ಶಾಸಕ ಸುರೇಶ್ ಕುಮಾರ್ ನಿಮಗೆ ಉತ್ತರದಾಯಿತ್ವ ಇಲ್ಲವೇ ?
ಬೆಂಗಳೂರು ಮಹಾನಗರದ ರಾಜಾಜಿನಗರ ಕ್ಷೇತ್ರದ ಬಿಜೆಪಿ ಶಾಸಕ ಎಸ್. ಸುರೇಶ್ ಕುಮಾರ್ ಅವರು ಇಂದು “ಜನೌಷಧಿ ಕೇಂದ್ರದ ಮಹತ್ವ ಇದು” ಎಂಬ ಶೀರ್ಷಿಕೆಯೊಂದಿಗೆ ಚಿತ್ರವೊಂದನ್ನು ಹಂಚಿಕೊಂಡಿದ್ದಾರೆ. ಆ ಚಿತ್ರ ನಿಮ್ಮ ನಿಮ್ಮ ಮುಂದಿದೆ. ಅದೇನೆಂದರೆ “ಅಮೆರಿಕಾದಲ್ಲಿ ಸುಮಾರು 86,000 ರೂಪಾಯಿ ಇರುವ ಅದೇ ಔಷಧಿಯು ಭಾರತದಲ್ಲಿ ಕೇವಲ 2,150 ರೂಪಾಯಿಗೆ ಸಿಕ್ಕಿದ್ದನ್ನು ನೋಡಿ ತಾನು ಆಘಾತಕ್ಕೊಳಗಾಗಿದ್ದಾಗಿ ಅಮೆರಿಕಾದ ಮಹಿಳೆಯೊಬ್ಬರು ತಿಳಿಸಿದ್ದಾರೆʼ ಎಂಬ ಒಕ್ಕಣೆ ಇದೆ.
ಮೂಲಭೂತವಾಗಿ ನಮ್ಮ ಮುಂದೆ ಇರುವುದು ಶಾಸಕ ಸುರೇಶ್ ಕುಮಾರ್ ಅವರು ಹಂಚಿಕೊಂಡಿರುವ ಆ ಚಿತ್ರದಲ್ಲಿರುವ ಮಾಹಿತಿ ನಿಜವೇ ಅಥವಾ ಸುಳ್ಳೇ? ಎಂಬುದನ್ನು ತಿಳಿಯುವುದೇ ಆಗಿದೆ. ಸತ್ಯಾಂಶ ಪರಿಶೀಲಿಸಿದಾಗ ಈ ಪೋಸ್ಟ್‌ನಲ್ಲಿರುವ ಮಾಹಿತಿ ಸಂಪೂರ್ಣವಾಗಿ ಸುಳ್ಳು!
ಚಿತ್ರದಲ್ಲಿ ಕೈಯಲ್ಲಿ ಮಾತ್ರೆ ಹಿಡಿದುಕೊಂಡು ಕಾಣಿಸುತ್ತಿರುವ ವಿದೇಶಿ ಮಹಿಳೆ ಅಮೆರಿಕಾದವರಲ್ಲ. ಅವರು ಅನಾಸ್ತಾಸಿಯಾ ಜಿಲೆಂಕೋವಾ (Anastasia Zhilenkova) ಎಂಬ ರಷ್ಯಾದ ಪ್ರಜೆ ಹಾಗೂ ಯೂ ಟ್ಯೂಬರ್, ವಿಡಿಯೋ ಕ್ರಿಯೇಟರ್.

ಅನಾಸ್ತಾಸಿಯಾ ಜಿಲೆಂಕೋವಾ ಅವರು ಭಾರತದ ಜನೌಷಧಿ ಕೇಂದ್ರದ ಬಗ್ಗೆ ಅಥವಾ ಅಮೆರಿಕಾದಲ್ಲಿ 86,000 ರೂ. ಬೆಲೆಯ ಔಷಧಿ ಭಾರತದಲ್ಲಿ 2,150 ರೂ. ಗೆ ಸಿಕ್ಕಿತು ಎಂದು ಎಲ್ಲಿಯೂ ಹೇಳಿಲ್ಲ. ಮೂಲತಃ ಅವರು ತಮ್ಮ ವಿಡಿಯೋವೊಂದರಲ್ಲಿ ಭಾರತದ ಫಾರ್ಮಸಿಗಳಲ್ಲಿ ಅಂದರೆ ಔಷಧ ಅಂಗಡಿಗಳಲ್ಲಿ ಸಿಗುವ ಔಷಧಗಳು ಮತ್ತು ಸಪ್ಲಿಮೆಂಟ್‌ಗಳು ಉದಾಹರಣೆಗೆ ಒಮೆಗಾ-3, ವಿಟಮಿನ್‌ಗಳ ಬೆಲೆಯನ್ನು ವಿದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ತುಂಬಾ ಅಗ್ಗದ ದರದಲ್ಲಿ ಮತ್ತು ಉತ್ತಮ ಗುಣಮಟ್ಟದಲ್ಲಿ ಸಿಗುತ್ತವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದರು.
ಅನಾಸ್ತಾಸಿಯಾ ಜಿಲೆಂಕೋವಾ ಅವರ ಆ ವಿಡಿಯೋದ ಸ್ಕ್ರೀನ್‌ಶಾಟ್ ಅನ್ನು ಬಳಸಿ, ಅದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರ ಚಿತ್ರ ಹಾಗೂ ಜನೌಷಧಿ ಕೇಂದ್ರದ ಬ್ಯಾನರ್ ಅನ್ನು ಡಿಜಿಟಲ್ ಆಗಿ ಎಡಿಟ್ ಮಾಡಿ ಜೋಡಿಸಲಾಗಿದೆ. ಅಮೆರಿಕಾದಲ್ಲಿ 86,000 ರೂ. ಇರುವ ಔಷಧಿ ಇಲ್ಲಿ ಕೇವಲ 2,150 ರೂ. ಗೆ ಸಿಕ್ಕಿತು ಎನ್ನುವ ಕಲ್ಪಿತ ಕಥೆಯನ್ನು ಸುಳ್ಳು ಸುದ್ದಿಯಾಗಿ ಹರಡಲಾಗಿದೆ. ಚಿತ್ರದಲ್ಲಿ ಯಾವುದೇ ನಿರ್ದಿಷ್ಟ ಔಷಧಿಯ ಹೆಸರನ್ನೂ ಉಲ್ಲೇಖಿಸದಿರಲು ಇದೇ ಕಾರಣ.
ಸಜ್ಜನ ರಾಜಕಾರಣಿ ಎಂದೇ ಖ್ಯಾತವಾಗಿರುವ ಶಾಸಕ ಎಸ್. ಸುರೇಶ್ ಕುಮಾರ್ ಅವರು ಇಂತಹ ಪೋಸ್ಟ್‌ಗಳನ್ನು ಏಕೆ ಹಂಚಿಕೊಳ್ಳುತ್ತಾರೆ ಮತ್ತು ಡಿಲೀಟ್ ಮಾಡುತ್ತಾರೆ? ಎಂಬ ಪ್ರಶ್ನೆಯೂ ಎದುರಾಗುತ್ತದೆ. ಬಹುಶಃ ಅವರ ಫೇಸ್ ಬುಕ್ (Facebook) ಅಕೌಂಟ್ ಅನ್ನು ಬೇರೆಯವರು ಹ್ಯಾಂಡಲ್ ಮಾಡುತ್ತಿರಬಹುದು. ಒಂದು ವೇಳೆ ಬೇರೆಯವರು ಹ್ಯಾಂಡಲ್ ಮಾಡಿದರೂ ತಕ್ಷಣ ಶಾಸಕರ ಗಮನಕ್ಕೆ ತರಲೇಬೇಕು. ಗಮನಕ್ಕೆ ತಂದಿದ್ದರೂ ತಾರದಿದ್ದರೂ ಜನರಿಗೆ ಉತ್ತರ ಹೇಳಬೇಕಾದ ಹೊಣೆ ಶಾಸಕರದ್ದೇ ಆಗಿರುತ್ತದೆ.
“ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಗಳಾಗಿದ್ದಾಗ ಅವರ ಪ್ರತಿಮೆಯನ್ನು ಅವರೇ ಅನಾವರಣ ಮಾಡಿದರು” ಎಂಬ ಫೇಕ್ ನ್ಯೂಸ್ ಅನ್ನು ಎಡಿಟೆಡ್ ಫೇಕ್ ಚಿತ್ರದೊಂದಿಗೆ ಇದೇ ಸುರೇಶ್ ಕುಮಾರ್ ಹಂಚಿಕೊಂಡಿದ್ದರು. ನಂತರ ಅದು ಫೇಕ್ ಎಂದು ತಿಳಿದು ಡಿಲೀಟ್ ಮಾಡಿದ್ದರು. ಇದೇ ರೀತಿ ಎರಡು ಮೂರು ಬಾರಿ ಫೇಕ್ ನ್ಯೂಸ್ ಹಂಚಿಕೊಂಡು ಡಿಲೀಟ್ ಮಾಡಿದ್ದಾರೆ.
ಶಾಸಕ ಸುರೇಶ್ ಕುಮಾರ್ ದರ್ಪದಿಂದ ವರ್ತಿಸುವವರಲ್ಲ. ಒಳ್ಳೆಯ ರಾಜಕಾರಣಿ ಎಂಬ ಹೆಸರಿದೆ. ಹೀಗಾಗಿ ಇವರು ಹಂಚಿಕೊಳ್ಳುವ ಸುದ್ದಿಯನ್ನು ಫೇಕ್ ಎಂದು ತಿಳಿಯದೇ ಅವರ ಅಭಿಮಾನಿಗಳು ಶೇರ್ ಮಾಡುತ್ತಾರೆ. ಈ ಔಷಧದ ಸುಳ್ಳು ಸುದ್ದಿಯೇ 700ಕ್ಕೂ ಹೆಚ್ಚು ಬಾರಿ ಶೇರ್ ಆಗಿದೆ. ಅಂದರೆ ಓದುವವರಲ್ಲಿ ಹಲವರು ಅದನ್ನು ನಿಜವೆಂದು ಭಾವಿಸಿದ್ದಾರೆ. ಇದರಿಂದ ಅವರಿಗೆ ತಪ್ಪು ಮಾಹಿತಿ ನೀಡಿದ ಹೊಣೆಗಾರಿಕೆ ಶಾಸಕ ಸುರೇಶ್ ಸುರೇಶ್ ಕುಮಾರ್ ಅವರದ್ದೇ ಆಗಿರುತ್ತದೆ. ಆದ್ದರಿಂದ ಜನರಿಗೆ ಉತ್ತರ ನೀಡಬೇಕಾದ ಜವಾಬ್ದಾರಿ ಇರುವ ಇವರು ಯಾವುದೇ ಒಂದು ಸುದ್ದಿಯನ್ನು ಹೇಳುವ, ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ಮುನ್ನ ಪರಿಶೀಲಿಸಬೇಕು ಅಲ್ಲವೇ ? ನಿಮ್ಮ ಅಭಿಪ್ರಾಯಗಳನ್ನು ಬ್ಲಾಗಿ ಕಾಮೆಂಟ್ ಬಾಕ್ಸಿನಲ್ಲಿ ಹಂಚಿಕೊಳ್ಳಿ
