ರಾಜಕೀಯ

ವಿಜಯ್ ನೇತೃತ್ವದ ಟಿವಿಕೆ ದಲಿತರ ಮೂಲಕ ಮಾಡಿದ ಪವಾಡ ಗಮನಿಸಿದ್ದೀರಾ

ದಳಪತಿ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (TVK) ಪಕ್ಷವು 2026ರ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಮೊದಲ ಪ್ರಯತ್ನದಲ್ಲೇ ಅಭೂತಪೂರ್ವ ಯಶಸ್ಸು ಸಾಧಿಸಿರುವುದು ಒಂದು ದೊಡ್ಡ ರಾಜಕೀಯ ಬದಲಾವಣೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೇ ಇದೇ ಸಮಯದಲ್ಲಿ ಅದು ಮಾತಿಲ್ಲದೇ ಮಾಡಿರುವ ಪವಾಡದ ಬಗ್ಗೆ ಯಾವ ಮಾಧ್ಯಮಗಳೂ ಮಾತನಾಡುತ್ತಿಲ್ಲ.
ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ 108 ಸ್ಥಾನಗಳನ್ನು ಗೆಲ್ಲುವ ಮೂಲಕ ಟಿ.ವಿ.ಕೆ (TVK) ಪ್ರಬಲ ಶಕ್ತಿಯಾಗಿ ಹೊರಹೊಮ್ಮಿದೆ. ಇದರಲ್ಲಿ ಗಮನಾರ್ಹ ಅಂಶವೆಂದರೆ ದಲಿತ ಸಮುದಾಯದ ಅಭ್ಯರ್ಥಿಗಳ ಪ್ರಾತಿನಿಧ್ಯ ಮತ್ತು ಗೆಲುವು. ಇದರಲ್ಲಿ ದಲಿತ ಸಮುದಾಯದ ಅಭ್ಯರ್ಥಿಗಳು ಕೇವಲ ಮೀಸಲು ಕ್ಷೇತ್ರಗಳಲ್ಲಿ ಮಾತ್ರವಲ್ಲದೆ, ಸಾಮಾನ್ಯ ಕ್ಷೇತ್ರಗಳಲ್ಲೂ (General Constituencies) ಸ್ಪರ್ಧಿಸಿ ಗೆಲುವು ಸಾಧಿಸಿರುವುದು ಒಂದು ದಾಖಲೆ. ಸಾಮಾನ್ಯ ಕ್ಷೇತ್ರಗಳಲ್ಲಿ ಟಿವಿಕೆಯಿಂದ 26 ಮಂದಿ ದಲಿತರು ಗೆಲುವಿನ ನಗೆ ಬೀರಿದ್ದಾರೆ.
ಹಲವರಿಗೆ ಇದರ ಮಹತ್ವ ಏನು ಎಂದು ಅನಿಸಬಹುದು. ಭಾರತದ ಇತರ ರಾಜ್ಯಗಳಂತೆ ತಮಿಳುನಾಡು ಸಹ ಒಂದು. ಇಲ್ಲಿಯೂ ಜಾತಿಯತೆ ಇದೆ. ದಲಿತರ ಮೇಲೆ ದೌರ್ಜನ್ಯಗಳು ನಡೆಯುತ್ತವೆ. ಸಾಮಾನ್ಯವಾಗಿ ದಲಿತ ಅಭ್ಯರ್ಥಿಗಳು ಮೀಸಲು ಕ್ಷೇತ್ರಗಳಿಂದ (SC Reserved) ಮಾತ್ರ ಆಯ್ಕೆಯಾಗುತ್ತಾರೆ. ಆದರೆ ವಿಜಯ್ ಅವರು 26 ಸಾಮಾನ್ಯ ಕ್ಷೇತ್ರಗಳಲ್ಲಿ ದಲಿತರನ್ನು ಕಣಕ್ಕಿಳಿಸಿ, ಅವರನ್ನು ಗೆಲ್ಲಿಸುವ ಮೂಲಕ “ಸಾಮಾಜಿಕ ನ್ಯಾಯ”ದ ಹೊಸ ಪ್ರಯೋಗವನ್ನು ಯಶಸ್ವಿಗೊಳಿಸಿದ್ದಾರೆ.
ಈ ಯಶಸ್ಸಿಗೆ ಪ್ರಮುಖ ಕಾರಣಗಳೂ ಇವೆ. ದಳಪತಿ ವಿಜಯ್ ಅವರ ಪಕ್ಷದ ಈ ವಿಶಿಷ್ಟ ಸಾಧನೆಗೆ ಈ ಮುಂದಿನ ಅಂಶಗಳು ಕಾರಣವಾಗಿವೆ ಎಂದು ವಿಶ್ಲೇಷಿಸಲಾಗುತ್ತಿದೆ. ಎಲ್ಲರಿಗೂ ಸಮಾನ ಅವಕಾಶ” ಎಂಬ ಘೋಷಣೆಯೊಂದಿಗೆ, ಜಾತಿ ಸಮೀಕರಣಗಳನ್ನು ಮೀರಿ ಅರ್ಹ ಅಭ್ಯರ್ಥಿಗಳಿಗೆ ಸಾಮಾನ್ಯ ಕ್ಷೇತ್ರಗಳಲ್ಲಿ ಟಿಕೆಟ್ ನೀಡಲಾಗಿತ್ತು. ಇದರಿಂದ ಮುಖ್ಯವಾಗಿ ವಿಜಯ್ ಅವರ ತಾರಾ ವರ್ಚಸ್ಸು ಮತ್ತು ಅವರ ಪಕ್ಷದ ಸಿದ್ಧಾಂತಕ್ಕೆ ಯುವ ಪೀಳಿಗೆ ಹಾಗೂ ದಲಿತ ಯುವಜನತೆ ಭಾರಿ ಬೆಂಬಲ ನೀಡಿತು.ಇದು ಬಹುದೊಡ್ಡ ಸಾಮಾಜಿಕ ಬದಲಾವಣೆ. ಉತ್ತರ ಮತ್ತು ದಕ್ಷಿಣ ತಮಿಳುನಾಡಿನ ಅನೇಕ ಸಾಮಾನ್ಯ ಕ್ಷೇತ್ರಗಳಲ್ಲಿ ದಲಿತ ಮತಗಳು ಮತ್ತು ಅಲ್ಪಸಂಖ್ಯಾತರ ಮತಗಳು ಟಿ.ವಿ.ಕೆ ಪರವಾಗಿ ಕ್ರೋಢೀಕರಣಗೊಂಡಿವೆ.
ಟಿ.ವಿ.ಕೆ ಪಕ್ಷವು ಚೆನ್ನೈ ಸುತ್ತಮುತ್ತಲಿನ ಜಿಲ್ಲೆಗಳಾದ ಕಾಂಚೀಪುರಂ, ತಿರುವಳ್ಳೂರು ಮತ್ತು ಚೆಂಗಲ್ಪಟ್ಟುವಿನಲ್ಲಿ ಕ್ಲೀನ್ ಸ್ವೀಪ್ ಮಾಡಿದೆ. ಕಾಂಚೀಪುರಂ ಜಿಲ್ಲೆಯ ಉತಿರಮೇರೂರು ಮತ್ತು ಕಾಂಚೀಪುರಂ ಕ್ಷೇತ್ರಗಳಲ್ಲಿ ಟಿ.ವಿ.ಕೆ ಅಭ್ಯರ್ಥಿಗಳು ಭಾರಿ ಬಹುಮತದಿಂದ ಗೆದ್ದಿದ್ದಾರೆ.ಅನೇಕ ಕಡೆಗಳಲ್ಲಿ ಡಿ.ಎಂ.ಕೆ ಮತ್ತು ಎ.ಐ.ಎ.ಡಿ.ಎಂ.ಕೆ ನಂತಹ ಸ್ಥಾಪಿತ ಪಕ್ಷಗಳ ಭದ್ರಕೋಟೆಗಳನ್ನು ಈ ಹೊಸ ಪಕ್ಷವು ಭೇದಿಸಿದೆ.
ಟಿ.ವಿ.ಕೆ ಪಕ್ಷದ ಈ 26 ದಲಿತ ಅಭ್ಯರ್ಥಿಗಳ ಗೆಲುವು ತಮಿಳುನಾಡು ರಾಜಕಾರಣದಲ್ಲಿ ಹೊಸ ಸಂಚಲನ ಮೂಡಿಸಿದೆ. ಇದು ಕೇವಲ ಒಂದು ಪಕ್ಷದ ಗೆಲುವಲ್ಲ, ಬದಲಿಗೆ ದಲಿತ ಸಮುದಾಯಕ್ಕೆ ಸಾಮಾನ್ಯ ಕ್ಷೇತ್ರಗಳಲ್ಲೂ ನಾಯಕತ್ವ ನೀಡುವಲ್ಲಿ ವಿಜಯ್ ಯಶಸ್ವಿಯಾಗಿದ್ದಾರೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಸಾಮಾಜಿಕ ಸಮಾನತೆಯ ದೃಷ್ಟಿಯಿಂದ 26 ಸಾಮಾನ್ಯ ಕ್ಷೇತ್ರಗಳಲ್ಲಿ ದಲಿತರನ್ನು ಗೆಲ್ಲಿಸಿ ಹೊಸ ಇತಿಹಾಸ ಬರೆದಿದೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!