ಕೇರಳ ಎಲ್ ಡಿ ಎಫ್ ತನ್ನ ಕಾಲ ಮೇಲೆ ತಾನೇ ಕಲ್ಲು ಹಾಕಿಕೊಂಡಿತೇ ?
ಕೇರಳಂ ರಾಜ್ಯ ಸಾಕ್ಷರತೆಯಲ್ಲಿ ಗಣಣೀಯ ಪ್ರಗತಿ ಸಾಧಿಸಿದ ರಾಷ್ಟ್ರ. ಕಾರ್ಮಿಕ ಸಂಘಟನೆಗಳು ಪ್ರಬಲವಾಗಿವೆ. ಇಲ್ಲಿ ರಾಜಕೀಯ ಪಕ್ಷಗಳ ಗೆಲುವು ಸರಳವಲ್ಲ. ಇಂಥ ಸಂದರ್ಭದಲ್ಲಿ ಸರ್ಕಾರ ರಚಿಸಲು ಬೇಕಾದ 71 ಸ್ಥಾನಗಳಲ್ಲಿ ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ (ಐ ಎನ್ ಸಿ ) ನೇತೃತ್ವದ ಯು ಡಿ ಎಫ್ (UDF ಒಟ್ಟು ಇರುವ 140 ಸ್ಥಾನಗಳಲ್ಲಿ 102 ಸ್ಥಾನಗಳಲ್ಲಿ ಗೆಲುವಿನ ನಗೆ ಬೀರುತ್ತಿದೆ. ಎಲ್ ಡಿ ಎಫ್ (LDF) 36 ಸ್ಥಾನಗಳಿಗಳಿಗಷ್ಟೇ ಸೀಮಿತವಾಗುವ ಹಂತದಲ್ಲಿದೆ.
ಕೇರಳಂ ರಾಜ್ಯದಲ್ಲಿ ಎಲ್ ಡಿ ಎಫ್ ಒಕ್ಕೂಟದ ಕಳೆದ ಹತ್ತು ವರ್ಷಗಳ ಆಡಳಿತ ಒಟ್ಟಾರೆಯಾಗಿ ಕಳಪೆಯಾಗಿರಲಿಲ್ಲ. ಕೊರೊನಾ ಕಾಲಘಟ್ಟವನ್ನು ಪಿಣರಾಯಿ ವಿಜಯನ್ ನೇತೃತ್ವದ ರಾಜ್ಯ ಸರ್ಕಾರ ನಿಭಾಯಿಸಿದ ರೀತಿ ಅತ್ಯುತ್ತಮವಾಗಿತ್ತು. ಇದಷ್ಟೇ ಅಲ್ಲ, ಆಡಳಿತವೂ ಉತ್ತಮವಾಗಿತ್ತು. ಹೀಗಿದ್ದೂ ಸೋತಿದ್ದೇಕೆ ?
ಎಲ್ ಡಿ ಎಫ್ ಸರ್ಕಾರದವಿರುದ್ಧ ಕಾಂಗ್ರೆಸ್ ಮತ್ತದರ ಮಿತ್ರಪಕ್ಷಗಳು ಅಬ್ಬರಿಸಿದ್ದಕ್ಕಿಂತ ಹೆಚ್ಚಾಗಿ ಬಿಜೆಪಿ ಅಬ್ಬರಿಸಿತ್ತು. ಇದರ ಆರ್ಭಟದ ಲಾಭ ಯು ಡಿಎಫ್ ಗೆ ಆದಂತೆ ಕಾಣುತ್ತದೆ. ಇವೆಲ್ಲದರ ಜೊತೆಗೆ ಆಡಳಿತ ವಿರೋಧಿ ಅಲೆ (Anti-Incumbency)ಯೂ ಕಾರಣವಾಗಿದೆ. 10 ವರ್ಷಗಳ LDF ಆಡಳಿತದ ನಂತರ ಆಡಳಿತದಲ್ಲಿ ದಕ್ಷತೆ ಕೊರತೆ, ಭ್ರಷ್ಟಾಚಾರ ಆರೋಪಗಳು ವ್ಯಕ್ತಿ ಕೇಂದ್ರಿತ ಆಡಳಿತದ ವಿರುದ್ಧ ಜನತೆಯಲ್ಲಿ ಅಸಮಾಧಾನ ಮೂಡಿದ್ದನ್ನು ನಿರಾಕರಿಸುವಂತಿಲ್ಲ
ಪ್ರಮುಖವಾಗಿ ಮೈನಾರಿಟಿ ವೋಟ್‌ಗಳ ಏಕೀಕರಣವಾಗಿದೆ. ಮುಸ್ಲಿಂ ಮತ್ತು ಕ್ರಿಶ್ಚಿಯನ್ ಸಮುದಾಯಗಳ (IUML ಮತ್ತು ಕೇರಳ ಕಾಂಗ್ರೆಸ್ ಮೂಲಕ) ಬಲವಾದ ಬೆಂಬಲ. ಇದು ಯುಡಿಎಫ್‌ಗೆ ಪ್ರಮುಖ ಲಾಭ ನೀಡಿದೆ ಎಂಬುದು ಗಮನಾರ್ಹ. ಇದರ ಜೊತೆಗೆ ಕಾಂಗ್ರೆಸ್ ಮತ್ತು ಒಕ್ಕೂಟದ ಒಗ್ಗಟ್ಟು, ಉತ್ತಮ ಸಮನ್ವಯ ಮತ್ತು ಅಭ್ಯರ್ಥಿಗಳ ಆಯ್ಕೆಯಲ್ಲಿ ತಂತ್ರಗಾರಿಕೆಯೂ ಕೆಲಸ ಮಾಡಿದೆ.
ಇವೆಲ್ಲದರ ಜೊತೆಗೆ ಶಬರಿಮಲೆ ದೇವಸ್ಥಾನದ ಹಗರಣವು (ವಿಶೇಷವಾಗಿ ಚಿನ್ನದ ಕಳ್ಳತನ ಆರೋಪ, ಆಭರಣಗಳ ವಿವಾದ) 2026ರ ಕೇರಳ ವಿಧಾನಸಭಾ ಚುನಾವಣಾ ಫಲಿತಾಂಶದ ಮೇಲೆ ಪ್ರಭಾವ ಬೀರಿದೆ. ಇದು LDFಗೆ (ವಿಶೇಷವಾಗಿ CPI(M)) ವಿರುದ್ಧದ ಮುಖ್ಯ ಅಸಮಾಧಾನಗಳಲ್ಲಿ ಒಂದಾಗಿತ್ತು ಎಂಬುದು ಸಹ ಗಮನಾರ್ಹ. UDF ಮತ್ತು BJP ಇದನ್ನು LDF ವಿರುದ್ಧ ಪ್ರಚಾರದ ಪ್ರಮುಖ ಅಸ್ತ್ರವಾಗಿ ಬಳಸಿದವು. ಅಂಬಲಕಲ್ಲನ್ಮಾರ್ಕು ವೋಟ್ ಇಲ್ಲ — ದೇವಾಲಯ ಕಳ್ಳರಿಗೆ ವೋಟ್ ಇಲ್ಲ ಎಂಬ ಘೋಷಣೆ ರಾಜ್ಯದ್ಯಂತ ಮೊಳಗಿತು.
ಒಟ್ಟಾರೆಯಾಗಿ, ಶಬರಿಮಲೆ ವಿವಾದವು ಪ್ರಮುಖ ಪರೋಕ್ಷ ಕಾರಣವಾಗಿತ್ತು ಎಂಬುದನ್ನು ತಳ್ಳಿ ಹಾಕುವಂತಿಲ್ಲ (ವಿಶೇಷವಾಗಿ ದಕ್ಷಿಣ ಮತ್ತು ಮಧ್ಯ ಕೇರಳದಲ್ಲಿ) ಆದರೆ ಇದೊಂದೇ ಏಕೈಕ ನಿರ್ಣಾಯಕ ಕಾರಣ ಎಂದು ಹೇಳಲು ಸಾಧ್ಯವಿಲ್ಲವಾದರೂ ಇದು LDFನ ಇಮೇಜ್‌ಗೆ ಹಾನಿ ಮಾಡಿತು. ವಿಶೇಷವಾಗಿ ಹಿಂದೂ ಸಮುದಾಯದಲ್ಲಿ ಅಸಮಾಧಾನ ಹೆಚ್ಚಿಸಿತು ಎಂಬುದನ್ನು ತಳ್ಳಿ ಹಾಕಲು ಸಾಧ್ಯವಿಲ್ಲ.
ವಿಶೇಷವಾಗಿ CPI(M) ಹಾಗೂ ಮುಖ್ಯಮಂತ್ರಿ ಪಿನರಾಯಿ ವಿಜಯನ್ ನೇತೃತ್ವದ LDF ಸರ್ಕಾರದ ವಿರುದ್ಧ ಹಲವು ಭ್ರಷ್ಟಾಚಾರ ಆರೋಪಗಳು ಕೇಳಿ ಬಂದವು. ಸಹಕಾರಿ ಸೊಸೈಟಿಗಳ ಸಾಫ್ಟ್‌ವೇರ್ ಹಗರಣ (700 ಕೋಟಿ ರೂಪಾಯಿ ಸ್ಕ್ಯಾಮ್) 4,415 ಪ್ರಾಥಮಿಕ ಕೃಷಿ ಕ್ರೆಡಿಟ್ ಸೊಸೈಟಿಗಳಿಗೆ ಏಕರೂಪ ಸಾಫ್ಟ್‌ವೇರ್ ಪೂರೈಕೆಯಲ್ಲಿ ಭ್ರಷ್ಟಾಚಾರ ಆರೋಪ. TCSಗೆ 206 ಕೋಟಿ ರೂಪಾಯಿಯಲ್ಲಿ ನೀಡಿದ ಟೆಂಡರ್ ಅನ್ನು ರದ್ದುಗೊಳಿಸಿ, ಕನ್ನೂರು ಆಧಾರಿತ ಸೊಸೈಟಿಗೆ ಅತಿ ಹೆಚ್ಚು ಬೆಲೆಗೆ ನೀಡಿದ ಆರೋಪ (ಒಟ್ಟು ವೆಚ್ಚ 915 ಕೋಟಿ ರೂಪಾಯಿ ತಲುಪಿದೆ ಎಂದು ಆರೋಪಿಸಲಾಗಿದೆ) ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮಗಳು ಮತ್ತು ಅಳಿಯನಿಗೆ ಸಂಬಂಧಿಸಿದ ಕಂಪನಿಗಳಿಗೆ ಅನುಚಿತ ಲಾಭ/ಪಾವತಿಗಳ ಆರೋಪ. ಕುಟುಂಬ ನೇಪೋಟಿಸಂ (ಕುಟುಂಬ ಪಕ್ಷಪಾತ) ಆರೋಪಗಳು ಸಹ ಎಲ್ ಡಿ ಎಫ್ ಸರ್ಕಾರದ ವಿರುದ್ಧ ಅಸಮಾಧಾನ ಹೆಚ್ಚಿಸಿತು.
ಇವೆಲ್ಲದರ ಜೊತೆಗೆ ವಸತಿ ಯೋಜನೆಯಲ್ಲಿ ಕಿಕ್‌ಬ್ಯಾಕ್ ಮತ್ತು ಹಣ ವರ್ಗಾವಣೆ ಆರೋಪಗಳು. ಕೇರಳ ಇನ್‌ಫ್ರಾಸ್ಟ್ರಕ್ಚರ್ ಇನ್ವೆಸ್ಟ್‌ಮೆಂಟ್ ಫಂಡ್‌ನ ಬಾಂಡ್‌ಗಳಲ್ಲಿ ಹಣದ ದುರ್ಬಳಕೆ ಆರೋಪಗಳು. ಈ ಸಂಬಂಧ ED ನೋಟಿಸ್‌ಗಳನ್ನು ಕಳಿಸಿತ್ತು ಇವುಗಳ ಜೊತೆಗೆ ಇನ್ನಿತರ ಪ್ರಮುಖ ಆರೋಪಗಳೆಂದರೆ AI ಕ್ಯಾಮೆರಾ, K-FON, PPE procurement* ಯೋಜನೆಗಳಲ್ಲಿ ಭ್ರಷ್ಟಾಚಾರ ಆರೋಪ, ವಯನಾಡ್ ಭೂಕುಸಿತ ನೆರವು ಹಣ ದುರ್ಬಳಕೆ ಆರೋಪಗಳು. ಪೊಲೀಸ್ ಇಲಾಖೆಯಲ್ಲಿ ಡ್ರಗ್/ಚಿನ್ನದ ಕಳ್ಳತನಕ್ಕೆ ಸಂಬಂಧಿಸಿದ ಅಧಿಕಾರಿಗಳ ಸಂಬಂಧ ಆರೋಪಗಳು
LDF ಇವುಗಳನ್ನು “ರಾಜಕೀಯ ಕುತಂತ್ರ” ಎಂದು ತಿರಸ್ಕರಿಸಿತು. ಕೆಲವು ಪ್ರಕರಣಗಳಲ್ಲಿ ತನಿಖೆ ನಡೆಯುತ್ತಿದೆ ಎಂದು ಹೇಳಿತು. ಆದರೂ ಈ ವಿವಾದಗಳು ಜನರಲ್ಲಿ ಅಸಮಾಧಾನ ಹೆಚ್ಚಿಸಿದವು. ಇವೆಲ್ಲ ಅಸಮಾಧಾನವೇ ಯು ಡಿ ಎಫ್ ಗೆಲುವಿನ ನಗೆಗೆ ಕಾರಣಗಳಾಗಿವೆ.
