ಸಿನಿಮಾ

ಹದಿಹರೆಯದ ತುಮುಲಗಳ ಸಶಕ್ತ ಚಿತ್ರಣ

ಸ್ಲೊವೇನಿಯಾ ದೇಶದ ಲಿಟಲ್ ಟ್ರಬಲ್ ಗರ್ಲ್ಸ್ (Little Trouble Girls) ಧಾರ್ಮಿಕ ನಿಯಂತ್ರಣ ನೆರಳಿನಲ್ಲಿ ಹದಿ ಹರೆಯದ ತಲ್ಲಣಗಳ ಕಥೆಯನ್ನು ಹೇಳುತ್ತದೆ. ಇದನ್ನು ನಿರ್ದೇಶಕಿ ಉರ್ಶ್ಕಾ ಜುಕಿಕ್ ಅವರು ಹೇಳೀರುವ ರೀತಿಯೇ ಅನನ್ಯ ! ಏಕೆಂದರೆ ಹದಿ ಹರೆಯದ ತಳಮಳಗಳನ್ನು ಕಟ್ಟಿಕೊಡುವುದು ಅಷ್ಟು ಸುಲಭವಲ್ಲ. ಯಾವುದೇ ಕ್ಷಣದಲ್ಲಿಯೂ ಅದು ಹಳಿ ತಪ್ಪುವ ಸಾಧ್ಯತೆ ಇರುತ್ತದೆ. ಇಂಥ ಅಪಾಯಗಳನ್ನು ಸಿನಿಮಾ ಮೀರಿರುವುದು ಗಮನಾರ್ಹ.

ಅಂತರ್ಮುಖಿ ವ್ಯಕ್ತಿತ್ವದ 16 ವರ್ಷದ ಬಾಲಕಿ ಲೂಸಿಜಾ ಪೋಷಕರ ಒತ್ತಾಯದಿಂದ ಕ್ಯಾಥೋಲಿಕ್ ಶಾಲೆಯ ಹುಡುಗಿಯರ ಚಾಯರ್ಗೆ ಸೇರುತ್ತಾಳೆ. ಇಲ್ಲಿಂದ ಕಥೆ ತೆರೆದುಕೊಳ್ಳುತ್ತದೆ. ಅಲ್ಲಿ ಬಹಿರ್ಮುಖಿ ವ್ಯಕ್ತಿತ್ವದ ವಿದ್ಯಾರ್ಥಿನಿ ಆನಾ-ಮರಿಜಾ ಜೊತೆ ಸ್ನೇಹ ಬೆಳೆಯುತ್ತದೆ. ಲೂಸಿಜಾ ವ್ಯಕ್ತಿತ್ವದ ಮೇಲೆ ಆನಾ-ಮರಿಜಾ ವ್ಯಕ್ತಿತ್ವದ ಪ್ರಭಾವವೂ ಉಂಟಾಗುತ್ತದೆ. ಇದು ಯಾವ ರೀತಿ ಪರಿಣಾಮ ಬೀರುತ್ತದೆ ಎಂಬುದು ಕುತೂಹಲಕಾರಿ !

ತನ್ನೊಳಗೆ ತೀವ್ರವಾಗಿ ನಡೆಯುವ ತುಮುಲಗಳ ಕಾರಣಗಳಿಂದ ಕಾನ್ವೆಂಟ್ನಲ್ಲಿ ನಡೆಯುವ ರಿಹರ್ಸಲ್ ರಿಟ್ರೀಟ್ನಲ್ಲಿ ಲೂಸಿಜಾ ಏಕಾಗ್ರತೆ ಕಳೆದುಕೊಳ್ಳುತ್ತಾಳೆ. ಲೈಂಗಿಕ ಜಾಗೃತಿ, ಸ್ನೇಹ, ಆಕರ್ಷಣೆ ಮತ್ತು ಧಾರ್ಮಿಕ ನಿಯಂತ್ರಣ ಮೀರುತ್ತಿದ್ದೇನೆಯೇ ಎಂಬ ಭಾವನೆಗಳ ತಳಮಳ ಉಂಟಾಗುತ್ತದೆ. ಇದರಿಂದ ಹೊರಬರುವಲ್ಲಿ ಆಕೆ ಯಶಸ್ವಿಯಾಗುತ್ತಾಳೆಯೇ? ಆನಾ-ಮರಿಜಾ ವ್ಯಕ್ತಿತ್ವದ ಪ್ರಭಾವದಿಂದ ಹೊರ ಬರುತ್ತಾಳೆಯೇ? ಈ ಮನೋದೈಹಿಕ ಸಂಘರ್ಷದ ತಲ್ಲಣಗಳನ್ನು ಚಿತ್ರ ಅರೆ ವಾಚ್ಯ ಮತ್ತು ರೂಪಕಗಳ ನಡುವೆ ಕಟ್ಟಿ ಕೊಡುತ್ತದೆ.

Little Trouble Girls Picture 1

ಹದಿಹರೆಯದ ಹುಡುಗಿಯರ ಸುತ್ತಲಿನ ಧಾರ್ಮಿಕ ಒತ್ತಡದ ಪರಿಸರ, ಚಾಯರ್ನಲ್ಲಿ ಏಕರೂಪತೆಯ ಒತ್ತಡ, ಹೂಗಳ ಪರಾಗಸ್ಪರ್ಶದ ಮಾಂಟೇಜ್ಗಳು, ಒಡೆದ ಮೇರಿ ಪ್ರತಿಮೆ ಇವೆಲ್ಲ ರೂಪಕಗಳು ಲೈಂಗಿಕತೆ ಮತ್ತು ಪಾಪ ಭಾವನೆಯ ನಡುವಿನ ಗೊಂದಲವನ್ನು ಅತ್ಯಂತ ಸೂಕ್ಷ್ಮವಾಗಿ ಚಿತ್ರಿಸುತ್ತವೆ.

ಮುಖ್ಯವಾಗಿ ಲಿಟಲ್ ಟ್ರಬಲ್ ಗರ್ಲ್ಸ್ (Little Trouble Girls) ಸಾಮಾನ್ಯ ಕಮಿಂಗ್ ಆಫ್ ಏಜ್ ಕಥೆಯಷ್ಟು ಸರಳವಲ್ಲ. ಹದಿಹರೆಯದ ಹಾರ್ಮೋನುಗಳು, ಭಾವನೆಗಳು, ಗ್ರಹಿಕೆಗಳು, ಪೂರ್ವಾಗ್ರಹಗಳು ಮತ್ತು ಧಾರ್ಮಿಕ ಪರಿಸರದ ಕಟ್ಟುಪಾಡುಗಳ ಸುತ್ತಲಿನ ಸೂಕ್ಷ್ಮ ಕಥನ ಎಂಬುದನ್ನು ಗಮನಿಸಬೇಕು.

ಸಿನಿಮಾದ ಕಥೆಯ ಮುಖ್ಯ ಆಶಯವೇ ದೇಹದ ಸಹಜ ಬುದ್ಧಿಮತ್ತೆ (instinctual intelligence of the body) ಯನ್ನು ಕೇಳುವುದು ಜೊತೆಗೆ ಅದನ್ನು ಒಪ್ಪಿಕೊಳ್ಳುವುದು ಎನಿಸುತ್ತದೆ. ಕ್ಯಾಥೋಲಿಕ್ ಧರ್ಮ, ಪಿತೃಪ್ರಧಾನ ಸಮಾಜ ಮತ್ತು ಸಾಮಾಜಿಕ ಪರಿಸರದಲ್ಲಿ “ಒಳ್ಳೆಯ ಹುಡುಗಿ” ಎನಿಸಿಕೊಳ್ಳಬೇಕಾದ ಒತ್ತಡಗಳು, ಇವೆಲ್ಲ ಸಾಮಾಜಿಕ – ಧಾರ್ಮಿಕ ನಿಯಮಗಳು ಹದಿಹರೆಯದವರ ಲೈಂಗಿಕತೆ, ಬಯಕೆ ಮತ್ತು “wilder, instinctive side” ಅನ್ನು ಅಪರಾಧವೆಂದು ತೋರಿಸಿ ದಮನ ಮಾಡುತ್ತವೆ ಎಂದು ಹೇಳಲು ಹೊರಟಿದೆ.

ಸಿನಿಮಾದಲ್ಲಿ ಸೂಕ್ಷ್ಮ ಮತ್ತು ಸಂಕೇತಾತ್ಮಕವಾದ ಅನೇಕ ದೃಶ್ಯಗಳಿವೆ. ಅವುಗಳಲ್ಲಿ ವರ್ಜಿನ್ ಮೇರಿಯ ಪ್ರತಿಮೆಯನ್ನು ಬಹು ಶಕ್ತಿಶಾಲಿ ರೂಪಕವಾಗಿ ಬಳಸಿರುವುದು. ಚಾಯರ್ ಗುಂಪಿನ ಆಪ್ತ ವಿದ್ಯಾರ್ಥಿನಿಯರು ಟ್ರೂತ್-ಆರ್-ಡೇರ್ ಆಟ ಆಡುತ್ತಾರೆ. ಈ ಸಂದರ್ಭದಲ್ಲಿ ಲೂಸಿಜಾ “ಕಾನ್ವೆಂಟ್ನಲ್ಲಿರುವ ಅತ್ಯಂತ ಸುಂದರಿ ಹುಡುಗಿಯನ್ನು ಪ್ಯಾಶನೇಟ್ ಆಗಿ ಕಿಸ್ ಮಾಡು” ಎಂದು ಡೇರ್ ಪಡೆಯುತ್ತಾಳೆ.

ಲೂಸಿಜಾ ಆಯ್ಕೆ “ಒಡೆದ ಕೈಯಿರುವ ಮೇರಿ ಪ್ರತಿಮೆ” !! ಈ ಪ್ರತಿಮೆಯ ತುಟಿಗಳನ್ನು ಗಾಢವಾಗಿ ಚುಂಬಿಸುತ್ತಾಳೆ. ಬಹುಶಃ ಇದು ಮಾತುಗಳಲ್ಲಿ ಹೇಳಲು ಆಗದ ಬಹು ಭಾವನಾತ್ಮಕ ಸಂದರ್ಭ. ಚಿತ್ರದ ಕೊನೆಯಲ್ಲಿ ಲೂಸಿಜಾ ಏನು ಆಯ್ಕೆ ಮಾಡುತ್ತಾಳೆ ಎಂದು ನಿರ್ದೇಶಕಿ ನಿರ್ದಿಷ್ಟವಾಗಿ ಹೇಳುವುದಿಲ್ಲ. ಆದರೂ ಗಾಢ ವಾಸನೆ ಇರುವ ಆ ಬಟ್ಟೆಯನ್ನು ಹಿಂದಿರುಗಿಸುವ ಜೊತೆಗೆ ಆಕೆ ತನ್ನ ಡೋಲಾಯಮಾನ ಮನಸ್ಥಿತಿಯಿಂದ ಹೊರ ಬರುತ್ತಾಳೆ ಎನಿಸುತ್ತದೆ.

ಲಿಟಲ್ ಟ್ರಬಲ್ ಗರ್ಲ್ಸ್ (Little Trouble Girls) ಸಿನಿಮಾದ ಚಿತ್ರಕಥೆಯನ್ನು ನಿರ್ದೇಶಕಿ ಉರ್ಶ್ಕಾ ಜುಕಿಕ್ ಮತ್ತು ಚಿತ್ರಕಥೆಗಾರ್ತಿ ಮರಿಯಾ ಬೋರ್ ಜೊತೆಯಾಗಿ ಹೆಣೆದಿರುವ ರೀತಿಯೇ ಅನನ್ಯ. ಹಾಗಾಗಿ ಪ್ರತೀ ಫ್ರೇಮು ಸಹ ಪರಿಣಾಮಕಾರಿಯಾಗಿ ಕಥೆ ಹೇಳುತ್ತದೆ ಮತ್ತು ಕಥೆಯನ್ನು ಬೆಳೆಸುತ್ತದೆ. ಲೆವ್ ಪ್ರೆಡಾನ್ ಕೊವಾರ್ಸ್ಕಿ ಮಾಡಿರುವ ಛಾಯಾಗ್ರಹಣ ಚಿತ್ರದ ಆಶಯಕ್ಕೆ ಪೂರಕವಾಗಿದೆ. ವ್ಲಾಡೋ ಗೋಜುನ್ ಅವರ ಸಂಕಲನ ಕಾರ್ಯ ಚಿತ್ರದ ಪರಿಣಾಮಗಳನ್ನು ಹೆಚ್ಚಿಸಿದೆ.

ಅಭಿನಯದ ವಿಷಯ ಹೇಳುವುದಾದರೆ ಪ್ರತಿಯೊಬ್ಬರೂ ತಮ್ಮತಮ್ಮ ಪಾತ್ರ ನಿರ್ವಹಣೆಯಲ್ಲಿ ಅಚ್ಚುಕಟ್ಟು. ಅದರಲ್ಲಿಯೂ ಲೂಸಿಜಾ ಪಾತ್ರದಲ್ಲಿ ಜಾರಾ ಸೋಫಿಜಾ ಒಸ್ಟಾನ್, ಆನಾ-ಮರಿಜಾ ಪಾತ್ರದಲ್ಲಿ ಮಿನಾ ಶ್ವಾಜ್ಗರ್ ಅಭಿನಯ ತೀವ್ರ ಮೆಚ್ಚುಗೆಗೆ ಪಾತ್ರವಾಗುತ್ತದೆ.

೧೭ನೇ ಬೆಂಗಳೂರು ಅಂತರಾಷ್ಟ್ರೀಯ ಸಿನಿಮೋತ್ಸವದಲ್ಲಿ ಲಿಟಲ್ ಟ್ರಬಲ್ ಗರ್ಲ್ಸ್ (Little Trouble Girls) ಅತ್ಯಂತ ಬೇಡಿಕೆಯ ಜೊತೆಗೆ ಮೆಚ್ಚುಗೆಯನ್ನೂ ಪಡೆದ ಚಿತ್ರವಾಗಿತ್ತು. ಒಟಿಟಿ ಫ್ಲಾಟ್ ಫಾರಂಗಳಲ್ಲಿ ಈ ಸಿನಿಮಾ ಬಂದರೆ ತಪ್ಪದೇ ನೋಡಿ

ಲಿಟಲ್ ಟ್ರಬಲ್ ಗರ್ಲ್ಸ್ (Little Trouble Girls) ಸಿನಿಮಾ ಟ್ರೈಲರ್

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!