ರಾಜಕೀಯ

ದಳಪತಿ ವಿಜಯ್ ಹುಲಿ ಸವಾರಿ ಪೂರ್ಣಾವಧಿ ಸಾಗುವುದೇ

ತಮಿಳುನಾಡು ಟಿವಿಕೆ ಮುಖ್ಯಸ್ಥ ದಳಪತಿ ವಿಜಯ್ ನಾಳೆ ಅಂದರೆ ಮೇ 7ರಂದು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವುದು ಬಹುತೇಕ ಖಚಿತ. ಪ್ರಮಾಣ ವಚನ ಸ್ವೀಕರಿಸಿದ ಕ್ಷಣದಿಂದಲೇ ಅವರು ಹುಲಿ ಬೆನ್ನೇರಿ ಸವಾರಿ ಮಾಡುವುದು ಅನಿವಾರ್ಯ. ಈ ಸವಾರಿಯಲ್ಲಿ ಯಶಸ್ವಿಯಾಗುತ್ತಾರೆಯೇ ಎಂಬುದೇ ದೊಡ್ಡ ಪ್ರಶ್ನೆ.
ವಿಜಯ್ ಪಾಲಿಗೆ ತಮಿಳುನಾಡು ಮುಖ್ಯಮಂತ್ರಿ ಸ್ಥಾನ ಹುಲಿ ಸವಾರಿಯೇ ಏಕೆ ಆಗುತ್ತದೆ ಎಂದರೆ ಅವರ ನೇತೃತ್ವದ ತಮಿಳಿಗ ವೆಟ್ರಿ ಕಳಗಂ (Tamilaga Vettri Kazhagam) ಅರ್ಥಾತ್ ಟಿವಿಕೆ ಚುನಾವಣಾ ಪ್ರಣಾಳಿಕೆ (TVK Party election manifesto) ಆ ರೀತಿ ಇದೆ. ಇದರ ಪ್ರಕಾರ ಸಣ್ಣ, ಮಧ್ಯಮ ಮತ್ತು ದೊಡ್ಡ ಭರವಸೆಗಳೆಲ್ಲ ಸೇರಿ 336 ಭರವಸೆಗಳಿವೆ. ಇವುಗಳನ್ನು ಕೇಳಿದರೆ ಅಬ್ಬಬ್ಬಾ ಎನಿಸುತ್ತದೆ.
ಇವುಗಳನ್ನು ಕೃಷಿ, ಶಿಕ್ಷಣ, ಆರೋಗ್ಯ, ಮಹಿಳಾ ಕಲ್ಯಾಣ, ಯುವ ಸಬಲೀಕರಣ, ಮತ್ತು ಆಡಳಿತ ಸುಧಾರಣೆ ಎಂಬ ವಿವಿಧ ವಿಭಾಗಗಳ ಅಡಿಯಲ್ಲಿ ವಿಂಗಡಿಸಲಾಗಿದೆ. ಪ್ರಣಾಳಿಕೆಯಲ್ಲಿ 336 ಅಂಶಗಳಿದ್ದರೂ ಮತದಾರರಿಗೆ ಸುಲಭವಾಗಿ ನೆನಪಿರಲಿ ಎಂದು ಪಕ್ಷವು ಚುನಾವಣೆಗಾಗಿ ಪ್ರಮುಖ 40 ಗ್ಯಾರಂಟಿಗಳನ್ನು’ಹೈಲೈಟ್ ಮಾಡಿ ಪ್ರಚಾರ ಮಾಡಿದೆ.

tvl

ಟಿವಿಕೆ ಮುಖ್ಯಸ್ಥ ವಿಜಯ್ ಅವರು ಈ ಪ್ರಣಾಳಿಕೆಯನ್ನು ಬಿಡುಗಡೆ ಮಾಡುವಾಗ, “ನಾವು ಜಾರಿಗೆ ತರಲು ಸಾಧ್ಯವಿರುವ ಭರವಸೆಗಳನ್ನು ಮಾತ್ರ ನೀಡಿದ್ದೇವೆ,” ಎಂದು ಸ್ಪಷ್ಟಪಡಿಸಿದ್ದರು.

ಟಿವಿಕೆ (ತಮಿಳಗ ವೆಟ್ರಿ ಕಳಗಂ) ಪಕ್ಷ ಘೋಷಿಸಿರುವ ಭರವಸೆಗಳು ಮತ್ತು ತಮಿಳುನಾಡು ಸರ್ಕಾರದ ಪ್ರಸ್ತುತ ಆರ್ಥಿಕ ಸ್ಥಿತಿಗತಿಯ ನಿಖರ ಅಂಕಿ-ಅಂಶಗಳು ಮುಂದಿವೆ. ಈ ಯೋಜನೆಗಳ ಜಾರಿಗೆ ಬೇಕಾಗುವ ಅಂದಾಜು ಮೊತ್ತ ಬಹಳ ದೊಡ್ಡದಿದೆ.
ಈ ಪ್ರಣಾಳಿಕೆಯಲ್ಲಿನ ಪ್ರಮುಖ ಗ್ಯಾರಂಟಿಗಳು ಮತ್ತು ಭರವಸೆಗಳ ವಿವರ ಇಲ್ಲಿದೆ:
1. ಮಹಿಳೆಯರಿಗಾಗಿ ಗ್ಯಾರಂಟಿಗಳು
ಮಾಸಿಕ ಆರ್ಥಿಕ ನೆರವು: 60 ವರ್ಷದೊಳಗಿನ ಕುಟುಂಬದ ಮುಖ್ಯಸ್ಥ ಮಹಿಳೆಯರಿಗೆ ಪ್ರತಿ ತಿಂಗಳು 2,500 ರೂಪಾಯಿ ಸಹಾಯಧನ. ತಮಿಳುನಾಡಿನಲ್ಲಿ ಸುಮಾರು 2 ಕೋಟಿಗೂ ಹೆಚ್ಚು ಕುಟುಂಬಗಳಿವೆ. ಅರ್ಹ ಮಹಿಳೆಯರನ್ನು ಪರಿಗಣಿಸಿದರೂ ಈ ಒಂದೇ ಯೋಜನೆಗೆ ವರ್ಷಕ್ಕೆ ಅಂದಾಜು 40,000 ರಿಂದ 50,000 ಕೋಟಿ ರೂಪಾಯಿ ಅಗತ್ಯವಿದೆ.
ಉಚಿತ ಎಲ್ಪಿಜಿ: ಪ್ರತಿ ಕುಟುಂಬಕ್ಕೆ ವರ್ಷಕ್ಕೆ 6 ಉಚಿತ ಅಡುಗೆ ಅನಿಲ (LPG) ಸಿಲಿಂಡರ್ಗಳು.
ಮದುವೆ ಉಡುಗೊರೆ: ಬಡ ಕುಟುಂಬದ ವಧುಗಳಿಗೆ ವಿವಾಹದ ಸಂದರ್ಭದಲ್ಲಿ 8 ಗ್ರಾಂ ಚಿನ್ನದ ನಾಣ್ಯ ಮತ್ತು ಗುಣಮಟ್ಟದ ರೇಷ್ಮೆ ಸೀರೆ ವಿತರಣೆ. ಈ ಬಾಬ್ತಿಗೆ ಪ್ರತಿ ವರ್ಷ ಸಾವಿರಾರು ಕೋಟಿ ರೂಪಾಯಿಗಳ ಅಗತ್ಯವಿದೆ.
ಸ್ವಸಹಾಯ ಗುಂಪುಗಳು: ಮಹಿಳಾ ಸ್ವಸಹಾಯ ಗುಂಪುಗಳಿಗೆ 5 ಲಕ್ಷ ರೂಪಾಯಿ ತನಕ ಬಡ್ಡಿರಹಿತ ಸಾಲ.
ಶಿಕ್ಷಣ ಮತ್ತು ಯುವಜನರಿಗಾಗಿ ಭರವಸೆಗಳು
ಶಿಕ್ಷಣ ಭತ್ಯೆ: ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಕಲಿಯುತ್ತಿರುವ ಮಕ್ಕಳ ತಾಯಂದಿರಿಗೆ ಶಾಲಾ ಡ್ರಾಪೌಟ್ ತಡೆಯಲು ವಾರ್ಷಿಕ 15,000 ರೂಪಾಯಿ ನೆರವು. ಇದರಿಂದ ಪ್ರತಿ ವರ್ಷ ಅಂದಾಜು 5,000 – 8,000 ಕೋಟಿ ರೂಪಾಯಿ ಹೊರೆ ಬೀಳಬಹುದು
ಉದ್ಯೋಗಾವಕಾಶ: ರಾಜ್ಯದಲ್ಲಿ 5 ಲಕ್ಷ ಹೊಸ ಸರ್ಕಾರಿ ಉದ್ಯೋಗಗಳ ಸೃಷ್ಟಿ.
ನಿರುದ್ಯೋಗ ಭತ್ಯೆ: ಪದವೀಧರ ನಿರುದ್ಯೋಗಿಗಳಿಗೆ ಮಾಸಿಕ 4,000 ರೂಪಾಯಿ ಮತ್ತು ಡಿಪ್ಲೊಮಾ ಪದವೀಧರರಿಗೆ 2,500 ರೂಪಾಯಿ ಭತ್ಯೆ.
ಉನ್ನತ ಶಿಕ್ಷಣ ಸಾಲ: ವಿದ್ಯಾರ್ಥಿಗಳಿಗೆ 20 ಲಕ್ಷ ರೂಪಾಯಿ ತನಕ ಉನ್ನತ ಶಿಕ್ಷಣ ಸಾಲದ ವ್ಯವಸ್ಥೆ.
ತಂತ್ರಜ್ಞಾನ: ಪ್ರತ್ಯೇಕ ಎಐ (AI) ಸಚಿವಾಲಯ, ಎಐ ವಿಶ್ವವಿದ್ಯಾಲಯ ಮತ್ತು ಎಐ ಸಿಟಿ ಸ್ಥಾಪನೆ.
ರೈತರಿಗಾಗಿ ಭರವಸೆಗಳು
ಸಾಲ ಮನ್ನಾ: 5 ಎಕರೆಗಿಂತ ಕಡಿಮೆ ಭೂಮಿ ಹೊಂದಿರುವ ರೈತರಿಗೆ ಸಂಪೂರ್ಣ ಕೃಷಿ ಸಾಲ ಮನ್ನಾ. 5 ಎಕರೆಗಿಂತ ಹೆಚ್ಚು ಭೂಮಿ ಇರುವವರಿಗೆ 50% ಸಾಲ ಮನ್ನಾ.
ಬೆಂಬಲ ಬೆಲೆ (MSP): ಭತ್ತಕ್ಕೆ ಪ್ರತಿ ಕ್ವಿಂಟಾಲ್ಗೆ 3,500 ರೂಪಾಯಿ ಮತ್ತು ಪ್ರತಿ ಒಂದು ಟನ್ ಕಬ್ಬಿಗೆ 4,500 ರೂಪಾಯಿ ಕನಿಷ್ಠ ಬೆಂಬಲ ಬೆಲೆ ಘೋಷಣೆ.
ಬೆಳೆ ವಿಮೆ: ರೈತರಿಗೆ 100% ಬೆಳೆ ವಿಮೆ ಸೌಲಭ್ಯ.
ಇತರೆ ಪ್ರಮುಖ ಘೋಷಣೆಗಳು
ಆರೋಗ್ಯ: ಪ್ರತಿ ಕುಟುಂಬಕ್ಕೆ 25 ಲಕ್ಷ ರೂಪಾಯಿ ತನಕ ಆರೋಗ್ಯ ವಿಮೆ ಮತ್ತು ಉಚಿತ ವಾರ್ಷಿಕ ಆರೋಗ್ಯ ತಪಾಸಣೆ.
ಪಿಂಚಣಿ: ಹಿರಿಯ ನಾಗರಿಕರಿಗೆ ಮತ್ತು ವಿಕಲಚೇತನರಿಗೆ ಮಾಸಿಕ 3,000 ರೂ. ಪಿಂಚಣಿ.
ಆಡಳಿತ ಸುಧಾರಣೆ: ಭ್ರಷ್ಟಾಚಾರ ಮುಕ್ತ ಆಡಳಿತ, ಸರ್ಕಾರಿ ಸೇವೆಗಳ ಮನೆಬಾಗಿಲಿಗೆ ವಿತರಣೆ ಮತ್ತು ಜಿಲ್ಲಾ ನಿಧಿಯ ಶೇಕಡ 10ರಷ್ಟು ಮೊತ್ತವನ್ನು ಜನರ ಇಚ್ಛೆಯಂತೆ ಖರ್ಚು ಮಾಡುವ ವ್ಯವಸ್ಥೆ.
2025-26ರ ಬಜೆಟ್ ವಿಶ್ಲೇಷಣೆಯ ಪ್ರಕಾರ ಸರ್ಕಾರದ ಆದಾಯ ಸಾಕಾಗುತ್ತದೆಯೇ?
ಪ್ರಸ್ತುತ ಅಂಕಿ-ಅಂಶಗಳನ್ನು ಗಮನಿಸಿದರೆ, ಟಿವಿಕೆ ಘೋಷಿಸಿರುವ ಭರವಸೆಗಳನ್ನು ಈಡೇರಿಸಲು ತಮಿಳುನಾಡು ಸರ್ಕಾರದ ಆದಾಯವು ಸಾಕಾಗುವುದಿಲ್ಲ ಅದಕ್ಕೆ ಪ್ರಮುಖ ಕಾರಣಗಳಿವೆ. ಅವುಗಳ ವಿವರಗಳನ್ನು ನೀಡಲಾಗಿದೆ.

tamilnadu government
ಬದ್ಧ ವೆಚ್ಚಗಳು (Committed Expenditure): ತಮಿಳುನಾಡು ಸರ್ಕಾರವು ತನ್ನ ಒಟ್ಟು ಕಂದಾಯ ಆದಾಯದ ಸುಮಾರು ಶೇಕಡ 62 ರಷ್ಟು ಆದಾಯವನ್ನು ಅಂದರೆ 2,07,054 ಕೋಟಿ ರೂಪಾಯಿಗಳನ್ನು ಕೇವಲ ಸರ್ಕಾರಿ ನೌಕರರ ಸಂಬಳ, ಪಿಂಚಣಿ ಮತ್ತು ಹಳೆಯ ಸಾಲಗಳ ಬಡ್ಡಿ ಪಾವತಿಗೆ ವ್ಯಯಿಸುತ್ತದೆ.
ಹೆಚ್ಚುತ್ತಿರುವ ಕೊರತೆ: ರಾಜ್ಯವು ಈಗಾಗಲೇ 41,635 ಕೋಟಿ ರೂಪಾಯಿ ಕಂದಾಯ ಕೊರತೆಯನ್ನು ಎದುರಿಸುತ್ತಿದೆ. ಅಂದರೆ ಈಗಿನ ಯೋಜನೆಗಳಿಗೆ ಆದಾಯಕ್ಕಿಂತ ವೆಚ್ಚ ಹೆಚ್ಚಾಗಿದೆ.
ಹೊಸ ಹೊರೆ: ಟಿವಿಕೆ (TVK) ಭರವಸೆಗಳನ್ನು ಜಾರಿಗೆ ತರಲು ಕನಿಷ್ಠ 80,000 ಕೋಟಿ ರೂಪಾಯಿಯಿಂದ 1 ಲಕ್ಷ ಕೋಟಿ ಹೆಚ್ಚುವರಿ ವಾರ್ಷಿಕ ಆದಾಯ ಬೇಕಾಗುತ್ತದೆ. ಇದು ರಾಜ್ಯದ ಬಜೆಟ್ ಗಾತ್ರದ ಸುಮಾರು ಶೇಕಡ 25% ರಷ್ಟು ಹೆಚ್ಚುವರಿ ಹೊರೆಯಾಗುತ್ತದೆ.
ಟಿವಿಕೆ ಪಕ್ಷವು ಭ್ರಷ್ಟಾಚಾರ ಮುಕ್ತ ಆಡಳಿತದ ಮೂಲಕ ಆದಾಯ ಹೆಚ್ಚಿಸುವ ಭರವಸೆ ನೀಡಿದ್ದರೂ, ಇಷ್ಟು ಬೃಹತ್ ಮೊತ್ತವನ್ನು ಕ್ರೋಢೀಕರಿಸುವುದು ಕೇವಲ ಆಡಳಿತ ಸುಧಾರಣೆಯಿಂದ ಸಾಧ್ಯವಿಲ್ಲ. ಇದಕ್ಕೆ ಹೊಸ ತೆರಿಗೆಗಳು ಅಥವಾ ಸಾಲದ ಪ್ರಮಾಣವನ್ನು ಗಣನೀಯವಾಗಿ ಹೆಚ್ಚಿಸಬೇಕಾಗುತ್ತದೆ, ಇದು ರಾಜ್ಯದ ಆರ್ಥಿಕ ಶಿಸ್ತಿನ ಮೇಲೆ ಪರಿಣಾಮ ಬೀರಬಹುದು.
ಎಲ್ಲ 336 ಭರವಸೆಗಳನ್ನು ಈಡೇರಿಸಲು ವಾರ್ಷಿಕ 12 ಲಕ್ಷ ಕೋಟಿ ರೂಪಾಯಿ ಬೇಕಾಗಬಹುದು. ಎಲ್ಲ ಭರವಸೆಗಳನ್ನು ಒಮ್ಮೆಲೆ ತಾರದೇ ಹಂತಹಂತವಾಗಿ ಅನುಷ್ಠಾನಗೊಳಿಸಲಾಗುತ್ತದೆ ಎಂದು ಹೇಳಿದ್ದರೂ ಈ ಪರಿಯ ಅಂದರೆ ಬಜೆಟ್ ಗಾತ್ರಕ್ಕಿಂತ 3 ರಿಂದ 4 ಪಟ್ಟು ಹಣವನ್ನು ಎಲ್ಲಿಂದ ಕ್ರೋಢೀಕರಿಸುತ್ತಾರೆ. ಇದು ಕುತೂಹಲದ ಪ್ರಶ್ನೆ.

ಒಂದು ವೇಳೆ ಪ್ರಮುಖ ಗ್ಯಾರಂಟಿಗಳನ್ನು ಈಡೇರಿಸಲಾಗದಿದ್ದರೆ ವಿಶ್ವಾಸಾರ್ಹತೆ ಪ್ರಶ್ನೆ ಎದುರಾಗುತ್ತದೆ. ಮತದಾರರ ನಿಷ್ಠುರತೆ ಜೊತೆಗೆ ಬೆಂಬಲ ನೀಡಿದ ಪಕ್ಷಗಳ ತಕರಾರು ಎದುರಿಸಬೇಕಾಗುತ್ತದೆ. ಇದೇ ನೆಪ ಇಟ್ಟುಕೊಂಡು ಅವರು ಬೆಂಬಲ ಹಿಂತೆಗೆದುಕೊಳ್ಳುವ ಸಾಧ್ಯತೆ ಇದೆ. ಆಗ ಅಲ್ಪಾವಧಿಯ ಸರ್ಕಾರ ಎಂ ಹಣೆಪಟ್ಟಿ ಅಂಟಿಕೊಳ್ಳುತ್ತದೆ. ಮತ್ತೊಮ್ಮೆ ಚುನಾವಣೆಯಲ್ಲಿ ಇದೇ ರೀತಿ ಮತದಾರರ ಬೆಂಬಲ ದೊರೆಯುತ್ತದೆ ಎಂಬುದಕ್ಕೆ ಏನು ಗ್ಯಾರಂಟಿ ?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!