ಇನ್ನು ಮುಂದೆ ಸಿಎಂ ಜೋಸೆಫ್ ವಿಜಯ್ ಮುಂದಿದೆ ಕಠಿಣ ಸವಾಲುಗಳು
ಅಂತೂ ಸಿ. ಜೋಸೆಫ್ ವಿಜಯ್ (ದಳಪತಿ ವಿಜಯ್) ಮುಖ್ಯಮಂತ್ರಿಯಾದರು. ಸರ್ಕಾರ ರಚಿಸಲು ಕೊರತೆಯಿಂದ ೧೧ ಸ್ಥಾನಗಳ ಬೆಂಬಲ ಪಡೆಯಲು ಪಟ್ಟಿರುವ ಶ್ರಮ ಅಷ್ಟಿಷ್ಟಲ್ಲ. ಬಹುಶಃ ೧೦೭ ಸ್ಥಾನ ಗಳಿಸಿದ್ದಕ್ಕಿಂತಲೂ ಹೆಚ್ಚಿನ ಮಾನಸಿಕ – ದೈಹಿಕ ದಣಿವು ಉಂಟಾಗಿದೆ. ಇವರು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿರುವುದು ಅವರ ಅಭಿಮಾನಿಗಳಲ್ಲಿ ಸಂಭ್ರಮ ತಂದಿದ್ದೆ. ಆದರೆ ಆಡಳಿತದ ದೃಷ್ಟಿಯಿಂದ ಅವರ ಮುಂದೆ ಬೆಟ್ಟದಷ್ಟು ಸವಾಲುಗಳಿವೆ.
ಓರ್ವ ನಟನಾಗಿ ಜನಪ್ರಿಯತೆ ಗಳಿಸುವುದು ಬೇರೆ, ಓರ್ವ ಆಡಳಿತಗಾರನಾಗಿ ರಾಜ್ಯವನ್ನು ಮುನ್ನಡೆಸುವುದು ಬೇರೆ. ವಿಜಯ್ ಅವರ ಸರ್ಕಾರ ಎದುರಿಸಲಿರುವ ಪ್ರಮುಖ ಕಠಿಣ ಸವಾಲುಗಳು ಒಂದೆರಡಲ್ಲ !
ಆಡಳಿತಾತ್ಮಕ ಅನುಭವದ ಕೊರತೆ
ವಿಜಯ್ ಅವರಿಗೆ ಈ ಹಿಂದೆ ಯಾವುದೇ ಶಾಸನಸಭೆಯ ಅಥವಾ ಆಡಳಿತಾತ್ಮಕ ಅನುಭವವಿಲ್ಲ. ತಮಿಳುನಾಡಿನಂತಹ ದೊಡ್ಡ ಮತ್ತು ಸಂಕೀರ್ಣ ರಾಜ್ಯದ ಆಡಳಿತ ಯಂತ್ರವನ್ನು (Bureaucracy) ಹೇಗೆ ನಿಭಾಯಿಸುತ್ತಾರೆ ಎಂಬುದು ದೊಡ್ಡ ಪ್ರಶ್ನೆ. ಹಿಂದಿನ ಸರ್ಕಾರದ ಆಡಳಿತದ ಮಾದರಿಗೆ ಹೊಂದಿಕೊಂಡ ಹಿರಿಯ ಅಧಿಕಾರಿಗಳ ಮನೋಭಾವ ಬದಲಿಸುವುದು ಅಷ್ಟು ಸುಲಭವಲ್ಲ.
ಆರ್ಥಿಕ ಪರಿಸ್ಥಿತಿ ಮತ್ತು ಸಾಲದ ಹೊರೆ: ತಮಿಳುನಾಡು ಸರ್ಕಾರ ಪ್ರಸ್ತುತ ಭಾರಿ ಪ್ರಮಾಣದ ಸಾರ್ವಜನಿಕ ಸಾಲವನ್ನು ಹೊಂದಿದೆ. ಜನಪ್ರಿಯ ಯೋಜನೆಗಳನ್ನು (Freebies) ಜಾರಿಗೆ ತರುವಾಗ ರಾಜ್ಯದ ಬೊಕ್ಕಸಕ್ಕೆ ಹೊರೆಯಾಗದಂತೆ ನೋಡಿಕೊಳ್ಳುವುದು ವಿಜಯ್ ಅವರಿಗೆ ದೊಡ್ಡ ಕಸರತ್ತಾಗಲಿದೆ. ಕೈಗಾರಿಕಾ ಕ್ಷೇತ್ರದಲ್ಲಿ ರಾಜ್ಯದ ಮುನ್ನಡೆಯನ್ನು ಕಾಯ್ದುಕೊಳ್ಳುವುದು ಮತ್ತು ಹೊಸ ಉದ್ಯೋಗಗಳನ್ನು ಸೃಷ್ಟಿಸುವುದು ಅನಿವಾರ್ಯ. ಆದರಿದು ಸವಾಲಿನ ಕಾರ್ಯ. ಟಿವಿಕೆ ಪ್ರಣಾಳಿಕೆಯಲ್ಲಿರುವ ಎಲ್ಲ ಘೋಷಣೆ ಜಾರಿಗೆ ತರಬೇಕಾದರೆ ವಾರ್ಷಿಕವಾಗಿ ಬೇಕಾದ ಮೊತ್ತ ೧೨ ಲಕ್ಷ ಕೋಟಿ, ಸರ್ಕಾರದ ವಾರ್ಷಿಕ ಆದಾಯಕ್ಕಿಂತಲೂ ಮೂರು ಪಟ್ಟು ಹೆಚ್ಚು !!
ಡಿಎಂಕೆ ಮತ್ತು ಎಐಎಡಿಎಂಕೆ ಎಂಬ ಬಲಿಷ್ಠ ವಿರೋಧ ಪಕ್ಷಗಳು
ದಶಕಗಳಿಂದ ತಮಿಳುನಾಡನ್ನು ಆಳುತ್ತಿರುವ ಡಿಎಂಕೆ (DMK) ಮತ್ತು ಎಐಎಡಿಎಂಕೆ (AIADMK) ಪಕ್ಷಗಳು ತಳಮಟ್ಟದಲ್ಲಿ ಭದ್ರವಾದ ಸಂಘಟನೆಯನ್ನು ಹೊಂದಿವೆ.ಈ ಅನುಭವಿ ರಾಜಕಾರಣಿಗಳ ತಂತ್ರಗಳನ್ನು ಎದುರಿಸುವುದು ಮತ್ತು ವಿಧಾನಸಭೆಯಲ್ಲಿ ಅವರ ಟೀಕೆಗಳಿಗೆ ಉತ್ತರ ನೀಡುವುದು ವಿಜಯ್ ಅವರಿಗೆ ಸುಲಭವಲ್ಲ.
ಕೇಂದ್ರ ಸರ್ಕಾರದೊಂದಿಗೆ ಸಂಬಂಧ
ಈಗಾಗಲೇ ಟಿವಿಕೆಯು ಬಿಜೆಪಿಯ ಕೆಂಗಣ್ಣಿಗೆ ಗುರಿಯಾಗಿದೆ. ಇಂಥ ಸಂದರ್ಭದಲ್ಲಿ ರಾಜ್ಯದ ಹಕ್ಕುಗಳು, ಜಿಎಸ್ಟಿ ಪಾಲು ಮತ್ತು ನೀಟ್ (NEET) ಪರೀಕ್ಷೆಯಂತಹ ವಿಚಾರಗಳಲ್ಲಿ ಕೇಂದ್ರ ಸರ್ಕಾರದೊಂದಿಗೆ ಸಂಘರ್ಷ ಅಥವಾ ಸಹಕಾರವನ್ನು ಹೇಗೆ ನಿಭಾಯಿಸುತ್ತಾರೆ ಎಂಬುದು ಮುಖ್ಯ. ತಮಿಳುನಾಡಿನ ಪ್ರಾದೇಶಿಕ ಅಸ್ಮಿತೆಯನ್ನು ಕಾಪಾಡುತ್ತಲೇ ಕೇಂದ್ರದಿಂದ ಅನುದಾನ ಪಡೆಯುವುದು ದೊಡ್ಡ ಸವಾಲು.
ಭ್ರಷ್ಟಾಚಾರ ನಿರ್ಮೂಲನೆ ಮತ್ತು ಪಾರದರ್ಶಕತೆ
ಟಿವಿಕೆ “ಹೊಸ ರಾಜಕೀಯ” ಮತ್ತು “ಬದಲಾವಣೆ” ಎಂಬ ಘೋಷಣೆಯೊಂದಿಗೆ ಅತೀದೊಡ್ಡ ಪಕ್ಷವಾಗಿ ಹೊರ ಬಂದಿದೆ.ಬಂದಿದ್ದೆ. ಪಕ್ಷದ ಏಕೈಕ ಪವರ್ ಸೆಂಟರ್ ಆದ ವಿಜಯ್ ಅವರಿಗೆ ತಮ್ಮ ಪಕ್ಷದ ಕಾರ್ಯಕರ್ತರು ಮತ್ತು ಸಚಿವರು ಭ್ರಷ್ಟಾಚಾರದಲ್ಲಿ ತೊಡಗದಂತೆ ನೋಡಿಕೊಳ್ಳುವುದು. ವಂಶಪಾರಂಪರ್ಯ ರಾಜಕಾರಣದ ವಿರುದ್ಧ ತಂದ ಬದಲಾವಣೆಯನ್ನು ಆಡಳಿತದಲ್ಲಿ ಸಾಬೀತುಪಡಿಸುವುದು ಕಷ್ಟಕರ ಸವಾಲುಗಳು
ಕಾವೇರಿ ನೀರು ಹಂಚಿಕೆ: ನೆರೆಯ ರಾಜ್ಯಗಳೊಂದಿಗೆ ವಿಶೇಷವಾಗಿ ಕರ್ನಾಟಕದೊಂದಿಗೆ ಕಾವೇರಿ ನೀರಿನ ವಿವಾದವನ್ನು ಹೇಗೆ ನಿಭಾಯಿಸುತ್ತಾರೆ ಎಂಬುದು ಸಹ ಅವರಿಗೆ ಪರೀಕ್ಷೆಯಾಗಲಿದೆ.
ಒಟ್ಟಾರೆ ಹೇಳುವುದಾದರೆ ವಿಜಯ್ ಅವರಿಗೆ ಇರುವ “ಸ್ಟಾರ್ ಪವರ್” ಮತ ತಂದುಕೊಟ್ಟಿರಬಹುದು, ಆದರೆ ಅದೇ ಸ್ಟಾರ್ ಪವರ್ ಈಗ ಅವರಿಗೆ ಜವಾಬ್ದಾರಿಯ ಹೊರೆಯಾಗಿದೆ. ಜನರಿಗೆ ನೀಡಿದ ಭರವಸೆಗಳನ್ನು ಈಡೇರಿಸದಿದ್ದರೆ, ಅದೇ ಜನ ಅಷ್ಟೇ ವೇಗವಾಗಿ ಭ್ರಮನಿರಸನರಾಗುವ ಸಾಧ್ಯತೆಯೂ ಇದೆ.
ಅಧಿಕಾರ ವಹಿಸಿಕೊಂಡ ಕೂಡಲೇ ಗೃಹ ಬಳಕೆದಾರರಿಗೆ ಪ್ರತಿ ಎರಡು ತಿಂಗಳ ಬಿಲ್ ಸೈಕಲ್ನಲ್ಲಿ 500 ಯುನಿಟ್ಗಳವರೆಗೆ ವಿದ್ಯುತ್ ಬಳಸುವವರಿಗೆ 200 ಯುನಿಟ್ಗಳು ಉಚಿತ, ಮಹಿಳೆಯರ ಸುರಕ್ಷತೆಗಾಗಿ ವಿಶೇಷ ಪಡೆ (Singa Pen Special Action Force / Lioness Special Task Force), – ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ನಾರ್ಕೋಟಿಕ್ಸ್ ಕಂಟ್ರೋಲ್ ಯುನಿಟ್ ರಚನೆಯನ್ನು ಜಾರಿಗೆ ತರುವ ಆದೇಶ ಹೊರಡಿಸಿದ್ದಾರೆ.
ಇದರ ಜೊತೆಗೆ ಡಿಎಂಕೆಯ ಸ್ಟಾಲಿನ್ ಸರ್ಕಾರದ ಅವಧಿಯ ಹಣಕಾಸು ಸ್ಥಿತಿ ಬಗ್ಗೆ ಶ್ವೇತಪತ್ರ ಹೊರಡಿಸುವುದಾಗಿ ಹೇಳಿದ್ದಾರೆ. ನನ್ನ ಪ್ರಕಾರ ಇದು ಎಡವಟ್ಟು. ಏಕೆಂದರೆ ವಿಜಯ್ ಸರ್ಕಾರ ರಚಿಸಿದ ನಂತರದ ಆರು ತಿಂಗಳಿನವರೆಗೂ ಸುಮ್ಮನಿರುವುದಾಗಿ ಹೇಳಿದ್ದ ಸ್ಟಾಲಿನ್ ಕೂಡಲೇ ಪ್ರತಿಕ್ರಿಯೆ ನೀಡಿದ್ದಾರೆ. ನೆಪ ಹೇಳಿ ಮಾಡಿದ್ದ ಘೋಷಣೆಗಳನ್ನು ಜಾರಿಗೆ ತರುವುದನ್ನು ತಪ್ಪಿಸಿಕೊಳ್ಳಬೇಡಿ ಎಂದಿದ್ದಾರೆ. ಇನ್ನು ಮುಂದೆ ಅವರು ವಿಜಯ್ ಸರ್ಕಾರಕ್ಕೆ ಎಷ್ಟು ಸಾಧ್ಯವೋ ಅಷ್ಟು ಕಿರುಕುಳ ನೀಡುತ್ತಾರೆ.
ಮುಖ್ಯವಾಗಿ ಡಿಎಂಕೆ ಸರ್ಕಾರ ನಡೆಸುವಾಗ ಸರ್ಕಾರಕ್ಕಿಂತಲೂ ವೈಯಕ್ತಿಕವಾಗಿ ಅದರ ರಾಜಕೀಯ ನಾಯಕರ ವಿಶ್ವಾಸಾರ್ಹರಾಗಿದ್ದ ಉನ್ನತ ಅಧಿಕಾರಿಗಳು ಇರುವ ಆಯಕಟ್ಟಿನ ಜಾಗಗಳನ್ನು ಬದಲಿಸಬೇಕು. ಇದು ಸವಾಲಿನ ಕೆಲಸ. ಇವೆಲ್ಲ ಸವಾಲುಗಳನ್ನು ವಿಜಯ್ ಹೇಗೆ ನಿಭಾಯಿಸುತ್ತಾರೆಂದು ಕಾದು ನೋಡೋಣ
