Kannadaಕೃಷಿ

ನಿಷೇಧದ ಸುಳಿಯಲ್ಲಿ ಭಾರತದ ಕೃಷಿ ಉತ್ಪನ್ನಗಳು

ನಮ್ಮ ಹೊಲಗಳಲ್ಲಿ ಬೆಳೆಯುವ ಕೆಂಪು ಮೆಣಸಿನಕಾಯಿ ಜಾಗತಿಕ ಮಾರುಕಟ್ಟೆಯಲ್ಲಿ ಖಾರ ಹರಿಸಬೇಕಿತ್ತೇ ಹೊರತು, ಅಲ್ಲಿನ ಪ್ರಯೋಗಾಲಯಗಳಲ್ಲಿ “ಭಯ” ಹುಟ್ಟಿಸಬಾರದಿತ್ತು. ಆದರೆ ಇಂದು ಕಹಿ ಸತ್ಯವೊಂದು ನಮ್ಮ ಕೃಷಿ ರಂಗದ ಬಾಗಿಲು ತಟ್ಟುತ್ತಿದೆ. ತೀವ್ರ ಅಪಾಯಕಾರಿ ಕೀಟನಾಶಕಗಳ ಅತಿಯಾದ ಬಳಕೆಯಿಂದಾಗಿ ಜಾಗತಿಕ ಮಾರುಕಟ್ಟೆಯಲ್ಲಿ ಭಾರತದ ಕೃಷಿ ಉತ್ಪನ್ನಗಳು ಒಂದೊಂದಾಗಿ ಮೌಲ್ಯ ಕಳೆದುಕೊಳ್ಳುತ್ತಿವೆ. ಇತ್ತೀಚೆಗೆ ಆಂಧ್ರಪ್ರದೇಶ, ತೆಲಂಗಾಣ ಹಾಗೂ ಕರ್ನಾಟಕದ ಹೆಮ್ಮೆಯ ಬೆಳೆಯಾದ ಒಣ ಮೆಣಸಿನಕಾಯಿಯ ರಫ್ತು ಕಂಟೈನರ್‌ಗಳನ್ನು ಚೀನಾ ತಿರಸ್ಕರಿಸಿ ವಾಪಸ್ ಕಳುಹಿಸಿರುವುದು ಕೇವಲ ಒಂದು ಎಚ್ಚರಿಕೆಯ ಗಂಟೆಯಲ್ಲ, ನಮ್ಮ ರಾಸಾಯನಿಕ ಕೃಷಿ ಪದ್ಧತಿಗೆ ಬಿದ್ದ ದೊಡ್ಡ ಪೆಟ್ಟು.

ಮುಚ್ಚಿಕೊಳ್ಳುತ್ತಿರುವ ಜಾಗತಿಕ ಬಾಗಿಲುಗಳು

ಇದು ಕೇವಲ ಚೀನಾದ ಕಥೆಯಷ್ಟೇ ಅಲ್ಲ; ಕೀಟನಾಶಕಗಳ ಅವಶೇಷಗಳು (Pesticide Residues) ನಿಗದಿತ ಪ್ರಮಾಣಕ್ಕಿಂತ ಹೆಚ್ಚಿರುವುದನ್ನು ಪತ್ತೆಹಚ್ಚಿ ಈಗಾಗಲೇ ಜಪಾನ್, ನೇಪಾಳ ಮತ್ತು ಯೂರೋಪಿಯನ್ ಒಕ್ಕೂಟದ ದೇಶಗಳು ಭಾರತದ ವಿವಿಧ ಕೃಷಿ ಉತ್ಪನ್ನಗಳ ಮೇಲೆ ಮುಖ್ಯವಾಗಿ ಮಾವಿನಹಣ್ಣುಗಳ ಮೇಲೆ ಕಟ್ಟುನಿಟ್ಟಿನ ನಿಷೇಧ ಅಥವಾ ಕಠಿಣ ತಪಾಸಣೆಯ ನಿಯಮಗಳನ್ನು ಹೇರಿವೆ. ಜಪಾನ್‌ನಂತಹ ಕಟ್ಟುನಿಟ್ಟಿನ ಗುಣಮಟ್ಟ ಬಯಸುವ ದೇಶಗಳು ಕೀಟನಾಶಕ ಮುಕ್ತ ಅಥವಾ ಆರ್ಗ್ಯಾನಿಕ್ ಉತ್ಪನ್ನಗಳಿಗೆ ಮಾತ್ರ ಮನ್ನಣೆ ನೀಡುತ್ತಿವೆ. ನೇಪಾಳ ಕೂಡ ಇತ್ತೀಚಿನ ವರ್ಷಗಳಲ್ಲಿ ತರಕಾರಿ ಮತ್ತು ಹಣ್ಣುಗಳ ಆಮದಿನ ಮೇಲೆ ರಾಸಾಯನಿಕಗಳ ಕಾರಣಕ್ಕಾಗಿ ನಿರ್ಬಂಧ ವಿಧಿಸಿದೆ. ಈಗ ಚೀನಾ ಕೂಡ ಭಾರತದ ಮೆಣಸಿನಕಾಯಿಗೆ ‘ನೋ’ ಎನ್ನಲು ಆರಂಭಿಸಿರುವುದು ನಮ್ಮ ದೇಶದ ರಫ್ತುದಾರರು ಮತ್ತು ರೈತರಲ್ಲಿ ತಲ್ಲಣ ಮೂಡಿಸಿದೆ.

ಎಚ್ಚರಿಕೆ ಮೂಡಿಸುತ್ತಿರುವ ಕೀಟನಾಶಕಗಳು:

ಮೆಥಾಮಿಡೋಫಾಸ್ (Methamidophos), ಅಸಿಫೇಟ್ (Acephate), ಮೊನೊಕ್ರೊಟೊಫಾಸ್, ಕ್ಲೋರ್‌ಪೈರಿಫಾಸ್ ಮತ್ತು ಫಿಪ್ರೊನಿಲ್‌ನಂತಹ ತೀವ್ರ ರಾಸಾಯನಿಕಗಳ ಬಳಕೆಯೇ ಜಾಗತಿಕ ಮಾರುಕಟ್ಟೆಯಲ್ಲಿ ಭಾರತದ ಕೃಷಿ ಉತ್ಪನ್ನಗಳಿಗೆ ಹಿನ್ನಡೆಯಾಗಿವೆ. ಇವುಗಳಲ್ಲಿ ಅಸಿಫೇಟ್ ಮತ್ತು ಮೆಥಾಮಿಡೋಫಾಸ್ ಕೀಟನಾಶಕಗಳನ್ನು ರಫ್ತು ಆಧಾರಿತ ಬೆಳೆಗಳಲ್ಲಿ ತಕ್ಷಣವೇ ನಿಷೇಧಿಸಬೇಕೆಂದು ಭಾರತೀಯ ಮೆಣಸಿನಕಾಯಿ ರಫ್ತುದಾರರ ಸಂಘ (Chillies Exporters Association) ಸರ್ಕಾರವನ್ನು ಬಲವಾಗಿ ಒತ್ತಾಯಿಸಿದೆ.

ರೆಡ್ ಸಿಗ್ನಲ್ ಸಿಗುತ್ತಿದೆ

ರೈತರು ಕೀಟಗಳ ಬಾಧೆಗೆ ಬೆದರಿ, ಬೆಳೆ ರಕ್ಷಿಸಿಕೊಳ್ಳಲು ತಜ್ಞರ ಸಲಹೆ ಪಡೆಯದೆ ಕೀಟನಾಶಕಗಳನ್ನು ಸಿಂಪಡಿಸುತ್ತಿದ್ದಾರೆ. ಇದರಿಂದಾಗಿ ಬೆಳೆ ಸುಂದರವಾಗಿ ಕಂಡರೂ ಅದರ ಒಳಗೆ ವಿಷದ ಅಂಶಗಳು ಹಾಗೇ ಉಳಿದುಕೊಳ್ಳುತ್ತವೆ (Residue Violation). ಜಾಗತಿಕ ಮಾರುಕಟ್ಟೆಯಲ್ಲಿ ಪ್ರತಿ ದೇಶವೂ ತನ್ನ ನಾಗರಿಕರ ಆರೋಗ್ಯ ರಕ್ಷಣೆಗಾಗಿ ಕಟ್ಟುನಿಟ್ಟಿನ ತಪಾಸಣಾ ವ್ಯವಸ್ಥೆ ಹೊಂದಿರುತ್ತದೆ. ಅಲ್ಲಿ ನಮ್ಮ ಉತ್ಪನ್ನಗಳು ಪರೀಕ್ಷೆಗೆ ಒಳಗಾದಾಗ ರೆಡ್ ಸಿಗ್ನಲ್ ಸಿಗುತ್ತಿದೆ. ಇದು ಕೇವಲ ರಫ್ತುದಾರರಿಗೆ ನಷ್ಟ ಉಂಟುಮಾಡುತ್ತಿಲ್ಲ, ಬದಲಾಗಿ ಒಟ್ಟಾರೆ ಕೃಷಿ ಮಾರುಕಟ್ಟೆಯ ಬೆಲೆಯನ್ನು ಕುಸಿಯುವಂತೆ ಮಾಡುತ್ತದೆ.

ಬದಲಾಗಬೇಕಿದೆ ನಮ್ಮ ನಡೆ ಪರಿಹಾರದ ಕಡೆ

ನಾವು ಜಾಗತಿಕ ಮಾರುಕಟ್ಟೆಯಲ್ಲಿ ನಮ್ಮ ಸ್ಥಾನವನ್ನು ಉಳಿಸಿಕೊಳ್ಳಬೇಕಾದರೆ ‘ಫಾರ್ಮ್-ಟು-ಎಕ್ಸ್‌ಪೋರ್ಟ್’ (ಹೊಲದಿಂದ ರಫ್ತಿನವರೆಗೆ) ಪದ್ಧತಿಯನ್ನು ಸಂಪೂರ್ಣವಾಗಿ ಬದಲಾಯಿಸಬೇಕಿದೆ. ಅದಕ್ಕಾಗಿ ಈ ಕೆಳಗಿನ ಕ್ರಮಗಳು ಅನಿವಾರ್ಯ

  1. ಸಮಗ್ರ ಕೀಟ ನಿರ್ವಹಣೆ (IPM): ರಾಸಾಯನಿಕ ಕೀಟನಾಶಕಗಳ ಮೇಲಿನ ಅವಲಂಬನೆ ಕಡಿಮೆ ಮಾಡಿ, ಜೈವಿಕ ಕೀಟನಾಶಕಗಳು ಮತ್ತು ನೈಸರ್ಗಿಕ ಕೃಷಿ ಪದ್ಧತಿಗಳಿಗೆ ಆದ್ಯತೆ ನೀಡಬೇಕು.
  2. ಪತ್ತೆಹಚ್ಚುವಿಕೆ (Traceability): ಯಾವ ರೈತ, ಯಾವ ಹೊಲದಲ್ಲಿ, ಎಷ್ಟು ಪ್ರಮಾಣದ ಕೀಟನಾಶಕ ಸಿಂಪಡಿಸಿದ್ದಾರೆ ಮತ್ತು ಯಾವಾಗ ಕೊಯ್ಲು ಮಾಡಿದ್ದಾರೆ ಎಂಬ ಸಂಪೂರ್ಣ ದಾಖಲೆ (Spray Records) ಇರಬೇಕು.
  3. ಬೆಳೆ ಕಟಾವಿಗೆ ಬರುವ ಮುನ್ನವೇ ಸ್ಥಳೀಯ ಮಟ್ಟದಲ್ಲಿ ‘ರೆಸಿಡ್ಯೂ ಟೆಸ್ಟಿಂಗ್’ (ವಿಷದ ಅಂಶ ತಪಾಸಣೆ) ನಡೆಸುವ ಪ್ರಯೋಗಾಲಯಗಳ ಮೂಲಸೌಕರ್ಯ ಹೆಚ್ಚಾಗಬೇಕು.
  4. ಕೃಷಿ ವಿಶ್ವವಿದ್ಯಾಲಯಗಳು ಹಾಗೂ ಕೃಷಿ ವಿಜ್ಞಾನ ಕೇಂದ್ರಗಳು (KVK) ಹಳ್ಳಿ ಹಳ್ಳಿಗಳಲ್ಲಿ ರೈತರಿಗೆ ಅಂತರರಾಷ್ಟ್ರೀಯ ಗುಣಮಟ್ಟದ ನಿಯಮಗಳ ಬಗ್ಗೆ ತರಬೇತಿ ನೀಡಬೇಕು.

 ಜಪಾನ್, ನೇಪಾಳ,  ಚೀನಾ ನೀಡುತ್ತಿರುವ ಈ ಆಘಾತಗಳು ನಮ್ಮ ವ್ಯವಸ್ಥೆಯನ್ನು ಸುಧಾರಿಸಿಕೊಳ್ಳಲು ಸಿಕ್ಕಿರುವ ಕೊನೆಯ ಅವಕಾಶ. ಕೃಷಿ ವಿಜ್ಞಾನಿಗಳು, ಸರ್ಕಾರ ಮತ್ತು ರೈತರು ಒಂದಾಗಿ ಗುಣಮಟ್ಟದ ಕೃಷಿಪದ್ಧತಿಗೆ ಕೈಜೋಡಿಸದಿದ್ದರೆ, ಜಗತ್ತಿನ ಅತಿ ದೊಡ್ಡ ಕೃಷಿ ಪ್ರಧಾನ ದೇಶಗಳಲ್ಲಿ ಒಂದಾದ ಭಾರತದ ಕೃಷಿ ಉತ್ಪನ್ನಗಳು ಜಾಗತಿಕವಾಗಿ ಮೌಲ್ಯ ಕಳೆದುಕೊಳ್ಳಬಹುದು

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!