Kannadaಕೃಷಿ

ಮುಂಗಾರು ಮಳೆ ಬಂದಿದೆ ಹರುಷವ ತಂದಿದೆ

ಮುಂಚಿತವಾಗಿ ಅಂದರೆ ಮೇ 26ಕ್ಕೆ ಬರುತ್ತೇನೆಂದು ಮುನ್ಸೂಚನೆ ನೀಡಿದ್ದ ಮುಂಗಾರು ಮಳೆ ಎಂಟ್ಹತ್ತು ದಿನ ಸತಾಯಿಸಿ ಅಂತೂ ಅಡಿಯಿರಿಸಿದೆ. ಕೇರಳದಲ್ಲಿ ಉತ್ತಮ ಆರಂಭವನ್ನೂ ಮಾಡಿದೆ. ಭಾರತೀಯ ಹವಾಮಾನ ಇಲಾಖೆ (IMD) ವರದಿಯಂತೆ   ನೈಋತ್ಯ ಮುಂಗಾರು (Southwest Monsoon) ಜೂನ್ 4 ರಂದು ಅಧಿಕೃತವಾಗಿ ಕೇರಳ ಕರಾವಳಿ ಪ್ರವೇಶಿಸಿದೆ.

ಸಾಮಾನ್ಯವಾಗಿ, ನೈಋತ್ಯ ಮುಂಗಾರು ಮಳೆಯು ಜೂನ್ 1 ರ ಸುಮಾರಿಗೆ ಕೇರಳವನ್ನು ಪ್ರವೇಶಿಸಿದ ನಂತರ, ಸುಮಾರು ಜೂನ್ 5 ರಿಂದ ಜೂನ್ 10 ರ ಒಳಗೆ  ಕರ್ನಾಟಕದ ಕರಾವಳಿ ಪ್ರದೇಶವನ್ನು (ಮಂಗಳೂರು ಭಾಗ) ತಲುಪುತ್ತದೆ. ಅಲ್ಲಿಂದ ಮುಂದಿನ ಕೆಲವೇ ದಿನಗಳಲ್ಲಿ ಇಡೀ ರಾಜ್ಯಕ್ಕೆ ವಿಸ್ತರಿಸುತ್ತದೆ.

ಸಂತಸದ ವಿಷಯ ಏನೆಂದರೆ ಈ ವರ್ಷ ಜೂನ್ 4 ರಂದು ಕೇರಳಕ್ಕೆ ಮುಂಗಾರು ತಡವಾಗಿ ಪ್ರವೇಶಿಸಿದ ಬೆನ್ನಲ್ಲೇ, ಅತಿ ವೇಗವಾಗಿ ಮುನ್ನಡೆದು ಜೂನ್ 4 ರಂದೇ (ಗುರುವಾರ) ಕರ್ನಾಟಕವನ್ನೂ ಪ್ರವೇಶಿಸಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಅಧಿಕೃತವಾಗಿ ಪ್ರಕಟಿಸಿದೆ. ಬೆಂಗಳೂರು ಹವಾಮಾನ ಕೇಂದ್ರದ ಮಾಹಿತಿ ಪ್ರಕಾರ, ಮಂಗಳೂರು ಮತ್ತು ಮೈಸೂರಿನ ಕೆಲವು ಭಾಗಗಳು ಈಗಾಗಲೇ ಮುಂಗಾರಿನ ಮೊದಲ ಮಳೆಯನ್ನು ಪಡೆದುಕೊಂಡಿವೆ.

ಯಾವ ಜಿಲ್ಲೆಗಳಲ್ಲಿ ಹೆಚ್ಚಿನ ಮಳೆ ಸಾಧ್ಯತೆ ಇದೆ?

ಹವಾಮಾನ ಇಲಾಖೆಯ ಮುನ್ಸೂಚನೆ ಹಾಗೂ ಪ್ರಸ್ತುತ ಹವಾಮಾನ ಮುನ್ನೆಚ್ಚರಿಕೆಗಳ ವಿವರ ಹೀಗಿದೆ. ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ಭಾರಿ ಮಳೆ (ಜೂನ್ ಮೊದಲ ವಾರ) ಮುಂಗಾರು ಆರಂಭದ ಹಿನ್ನೆಲೆಯಲ್ಲಿ ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ  ಜಿಲ್ಲೆಗಳ ಕರಾವಳಿ ಭಾಗಗಳಲ್ಲಿ ಹಾಗೂ ಮಲೆನಾಡಿನ ಕೆಲವು ಭಾಗಗಳಲ್ಲಿ ಜೂನ್ 4 ರಿಂದ ಜೂನ್ 10 ರವರೆಗೆ ಭಾರಿಯಿಂದ ಅತಿ ಭಾರಿ ಮಳೆಯಾಗುವ (7 ರಿಂದ 20 ಸೆಂ.ಮೀ ವರೆಗೆ) ಸಾಧ್ಯತೆ ಇದೆ

ಒಳನಾಡು ಜಿಲ್ಲೆಗಳು ಅಂದರೆ ದಕ್ಷಿಣ ಒಳನಾಡು ಮತ್ತು ಉತ್ತರ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ಜೂನ್ ಮೊದಲ ವಾರದಲ್ಲಿ ಸಾಧಾರಣದಿಂದ ಭಾರಿ ಮಳೆಯಾಗುವ ಮುನ್ಸೂಚನೆ ಇದೆ. ಜಾಗತಿಕವಾಗಿ ‘ಎಲ್ ನಿನೊ’ (El Nino) ಪ್ರಭಾವದ ಮುನ್ಸೂಚನೆ ಇರುವುದರಿಂದ, ಈ ವರ್ಷ ಕರ್ನಾಟಕದ ಒಟ್ಟಾರೆ ಮಳೆಯ ಪ್ರಮಾಣವು  ವಾಡಿಕೆಗಿಂತ ಕಡಿಮೆ’ (Below Normal)  ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ರಾಜ್ಯದ ಬಹುತೇಕ ಭಾಗಗಳಲ್ಲಿ ಮಳೆ ಕೊರತೆ ಕಂಡುಬಂದರೂ, ಈಶಾನ್ಯ ಕರ್ನಾಟಕ (ಕಲ್ಯಾಣ ಕರ್ನಾಟಕ ಭಾಗದ ಕೆಲವು ಜಿಲ್ಲೆಗಳು) ಮತ್ತು ಆಗ್ನೇಯ ಒಳನಾಡಿನ (Southeast Interior) ಕೆಲವು ಜಿಲ್ಲೆಗಳಲ್ಲಿ ಈ ಬಾರಿ ವಾಡಿಕೆ ಅಥವಾ ವಾಡಿಕೆಗಿಂತ ಹೆಚ್ಚಿನ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆಯ ದೀರ್ಘಾವಧಿ ಮುನ್ಸೂಚನೆ ವರದಿ (Long Range Forecast) ತಿಳಿಸಿದೆ. ಕರಾವಳಿ, ಮಲೆನಾಡು ಹಾಗೂ ಹಳೆ ಮೈಸೂರು ಭಾಗದ ಮುಕ್ಕಾಲು ಪಾಲು ಜಿಲ್ಲೆಗಳಲ್ಲಿ ಒಟ್ಟಾರೆ ಹಂಗಾಮಿನ ಮಳೆ ವಾಡಿಕೆಗಿಂತ ಕೊಂಚ ಕಡಿಮೆ ಇರುವ ಸಾಧ್ಯತೆ ಇದೆ.

ಭಾರತಕ್ಕೆ ಮುಂಗಾರು ಜೀವನಾಡಿ

ಭಾರತದ ವಾರ್ಷಿಕ ಮಳೆಯ ಶೇಕಡಾ 80 ರಷ್ಟು ಭಾಗ ನೈಋತ್ಯ ಮುಂಗಾರಿನಿಂದಲೇ ಸಿಗುತ್ತದೆ. ದೇಶದ ಬಹುಪಾಲು ಕೃಷಿ ಭೂಮಿ ಇಂದಿಗೂ ನೀರಾವರಿ ಸೌಲಭ್ಯ ಹೊಂದಿಲ್ಲದೆ, ಮಳೆಯನ್ನೇ ಆಶ್ರಯಿಸಿದೆ. ಮುಂಗಾರು ಸರಿಯಾದ ಸಮಯಕ್ಕೆ ಬಂದರೆ ಭತ್ತ, ಬೇಳೆಕಾಳುಗಳು, ಕಬ್ಬು ಮತ್ತು ಹತ್ತಿಯಂತಹ ಪ್ರಮುಖ ಮುಂಗಾರು (Kharif) ಬೆಳೆಗಳನ್ನು ಬಿತ್ತನೆ ಮಾಡಲು ರೈತರಿಗೆ ಸಹಾಯವಾಗುತ್ತದೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!