗೆ ನಕಾರಾತ್ಮಕ ಮನೋಭಾವ ಮೂಡುವಂತೆ ಮಾಡುವ ಸಾಧ್ಯತೆ ಹೆಚ್ಚು. ಇಂಥ ಆತಂಕವನ್ನು ಮೀರಿ ವಿಭಿನ್ನ ಜಾನರ್ ನಲ್ಲಿ ಯಶ್ ನಟಿಸಿರುವುದು ಮೆಚ್ಚುಗೆಯ ಅಂಶ!
ಈ ಸಂದರ್ಭದಲ್ಲಿ ನನಗೆ ನೆನಪಿಗೆ ಬರುವುದೇನೆಂದರೆ ವರನಟ ರಾಜ್ ಕುಮಾರ್ ಅವರ ದ್ವಿಪಾತ್ರ ಅಭಿನಯದ “ದಾರಿ ತಪ್ಪಿದ ಮಗ” ಸಿನಿಮಾ. ಇದರಲ್ಲಿ ಭಿನ್ನ ಶೇಡ್ ಗಳ ಪಾತ್ರಗಳಲ್ಲಿ ಅತ್ಯುತ್ತಮವಾಗಿ ಅಭಿನಯಿಸಿದ್ದಾರೆ. ಒಂದು, ಕಳ್ಳ, ದರೋಡೆಕೋರ ಹಾಗೂ ಹೆಣ್ಣುಗಳ ಹಿಂದೆ ಬೀಳುವ ಪಾತ್ರವಾದರೆ ಇನ್ನೊಂದು ಸದ್ಗುಣಗಳಿರುವ ಪಾತ್ರ. ಅವತ್ತಿನ ಕಾಲಕ್ಕೆ ಈ ಸಿನಿಮಾ ಭಾರೀ ಯಶಸ್ಸು ಕಂಡಿತು. ಆದರೆ ಸಾಂಪ್ರದಾಯಿಕ ಶೈಲಿಯ ಪ್ರೇಕ್ಷಕರಿಗೆ ಅಣ್ಣಾವ್ರು ನೆಗೆಟೀವ್ ಶೇಡ್ ಪಾತ್ರದಲ್ಲಿ ನಟಿಸಿದ್ದು ಇಷ್ಟವಾಗಲಿಲ್ಲ.
ಬರೆಯುವಾಗ ಕಾಂತಾರ, ಸು ಫ್ರಮ್ ಸೋ ಸಿನಿಮಾಗಳು ಸಹ ನೆನಪಿಗೆ ಬಂದವು. ಕೆಲವರು ಈ ಸಿನಿಮಾಗಳನ್ನು ಅವುಗಳು ಇರುವುದಕ್ಕಿಂತಲೂ ಭಿನ್ನ ಗ್ರಹಿಕೆಗಳನ್ನು ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಈ ಎರಡೂ ಸಿನಿಮಾಗಳ ಬಗ್ಗೆ ನನ್ನದೇ ಅಭಿಪ್ರಾಯವೂ ಆಗಿರುವ ಖ್ಯಾತ ವೈದ್ಯ ಶ್ರೀನಿವಾಸ ಕಕ್ಕಿಲಾಯ ಅವರ ಅಭಿಪ್ರಾಯವನ್ನು ನಿಮ್ಮ ಮುಂದೆ ಇಡುತ್ತೇನೆ.
ಫೇಸ್ ಬುಕ್ ನಲ್ಲಿ ಬರುವ ಸಿನಿಮಾ ವಿಮರ್ಶೆಗಳು ಗಮ್ಮತ್ತು ಉಂಟು- ಡಾ. ಶ್ರೀನಿವಾಸ್ ಕಕ್ಕಿಲಾಯ
ಮೊದಲಿನ ಕಾಂತಾರ ಬಂದಾಗ ಅದು ದೈವಗಳ ಸಿನಿಮಾ, ಬಲಪಂಥದ ವೈಭವೀಕರಣ, ರಿಷಭ್ ಹಾಗೆ ಹೀಗೆ ಅಂತೆಲ್ಲ ಬರೆದರು. ಹೋಗಲಿ ಅಂತ ಮೂರು ವಾರ ಸಿನಿಮಾ ನೋಡದೆ ಸುಮ್ಮನಿದ್ದೆ. ಆ ಮೇಲೆ ನೋಡಿದರೆ ಅದು ದೈವಾರಾಧನೆಯನ್ನು ಮೇಲ್ವರ್ಗಗಳು ವಶ ಪಡಿಸಿಕೊಂಡಿರುವುದು, ಭೂ ಕಬಳಿಕೆ, ಮಹಿಳೆಯರ ಮೇಲಿನ ದೌರ್ಜನ್ಯ, ಕೆಳ ವರ್ಗಗಳ ಮೇಲಿನ ದಬ್ಬಾಳಿಕೆ ಮತ್ತು ವಂಚನೆ, ಅರಣ್ಯ ಮತ್ತು ಬುಡಕಟ್ಟು ಕಾಯಿದೆಗಳ ದುರ್ಬಳಕೆ ಇತ್ಯಾದಿ ಎಲ್ಲವನ್ನೂ ಕಟ್ಟಿ ಕೊಟ್ಟ ಸಿನಿಮಾ ಆಗಿತ್ತು, ಆಗಲೇ ಬರೆದಿದ್ದೆ. ಅದಾಗಿ ಕೆಲದಿನಗಳ ಬಳಿಕ ಬಿಟಿ ಲಲಿತಾ ನಾಯಕ್ ಅವರು, ರಿಷಭ್ ಬುದ್ಧಿವಂತಿಕೆಯಿಂದ ಸಿನಿಮಾ ಮಾಡಿದ್ದಾನೆ, ಸತ್ಯ ಹೇಳಿದರೆ ಈಗ ಸಿನಿಮಾ ಹೊಗಳುತ್ತಿರುವವರೇ ಪರದೆಗೆ ಬೆಂಕಿಯಿಟ್ಟಾರು ಎಂದಿದ್ದರು.
ಮತ್ತೆ ಈ ವಿಮರ್ಶಗಳ ಕಾಟ ಬೇಡ ಎಂದುಕೊಂಡು ಸು ಫ್ರಮ್ ಸೋ ಮೊದಲ ವಾರದಲ್ಲೇ ನೋಡಿದ್ದೆ. ಅದಕ್ಕೂ ಮೊದಲು ನೋಡಿದ್ದ ಕೆಲವರು ಇದು ಕುಡಿತದ ವೈಭವೀಕರಣ, ಮೊದಲ ಇಪ್ಪತ್ತು ನಿಮಿಷ ಹೊಲಸಾಗಿದೆ ಎಂದೆಲ್ಲ ಬರೆದಿದ್ದರು. ನನಗೆ ಮೊದಲ ಇಪ್ಪತ್ತು ನಿಮಿಷಗಳಲ್ಲಿ ಚಿತ್ರದ ಪಾತ್ರಗಳ ಪರಿಚಯ ಮಾಡಿಸಿದಂತೆ ಕಂಡಿತು, ಚಿತ್ರದಲ್ಲಿದ್ದ ಅನೇಕ ಸೂಕ್ಷ್ಮ ಸಂಗತಿಗಳೂ ಇಷ್ಟವಾಗಿದ್ದವು. ಹಾಗಾಗಿ ಈ ಫೇಸ್ ಬುಕ್ಕಿನಲ್ಲಿ ಬರುವ ವಿಮರ್ಶೆಗಳನ್ನು ಅಲ್ಲಿಗೇ ಬಿಟ್ಟು ನಮಗೆ ಬೇಕಿದ್ದಂತೆ ಮಾಡುವುದೇ ಒಳ್ಳೆಯದು.
ಯಾವುದೇ ಸಿನಿಮಾಗಳನ್ನು ನೋಡಲು ಪೂರ್ವ ತಯಾರಿ ಅಗತ್ಯವೇ ಇಲ್ಲವೇ ?
ಕೆಲವು ಬಗೆಯ ಸಿನಿಮಾಗಳನ್ನು ನೋಡಲು ಖಂಡಿತವಾಗಿಯೂ ಪೂರ್ವ ತಯಾರಿ ಅಥವಾ ಓದಿನ ಹಿನ್ನೆಲೆ ಅಥವಾ ಮುಕ್ತ ಮನಸು ಇರಬೇಕು. ಅವುಗಳೆಂದರೆ ಸಂಕೀರ್ಣ ಕಥಾಹಂದರ ಮತ್ತು ನಾನ್-ಲೀನಿಯರ್ (Non-Linear) ಸಿನಿಮಾಗಳು.’ಇನ್ಸೆಪ್ಷನ್’, ‘ಟೇನೆಟ್’ ಅಥವಾ ‘ಒಪನ್ ಹೈಮರ್’ ನಂತಹ ಸಿನಿಮಾಗಳಲ್ಲಿ ಕಾಲದ ಪರಿಕಲ್ಪನೆ (Time/Timeline) ಮುಂದೆ-ಹಿಂದೆ ಚಲಿಸುತ್ತದೆ. ಇವುಗಳನ್ನು ನೋಡುವಾಗ ಕಥೆಯ ಮೂಲ ಪರಿಕಲ್ಪನೆ ಅಥವಾ ಚಾರಿತ್ರಿಕ ಹಿನ್ನೆಲೆ ತಿಳಿದಿರದಿದ್ದರೆ ಕಥೆಯೊಂದಿಗೆ ಸಾಗುವುದು ಕಷ್ಟವಾಗುತ್ತದೆ.
ಸಾಂಸ್ಕೃತಿಕ ಮತ್ತು ಐತಿಹಾಸಿಕ ಹಿನ್ನೆಲೆ ಹೊಂದಿರುವ ಒಂದು ನಿರ್ದಿಷ್ಟ ದೇಶ, ಧರ್ಮ ಅಥವಾ ಪ್ರಾದೇಶಿಕ ಸಂಸ್ಕೃತಿಯ ಹಿನ್ನೆಲೆಯಲ್ಲಿ ಮೂಡಿಬರುವ ಸಿನಿಮಾಗಳು ಉದಾಹರಣೆಗೆ ಈಗಾಗಲೇ ಪ್ರಸ್ತಾಪಿಸಿದಂತೆ ‘ಕಾಂತಾರ’ ಅಥವಾ ಜಾಗತಿಕ ಮಟ್ಟದ ಪೀರಿಯಡ್ ಡ್ರಾಮಾಗಳು, ಅಲ್ಲಿನ ಸ್ಥಳೀಯ ಆಚರಣೆಗಳು, ಪುರಾಣಗಳು ಅಥವಾ ಐತಿಹಾಸಿಕ ಘಟನೆಗಳ ಬಗ್ಗೆ ಕನಿಷ್ಠ ತಿಳಿವಳಿಕೆ ಇದ್ದರೆ ಸಿನಿಮಾದ ತೀವ್ರತೆ ಸಂಪೂರ್ಣವಾಗಿ ತಲುಪುತ್ತದೆ.
ವಿಶಿಷ್ಟ ಶೈಲಿಯ ಪ್ರಯೋಗಾತ್ಮಕ ಸಿನಿಮಾಗಳನ್ನು (Auteur Cinema) ನೋಡುವಾಗಲೂ ಪೂರ್ವ ತಯಾರಿ ಅಗತ್ಯ. ಉದಾಹರಣೆಗೆ ಕ್ವೆಂಟಿನ್ ಟ್ಯಾರಂಟಿನೋ, ಕ್ರಿಸ್ಟೋಫರ್ ನೋಲನ್ ಅಥವಾ ಗೀತು ಮೋಹನ್ದಾಸ್ ಅವರಂತಹ ನಿರ್ದೇಶಕರ ಚಿತ್ರಗಳಲ್ಲಿ ಸಾಮಾನ್ಯ ಕಮರ್ಷಿಯಲ್ ನಿಯಮಗಳಿರುವುದಿಲ್ಲ. ಇಲ್ಲಿ ‘ಹೀರೋ-ವಿಲನ್’ ಚೌಕಟ್ಟು ದಾಟಿ, ಪಾತ್ರಗಳ ಮನೋವಿಶ್ಲೇಷಣೆ (Psychology) ಮತ್ತು ಡಾರ್ಕ್ ಶೇಡ್ಗಳಿಗೆ ಹೆಚ್ಚು ಒತ್ತು ನೀಡಲಾಗುತ್ತದೆ. ನಿರ್ದೇಶಕರ ಶೈಲಿಯ ಅರಿವಿದ್ದರೆ ಖಂಡಿತವಾಗಿಯೂ ನಿರಾಶೆಯಾಗುವುದಿಲ್ಲ. ಈ ಲೇಖನವನ್ನು ಓದಿದವರು ಕಾಮೆಂಟ್ ಬಾಕ್ಸಿನಲ್ಲಿ ನಿಮ್ಮನಿಮ್ಮ ಅಭಿಪ್ರಾಯಗಳನ್ನು ಸಹ ಹಂಚಿಕೊಳ್ಳಿ
