ಕುತೂಹಲ ಮೂಡಿಸಿರುವ ಸಮಾಜಮುಖಿ ಸಾಹಿತ್ಯ ಸಮ್ಮೇಳನ
ಕನ್ನಡ ಸಾಹಿತ್ಯ ಪರಿಷತ್ 1915 ರಿಂದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜಿಸುತ್ತಿದೆ. ವರ್ಷದಿಂದ ವರ್ಷಕ್ಕೆ ಇದರ ಬಜೆಟ್ ಹೆಚ್ಚುತ್ತಿದೆ. ಕಳೆದ ವರ್ಷ ಮಂಡ್ಯದಲ್ಲಿ 30 ಕೋಟಿ ರೂಪಾಯಿಗೂ ಅಧಿಕ ವೆಚ್ಚ ಮಾಡಲಾಗಿದೆ. ಪ್ರಾಯೋಗಿಕ ನೆಲೆಯಲ್ಲಿ ಇಂಥ ಸಮ್ಮೇಳನಗಳು “ಕನ್ನಡ ಭಾಷೆಯನ್ನೂ ತನ್ಮೂಲಕ ಕನ್ನಡ ಬದುಕು” ಕಟ್ಟುವ ಕಾರ್ಯದಲ್ಲಿ ಎಷ್ಟರ ಮಟ್ಟಿಗೆ ಯಶಸ್ವಿಯಾಗಿವೆ ? ಇದು ಚರ್ಚೆಯ ವಿಷಯ ! ಆದರೆ ಒಂದು ಮಾತಂತೂ ನಿರಾಕರಿಸಲಾಗದು. ಅದು ಜಾತ್ರೆಯ ಸ್ವರೂಪ. ಇಲ್ಲಿ ಅಂತರ ಶಾಸ್ತ್ರೀಯ ಶಿಸ್ತು ಗೈರು ಹಾಜರಾಗಿರುತ್ತದೆ. ಇಂಥ ಸಂದರ್ಭದಲ್ಲಿ ತುಂಬ ಗಂಭೀರ ಹಾಗೂ ಆಳವಾದ ಚರ್ಚೆಗಳು ನಡೆಯುವುದು ಕಷ್ಟ ! ಪ್ರಧಾನ ವೇದಿಕೆಯೂ ಸೇರಿದಂತೆ ಇತರ ವೇದಿಕೆಗಳಲ್ಲಿ ನಡೆಯುವ ಚರ್ಚೆ ಏನು ಎನ್ನುವುದಕ್ಕಿಂತ ಅಲ್ಲಿನ ಅಡುಗೆ ಮನೆಯಲ್ಲಿ ಅಂದಂದಿನ ಭಕ್ಷ್ಯ ಭೋಜನಗಳೇನು ಎಂಬ ಸುದ್ದಿಯ ಸದ್ದು – ಭೋಜನ ಶಾಲೆಯ ಗದ್ದಲವೇ ಹೆಚ್ಚಾಗಿರುತ್ತದೆ. ಪರಿಷತ್, ಆಹಾರ ರಾಜಕಾರಣವನ್ನೂ ಮಾಡುತ್ತಿದೆ ಎಂಬ ಆರೋಪವೂ ಇದೆ.
ಕಳೆದ ದಶಕದಿಂದ ಕರ್ನಾಟಕದ ಪ್ರಮುಖ ನಗರಗಳಲ್ಲಿ ನಿರ್ದಿಷ್ಟ ಗುರಿ – ಉದ್ದೇಶ ಹೊಂದಿರುವ ಸಾಹಿತ್ಯ ಉತ್ಸವಗಳು ನಡೆಯುತ್ತಿವೆ. ಅವುಗಳಲ್ಲಿ ಹೆಚ್ಚಿನ ಬಜೆಟ್ ಇಲ್ಲದೇ ಜನ ಸಾಮಾನ್ಯರನ್ನೇ ಹೆಚ್ಚು ಗುರಿಯಾಗಿಸಿಕೊಂಡ ಧಾರವಾಡ ಸಾಹಿತ್ಯ ಸಂಭ್ರಮ (ಇತ್ತೀಚಿನ ವರ್ಷಗಳಲ್ಲಿ ನಡೆದಿಲ್ಲ), ಮೇ ಸಾಹಿತ್ಯ ಸಮ್ಮೇಳನ ಗಮನ ಸೆಳೆದಿವೆ. ಗಂಭೀರ ಚರ್ಚೆಗಳಿಗೂ ಅವಕಾಶ ಒದಗಿಸಿವೆ.
ಇದೇ ರೀತಿ ಕಾರ್ಪೊರೇಟ್ ಛಾಯೆ ಹೊದ್ದ ಸಾಹಿತ್ಯ ಉತ್ಸವಗಳು ನಡೆಯುತ್ತಿವೆ. ಇವು ಹೆಚ್ಚಾಗಿ ಪಂಚತಾರ ಹೋಟೆಲುಗಳಲ್ಲಿಯೇ ಕೇಂದ್ರೀಕೃತವಾಗಿರುವುದು ಗಮನಾರ್ಹ. ಇಲ್ಲಿ ಯಾವುದೂ ಉಚಿತವಲ್ಲ ! ಸಾಹಿತ್ಯ ಸಂವಾದ ಆಲಿಸಲು ಹೋದ ಆಸಕ್ತ ಶ್ರೀಸಾಮಾನ್ಯ ನಡುವೆ ಕಾಫಿ ಕುಡಿಯಲು ಹೋಗಿ ಅದರ ಬೆಲೆ ಕೇಳಿಯೇ ಬೆಚ್ಚಿಬೀಳುವಷ್ಟು ಎಲ್ಲವೂ ದುಬಾರಿ ! ಇಲ್ಲಿ ಕನ್ನಡವೇ ಪ್ರಧಾನವಾಗಿರುವುದಿಲ್ಲ ! ಕನ್ನಡವೂ ಒಂದಾಗಿರುತ್ತದೆ. ಕನ್ನಡದಲ್ಲಿ ನಡೆಯುವ ಸಂವಾದಗಳ ಅಂಗಳಗಳಲ್ಲಿ ಕಾಣುವ ಆಸಕ್ತರ ಹಲವು ಪಟ್ಟು ಆಸಕ್ತರು ಇಂಗ್ಲಿಷ್ ಆಧರಿತ ಉಪನ್ಯಾಸ, ಚರ್ಚೆ-ಸಂವಾದಗಳ ಅಂಗಳಗಳಲ್ಲಿ ಕಾಣುತ್ತಾರೆ ! ಇಂಗ್ಲಿಷ್ ಸಾಹಿತ್ಯದ ಕೃತಿಗಳೇ ಹೆಚ್ಚು ಸಂಖ್ಯೆಯಲ್ಲಿ ಮಾರಾಟವಾಗುತ್ತವೆ !
ಇದರ ಬಗ್ಗೆ ಸಾಹಿತ್ಯ – ಸಿನಿಮಾ ಕ್ಷೇತ್ರಗಳ ಅಧ್ಯಯನಕಾರ ವಿನಯ್ ಕುಮಾರ್ ಎಂ.ಜಿ. ಹೇಳುವ ಮಾತು ಕುತೂಹಲಕಾರಿಯಾಗಿದೆ. “ಕಾರ್ಪೋರೇಟ್ ಪ್ರಾಯೋಜಿತ ಸಾಹಿತ್ಯ ಉತ್ಸವಗಳಲ್ಲಿ ಕನ್ನಡ ನೆಲದಲ್ಲಿ ನಡೆಯುತ್ತಿದೆ ಎನ್ನುವ ಪ್ರಮುಖ ಕಾರಣಕ್ಕೆ ಕನ್ನಡಗೋಷ್ಠಿಗಳನ್ನು ಆಯೋಜಿಸುವಂತೆ ಕಾಣುತ್ತಿದೆ. ಇಲ್ಲಿ ಇಂಗ್ಲಿಷ್ ಸಾಹಿತ್ಯಕ್ಕೆ ನೀಡುವಷ್ಟು ಪ್ರಾಮುಖ್ಯತೆಯನ್ನು ಕನ್ನಡ ಸಾಹಿತ್ಯಕ್ಕೆ ನೀಡಿರುವುದಿಲ್ಲ. ಸಾಮಾನ್ಯವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಲೈಕ್ಸ್, ಕಾಮೆಂಟು ಪಡೆದುಕೊಳ್ಳುವ, ಆಳವಾದ ಗಂಭೀರ ಸಾಹಿತ್ಯ ರಚಿಸಿರದ ವ್ಯಕ್ತಿಗಳೇ ಇಲ್ಲಿನ ಕನ್ನಡ ಗೋಷ್ಠಿಗಳಲ್ಲಿ ಕಾಣುತ್ತಾರೆ. ಇವುಗಳ ಆಯೋಜಕರಿಗೆ ಗ್ರಾಮೀಣ ಕ್ಷೇತ್ರದ, ಗಂಭೀರ ಬರೆವಣಿಗೆಯಲ್ಲಿ ತೊಡಗಿಸಿಕೊಂಡ ಕನ್ನಡ ವ್ಯಕ್ತಿತ್ವಗಳು ಕಾಣುವುದಿಲ್ಲವೇನೋ ಎನಿಸುತ್ತದೆ. ಇದೇ ಸಂದರ್ಭದಲ್ಲಿ “ಜೈಪುರ ಲಿಟರೇಚರ್ ಫೆಸ್ಟಿವಲ್” ಆಯೋಜನೆ ಮಾಡುತ್ತಿರುವವರು ಕಾರ್ಪೋರೇಟ್ ಪ್ರಾಯೋಜಕತ್ವವನ್ನು ಪಡೆದೂ ಬಹು ಗಂಭೀರವಾಗಿ ಸಾಹಿತ್ಯ ಉತ್ಸವ ನಡೆಸುತ್ತಿದ್ದಾರೆ. ಇವರು ಕಾರ್ಪೋರೇಟ್ ಹಿತಾಸಕ್ತಿಗಳು ತಮ್ಮ ಉದ್ದೇಶಗಳ ಮೇಲೆ ಸವಾರಿ ಮಾಡುವ ಅವಕಾಶ ಕೊಟ್ಟಿಲ್ಲ”
ಕನ್ನಡ ಸಾಹಿತ್ಯ ಪರಿಷತ್ ನಡೆಸುವ ಸಾಹಿತ್ಯ ಸಮ್ಮೇಳನಗಳೇ ಪ್ರಮುಖ ವಾಹಿನಿಯ ಸಮ್ಮೇಳನಗಳು, ಇತರ ಸಂಘಟನೆಗಳು ನಡೆಸುವ ಸಾಹಿತ್ಯ ಉತ್ಸವಗಳು ಪರ್ಯಾಯ ಸಮ್ಮೇಳನಗಳು ಎಂದೂ ವರ್ಗೀಕರಿಸಲು ಸಾಧ್ಯವಿಲ್ಲ. ಅವುಗಳು ತಮ್ಮತಮ್ಮ ಮಿತಿಯಲ್ಲಿ ಕಾರ್ಯಾಚರಿಸುತ್ತವೆ. ಇದಲ್ಲದೇ ಇತ್ತೀಚಿನ ಕೆಲವು ವರ್ಷಳಿಂದ ಕಡಿಮೆ ಬಜೆಟ್ ನಲ್ಲಿ ನಡೆಯುವ ( ಸರ್ಕಾರಿ ಪ್ರಾಯೋಜಿತ ಕಸಾಪ ಮೇಳಗಳ ಅಗಾಧ ಹಣಕ್ಕೆ ಹೋಲಿಸಿದರೆ) ಸಾಹಿತ್ಯ ಉತ್ಸವಗಳ ಸಂಖ್ಯೆ ಹೆಚ್ಚಾಗುತ್ತಿದೆ.
ಇದೇ ವರ್ಷದ ನವೆಂಬರ್ 8-9ರಂದು ಬೆಂಗಳೂರಿನಲ್ಲಿ “ಸಮಾಜಮುಖಿ ಸಾಹಿತ್ಯ ಸಮ್ಮೇಳನ” ಆಯೋಜಿತವಾಗಿದೆ. ಇದು ನನ್ನ ಗಮನವನ್ನು ಸೆಳೆಯಲು ಪ್ರಮುಖವಾಗಿ ಮೂರು ಕಾರಣಗಳಿವೆ. ಮೊದಲನೇಯದು ಕಾರ್ಪೋರೇಟ್ ಸಂಸ್ಥೆಗಳಿಂದಾಗಲಿ, ಸರ್ಕಾರದಿಂದ ಆಗಲಿ ಅನುದಾನ ಪಡೆಯಲು ಮುಂದಾಗದಿರುವುದು, ಎರಡನೇಯದು ಆಸಕ್ತರು ತಮ್ಮ ಕೈಲಾದಷ್ಟು ಸಹಾಯ ನೀಡಬಹುದೆಂಬ ಕೋರಿಕೆ ! ಅಂದರೆ ಸಾಹಿತ್ಯಸಕ್ತರ ಮೂಲಕವೇ ಸಾಹಿತ್ಯ ಸಂವಾದದ ಸೊಬಗು ವೃದ್ದಿಸಲು ಮುಂದಾಗಿರುವುದು. ಮೂರನೇಯದು, ಆಹ್ವಾನಗೊಳ್ಳುವವರ ಕುರಿತ ಅಭಿಪ್ರಾಯ …
“ಸಾಹಿತ್ಯಾಸಕ್ತರು ಹಾಗೂ ಸಾಹಿತ್ಯದ ವಿದ್ಯಾರ್ಥಿಗಳನ್ನು ಆಹ್ವಾನಿಸಲಾಗುತ್ತಿದೆ. ಆದರೆ ಯಾವುದೇ ಮಂತ್ರಿ-ಶಾಸಕ-ಅಧಿಕಾರಿಗಳನ್ನು ಅವರ ಹುದ್ದೆಯ ಕಾರಣಕ್ಕೆ ಕರೆಯುವುದಿಲ್ಲ. ವೈಯಕ್ತಿಕ ನೆಲೆಯಲ್ಲಿ ಹಾಗೂ ಸಾಹಿತ್ಯಾಸಕ್ತಿಯಿಂದ ಬರುವ ಯಾರಿಗೂ ತಡೆಯಿಲ್ಲ” ಇತ್ತೀಚಿನ ವರ್ಷಗಳಲ್ಲಿ ಹೀಗೆ ತಮ್ಮ ನಿರ್ದಿಷ್ಟ ಗುರಿ ಯಾವುದೆಂದು ಖಚಿತಪಡಿಸಿಕೊಂಡಿರುವ ಸಾಹಿತ್ಯ ಆಯೋಜನೆ ಇದೆ ಇರಬಹುದು !
ಈಗಾಗಲೇ ಕರ್ನಾಟಕದ ಪ್ರಮುಖ ನಗರಗಳಲ್ಲಿ ಸಾಹಿತ್ಯ ಉತ್ಸವಗಳು ನಡೆಯುತ್ತಿರುವಾಗ ಸಮಾಜಮುಖಿ ಮತ್ತೊಂದು ಸಾಹಿತ್ಯೋತ್ಸವ ನಡೆಸುವ ಅಗತ್ಯವಿತ್ತೆ ಎಂಬ ಪ್ರಶ್ನೆ ಉದ್ಬವಿಸುವುದು ಸಹಜ! ಅದಕ್ಕೆ ಆಯೋಜಕರು ನೀಡಿರುವ ಕಾರಣ ಅಥವಾ ಕಾರಣಗಳು ಕುತೂಹಲಕಾರಿಯಾಗಿವೆ.
“ಕನ್ನಡ ಸಾಹಿತ್ಯ ಸಂದರ್ಭವನ್ನು ಮರು ವಿಶ್ಲೇಷಿಸಿ ಸೃಜನಶೀಲ ಹಾಗೂ ವೈಚಾರಿಕ ಸಾಹಿತ್ಯಗಳೆರಡರಲ್ಲಿ ತೊಡಗಿಸಿಕೊಂಡಿರುವ ಕನ್ನಡ ಬರಹಗಾರರಿಗೆ ಸ್ಫೂರ್ತಿ-ಚೈತನ್ಯ-ಇಂಬು ನೀಡುವಂತಹ ಮೂರ್ತ ವೇದಿಕೆಯೊಂದರ ಅಗತ್ಯವಿದೆ. ಸಾಹಿತ್ಯ ಸಮ್ಮೇಳನದ ನಿಜ ಅಗತ್ಯ ಮತ್ತು ಉದ್ದೇಶಗಳನ್ನು ಈಡೇರಿಸುವಂತಹ ಸಂಭ್ರಮವೊಂದನ್ನು ಆಯೋಜಿಸಬೇಕಿದೆ. ಕನ್ನಡದ ಎಲ್ಲ ಆರೋಗ್ಯವಂತ ಹಾಗೂ ಕ್ರಿಯಾಶೀಲ ಮನಸ್ಸುಗಳನ್ನು ವರ್ಷದಲ್ಲಿ ಒಮ್ಮೆಯಾದರೂ ಒಂದೆಡೆ ಸೇರಿಸಿ ಸಮಾಲೋಚನೆಗೆ ತೊಡಗಿಸಬೇಕಾಗಿದೆ. ಮುಂದಿನ ದಶಕಗಳಲ್ಲಿ ಕನ್ನಡ, ಕನ್ನಡ ಸಾಹಿತ್ಯ ಮತ್ತು ಕರ್ನಾಟಕದ ಬೆಳವಣಿಗೆ- ಸ್ಥಿತಿಗತಿ-ಸ್ಥಾನಮಾನಗಳನ್ನು ಚರ್ಚಿಸಬೇಕಾಗಿದೆ”
ಪ್ರಸ್ತುತ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಮತ್ತದರ ಆಯಾಮಗಳನ್ನು ನಿಷ್ಠುರವಾಗಿ ಮರು ವಿಶ್ಲೇಷಿಸುವ ಅಗತ್ಯವಿದೆ. ಈ ದಿಶೆಯಲ್ಲಿ ಸಮಾಜಮುಖಿ ಸಮ್ಮೇಳನ ಕನ್ನಡ ಭಾಷೆಯನ್ನೂ, ಸಾಹಿತ್ಯವನ್ನು, ತನ್ಮೂಲಕ ಕನ್ನಡ ಬದುಕನ್ನೂ ಕಟ್ಟುವ ಬಗೆಯ ಕಾಣ್ಕೆಯನ್ನು ಕಾಣಿಸಲು ಹೊರಟಿರುವುದು ಗಮನಾರ್ಹ!! ಈ ದಾರಿಯಲ್ಲಿ ಅಲ್ಲಿ ಆಯೋಜನೆಗೊಂಡಿರುವ ಬಹುಮುಖಿ ನೆಲೆಗಳ ಗೋಷ್ಠಿಗಳು ಕುತೂಹಲಕಾರಿಯಾಗಿವೆ.
ಹಿರಿಯ ಸಾಹಿತಿ, ಪ್ರೊಫೆಸರ್ ಜಯಪ್ರಕಾಶ್ ಗೌಡ ಅವರು ಮಂಡ್ಯ ನಗರದಲ್ಲಿ ಕನ್ನಡ ಸಾಹಿತ್ಯ, ಸಾಂಸ್ಕೃತಿಕ ಕಲೆಗಳ ಕಲರವಗಳ ತಾಣ “ಕರ್ನಾಟಕ ಸಂಘ” ಕಟ್ಟಿದವರು. ಅವರು “ಸಮಾಜಮುಖಿ ಸಾಹಿತ್ಯ ಸಮ್ಮೇಳನ” ರೂವಾರಿಗಳಲ್ಲಿ ಒಬ್ಬರು. ಅವರು ಹೇಳುವ ಮಾತು …
“ಇಲ್ಲಿ ಹಳೆಗನ್ನಡ ಸಾಹಿತ್ಯವೂ, ಇಂದಿನ ಕನ್ನಡ ಸಾಹಿತ್ಯವೂ ಇರುತ್ತದೆ. ಕನ್ನಡ ಸಾಹಿತ್ಯ ಬೆಳೆವಣಿಗೆ ಹಾದಿಯನ್ನು ಗಮನಿಸಲಾಗುತ್ತದೆ. ಪ್ರಮುಖವಾಗಿ ಎಡಪಂಥೀಯ, ಬಲಪಂಥೀಯ ದೃಷ್ಟಿಕೋನವಿಲ್ಲದೇ ಶುದ್ದ ಸಾಹಿತ್ಯವನ್ನು ಸಂವಾದಿಸುವ ವಾತಾವರಣ ಕಟ್ಟಲು ಮುಂದಾಗಿದ್ದೇವೆ. ಯಾವುದೇ ಇಸಂಗಳಿಗೆ ಬದ್ಧವಾಗದೇ ಮಾನವೀಯ ನೆಲೆಗಟ್ಟಿನಲ್ಲಿ ಸಾಹಿತ್ಯೋತ್ಸವ ನಡೆಸುವುದು ನಮ್ಮ ಗುರಿ”
ಅಂದ ಹಾಗೆ “ಸಮಾಜಮುಖಿ ಸಾಹಿತ್ಯ ಸಮ್ಮೇಳನ” ಬೆಂಗಳೂರು ಅರಮನೆ ರಸ್ತೆಯ ಸ್ಕೌಟ್ ಅಂಡ್ ಗೈಡ್ಸ್ ಆವರಣದಲ್ಲಿ ನವೆಂಬರ್ ೮-೯ರಂದು ನಡೆಯಲಿದೆ. ಆಸಕ್ತರು ಒಬ್ಬರಿಗೆ 300 ರೂ. ನೀಡಿ (ಇದರಲ್ಲಿ ಎರಡು ದಿನಗಳ ಊಟ, ತಿಂಡಿ, ಕಾಫಿ ಇತ್ಯಾದಿಗಳ ವೆಚ್ಚ ಸೇರ್ಪಡೆಯಾಗಿರುತ್ತದೆ) ನೋಂದಾಯಿಸಿಕೊಳ್ಳಬಹುದು. ವಸತಿ ವ್ಯವಸ್ಥೆಯ ಸೌಲಭ್ಯವೂ ಇದೆ. ವಿಶೇಷವಾಗಿ ಆಸಕ್ತ ವಿದ್ಯಾರ್ಥಿಗಳಿಗೆ ರಿಯಾಯತಿಯೂ ಇದೆ. ವಿವರಗಳಿಗೆ https://samajamukhi.com/ ಜಾಲತಾಣಕ್ಕೆ ಭೇಟಿ ನೀಡಬಹುದು. ಮೊಬೈಲ್ ನಂಬರ್ 9900049892 ಕರೆ ಮಾಡಬಹುದು
