ಹೊಣೆಗಾರಿಕೆ ಹೊರೆಯಾಗುವುದರ ಸಶಕ್ತ ಚಿತ್ರಣ
ಮಕ್ಕಳನ್ನು ನೋಡಿಕೊಳ್ಳುವ ಹೊಣೆಗಾರಿಕೆ ಪೋಷಕರದು. ಹಾಗೆಯೇ ಪೋಷಕರನ್ನು ನೋಡಿಕೊಳ್ಳುವ ಜವಾಬ್ದಾರಿ ವಯಸ್ಕ ಮಕ್ಕಳದ್ದೂ ಆಗಿರುತ್ತದೆ. ೨೦೨೫ರಲ್ಲಿ ತೆರೆಕಂಡ ಡಚ್ (ನೆದರ್ಲ್ಯಾಂಡ್ಸ್) ಸಿನಿಮಾ ಪೋರ್ಟ್ ಬ್ಯಾಗೇಜ್ (Porte Bagage) ಎರಡನೇ ಅಂಶದ ಕಥನವನ್ನು ನಮ್ಮ ಮುಂದೆ ತೆರೆದಿಡುತ್ತದೆ. ಪ್ಯಾಟ್ರಿಯಾರ್ಕಲ್ ಜೆಂಡರ್ ಡೈನಾಮಿಕ್ಸ್ ಕಾರಣದಿಂದ ಮಹಿಳೆಯರ ಮೇಲಿನ ಹೊಣೆಗಾರಿಕೆಯೂ ಹೇಗೆ ಹೊರೆಯಾಗಬಲ್ಲುದು, ಕುಟುಂಬದ ಪುರುಷರ ಮೇಲೂ ಸಮಾನ ಜವಾಬ್ದಾರಿಗಳಿದ್ದರೂ ಅವರು ಹೇಗೆ ನುಣಚಿಕೊಳ್ಳಬಲ್ಲರು ಎಂದು ಸಶಕ್ತವಾಗಿ ವಿವರಿಸುತ್ತದೆ.
ನಿರ್ದೇಶಕ ಅಬ್ದೆಲ್ಕರೀಮ್ ಎಲ್-ಫಾಸಿ ಅವರು ಕಥನವನ್ನು ಆರಂಭಿಸಿರುವ, ಬೆಳೆಸಿರುವ ಕ್ರಮವೇ ಆಸಕ್ತಿಕರ. ಮೂಲತಃ ಮೊರಕ್ಕೊ ದೇಶದ ಪ್ರಜೆಯಾಗಿ ನೆದರ್ಲ್ಯಾಂಡ್ಸ್ ಗೆ ವಲಸೆ ಬಂದು ಕಷ್ಟಪಟ್ಟು ದುಡಿದು ಬದುಕು ಕಟ್ಟಿಕೊಂಡ ಮೂಸಾ (Musa) ಅವರಿಗೆ ವೃದ್ದಾಪ್ಯದಲ್ಲಿ ಡಿಮೆನ್ಷಿಯಾ (dementia) ರೋಗ ಕಾಡುತ್ತಿರುತ್ತದೆ. ಇಷ್ಟರಲ್ಲಾಗಲೇ ಪತ್ನಿಯೂ ಮೃತರಾಗಿರುತ್ತಾರೆ. ತನ್ನ ನೆಚ್ಚಿನ ಶೆಫ್ ಉದ್ಯೋಗವನ್ನೂ ಕಡೆಗಾಣಿಸದೇ ತಂದೆಯನ್ನೂ ಅವಿವಾಹಿತೆ ನೂರ್ (Noor) ಮುತುವರ್ಜಿಯಿಂದ ನೋಡಿಕೊಳ್ಳುತ್ತಿರುತ್ತಾರೆ. ಈ ಜವಾಬ್ದಾರಿಯನ್ನು ಹಂಚಿಕೊಳ್ಳಲು ಈಕೆಯ ಸಹೋದರರು ಸಿದ್ದರಿಲ್ಲ.
ಇಂಥ ಸಂದರ್ಭದಲ್ಲಿಯೇ ಪ್ಯಾರಿಸ್ ನ ದೊಡ್ಡ ಹೋಟೆಲಿನಲ್ಲಿ ನೂರ್ ಅವರು ತನ್ನ ಕನಸಿನ ಮುಖ್ಯ ಶೆಫ್ ಉದ್ಯೋಗಕ್ಕೆ ಆಯ್ಕೆಯಾಗುತ್ತಾರೆ. ಇದಕ್ಕೂ ಮುನ್ನವೇ ಮೂಸಾ ಅವರು ಬಹುದಿನಗಳಿಂದ ಕನಸುತ್ತಿದ್ದ ತನ್ನ ಮೂಲನೆಲ ಮೊರಕ್ಕೊಗೆ ರಸ್ತೆ ಮೂಲಕ ಹೋಗುವ ಯೋಜನೆಯೂ ಸಿದ್ದವಾಗುತ್ತದೆ. ನೂರ್, ಇನ್ನಿಬ್ಬರು ಗಂಡುಮಕ್ಕಳು, ಮೊಮ್ಮಗ ( ನೂರ್ ಹಿರಿಯ ಸಹೋದರಿ ಪುತ್ರ) ಜೊತೆಗೂಡುತ್ತಾರೆ.
ಈ ಸುದೀರ್ಘ ಪಯಣ ಅವರನ್ನು ಹೇಗೆ ಭಾವನಾತ್ಮಕವಾಗಿ ಬೆಸೆಯುತ್ತದೆ, ಪರಸ್ಪರ ಭಾವನೆಗಳನ್ನು ಹೇಗೆ ಹಂಚಿಕೊಳ್ಳುತ್ತಾರೆ, ಅದು ಅವರನ್ನು ಹತ್ತಿರ ತರುತ್ತದೆಯೇ, ಜವಾಬ್ದಾರಿಗೆ ಪರಸ್ಪರ ಹೆಗಲುಕೊಡುವಂತೆ ಆಗುತ್ತದೆಯೇ, ನೂರ್ ತನ್ನ ಕನಸಿನ ಉದ್ಯೋಗಕ್ಕೆ ಸೇರ್ಪಡೆಯಾಗುತ್ತಾರಾ ಎಂಬ ಬೆಳವಣಿಗೆಗಳನ್ನು ಸಿನಿಮಾ ಅದ್ಬುತವಾಗಿ ಹೇಳುತ್ತದೆ.

ಹಠಮಾರಿ, ಕಟ್ಟರ್ ಧಾರ್ಮಿಕ ವ್ಯಕ್ತಿ ಮೂಸಾ ಪಾತ್ರದಲ್ಲಿ ಮಹಜೌಬ್ ಬೆನ್ಮಸಾ, ಮಗಳು ನೂರ್ ಪಾತ್ರದಲ್ಲಿ ಅಹ್ಲಾಮ್ ತೆಘಡೌಯಿನಿ ಅವರ ಅಭಿನಯ ಅನನ್ಯ. ಅಹ್ಲಾಮ್ ಅವರ ಆಂಗಿಕ ಭಾಷೆ, ವಿಶೇಷವಾಗಿ ಕಣ್ಣುಗಳಲ್ಲಿಯೇ ಭಾವಗಳನ್ನು ಹೇಳುವ ರೀತಿ ಮೆಚ್ಚುಗೆಗೆ ಪಾತ್ರವಾಗುತ್ತದೆ.
ಅಭಿವೃದ್ದಿಶೀಲ ದೇಶಗಳಲ್ಲಿ ಇರುವ ವಲಸೆ ಸಮಸ್ಯೆ, ಲಂಚಗುಳಿತನ ಮತ್ತು ಅಧಿಕಾರಿಗಳ ದರ್ಪವನ್ನು ಸಿನಿಮಾ ತುಂಬ ವಿವರಕ್ಕೆ ಹೋಗದೇ ಸೂಚ್ಯವಾಗಿ ಹೇಳುತ್ತದೆ. ನಿರ್ದೇಶಕ ಅಬ್ದೆಲ್ಕರೀಮ್ ಎಲ್-ಫಾಸಿ ಅವರೇ ಚಿತ್ರಕಥೆಯನ್ನು ರಚಿಸಿದ್ದಾರೆ. ಇದರ ಪ್ರಧಾನ ಆಶಯವೇ ಪುರುಷ ಪ್ರಧಾನ ಸಮಾಜದಲ್ಲಿ ಮಹಿಳಾ ಆಶೋತ್ತರ – ಆಕಾಂಕ್ಷೆಗಳ ಪರಿಸ್ಥಿತಿ ಹೇಗಿರುತ್ತದೆ ಎಂಬುದನ್ನು ಹೇಳುವುದೇ ಆಗಿದೆ. ಇದರಲ್ಲಿ ಇವರು ಯಶಸ್ವಿಯೂ ಆಗಿದ್ದಾರೆ. ಸಿನಿಮಾದಲ್ಲಿ ಡಚ್ ಜೊತೆಗೆ ದರಿಜಾ (ಮೊರಕನ್ ಅರಬಿಕ್ ) ಭಾಷೆ ಬಳಕೆಯೂ ಇದೆ.
ಪ್ರಧಾನ ಛಾಯಾಗ್ರಹಕ ಸ್ಜೋರ್ಸ್ ಮೊಸ್ಮನ್ ಅವರ ಕ್ಯಾಮೆರಾ ಕೆಲಸ ಚಿತ್ರಕಥೆಗೆ ಪೂರಕವಾಗಿದೆ. ದೀರ್ಘ ಪ್ರವಾಸವೂ ಇರುವುದರಿಂದ ಹೊರಾಂಗಣದ ದೃಶ್ಯಗಳು ಮನಮೋಹಕವಾಗಿವೆ. ಮುಖ್ಯ ಸಂಕಲನಕಾರ ಸ್ಜೋರ್ಡ್ ಸ್ಕಿಪ್ಪರ್ ಅವರ ಕಾರ್ಯ ಗಮನ ಸೆಳೆಯುತ್ತದೆ. ಇದರಿಂದಾಗಿ ಚಿತ್ರ ಒಂದೇ ರೀತಿಯ ಚುರುಕುತನ ಉಳಿಸಿಕೊಳ್ಳಲು ಸಾಧ್ಯವಾಗಿದೆ.
೧೭ನೇ ಬೆಂಗಳೂರು ಅಂತರಾಷ್ಟ್ರೀಯ ಚಿತ್ರೋತ್ಸವದಲ್ಲಿ ಪೋರ್ಟ್ ಬ್ಯಾಗೇಜ್ (Porte Bagage) ಆರಂಭಿಕ ಸಿನಿಮಾ (Opening cinema) ಆಗಿ ಪ್ರದರ್ಶನವಾಯಿತು. ಲುಲು ಮಾಲ್ (Lulu mall) ಸ್ಕ್ರೀನ್ ಗಳಲ್ಲಿ ಪ್ರದರ್ಶನ ಸಂದರ್ಭದಲ್ಲಿ ವೀಕ್ಷಕರ ಅತೀ ಬೇಡಿಕೆಯ ಚಿತ್ರವಾಗಿತ್ತು.
