Kannadaಸಿನಿಮಾ

ಪ್ರತಿಷ್ಠಿತ ಫಿಪ್ರೆಸ್ಕಿ ಪುರಸ್ಕಾರ ಪಡೆದ ಕನ್ನಡ ಚಿತ್ರ ನಿರ್ದೇಶಕ

ಕನ್ನಡದ ಹೆಮ್ಮೆಯ ಚಲನಚಿತ್ರ ನಿರ್ದೇಶಕ ಪ್ರದೀಪ್ ಕೆಂಚನೂರು (Pradeep Kenchanuru) ಅವರು ಜಾಗತಿಕ ಮಟ್ಟದ ಚಿತ್ರರಂಗದಲ್ಲಿ ಗಮನಾರ್ಹ ಸಾಧನೆ ಮಾಡಿದ್ದಾರೆ. ಮುಂಬೈನಲ್ಲಿ ನಡೆದ ಪ್ರತಿಷ್ಠಿತ 19ನೇ ಮುಂಬೈ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ (19th Mumbai International Film Festival – MIFF 2026) ದಲ್ಲಿ ಅವರ ನಿರ್ದೇಶನದ ಚಿತ್ರಕ್ಕೆ ಮಹತ್ವದ ಅಂತಾರಾಷ್ಟ್ರೀಯ ಪ್ರಶಸ್ತಿ ಲಭಿಸಿದೆ.
ರಾಷ್ಟ್ರೀಯ ಸ್ಪರ್ಧಾ (National Competition) ವಿಭಾಗದಲ್ಲಿ ಪ್ರದೀಪ್ ಕೆಂಚನೂರು ಅವರ “ದಿ ಹಗ್ ಆಫ್ ಎಂಪ್ಟಿನೆಸ್” (The Hug of Emptiness) ಎಂಬ ಕೃತಿಗೆ ಗೌರವಾನ್ವಿತ “ದಿ ಫಿಪ್ರೆಸ್ಕಿ ಅಂತಾರಾಷ್ಟ್ರೀಯ ವಿಮರ್ಶಕರ ಪ್ರಶಸ್ತಿ” (The FIPRESCI International Critics Prize) ಲಭಿಸಿದೆ. ಅಂತರಾಷ್ಟ್ರೀಯ ಚಿತ್ರರಂಗದ ಪ್ರಖ್ಯಾತ ವಿಮರ್ಶಕರು ನೀಡುವ ಈ ಪ್ರಶಸ್ತಿಯು ಜಾಗತಿಕ ಮಟ್ಟದಲ್ಲಿ ಅತ್ಯಂತ ಪ್ರತಿಷ್ಠಿತ ಎಂದು ಖ್ಯಾತವಾಗಿದೆ.
ಈ ಪ್ರಶಸ್ತಿಯು ಭಾರತೀಯ ಪ್ರಾದೇಶಿಕ ಸಿನಿಮಾಗಳಿಗೆ ಮತ್ತು ವಿಶೇಷವಾಗಿ ಕನ್ನಡದ ಪ್ರತಿಭೆಗಳಿಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ದೊರೆತ ಬಹುದೊಡ್ಡ ಮಾನ್ಯತೆಯಾಗಿದೆ. ವಿಶ್ವದಾದ್ಯಂತ ನೂರಾರು ಅತ್ಯುತ್ತಮ ಸಾಕ್ಷ್ಯಚಿತ್ರಗಳು ಮತ್ತು ಕಿರುಚಿತ್ರಗಳು ಸ್ಪರ್ಧಿಸುವ ಈ ವೇದಿಕೆಯಲ್ಲಿ ಪ್ರದೀಪ್ ಕೆಂಚನೂರು ಅವರ ಸಿನಿಮಾ ಈ ಸಾಧನೆ ಮಾಡಿರುವುದು ಇಡೀ ದೇಶಕ್ಕೆ ಮತ್ತು ಚಿತ್ರರಂಗಕ್ಕೆ ಹೆಮ್ಮೆಯ ವಿಷಯವಾಗಿದೆ.
ಈ ಪ್ರತಿಷ್ಠಿತ ಚಲನಚಿತ್ರೋತ್ಸವವನ್ನು ಭಾರತ ಸರ್ಕಾರದ ಮಾಹಿತಿ ಮತ್ತು ಪ್ರಸಾರ ಸಚಿವಾಲಯ (Ministry of Information and Broadcasting) ಹಾಗೂ ಎನ್ಎಫ್ಡಿಸಿ (NFDC – National Film Development Corporation) ಜಂಟಿಯಾಗಿ ಆಯೋಜಿಸಿದ್ದವು.

ಪ್ರದೀಪ್‌ ಕೆಂಚನೂರು ಅವರು ಉಡುಪಿ ಜಿಲ್ಲೆಯಲ್ಲಿ ಇತಿಹಾಸದ ಪ್ರಾಧ್ಯಾಪಕರಾಗಿ ಕೆಲಸ ಮಾಡುತ್ತಿದ್ದಾರೆ. ಸಿನಿಮಾ ಇವರ ಅತ್ಯಂತ ಆಸಕ್ತಿಯ ಕ್ಷೇತ್ರ. ಸಿನಿಮಾಗಳ ಧ್ವನಿಗ್ರಹಣದ ಬಗ್ಗೆ ಅಧಿಕೃತವಾಗಿ ಮಾತನಾಡುತ್ತಾರೆ. ಕರ್ನಾಟಕದಲ್ಲಿ ಸಿನಿಮಾ ಚಳವಳಿಯನ್ನು ತನ್ನದೇ ಆದ ರೀತಿಯಲ್ಲಿ ಮಾಡುತ್ತಿರುವ “ಮನುಜಮತ ಸಿನಿಯಾನ” ಬಳಗದ ಸಕ್ರಿಯ ಸದಸ್ಯರು.

ಮುಖಪುಟ ಚಿತ್ರದ ವಿವರ: ಪ್ರದೀಪ್ ಕೆಂಚನೂರು ಅವರು ಪ್ರಶಸ್ತಿಯ ಅಧಿಕೃತ ಪ್ರಮಾಣಪತ್ರವನ್ನು ಪಡೆಯುತ್ತಿರುವುದು  (ಚಿತ್ರದ ಬಲಭಾಗದಲ್ಲಿ ನಿಂತಿರುವವರು)

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!