Kannadaಪರಿಸರ

ಕೆರೆಗೆ ವೈದ್ಯಕೀಯ ತ್ಯಾಜ್ಯ;  ಕ್ರಿಮಿನಲ್ ಮೊಕದ್ದಮೆ ದಾಖಲು

ನೆಲಮಂಗಲ, ಜೂ.19: ಕೆರೆಗಳು, ನದಿ, ಸರೋವರ ಸೇರಿದಂತೆ ಜಲ ಮೂಲಗಳಿಗೆ ವೈದ್ಯಕೀಯ ತ್ಯಾಜ್ಯ, ಇ-ತ್ಯಾಜ್ಯ ಸುರಿದು ಕಲುಷಿತಗೊಳಿಸುವವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡುವಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಬಿ ಖಂಡ್ರೆ  ಸೂಚನೆ ನೀಡಿದರು.

ನೆಲಮಂಗಲ ತಾಲೂಕು ಯಂಟಗಾನಹಳ್ಳಿ ಗ್ರಾಮ ಪಂಚಾಯ್ತಿಗೆ ಇಂದು ಅವರು ದಿಢೀರ್ ಭೇಟಿ ನೀಡಿದರು. ಈ ಸಂದರ್ಭದಲ್ಲಿ ತಮ್ಮ ಗ್ರಾಮದ ಕೆರೆಯಲ್ಲಿ ವೈದ್ಯಕೀಯ ತ್ಯಾಜ್ಯ ಸುರಿಯಲಾಗುತ್ತಿದೆ ಎಂದು ಗ್ರಾಮಸ್ಥರು ದೂರಿದರು. ಅದಕ್ಕೆ  ಸ್ಪಂದಿಸಿ ಪೊಲೀಸ್ ಠಾಣೆಯಲ್ಲಿ ಆರೋಪಿಗಳ ವಿರುದ್ಧ ದೂರು ದಾಖಲಿಸುವಂತೆ ತಾಲೂಕು ಕಾರ್ಯನಿರ್ವಹಣಾಧಿಕಾರಿಗಳಿಗೆ ಸೂಚಿಸಿದರು.

ಜನರ ಕುಂದು ಕೊರತೆ ವಿಚಾರಿಸಿದ ಸಚಿವರು, 15 ದಿನಗಳಲ್ಲಿ 11 ಬಿ ಅರ್ಜಿಗಳ ವಿಲೆಗೂ ಸೂಚನೆ ನೀಡಿದರು. ಪಂಚಾಯ್ತಿ ಅಧಿಕಾರಿ, ಸಿಬ್ಬಂದಿಗಳ ಹಾಜರಾತಿ ಪುಸ್ತಕ ಪರಿಶೀಲಿಸಿದ ಅವರು, ನಿಗದಿತ ಸಮಯಕ್ಕೆ ಅಧಿಕಾರಿ, ಸಿಬ್ಬಂದಿ ಕಚೇರಿಗೆ ಆಗಮಿಸಬೇಕು, ಜನಸ್ನೇಹಿಯಾಗಿ ಕೆಲಸ ಮಾಡಬೇಕು. ವಿನಃ ಕಾರಣ ಗ್ರಾಮಸ್ಥರನ್ನು ಪಂಚಾಯ್ತಿ ಕಚೇರಿಗೆ ಅಲೆಸಬಾರದು ಎಂದು ನಿರ್ದೇಶಿಸಿದರು.

ಇ-ಸ್ವತ್ತು ನೀಡಿಕೆಯಲ್ಲಿ ಅನಗತ್ಯ ವಿಳಂಬವಾಗುತ್ತಿದೆ ಎಂಬ ಬಗ್ಗೆ ಪ್ರತಿಕ್ರಿಯಿಸಿದ ಅವರು, ತಾಂತ್ರಿಕ ಸಮಸ್ಯೆ ಇದ್ದರೆ ಮೇಲಧಿಕಾರಿಗಳ ಗಮನಕ್ಕೆ ತನ್ನಿ. ಎಲ್ಲ ದಾಖಲೆ ಸಮರ್ಪಕವಾಗಿದ್ದಲ್ಲಿ, ಕಾಲಮಿತಿಯಲ್ಲಿ ಇ-ಸ್ವತ್ತು ದಾಖಲಾತಿ ನೀಡಿ ಎಂದು ಸೂಚಿಸಿದರು.

ಬಳಿಕ, ಹoಚಿಪುರ ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಭೇಟಿ ನೀಡಿ, ನೀರಿನ ಗುಣಮಟ್ಟ ಪರಿಶೀಲಿಸಿದರು. ಜಲ ಶುದ್ಧಿಗೆ ಬಳಸುವ ಮೆಂಬರೇನ್ ಗಳನ್ನು ನಿಯಮಿತವಾಗಿ ಬದಲಾಯಿಸಬೇಕು, ನೀರಿನ ಗುಣಮಟ್ಟದ ಪರೀಕ್ಷೆ ನಡೆಸಬೇಕು. ನೀರಿನಿಂದ ಗ್ರಾಮದ ಜನರ ಆರೋಗ್ಯದ ಮೇಲೆ ಪರಿಣಾಮ ಆಗದಂತೆ ಕಟ್ಟೆಚ್ಚರ ವಹಿಸಿ ಎಂದರು.

ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿ, ಮಕ್ಕಳಿಗೆ ನೀಡಲಾಗುತ್ತಿರುವ ಊಟದ ಗುಣಮಟ್ಟ ಪರಿಶೀಲಿಸಿದರು. ಶೌಚಾಲಯಗಳಲ್ಲಿ ನೀರಿನ ವ್ಯವಸ್ಥೆ, ಶುಚಿತ್ವ ಇದೆಯೇ ಎಂಬ ಬಗ್ಗೆ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳು, ತಾಲೂಕು ಕಾರ್ಯನಿರ್ವಹಣಾಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಬೇಕು ಎಂದು ಆದೇಶಿಸಿದರು.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!