Kannadaರಾಜಕೀಯ

ಕಾಕ್ರೋಚ್‌ ಪಾರ್ಟಿ ಆಂದೋಲನ ಯಶಸ್ವಿ ಅಥವಾ ವಿಫಲ ಆಗುತ್ತದೆಯೇ ?

‘ಕಾಕ್ರೋಚ್ ಜನತಾ ಪಾರ್ಟಿ’ ಭವಿಷ್ಯದಲ್ಲಿ ಒಂದು ಗಂಭೀರ ರಾಜಕೀಯ ಅಥವಾ ಸಾಮಾಜಿಕ ಶಕ್ತಿಯಾಗಿ ಬೆಳೆಯುತ್ತದೆಯೇ? ಕೇವಲ ಸಾಮಾಜಿಕ ಮಾಧ್ಯಮ ಟ್ರೆಂಡ್ ಆಗಿ ಮುಕ್ತಾಯವಾಗುತ್ತದೆಯೇ? ಎಂಬ ಪ್ರಶ್ನೆಗಳು ನಮ್ಮ ಮುಂದಿವೆ. ಕೆಲವರು ಕಾಕ್ರೋಚ್‌ ಪಾರ್ಟಿ ಯಶಸ್ವಿಯಾಗುತ್ತದೆ ಎನ್ನುತ್ತಿದ್ದಾರೆ. ಇನ್ನು ಕೆಲವರು ಅದು ವಿಫಲವಾಗುತ್ತದೆ ಎನ್ನುತ್ತಿದ್ದಾರೆ.

“ಈ ಆಂದೋಲನ ಯಶಸ್ವಿಯಾಗುವುದಿಲ್ಲ” ಎಂದು ಕೆಲವರು ಆಡುತ್ತಿರುವ ಮಾತುಗಳನ್ನು ಕೇವಲ ‘ಸಿನಿಕತನ’ ಎಂದು ತಳ್ಳಿಹಾಕಲು ಆಗುವುದಿಲ್ಲ. ಅದರ ಹಿಂದೆ ಭಾರತದ ರಾಜಕೀಯ ಮತ್ತು ಸಾಮಾಜಿಕ ವಾಸ್ತವದ ಕೆಲವು ಪ್ರಮುಖ ಕಾರಣಗಳಿವೆ. ಹಾಗೆಯೇ ಯಶಸ್ವಿಯಾಗುತ್ತದೆ ಎನ್ನುವವರ ಮಾತಿನಲ್ಲಿಯೂ ಹುರುಳಿದೆ. ಸದ್ಯದ ಪರಿಸ್ಥಿತಿಯನ್ನು ವಿಶ್ಲೇಷಿಸಿದರೆ, ಇದು ಗಂಭೀರ ಶಕ್ತಿಯಾಗಲು ಇರುವ ಅವಕಾಶಗಳು ಮತ್ತು ಎದುರಿಸಬೇಕಾದ ಸವಾಲುಗಳು ಸಮಸಮವಾಗಿವೆ.

‘ಕಾಕ್ರೋಚ್’ (ಜಿರಳೆ) ಪಾರ್ಟಿ ಎಂಬ ಹೆಸರೇ ಕೇಳಲು ವಿಚಿತ್ರವಾಗಿದೆ. ಆದರೆ ಸಾಮಾನ್ಯ ಜನರಲ್ಲಿ, ಅದರಲ್ಲಿಯೂ ಯುವಜನತೆಯಲ್ಲಿ ಪ್ರಸ್ತುತ ರಾಜಕೀಯ ವ್ಯವಸ್ಥೆ, ಭ್ರಷ್ಟಾಚಾರ ಮತ್ತು ನಿರುದ್ಯೋಗದ ಮೇಲಿರುವ ಆಕ್ರೋಶವನ್ನು ಇದು ಸಾಂಕೇತಿಸುತ್ತದೆ. ಇಂತಹ ತಳಮಟ್ಟದ ಅಸಮಾಧಾನವನ್ನು ಸರಿಯಾಗಿ ಬಳಸಿಕೊಂಡರೆ ಇದೊಂದು ದೊಡ್ಡ ಸಾಮಾಜಿಕ – ರಾಜಕೀಯ ಚಳವಳಿಯಾಗಬಹುದು.
ಸಾಂಪ್ರದಾಯಿಕ ರಾಜಕೀಯ ಭಾಷಣಗಳಿಗೆ ಮಾರುಹೋಗದ ಇಂದಿನ ಡಿಜಿಟಲ್ ಪೀಳಿಗೆಯನ್ನು (Gen Z ಮತ್ತು Millennials) ಈ ಆಂದೋಲನ ತಲುಪಿದೆ. ಯುವಕರು ತಮಗೆ ತಾವೇ ಕನೆಕ್ಟ್ ಮಾಡಿಕೊಳ್ಳುವಂತಹ ಸಂವಹನ ಶೈಲಿ ಇದರ ದೊಡ್ಡ ಪ್ಲಸ್ ಪಾಯಿಂಟ್ ಎಂಬುದನ್ನು ಮರೆಯಬಾರದು. ಕೇವಲ ಕೆಲವೇ ದಿನಗಳಲ್ಲಿ 2 ಕೋಟಿಗೂ ಹೆಚ್ಚು ಜನರನ್ನು ತಲುಪಿರುವುದು ಡಿಜಿಟಲ್ ನೆಟ್‌ವರ್ಕ್‌ನ ಶಕ್ತಿಯನ್ನು ತೋರಿಸುತ್ತದೆ.
ಇದೇ ಸಂದರ್ಭದಲ್ಲಿ ಕೇವಲ ‘ಸೋಷಿಯಲ್ ಮೀಡಿಯಾ ಟ್ರೆಂಡ್’ ಆಗಿ ಉಳಿಯುವ ಅಪಾಯಗಳು (ಸವಾಲುಗಳು) ಸಹ ಇವೆ. ಸಾಂಸ್ಥಿಕ ಸ್ವರೂಪದ ಸಂಘಟನೆ (Ground-level Organization) ಆಗಿಲ್ಲದಿರುವುದು ಗಮನಾರ್ಹ. ಸಾಮಾಜಿಕ ಜಾಲತಾಣಗಳಲ್ಲಿ ‘ಫಾಲೋವರ್’ ಆಗಿರುವುದು ಬೇರೆ, ನಿಜ ಜೀವನದಲ್ಲಿ ಸಂಘಟನೆ ಮಾಡುವುದು ಬೇರೆ. ಭಾರತದಲ್ಲಿ ರಾಜಕೀಯವಾಗಿ ಯಶಸ್ವಿಯಾಗಲು ಗ್ರಾಮ ಮಟ್ಟದಿಂದ ಹಿಡಿದು ಬೂತ್ ಮಟ್ಟದವರೆಗೆ ಕಾರ್ಯಕರ್ತರ ಪಡೆ ಬೇಕು. ಕೇವಲ ಡಿಜಿಟಲ್‌ ನೆಲೆಯಲ್ಲಿ ರಾಜಕೀಯ ಮಾಡುವುದಾಗಲಿ ಅಥವಾ ಚುನಾವಣೆ ಎದುರಿಸುವುದಾಗಲಿ ಅಸಾಧ್ಯ.
ಕೇವಲ ವ್ಯವಸ್ಥೆಯನ್ನು ಟೀಕಿಸುವುದರಿಂದ ಅಥವಾ ಮೀಮ್‌ಗಳನ್ನು ಮಾಡುವುದರಿಂದ ಆಂದೋಲನಗಳು ದೀರ್ಘಕಾಲ ಉಳಿಯುವುದಿಲ್ಲ. “ನಮ್ಮ ಮುಂದಿನ ಯೋಜನೆ ಏನು? ನಾವು ಅಧಿಕಾರಕ್ಕೆ ಬಂದರೆ ಏನು ಮಾಡುತ್ತೇವೆ?” ಎಂಬ ಸ್ಪಷ್ಟ ಸಿದ್ಧಾಂತ ಮತ್ತು ರೋಡ್‌ಮ್ಯಾಪ್ ಇಲ್ಲದಿದ್ದರೆ ಜನರ ಆಸಕ್ತಿ ಬೇಗನೆ ಕಡಿಮೆಯಾಗುತ್ತದೆ ಎಂಬುದನ್ನಂತೂ ತಳ್ಳಿ ಹಾಕಲು ಸಾಧ್ಯವಿಲ್ಲ.

ಯಾವುದೇ ಒಂದು ಆಂದೋಲನ ಯಶಸ್ವಿಯಾಗಲು ಮುಖವಾಣಿಯಾಗಿ ನಿಲ್ಲುವ, ನಂಬಿಕಸ್ಥ ಮತ್ತು ಪ್ರಭಾವಿ ನಾಯಕತ್ವದ ಅಗತ್ಯವಿದೆ. ಡಿಜಿಟಲ್ ಮಾಧ್ಯಮದಲ್ಲಿ ಮುಖವಿಲ್ಲದ (anonymous) ಪ್ರೊಫೈಲ್‌ಗಳ ಹಿಂದೆ ಜನತೆ ಹೆಚ್ಚು ದಿನ ನಿಲ್ಲುವುದಿಲ್ಲ.

ಇವೆಲ್ಲದರ ನಡುವೆಯೂ ಭರವಸೆ ಹೊಂದಲೂ ಆಧಾರವಿದೆ. ಭ್ರಷ್ಟಾಚಾರದ ವಿರುದ್ಧ ಹುಟ್ಟಿಕೊಂಡ ಆಂದೋಲನದಿಂದ ‘ಆಮ್ ಆದ್ಮಿ ಪಾರ್ಟಿ’ (AAP) ದೆಹಲಿ ನಂತರ ಪಂಜಾಬಿನಲ್ಲಿ ಅಧಿಕಾರ ಹಿಡಿದ ಉದಾಹರಣೆ ಇದೆ. ಅದೇ ರೀತಿ, ಈ ‘ಕಾಕ್ರೋಚ್ ಜನತಾ ಪಾರ್ಟಿ’ ಕೇವಲ ಆಕ್ರೋಶ ವ್ಯಕ್ತಪಡಿಸುವ ವೇದಿಕೆಯಾಗಷ್ಟೇ ಉಳಿಯದೆ ಅದಕ್ಕೊಂದು ಸಾಂಸ್ಥಿಕ ರೂಪ (Institutional shape), ಸ್ಪಷ್ಟ ನಾಯಕತ್ವ, ನಿದಿರ್ಷ್ಟ ಕಾರ್ಯಸೂಚಿ ದೊರೆತರೆ ಭವಿಷ್ಯದಲ್ಲಿ ಸಾಮಾಜಿಕ ರಾಜಕೀಯ ಶಕ್ತಿಯಾಗಿ ಬದಲಾಗುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಹೀಗೆ ಆಗದಿದ್ದರೆ ಸಾಮಾಜಿಕ ಮಾಧ್ಯಮಗಳಲ್ಲಿ ಬಂದು ಹೋಗುವ ನೂರಾರು “ವೈರಲ್ ಟ್ರೆಂಡ್”‌ಗಳಂತೆ ಇದೂ ಕೂಡ ಇತಿಹಾಸದ ಪುಟ ಸೇರಬಹುದು ಅಷ್ಟೆ !!

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!