Kannadaರಾಜಕೀಯ

ದಲಿತರನ್ನು ಸಿಎಂ ಸ್ಥಾನದಿಂದ ಕಾಂಗ್ರೆಸ್‌ ವಂಚಿಸಿತೇ ?

ಕಾಂಗ್ರೆಸ್‌ ಪಕ್ಷಕ್ಕೆ ಕನಸು ಮನಸಿನಲ್ಲಿಯೂ ಎರಡು ಎಣಿಸಿದ ನಾಯಕರ ಸಾಲಿನಲ್ಲಿ ಮಲ್ಲಿಕಾರ್ಜುನ ಖರ್ಗೆ, ಜಿ. ಪರಮೇಶ್ವರ್‌ ನಿಲ್ಲುತ್ತಾರೆ. ಇಂಥ ಪರಮೇಶ್ವರ್‌ ತಾವು ಮೂರು ಬಾರಿ ಸಿಎಂ ಸ್ಥಾನದಿಂದ ವಂಚಿತವಾದ ಬಗ್ಗೆ ಮನದ ಬೇಗುದಿಯನ್ನು ಹೊರ ಹಾಕಿದ್ದಾರೆ. ಆಪ್ತರ ಬಳಿ ಅಷ್ಟೇ ತಮ್ಮ ಅಭಿಪ್ರಾಯ ಹೇಳಿಕೊಳ್ಳುತ್ತಿದ್ದ ಇವರು ಬಹಿರಂಗವಾಗಿಯೇ ತಮ್ಮ ಅಸಮಾಧಾನ ಹೊರ ಚೆಲ್ಲಿದ್ದಾರೆ. ಇದು ಗಮನಾರ್ಹ ಬೆಳವಣಿಗೆ!!

ಕರ್ನಾಟಕ ವಿಧಾನಸಭೆಗೆ ೨೦೧೩ರಲ್ಲಿ ಚುನಾವಣೆ ನಡೆದಾಗ ರಾಜ್ಯ ಕಾಂಗ್ರೆಸಿಗೆ ಜಿ. ಪರಮೇಶ್ವರ್‌ ಅಧ್ಯಕ್ಷಕರು. ಎಲ್ಲರನ್ನೂ ಒಟ್ಟಿಗೆ ಕರೆದುಕೊಂಡು ಹೋಗಿ ಪಕ್ಷಕ್ಕೆ ೧೨೨ ಸ್ಥಾನಗಳನ್ನು ಗಳಿಸಿಕೊಟ್ಟಿದ್ದರು. ಇದರಲ್ಲಿ ಎಲ್ಲ ನಾಯಕರ ಶ್ರಮ ಇತ್ತು. ಆದರೂ ಪರಮೇಶ್ವರ್‌ ಪರಿಶ್ರಮ ಅಪಾರ! ಆಗ ರಾಜ್ಯದ ದಲಿತ ಸಮುದಾಯಕ್ಕೆ ಇವರು ಮುಖ್ಯಮಂತ್ರಿಯಾಗುತ್ತಾರೆಂಬ ಭರವಸೆ ಇತ್ತು. ಎಂದಿಗಿಂತಲೂ ಹೆಚ್ಚಾಗಿ ಕಾಂಗ್ರೆಸ್‌ ಅನ್ನು ಬೆಂಬಲಿಸಿದ್ದರು.

ದುರಾದೃಷ್ಟವಶಾತ್‌ ಕೊರಟಗೆರೆಯಲ್ಲಿ ಜಿ. ಪರಮೇಶ್ವರ್‌ ಸೋತರು. ಮುಖ್ಯಮಂತ್ರಿ ಅಭ್ಯರ್ಥಿಯಾಗುವ ಅಭ್ಯರ್ಥಿ ಸೋಲಬಾರದೆಂದೇನೂ ಇಲ್ಲ. ತಮಿಳುನಾಡಿನಲ್ಲಿ ಸ್ಟಾಲಿನ್‌ ಅಂಥ ಜನಪ್ರಿಯ ಮುಖ್ಯಮಂತ್ರಿಯೇ ಹೊಸ ಪಕ್ಷ ಟಿವಿಕೆ ಅಭ್ಯರ್ಥಿ ಎದುರು ಸೋತ ನಿದರ್ಶನ ನಮ್ಮ ಮುಂದಿದೆ. ಪರಮೇಶ್ವರ್‌ ಪಟ್ಟಿದ್ದ ಪರಿಶ್ರಮ ಪರಿಗಣಿಸಿ ಕಾಂಗ್ರೆಸ್‌ ಹೈ ಕಮಾಂಡ್‌ ಇವರನ್ನೇ ಶಾಸಕಾಂಗ ಪಕ್ಷದ ನಾಯಕರನ್ನಾಗಿ ಮಾಡಿ ಮುಖ್ಯಮಂತ್ರಿ ಮಾಡುವ ಅವಕಾಶವಿತ್ತು. ಮುಖ್ಯಮಂತ್ರಿಯಾದ ಆರು ತಿಂಗಳ ಒಳಗೆ ವಿಧಾನಸಭೆ ಅಥವಾ ವಿಧಾನಪರಿಷತ್ತಿನ ಓರ್ವ ಕಾಂಗ್ರೆಸ್‌ ಶಾಸಕರಿಂದ ರಾಜಿನಾಮೆ ಕೊಡಿಸಿ ಆ ಸ್ಥಾನಕ್ಕೆ ಪರಮೇಶ್ವರ್‌ ಆಯ್ಕೆ ಆಗುವಂತೆ ಮಾಡುವುದು ಕಷ್ಟವಾಗಿರಲಿಲ್ಲ. ಹಿಂದೆ ೧೯೮೩ರಲ್ಲಿ ಜನತಾಪಕ್ಷದ ಪ್ರಧಾನಕಾರ್ಯದರ್ಶಿಯಾಗಿದ್ದ, ಕರ್ನಾಟಕದ ಮೇಲ್ಮನೆ, ಕೆಳಮನೆ ಸದಸ್ಯರೂ ಆಗಿರದ ರಾಮಕೃಷ್ಣ ಹೆಗಡೆ ಅವರು ಇತರ ಪಕ್ಷಗಳ ಬೆಂಬಲದೊಂದಿಗೆ ಮುಖ್ಯಮಂತ್ರಿಯಾದ ನಿದರ್ಶನ ನಮ್ಮ ಮುಂದಿದೆ.

ಕರ್ನಾಟಕ ವಿಧಾನಸಭೆಗೆ ೨೦೧೮ರಲ್ಲಿ ಚುನಾವಣೆ ನಡೆಯತು. ಆಗ ಬಿಜೆಪಿ ೧೦೪, ಕಾಂಗ್ರೆಸ್‌ ೭೮, ಜೆಡಿಎಸ್‌ ೩೭, ಇತರರು ೩ ಸ್ಥಾನಗಳನ್ನು ಗೆದ್ದಿದ್ದರು. ಈ ಸಂದರ್ಭದಲ್ಲಿ ಕಾಂಗ್ರೆಸ್‌ ತಾನೇ ಜೆಡಿಸ್‌ ಮನೆ ಬಾಗಿಲಿಗೆ ಹೋಗಿ ಮೈತ್ರಿ ಮಾಡಿಕೊಂಡಿತು. ಆಗ ಜಿ. ಪರಮೇಶ್ವರ್‌ ಅವರನ್ನೇ ಮುಖ್ಯಮಂತ್ರಿ ಮಾಡುವ ಅವಕಾಶವಿತ್ತು.

೨೦೨೩ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ೧೩೬ ಸ್ಥಾನಗಳ ಭರ್ಜರಿ ಗೆಲುವು ಸಾಧಿಸಿತು. ಈ ಗೆಲುವಿಗೆ ಕಾಂಗ್ರೆಸಿನ ಎಲ್ಲ ನಾಯಕರು ಶ್ರಮಿಸಿದ್ದಾರೆ. ಆದರೆ ತನು ಮನದ ಜೊತೆಗೆ ಧನವನ್ನೂ ಧಾರಾಳವಾಗಿ ನೀಡಿದವರು ಡಿಕೆ ಶಿವಕುಮಾರ್‌ ಎಂಬುದರಲ್ಲಿ ಎರಡು ಮಾತಿಲ್ಲ. ಇವರ ಅಧ್ಯಕ್ಷತೆಯಲ್ಲಿ ಪಕ್ಷ ಫಿನಿಕ್ಸ್‌ ಪಕ್ಷಿಯಂತೆ ಗರಿಗೆದರಿ ನಿಂತಿತು. ಬಿಜೆಪಿ ಸರ್ಕಾರದ ವಿರುದ್ಧ ಇವರು ಸಂಘಟಿಸಿದ ಹೋರಾಟದ ರೀತಿಗಳೂ ಅನನ್ಯ. ಈ ಹಿನ್ನೆಲೆಯಲ್ಲಿ ಶಿವಕುಮಾರ್‌ ಮತ್ತು ಪರಮೇಶ್ವರ್‌ ಅವರಿಗೆ ೫೦/೫೦ ಅವಧಿಗೆ ಮುಖ್ಯಮಂತ್ರಿಗಳನ್ನಾಗಿ ಮಾಡುವ ಅವಕಾಶವಿತ್ತು !

ಈ ಮೂರು ಸಂದರ್ಭಗಳಲ್ಲಿಯೂ ರಾಜ್ಯದ ದಲಿತ ಸಮುದಾಯದ ವ್ಯಕ್ತಿಯೊಬ್ಬರನ್ನು ಮುಖ್ಯಮಂತ್ರಿ ಮಾಡುವ ಅವಕಾಶ ಕಾಂಗ್ರೆಸಿಗಿತ್ತು. ಮೊಟ್ಟ ಮೊದಲ ವಿಧಾನಸಭೆಯಿಂದ ಆರಂಭಿಸಿ ೨೦೨೩ರ ವಿಧಾನಸಭಾ ಚುನಾವಣೆ ತನಕ ರಾಜ್ಯದ ದಲಿತ ಸಮುದಾಯಗಳು ಕಾಂಗ್ರೆಸ್‌ ಕೈ ಹಿಡಿದು ಮುಂದೆ ತಂದಿವೆ. ಮತ ಸಂಖ್ಯೆಯಲ್ಲಿ ವ್ಯತ್ಯಾಸಗಳಾಗಿರಬಹುದೇ ವಿನಃ ಅದೇನೂ ಗಣನೀಯವಲ್ಲ.

ಕರ್ನಾಟಕ ದಲಿತರ ಈ ಅಪೂರ್ವ ಕಾಣಿಕೆಯನ್ನು ಕೃತಜ್ಞತೆಯಿಂದ ಸ್ಮರಿಸಬೇಕಿದ್ದು ಕಾಂಗ್ರೆಸ್‌ ಹೈ ಕಮಾಂಡ್‌ ಧರ್ಮವಾಗಿತ್ತು. ಆದರೆ ಹೈ ಕಮಾಂಡ್‌ ಸರ್ವೋಚ್ಚ ನಾಯಕ ರಾಹುಲ್‌ ಗಾಂಧಿ ಇದನ್ನು ಮರೆತರು. ರಾಜಕೀಯ ಲೆಕ್ಕಾಚಾರ ಹಾಕುವ ಕೆಲಸವನ್ನೂ ಮಾಡಲಿಲ್ಲ. ೨೦೧೩ರಲ್ಲಿ ಯುಪಿಎ ನೇತೃತ್ವದ ಕೇಂದ್ರ ಸರ್ಕಾರದಲ್ಲಿ ಮಂತ್ರಿಯಾಗಿದ್ದ ಮಲ್ಲಿಕಾರ್ಜುನ ಖರ್ಗೆ ಅವರನ್ನು ಕರೆತಂದು ಮುಖ್ಯಮಂತ್ರಿ ಸ್ಥಾನದಲ್ಲಿ ಕೂರಿಸಬಹುದಾಗಿತ್ತು ಅಥವಾ ಹಿರಿಯ ನಾಯಕ ರೆಡ್ಡಿ ಲಿಂಗಾಯಿತ ಸಮುದಾಯದ ಎಚ್‌ ಕೆ. ಪಾಟೀಲರನ್ನು ಮುಖ್ಯಮಂತ್ರಿ ಮಾಡಬಹುದಾಗಿತ್ತು. ಅಜಾತಶತ್ರು ಗುಣದ ಇವರು ಕಾಂಗ್ರೆಸಿನ ಎಲ್ಲರನ್ನೂ ಒಟ್ಟಿಗೆ ಕರೆದೊಯ್ಯುವ ಸಾಮರ್ಥ್ಯ ಹೊಂದಿರುವವರು.

೨೦೨೩ರ ಚುನಾವಣೆ ಸಂದರ್ಭದಲ್ಲಿ ಎರಡನೇ ಬಾರಿಗೆ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಮಾಡುವ ಅವಶ್ಯಕತೆ ಇರಲಿಲ್ಲ. ಆದರೂ ರಾಹುಲ್‌ ಗಾಂಧಿ ಅವರ ಆಯ್ಕೆ ಇವರೇ ಆದರು. ಕರ್ನಾಟಕದ ದಲಿತರು ಕೊಟ್ಟ ಕೊಡುಗೆಯನ್ನು ಗಮನದಲ್ಲಿಟ್ಟುಕೊಂಡಿದ್ದರೆ ಖಂಡಿತವಾಗಿಯೂ ಜಿ ಪರಮೇಶ್ವರ್‌ ಅವರು ಮೊದಲನೆ ಅವಧಿಗೋ ಅಥವಾ ಎರಡನೇ ಅವಧಿಗೋ ಮುಖ್ಯಮಂತ್ರಿಯಾಗುತ್ತಿದ್ದರು.

ರಾಹುಲ್‌ ಗಾಂಧಿ ಅವರು ತಿಳಿವಳಿಕೆ ಇರುವ ವ್ಯಕ್ತಿ. ಆದರೆ ಅವರಿನ್ನೂ ಸಾಮಾಜಿಕ ಸಂದರ್ಭಗಳನ್ನು ವಿಶ್ಲೇಷಿಸಿ, ಅಳೆದು ತೂಗಿ ನಿರ್ಧಾರ ತೆಗೆದುಕೊಳ್ಳುವ ರಾಜಕಾರಣಿಯಾಗಿಲ್ಲ. ಇದೇ ಕಾಂಗ್ರೆಸಿಗೆ ದೊಡ್ಡ ಹಿನ್ನಡೆ. ಇದೇ ದಲಿತರನ್ನು ಮುಖ್ಯಮಂತ್ರಿ ಆಗಲೇಬೇಕಾದ ಅವಕಾಶದಿಂದ ತಪ್ಪಿಸಿದೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!