ಪತ್ರಕರ್ತರು, ಮಾಧ್ಯಮ ಸಿಬ್ಬಂದಿ ಅಥವಾ ಅವರ ಕುಟುಂಬಗಳಲ್ಲಿ ನಿಧನ, ಶಾಶ್ವತ ಅಂಗವೈಕಲ್ಯ, ಗಂಭೀರ ಕಾಯಿಲೆಗಳು ಮತ್ತು ಅಪಘಾತ-ಸಂಬಂಧಿತವಾಗಿ ಆಸ್ಪತ್ರೆಗೆ ದಾಖಲಾದಾಗ, ತೀವ್ರ ತೊಂದರೆ ಉಂಟಾದರೆ ತುರ್ತು ಆಧಾರದ ಮೇಲೆ ಒಂದು ಬಾರಿ ಪರಿಹಾರವನ್ನು ಒದಗಿಸಲು ಕೇಂದ್ರ ಸರ್ಕಾರವು ಪತ್ರಕರ್ತರ ಕಲ್ಯಾಣ ಯೋಜನೆ (JWS) ಅನ್ನು ಜಾರಿಗೊಳಿಸುತ್ತದೆ ಎಂದು ವಾರ್ತಾ ಮತ್ತು ಪ್ರಸಾರ ಮತ್ತು ಸಂಸದೀಯ ವ್ಯವಹಾರಗಳ ರಾಜ್ಯ ಸಚಿವ ಡಾ. ಎಲ್. ಮುರುಗನ್ ತಿಳಿಸಿದ್ದಾರೆ.
ಅವರಿಂದು ಸಂಸದ ದಾಮೋದರ್ ಅಗರ್ವಾಲ್ ಕೇಳಿದ ಪ್ರಶ್ನೆಗೆ ಲಿಖಿತ ಉತ್ತರದಲ್ಲಿ ಈ ಮಾಹಿತಿಯನ್ನು ನೀಡಿದ್ದಾರೆ. ಪತ್ರಿಕಾ ಮಾಹಿತಿ ಬ್ಯೂರೋ ಮತ್ತು ರಾಜ್ಯ/ಕೇಂದ್ರಾಡಳಿತ ಪ್ರದೇಶ ಸರ್ಕಾರಗಳಿಂದ ಮಾನ್ಯತೆ ಪಡೆದ ಪತ್ರಕರ್ತರು ಹಾಗೂ ಮಾನ್ಯತೆ ಪಡೆಯದ ಪತ್ರಕರ್ತರು ಈ ಯೋಜನೆಯ ವ್ಯಾಪ್ತಿಗೆ ಬರುತ್ತಾರೆ ಎಂದು ಹೇಳಿದ್ದಾರೆ.
ಜೆಡಬ್ಲ್ಯೂಎಸ್ ಯೋಜನೆಯಡಿಯಲ್ಲಿ, ಸರ್ಕಾರವು 2014-15 ರಿಂದ 2025-26 ರವರೆಗೆ 456 ಪತ್ರಕರ್ತರು/ಮಾಧ್ಯಮ ಸಿಬ್ಬಂದಿ ಅಥವಾ ಅವರ ಕುಟುಂಬಗಳಿಗೆ 19.41 ಕೋಟಿ ರೂಪಾಯಿಗಳ ಆರ್ಥಿಕ ಸಹಾಯವನ್ನು ಒದಗಿಸಿದೆ.
ಪತ್ರಿಕಾ ಮಾಹಿತಿ ಬ್ಯೂರೋ (PIB) ಯೊಂದಿಗೆ ಮಾನ್ಯತೆ ಪಡೆದ ಪತ್ರಕರ್ತರು ದೇಶಾದ್ಯಂತ ಕೇಂದ್ರ ಸರ್ಕಾರದ ಆರೋಗ್ಯ ಯೋಜನೆ (CGHS) ಸೌಲಭ್ಯಗಳ ಅಡಿಯಲ್ಲಿ ತಮಗೆ ಮತ್ತು ಅವರ ಕುಟುಂಬ ಸದಸ್ಯರಿಗೆ ಸೌಲಭ್ಯ ಪಡೆಯಬಹುದಾಗಿದೆ. ಇದರಲ್ಲಿ ಸರ್ಕಾರಿ/ಸಿಜಿಎಚ್‌ಎಸ್ ಪಟ್ಟಿಯಲ್ಲಿರುವ ಖಾಸಗಿ ಆಸ್ಪತ್ರೆಗಳಲ್ಲಿ ಸಿಜಿಎಚ್‌ಎಸ್ ದರದಲ್ಲಿ ಚಿಕಿತ್ಸೆಯೂ ಸೇರಿದೆ ಎಂದು ಮಾಹಿತಿ ನೀಡಲಾಗಿದೆ. ರಾಷ್ಟ್ರೀಯ ರಾಜಧಾನಿ ಪತ್ರಕರ್ತರಿಗೆ ಪತ್ರಿಕಾ ಮಾಹಿತಿ ಬ್ಯೂರೋ ಮಾನ್ಯತೆ ನೀಡುತ್ತದೆ.
