ಕಾಂಗ್ರೆಸಿನಲ್ಲಿ ಅಸಮಾಧಾನದ ಪರ್ವ ಆರಂಭವೇ ?
ರಾಜಕೀಯದಲ್ಲಿ ಅದರಲ್ಲೂ ಪಕ್ಷ ಅಧಿಕಾರದಲ್ಲಿದ್ದಾಗ ಭಿನ್ನಮತ – ಭಿನ್ನರಾಗ ಸಾಮಾನ್ಯ. ಆದರೆ ಅದು ಭುಗಿಲೇಳದಂತೆ ನೋಡಿಕೊಳ್ಳುತ್ತಿರುತ್ತಾರೆ. ಅಸಮಾಧಾನ ಹೆಚ್ಚಾಗಿ ಮಾಧ್ಯಮದ ಮುಂದೆ ಬಂದರೆ ಒಳಗೆ ಅಸಮಾಧಾನದ ಹೊಗೆ ದಟ್ಟವಾಗಿಯೇ ಎದ್ದಿದೆ ಎಂದು ಅರ್ಥ ! ಇನ್ನು ಸಚಿವರೊಬ್ಬರು ಖಾತೆ ಹಂಚಿಕೆ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿ ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ ಎಂದರೆ ಅಸಮಾಧಾನ ಯಾವ ಸ್ವರೂಪದಲ್ಲಿರಬಹುದು ?
ಇದೇ ಪರಿಸ್ಥಿತಿ ರಾಮಲಿಂಗಾ ರೆಡ್ಡಿ, ಕೆ.ಎಚ್. ಮುನಿಯಪ್ಪ, ಅವರಂತಹ ಹಿರಿಯ ನಾಯಕರು ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿರುವಾಗ ಉಂಟಾಗಿದೆ. ಅದು ಸರ್ಕಾರದ ಸ್ಥಿರತೆ ಮತ್ತು ಪಕ್ಷದೊಳಗಿನ ಸಮೀಕರಣಗಳ ಮೇಲೆ ದೊಡ್ಡ ಪರಿಣಾಮ ಬೀರುತ್ತದೆ. ಹಿರಿಯ ನಾಯಕರು ತಮಗೆ ಸಿಕ್ಕಿರುವ ಖಾತೆಗಳಿಗಿಂತ ಹೆಚ್ಚು ಪ್ರಭಾವಶಾಲಿಯಾದ (ಉದಾಹರಣೆಗೆ ಬೆಂಗಳೂರು ನಗರಾಭಿವೃದ್ಧಿ, ಇಂಧನ, ಅಥವಾ ಗೃಹ ಇಲಾಖೆ) ಖಾತೆಗಳನ್ನು ನಿರೀಕ್ಷಿಸಿರುತ್ತಾರೆ. ತಮಗಿಂತ ಜೂನಿಯರ್ಸ್ಗೆ ಪ್ರಮುಖ ಖಾತೆ ಸಿಕ್ಕಾಗ ಅಸಮಾಧಾನ ಸಹಜ.
ಪ್ರಿಯಾಂಕ್ ಖರ್ಗೆ ಅವರಿಗೆ ಗೃಹ ಖಾತೆ ದೊರೆತಿದೆ. ಪಕ್ಷದ ಅತೀ ಪ್ರಭಾವಿ ನಾಯಕರಿಗಷ್ಟೆ ಸಾಮಾನ್ಯವಾಗಿ ಈ ಖಾತೆ ನೀಡಲಾಗುತ್ತದೆ. ಈ ಖಾತೆ ಹೊಂದಿರುವವರು ಅಧಿಕೃತವಾಗಿ ಉಪ ಮುಖ್ಯಮಂತ್ರಿ ಆಗದಿದ್ದರೂ ಆ ಸ್ಥಾನದಷ್ಟೇ ಪ್ರಭಾವಿ ಎಂದು ಪರಿಗಣಿಸಲಾಗುತ್ತದೆ. ಇನ್ನು ಬೆಂಗಳೂರು ನಗರಾಭಿವೃದ್ದಿ ಮತ್ತು ಇತರ ಜಿಲ್ಲೆಗಳ ನಗರಾಭಿವೃದ್ದಿ ಖಾತೆ ಸಹ ಪ್ರಮುಖ. ಇದನ್ನು ಕ್ರಮವಾಗಿ ಕೃಷ್ಣಭೈರೇಗೌಡ, ಯತೀಂದ್ರ ಸಿದ್ದರಾಮಯ್ಯ ಅವರಿಗೆ ನೀಡಲಾಗಿದೆ.
ಕೃಷ್ಣಭೈರೇಗೌಡ ಅವರ ಕಾರ್ಯಶೈಲಿ ಎಲ್ಲರಿಗೂ ಪರಿಚಿತ. ಇಂಥವರು ಪಕ್ಷದ ವರ್ಚಸ್ಸು ಹೆಚ್ಚಿಸುತ್ತಾರೆ. ಆದ್ದರಿಂದ ಇವರಿಗೆ ಪ್ರಭಾವಿ ಖಾತೆ ಹಂಚಿಕೆಯಾಗಿದೆ ಎಂಬ ಅಸಮಾಧಾನಕ್ಕಿಂತ ಪ್ರಿಯಾಂಕ ಖರ್ಗೆ ಅವರಿಗೆ ಗೃಹ, ಯತೀಂದ್ರ ಸಿದ್ದರಾಮಯ್ಯ ಅವರಿಗೆ ನಗರಾಭಿವೃದ್ಧಿ ಖಾತೆ (ಗ್ರೇಟರ್ ಬೆಂಗಳೂರು ಅಭಿವೃದ್ಧಿ ಹೊರತುಪಡಿಸಿ) ಕೊಟ್ಟಿರುವುದು ಅಸಮಾಧಾನಕ್ಕೆ ಕಾರಣವಾಗಿರಬಹುದು.
ಖಾತೆ ಹಂಚಿಕೆಯು ಮುಖ್ಯಮಂತ್ರಿ ಅವರ ಪರಮಾಧಿಕಾರ. ಆದರೂ ಅವರೊಬ್ಬರಿಗೆ ಸ್ವತಂತ್ರ ನಿರ್ಧಾರ ತೆಗೆದುಕೊಳ್ಳಲು ಬಿಡುವುದು ಅಪರೂಪ. ಪಕ್ಷದ ಅತೀ ಪ್ರಭಾವಿ ನಾಯಕರ ಜೊತೆ ಪಕ್ಷದ ರಾಜ್ಯ ಉಸ್ತುವಾರಿ ಹೊಂದಿರುವ ಕಾರ್ಯದರ್ಶಿ ಜೊತೆ ಚರ್ಚಿಸಲಾಗುತ್ತದೆ. ಆದ್ದರಿಂದ ಖಾತೆ ಹಂಚಿಕೆಯಲ್ಲಿ ಸಿದ್ದರಾಮಯ್ಯ ಅವರ ಪ್ರಭಾವ ಇದೆ.
ಈ ಹಿನ್ನೆಲೆಯಲ್ಲಿ ರಾಮಲಿಂಗಾರೆಡ್ಡಿ ಅವರಿಗೆ ನಗರಾಭಿವೃದ್ಧಿ ಖಾತೆ ತಪ್ಪಿದ್ದರ ಹಿಂದೆ ಮುಖ್ಯಮಂತ್ರಿ ಡಿ.ಕೆ, ಶಿವಕುಮಾರ್ ಕಾರಣ ಎಂದು ಖಚಿತವಾಗಿ ಹೇಳಲು ಆಗುವುದಿಲ್ಲ. ಅದೇ ರೀತಿ ಮುನಿಯಪ್ಪ ಅವರಿಗೂ ಹಿಂದೆ ನಿರ್ವಹಿಸುತ್ತಿದ್ದ ಖಾತೆಯೇ ದೊರಕಿರುವುದರ ಹಿಂದೆ ಮುಖ್ಯಮಂತ್ರಿಯೇ ಕಾರಣ ಎನ್ನಲು ಆಗುವುದಿಲ್ಲ. ಹಾಗಿದ್ದರೆ ಇವರಿಬ್ಬರ ಮುನಿಸು ಯಾರ ವಿರುದ್ಧ ? ಸದ್ಯ ಹೈ ಕಮಾಂಡ್ ಗೆ ನಿಕಟವರ್ತಿಯಾಗಿರುವ ಸಿದ್ದರಾಮಯ್ಯ ಹಾಗೂ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ವಿರುದ್ಧವೇ ?
ಮೊದಲ ಹಂತದ ಸಂಪುಟ ವಿಸ್ತರಣೆ ಮತ್ತು ಖಾತೆ ಹಂಚಿಕೆ ಆಗಿದೆ ಅಷ್ಟೆ. ಇನ್ನು ಎರಡು ಅಥವಾ ಮೂರು ಹಂತಗಳಲ್ಲಿ ಸಚಿವ ಸಂಪುಟ ವಿಸ್ತರಣೆ ಜೊತೆಗೆ ಖಾತೆ ಹಂಚಿಕೆ ಆಗುತ್ತದೆ. ಆಗ ಅಸಮಾಧಾನ ಮತ್ತಷ್ಟು ಭುಗಿಲೇಳುವ ಸಾಧ್ಯತೆ ಅಲ್ಲಗಳೆಯುವಂತಿಲ್ಲ ! ಇವುಗಳನ್ನು ಶಿವಕುಮಾರ್ ಹೇಗೆ ನಿಭಾಯಿಸುತ್ತಾರೆ ಎಂಬುದೇ ಸದ್ಯದ ಪ್ರಶ್ನೆ ! ಖಾತೆ ಹಂಚಿಕೆಯಲ್ಲಿ ತಮಗೆ ಪರಮಾಧಿಕಾರ ಕೊಡಿ ಎಂದು ಹೈ ಕಮಾಂಡ್ ಅನ್ನು ಕೇಳಬಹುದು. ಒಂದು ವೇಳೆ ಹೈ ಕಮಾಂಡ್ ತಥಾಸ್ತು ಎಂದರೆ ಸಿದ್ದರಾಮಯ್ಯ ಮತ್ತವರ ಬಣದ ಅಸಮಾಧಾನ ಹೆಚ್ಚುತ್ತದೆ. ಇದನ್ನು ಸರಿದೂಗಿಸುವುದೇ ಹೈ ಕಮಾಂಡ್ ಮುಂದಿನ ಸವಾಲಿನ ಕೆಲಸವಾಗಬಹುದು.
ಅಸಮಾಧಾನದ ಶಮನ ಬೇಗ ಆಗದಿದ್ದರೆ ರಾಮಲಿಂಗಾ ರೆಡ್ಡಿ ಅವರ ಮುನಿಸು ಮುಂಬರುವ ಬಿಬಿಎಂಪಿ ಚುನಾವಣೆಯ ಮೇಲೆ ಪರಿಣಾಮ ಬೀರಿ ಕಾಂಗ್ರೆಸ್ ಪಾಲಿಗೆ ಭಾರಿ ಹೊಡೆತ ನೀಡಬಹುದು. ಮುನಿಯಪ್ಪ ಅವರ ಅಸಮಾಧಾನ ಅವರ ಬೆಂಬಲಿಗರು ಸಹ ಮುನಿಯುವಂತೆ ಮಾಡಬಹುದು. ಇದು ಕೋಲಾರ ಭಾಗದಲ್ಲಿ ಪಕ್ಷಕ್ಕೆ ಹೊಡೆತ ನೀಡಬಹುದು. ಅಸಮಾಧಾನದ ಹೊಗೆ ಹೆಚ್ಚಿದಂತೆಲ್ಲ ಪಕ್ಷದ ವರ್ಚಸ್ಸಿಗೆ ಹೊಡೆತ ! ಇದನ್ನೆಲ್ಲ ಸರಿಪಡಿಸುವುದೇ ಡಿ.ಕೆ. ಶಿವಕುಮಾರ್ ಕಾಯಕವಾಗಿ ಬಿಡಬಹುದು ! ಆಗ ಸರ್ಕಾರದ ಕಾರ್ಯ ?
